Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಪೊಲೀಸ್ ಪಾತ್ರಕ್ಕೂ ಪರ್ವಿುಟ್

Sunday, 21.10.2018, 3:04 AM       No Comments

| ಕೀರ್ತಿನಾರಾಯಣ ಸಿ.

ಬೆಂಗಳೂರು: ಹಬ್ಬ-ಹರಿದಿನಗಳೆನ್ನದೆ ದಿನದ 24 ಗಂಟೆಯೂ ಸಮಾಜ ರಕ್ಷಣೆಗೆ ದುಡಿಯುವ ಪೊಲೀಸರನ್ನು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ‘ವಿಲನ್’ಗಳಂತೆ ತೋರಿಸುವ ಸಂಪ್ರದಾಯಕ್ಕೆ ಶೀಘ್ರದಲ್ಲೇ ಪೂರ್ಣವಿರಾಮ ಬೀಳಲಿದೆ. ಇನ್ನು ಮುಂದೆ ಸಿನಿಮಾ-ಧಾರಾವಾಹಿಗಳಲ್ಲಿ ಪೊಲೀಸ್ ಪಾತ್ರ ಮಾಡಿಸಬೇಕಾದರೆ ನ್ಯಾಯಾಲಯದ ಅನುಮತಿ ಕಡ್ಡಾಯ ಎಂಬ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ.

ಪೊಲೀಸರನ್ನು ಕೆಲವೊಮ್ಮೆ ಅತ್ಯಂತ ಕೆಟ್ಟದಾಗಿ ಹಾಗೂ ಮಾನಹಾನಿಕರವಾಗಿ ತೋರಿಸಲಾಗುತ್ತಿದೆ. ಇದರಿಂದ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಭಾವನೆ ಮೂಡುತ್ತಿದೆ. ಪೊಲೀಸರ ಕುರಿತ ಸಿನಿಮಾ-ಧಾರಾವಾಹಿಗೆ ಕೋರ್ಟ್ ಅನುಮತಿ ಕಡ್ಡಾಯ ನಿಯಮ ಜಾರಿಗೆ ತರಬೇಕೆಂಬ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಸಲ್ಲಿಸಿದ ಬೇಡಿಕೆಯನ್ನು ಸರ್ಕಾರ ಪರಿಗಣಿಸಿ, ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ.

ಕೋರ್ಟ್ ಅನುಮತಿ ಬಳಿಕವೂ ಒಂದು ವೇಳೆ ಪೊಲೀಸ್ ಪಾತ್ರವನ್ನು ಅವಹೇಳನ ಅಥವಾ ಮಾನಹಾನಿ ಉಂಟುಮಾಡುವ ರೀತಿಯಲ್ಲಿ ತೋರಿಸಿದರೆ ಆ ಸಿನಿಮಾ-ಧಾರಾವಾಹಿಯ ನಿರ್ದೇಶಕ ಹಾಗೂ ನಿರ್ವಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾನೂನು ರೂಪಿಸಲೂ ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ಪೊಲೀಸ್ ಅಧಿಕಾರಿಗಳಿಂದ ವಿವರ ಸಂಗ್ರಹಿಸುತ್ತಿದ್ದು, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪ್ರಧಾನಿ ಮೋದಿ ಸಲಹೆ: ಗುವಾಹಟಿಯಲ್ಲಿ ನಡೆದ 49ನೇ ಅಖಿಲ ಭಾರತ ಡಿಜಿಪಿ ಮತ್ತು ಐಜಿಪಿಗಳ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸಿನಿಮಾಗಳಿಂದ ಪೊಲೀಸರಿಗೆ ಕೆಟ್ಟ ಹೆಸರು ಎಂದು ಬೇಸರ ವ್ಯಕ್ತಪಡಿಸಿದ್ದರು. ಪೊಲೀಸರನ್ನು ಬಹಳ ಕೆಟ್ಟದಾಗಿ ಬಿಂಬಿಸುವುದರಿಂದ ಜನರಲ್ಲಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಪೊಲೀಸರ ವೃತ್ತಿಪರತೆ ಹಾಗೂ ಕಾರ್ಯನಿಷ್ಠೆಯನ್ನು ಸಕಾರಾತ್ಮಕವಾಗಿ ತೋರಿಸಿದರೆ ಜನರಲ್ಲಿ ಆರಕ್ಷಕರೆಂಬ ಭಾವನೆ ಮೂಡುತ್ತದೆ ಎಂದು ಮೋದಿ ಸಲಹೆ ಕೊಟ್ಟಿದ್ದರು.

ಇಲಾಖೆಗೆ ಗೃಹ ಸಚಿವರಿಂದ ಸೂಚನೆ

ಪೊಲೀಸರ 20ಕ್ಕೂ ಹೆಚ್ಚು ಬೇಡಿಕೆಗಳನ್ನು ಪಟ್ಟಿ ಮಾಡಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಉಪ ಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಸಲ್ಲಿಸಿದೆ. ಪರಮೇಶ್ವರ್ ಸೂಚನೆ ಮೇರೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ಗೃಹ ಇಲಾಖೆ ಸೂಚನೆ ಕೊಟ್ಟಿದೆ. ಈ ಬೇಡಿಕೆಗಳೆಲ್ಲ ಆಡಳಿತಾತ್ಮಕ ವಿಷಯಗಳಾಗಿರುವುದರಿಂದ ಪರಿಶೀಲಿಸಿ ಜಾರಿಗೆ ತರುವುದಾಗಿ ಡಿಜಿಪಿ ಹಿಂಬರಹ ಕೊಟ್ಟಿದ್ದಾರೆ.

ಖಾಕಿ ಮಾನಹಾನಿ ಹೇಗೆ?

 • ಅಮಾಯಕರಿಂದ ಹಫ್ತಾ ವಸೂಲಿ ಮಾಡುವವರಂತೆ ತೋರಿಸುವುದು.
 • ಪ್ರಭಾವಿಗಳಿಗಾಗಿ ಮುಗ್ಧರನ್ನು ಕೇಸಲ್ಲಿ ಸಿಲುಕಿಸುವವರಂತೆ ಸೃಷ್ಟಿಸುವುದು.
 • ಅಪರಾಧ ನಡೆದ ನಂತರ ಕೊನೆಯಲ್ಲಿ ಬರುವವರಂತೆ ಬಿಂಬಿಸುವುದು.
 • ತನಿಖಾ ಶೈಲಿಯೇ ಗೊತ್ತಿಲ್ಲದವರಂತೆ ಹಾಸ್ಯಾಸ್ಪದವಾಗಿ ತೋರಿಸುವುದು.

ಪ್ರಮುಖ ಬೇಡಿಕೆಗಳೇನು?

 • ಎಲ್ಲ 55 ಸರ್ಕಾರಿ ರಜಾದಿನಗಳಿಗೂ ವೇತನ ನೀಡಬೇಕು
 • ವಾರದ ಭತ್ಯೆ ಮೊತ್ತವನ್ನು 1 ದಿನದ ವೇತನಕ್ಕೆ ನಿಗದಿಪಡಿಸಬೇಕು
 • ಬಂದೋಬಸ್ತ್​ಗೆ ನೀಡುವ ಮುಂಗಡ ಹಣ ಹಿಂಪಡೆಯಬಾರದು
 • ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಬೇಕು
 • ಎಲ್ಲ ಸರ್ಕಾರಿ ಬಸ್-ರೈಲುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
 • ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಕಲ್ಯಾಣ ನಿಧಿಯಿಂದ ಉಚಿತ ಹಣ
 • ಪ್ರತಿವರ್ಷವೂ ಪೊಲೀಸ್ ವಸತಿ ಗೃಹಗಳ ದುರಸ್ತಿ ನಡೆಯಬೇಕು
 • ಎಲ್ಲ ಠಾಣೆ/ಕಚೇರಿಗಳಲ್ಲಿ ಡಿ ಗ್ರೂಪ್ ನೌಕರರನ್ನು ನೇಮಿಸಬೇಕು
 • ಮಾತೃತ್ವ ರಜೆಯನ್ನು ಒಂಭತ್ತು ತಿಂಗಳಿಗೆ, ಪಿತೃತ್ವ ರಜೆಯನ್ನು ಒಂದು ತಿಂಗಳಿಗೆ ವಿಸ್ತರಿಸಬೇಕು

ಮಹಿಳಾ ಪೊಲೀಸರಿಗೆ ಹೊಸ ಷರತ್ತು

ಬೆಂಗಳೂರು: ಮಹಿಳಾ ಪೊಲೀಸರು ಸೀರೆ ಬದಲಿಗೆ ಪ್ಯಾಂಟು-ಶರ್ಟು ಸಮವಸ್ತ್ರ ಧರಿಸಬೇಕು ಎಂದು ಆದೇಶ ಹೊರಡಿಸಿದ್ದ ಪೊಲೀಸ್ ಇಲಾಖೆ ಇದೀಗ ದೊಡ್ಡ ಹಣೆಬಿಂದಿ, ಕಿವಿಯೋಲೆ, ಬಳೆಗಳನ್ನು ತೊಡುವಂತಿಲ್ಲ, ಹೂವು ಮುಡಿದುಕೊಳ್ಳುವಂತಿಲ್ಲ ಎಂದು ಆದೇಶಿಸಿದೆ.

ಈವರೆಗೆ ಮಹಿಳಾ ಪೊಲೀಸರು ತಮಗಿಷ್ಟ ಬಂದಂತೆ ವಿವಿಧ ಬಣ್ಣದ ಹೇರ್​ಪಿನ್- ಹೇರ್​ಬ್ಯಾಂಡ್, ಬಳೆಗಳನ್ನು ತೊಡುತ್ತಿದ್ದರು. ಇದಕ್ಕೆ ಯಾರಿಂದಲೂ ಆಕ್ಷೇಪ ಇರಲಿಲ್ಲ. ಆದರೆ, ಕಾನೂನು-ಸುವ್ಯವಸ್ಥೆ ಕಾಪಾಡುವ ವೇಳೆ, ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡುವಾಗ, ಕೈದಿಗಳ ಬೆಂಗಾವಲು ಸಂದರ್ಭ, ಕಳ್ಳರನ್ನು ಬೆನ್ನತ್ತುವಾಗ ಅನನುಕೂಲವಾಗುತ್ತದೆ ಎಂಬ ಅಭಿಪ್ರಾಯ ಇತ್ತೀಚೆಗೆ ಡಿಜಿಪಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ಮಹಿಳಾ ಪೊಲೀಸರ ಅಲಂಕಾರಕ್ಕೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮಹಿಳಾ ಪೊಲೀಸರು ತಲೆಗೂದಲು ಹರಡದಂತೆ ತುರುಬು ಕಟ್ಟಿಕೊಂಡು ಕಪ್ಪು ಬಣ್ಣದ ನೆಟ್ಟೆಡ್ ಬ್ಯಾಂಡ್ ಸುತ್ತಬೇಕು. ಕಪ್ಪು ಬಣ್ಣದ ಹೇರ್​ಪಿನ್-ಹೇರ್ ಬ್ಯಾಂಡ್ ಮಾತ್ರ ಧರಿಸಬೇಕು. ಇತರ ಬಣ್ಣದ ಹೇರ್​ಪಿನ್-ಹೇರ್​ಬ್ಯಾಂಡ್ ಬಳಸುವಂತಿಲ್ಲ. ಕೂದಲಿಗೆ ಬಣ್ಣ ಹಚ್ಚುವಂತಿದ್ದಲ್ಲಿ ಕಪ್ಪು ಬಣ್ಣವನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಕಿವಿಯೋಲೆ ಧರಿಸುವಂತಿದ್ದಲ್ಲಿ ಚಿಕ್ಕ ಮಾದರಿಯ (ಸ್ಮಾಲ್ ಸ್ಟಡ್) ಒಂದು ಜೊತೆ ಓಲೆ ಧರಿಸಬಹುದು. ಹಣೆಗೆ ಚಿಕ್ಕ ಬಿಂದಿಯನ್ನೇ ಇಟ್ಟುಕೊಳ್ಳಬೇಕು. ಬಳೆ ಹಾಕಿಕೊಳ್ಳುವಂತಿದ್ದಲ್ಲಿ ಸಣ್ಣ ಗಾತ್ರದ ಒಂದು ಲೋಹದ ಬಳೆ ತೊಡಬಹುದು. ತಲೆಗೆ ಹೂ ಮುಡಿದುಕೊಳ್ಳಬಾರದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಲಿಖಿತ ಆದೇಶ ಹೊರಡಿಸಿದ್ದಾರೆ. ಆಯಾ ಘಟಕಗಳ ಅಧಿಕಾರಿಗಳು ಈ ಆದೇಶವನ್ನು ತಕ್ಷಣದಿಂದ ಜಾರಿಗೆ ತರುವಂತೆ ನಿರ್ದೇಶಿಸಲಾಗಿದೆ.

Leave a Reply

Your email address will not be published. Required fields are marked *

Back To Top