ಗೋವಾ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರ ಪಾಠ

ಖಾನಾಪುರ: ಕರ್ನಾಟಕದ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಖಾನಾಪುರ ಬಳಿಯ ಕಳಸಾ ಯೋಜನಾ ಪ್ರದೇಶಕ್ಕೆ ಬುಧವಾರ ಬಂದಿದ್ದ ಗೋವಾ ಸರ್ಕಾರದ ನೀರಾವರಿ ಅಧಿಕಾರಿಗಳ ತಂಡಕ್ಕೆ ರಾಜ್ಯ ಪೊಲೀಸರು ತರಾಟೆಗೆ ತೆಗೆದು ಕೊಂಡಿದ್ದಲ್ಲದೆ, ಬುದ್ಧಿ ಹೇಳಿ ಕಳುಹಿಸಿದ್ದಾರೆ. ಜತೆಗೆ ಅನುಮತಿ ಇಲ್ಲದೆ ಯೋಜನಾ ಪ್ರದೇಶಕ್ಕೆ ಬರುವುದಿಲ್ಲ ಎಂದು ಲಿಖಿತ ಪತ್ರವನ್ನೂ ಬರೆಸಿಕೊಂಡಿದ್ದಾರೆ.

ಗೋವಾದ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ದಿನೇಶ ಮಹಾಲೆ, ಸಹಾಯಕ ಅಭಿಯಂತರ ರಘುಚಂದ್ರ ಬಾಂದೇಕರ ನೇತೃತ್ವದಲ್ಲಿ ಒಬ್ಬ ಫೋಟೋಗ್ರಾಫರ್, ಇಬ್ಬರು ಇಂಜಿನಿಯರ್ ಸೇರಿ 9 ಸದಸ್ಯರ ತಂಡ ಬುಧವಾರ ಮಧ್ಯಾಹ್ನ ಒಂದು ಸರ್ಕಾರಿ ಹಾಗೂ ಎರಡು ಖಾಸಗಿ ವಾಹನಗಳಲ್ಲಿ ಚೋರ್ಲಾ ಮಾರ್ಗವಾಗಿ ಕಣಕುಂಬಿ ಗ್ರಾಮಕ್ಕೆ ಆಗಮಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಖಾನಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ವಿವಾದಿತ ಕಳಸಾ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿದ್ದ ಗೋವಾ ತಂಡದ ಸದಸ್ಯರನ್ನು ವಶಕ್ಕೆ ಪಡೆದರು. ಬಳಿಕ ಅವರನ್ನು ಗ್ರಾಮದ ಲೋಕೋಪಯೋಗಿ ವಿಶ್ರಾಂತಿ ಗೃಹಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ವಿವರ ಪಡೆದರು. ತಂಡದ ಎಲ್ಲ ಸದಸ್ಯರಿಗೆ ಪೂರ್ವಾನುಮತಿ ಇಲ್ಲದೆ ಕಣಕುಂಬಿಗೆ ಆಗಮಿಸಬಾರದು ಎಂದು ಇನ್ನೊಮ್ಮೆ ಸೂಚಿಸಿ, ಮುಚ್ಚಳಿಕೆ ಬರೆಸಿಕೊಂಡು ವಾಪಸ್ ಕಳುಹಿಸಿದರು. ಮಹದಾಯಿ ನ್ಯಾಯಾಧಿಕರಣವು ತೀರ್ಪನ್ನು ಆಗಸ್ಟ್​ನಲ್ಲೇ ನೀಡಲಿದ್ದು, ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಸಾಕ್ಷ್ಯಾಧಾರ ಸಂಗ್ರಹಿಸುತ್ತಿದೆ ಎನ್ನಲಾಗಿದೆ. ಜು.22ರಂದು ಕಣಕುಂಬಿಗೆ ಗೋವಾ ನಿಯೋಗ ಭೇಟಿ ನೀಡಿ ವಿಡಿಯೋ ಮತ್ತು ಫೋಟೋಗ್ರಫಿ ಕೂಡ ಮಾಡಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ: ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್, ಉತ್ತರ ವಲಯ ಐಜಿಪಿ ಅಲೋಕ್​ಕುಮಾರ್, ಬೆಳಗಾವಿ ಎಸ್.ಪಿ ಸುಧೀರಕುಮಾರ ರೆಡ್ಡಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದರು.

ನ್ಯಾಯಾಂಗ ನಿಂದನೆ ಅರ್ಜಿ

ಪಣಜಿ: ನ್ಯಾಯಾಧಿಕರಣದಲ್ಲಿ ಅಂತಿಮ ತೀರ್ಪು ಹೊರಬರುವವರೆಗೂ ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳುವುದಿಲ್ಲ ಎಂದು ಕರ್ನಾಟಕ ಪ್ರತಿಜ್ಞಾಪತ್ರ ಸಲ್ಲಿಸಿತ್ತು. ಆದರೆ, ಈಗ ನದಿ ನೀರನ್ನು ತಿರುಗಿಸಿಕೊಂಡಿದೆ ಎಂದು ಗೋವಾ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಕ್ಯಾತೆ ತೆಗೆದಿದೆ.

ತಂಡದ ಬಿಡುಗಡೆಗೆ ಹರಸಾಹಸ

ಗೋವಾ ಅಧಿಕಾರಿಗಳನ್ನು ಕರ್ನಾಟಕ ಪೊಲೀಸರಿಂದ ಬಿಡುಗಡೆಗೊಳಿಸಲು ಅಲ್ಲಿನ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಹರಸಾಹಸಪಟ್ಟರು. ಅಧಿಕಾರಿಗಳನ್ನು ಐಬಿಗೆ ಕರೆದೊಯ್ದ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಲ್ಯೇಕರ್, ನಮ್ಮ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಹೇಗಾದರೂ ಮಾಡಿ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಗೋವಾ ಸಿಎಂ ಕಚೇರಿಯ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರಿಗೆ ಕರೆ ಮಾಡಿದರು. ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ನಮ್ಮ ಅಧಿಕಾರಿಗಳನ್ನು ಬಿಡುಗಡೆ ಮಾಡಿಸಿ ಎಂದು ಸೂಚನೆ ನೀಡಿದರು. ನಮ್ಮ ಅಧಿಕಾರಿಗಳನ್ನು ಹೆದರಿಸಲು ಕರ್ನಾಟಕ ಈ ಕೃತ್ಯವೆಸಗಿದೆ. ಅಧಿಕಾರಿಗಳನ್ನು ಬಂಧಿಸುವ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಹುಯಿಲೆಬ್ಬಿಸಿದರು.