ಕರ್ನಾಟಕ ಪೊಲೀಸರನ್ನು ಹಿಗ್ಗಾಮುಗ್ಗಾ ಬೈದಿದ್ದ ಯುವಕನನ್ನು ಬಂಧಿಸಿದ ಉಪ್ಪಾರಪೇಟೆ ಪೊಲೀಸರು

ಬೆಂಗಳೂರು: ಕರ್ನಾಟಕ ಪೊಲೀಸ್​ ಹೆಸರನ್ನು ಉಲ್ಲೇಖಿಸಿ ಅವಾಚ್ಯ ಪದಗಳಿಂದ ಬಾಯಿಗೆ ಬಂದಂತೆ ಬೈದಿದ್ದ ಯುವಕನೊಬ್ಬನನ್ನು ನಗರದ ಉಪ್ಪಾರಪೇಟೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ತುಮಕೂರು ಮೂಲದ ರಾಕೇಶ್ ಬಂಧಿತ ಆರೋಪಿ. ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ ತನ್ನ ಬಳಿ ಹಣ ಕಿತ್ತಿದ್ದಾರೆ ಎಂದು ಅರೋಪಿಸಿ ಸೆಲ್ಫಿ ವಿಡಿಯೋ ಮಾಡಿ ಉಪ್ಪಾರಪೇಟೆ ಪೊಲೀಸರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಆರೋಪಿ ರಾಕೇಶ್ ಬೈದಿದ್ದ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಶೇರ್​ ಮಾಡುವಂತೆ ಎಲ್ಲರನ್ನೂ ಕೇಳಿಕೊಂಡಿದ್ದ.

ಇಷ್ಟೇ ಅಲ್ಲದೆ, ಕರ್ನಾಟಕ ಪೊಲೀಸರು ಸರಿಯಿಲ್ಲ. ಅವರು ಇರೋವರೆಗೂ ನಮ್ಮ ರಾಜ್ಯ ಉದ್ಧಾರ ಆಗುವುದಿಲ್ಲ. ಅವರು ಗಂಡಸರಲ್ಲ. ನಡು ರಸ್ತೆಯಲ್ಲಿ ಸುಟ್ಟು ಹಾಕಬೇಕು ಎಂದೆಲ್ಲಾ ನಿಂದಿಸಿದ್ದಾನೆ. ಇದರೊಂದಿಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಹೆಸರನ್ನು ಉಲ್ಲೇಖಿಸಿ, ಡಿಕೆಶಿ ಬಂಧಿಸಿರುವವರಿಗೆ ಬೂಟ್​ನಲ್ಲಿ ಹೊಡೆಯುತ್ತೇನೆ ಎಂದು ಬೂಟ್​ ತೋರಿಸಿದ್ದು, ಡಿಕೆಶಿ ಬಂಧನಕ್ಕೆ ಬಿಜೆಪಿ ಕಾರಣ. ಮೊದಲು ಪೊಲೀಸರನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಕಿಡಿಕಾರಿದ್ದಾನೆ.

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಪೊಲೀಸರು ನನ್ನನ್ನು ನಿಂದಿಸಿ, ದಂಡ ಕಟ್ಟಿಸಿಕೊಂಡಿದ್ದರು. ಈ ಹಿನ್ನೆಲೆ ಪೊಲೀಸರಿಗೆ ನಿಂದಿಸಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಮಲ್ಲೇಶ್ವರಂನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *