ಶಾಸಕರ ಹಾಜರಾತಿಯಲ್ಲಿ ಕರ್ನಾಟಕವೇ ಮೊದಲು!

ನವದೆಹಲಿ: ದೇಶದ ವಿವಿಧ ರಾಜ್ಯಗಳ ವಿಧಾನಸಭೆಗೆ ಹೋಲಿಸಿದರೆ ಕರ್ನಾಟಕ ಶಾಸಕರು ಹೆಚ್ಚು ಅವಧಿಗೆ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಆದರೆ ವಿಧಾನಸಭೆಗಿಂತ ಹೆಚ್ಚು ಲೋಕಸಭೆಯೇ ಹೆಚ್ಚು ದಿನ ಕಾರ್ಯಕಲಾಪ ನಡೆಸಿದೆ.

26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಕಾರ್ಯವನ್ನು 2011ರಿಂದ 2016ರ ಅವಧಿಯಲ್ಲಿ ಪರಿಶೀಲನೆ ನಡೆಸಿರುವ ಪಿಆರ್​ಎಸ್ ಲೆಜಿಸ್ಲೇಟಿವ್ ರಿಸರ್ಚ್ ಇತ್ತೀಚಿಗೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಸಂಸದರಿಗೆ ಹೋಲಿಸಿದರೆ ದೇಶಾದ್ಯಂತದ ಶಾಸಕರು ವಾರ್ಷಿಕವಾಗಿ ಬೆರಳೆಣಿಕೆ ದಿನಗಳು ಮಾತ್ರವೇ ಕೆಲಸ ಮಾಡುತ್ತಾರೆ. ಅದರಲ್ಲೂ ಸಣ್ಣ ರಾಜ್ಯಗಳ ಸ್ಥಿತಿ ಇನ್ನಷ್ಟು ಶೋಚನೀಯವಾಗಿರುವುದು ಕಂಡುಬಂದಿದೆ.

ವಿಧಾನಸಭೆಗಳಲ್ಲಿ ಶಾಸಕರ ಹಾಜರಿ ದಿನಗಳು ಸರಾಸರಿಯಾಗಿ ವಾರ್ಷಿಕ 28 ದಿನಗಳಾಗಿವೆ. ಆರು ವರ್ಷಗಳ ಅವಧಿಯ ದಾಖಲೆಗಳನ್ನು ಗಮನಿಸಿ ಈ ಸಮೀಕ್ಷಾ ವರದಿ ಬಿಡುಗಡೆ ಮಾಡಲಾಗಿದ್ದು, 26 ವಿಧಾನಸಭೆಗಳ ಪೈಕಿ 13 ವಿಧಾನಸಭೆಗಳಲ್ಲಿ ಶಾಸಕರ ಹಾಜರಾತಿ ವಾರ್ಷಿಕವಾಗಿ ಸರಾಸರಿ 28 ದಿನಗಳಷ್ಟೇ ಇದೆ.