ಕರ್ನಾಟಕ ಮೆರಿಟೈಂ ಮಂಡಳಿ ಸದ್ದಿಲ್ಲದೆ ಅಸ್ತಿತ್ವಕ್ಕೆ

ಮಂಗಳೂರು: ಸುಮಾರು 10 ವರ್ಷಗಳ ಹಿಂದೆಯೇ ಬಜೆಟ್‌ನಲ್ಲಿ ಘೋಷಣೆಯಾಗಿ ಸ್ಥಾಪನೆಯಾಗದೆ ಉಳಿದಿದ್ದ ಕರ್ನಾಟಕ ಮೆರಿಟೈಂ ಮಂಡಳಿ ಸದ್ದಿಲ್ಲದೆ ಅಸ್ತಿತ್ವಕ್ಕೆ ಬಂದಿದೆ.

ಬೃಹತ್ ಬಂದರುಗಳನ್ನು ಬಿಟ್ಟು ಉಳಿದ ರಾಜ್ಯದ ಅಧೀನದ ಕಿರು ಬಂದರುಗಳ ವಾಣಿಜ್ಯ ಅಭಿವೃದ್ಧಿ ಮಾಡುವ ಉದ್ದೇಶ ಈ ಮಂಡಳಿಯದ್ದು. 10 ವರ್ಷಗಳ ಹಿಂದೆಯೇ ಘೋಷಣೆಯಾದ ಬಳಿಕ ವಿಳಂಬಗೊಂಡಿದ್ದು, 2015ರಲ್ಲಿ ಸಾಗರಮಾಲಾ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮೆರಿಟೈಂ ಮಂಡಳಿ ರಚಿಸುವಂತೆ ಕೇಂದ್ರ ನಿರ್ದೇಶಿಸಿದ ಬಳಿಕ ಇದರ ರಚನೆಗೆ ಚಾಲನೆ ನೀಡಲಾಯಿತು.

ನವಮಂಗಳೂರು ಬಂದರು ಬೃಹತ್ ಬಂದರು ಆಗಿದ್ದು, ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಅದು ಬಿಟ್ಟರೆ ಮಂಗಳೂರು ಹಳೇ ಬಂದರು, ಪಡುಬಿದ್ರಿ, ಬೇಲೆಕೇರಿ, ಭಟ್ಕಳ, ತದಡಿ, ಹೊನ್ನಾವರ, ಮಲ್ಪೆ, ಹಂಗಾರಕಟ್ಟೆ, ಕಾರವಾರ ಸಹಿತ 9 ಬಂದರುಗಳು ಮೆರಿಟೈಂ ಬೋರ್ಡ್‌ನ ವ್ಯಾಪ್ತಿಯಲ್ಲಿ ಬರಲಿವೆ.

ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಈಗಾಗಲೇ ಆಯಾ ರಾಜ್ಯದ ಮೆರಿಟೈಂ ಬೋರ್ಡ್‌ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಅಲ್ಲಿನ ಬಂದರುಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೆರಿಟೈಂ ಬೋರ್ಡ್ ಕೂಡ ರಾಜ್ಯದ ಬಂದರುಗಳ ಅಭಿವೃದ್ಧಿಗೆ ಪೂರಕವಾಗುವ ಭರವಸೆ ಮೂಡಿಸಿದೆ.

ಉಜ್ವಲ್ ಕುಮಾರ ಘೋಷ್ ನೇಮಕ: ಕರ್ನಾಟಕ ಮೆರಿಟೈಂ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ ಘೋಷ್ ನೇಮಕಗೊಂಡಿದ್ದಾರೆ. ಉಳಿದಂತೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಬಂದರು ಇಲಾಖೆ ಕಾರ್ಯದರ್ಶಿ, ನೌಕಾ ಸೇನೆಯ ಕರ್ನಾಟಕ ಮುಖ್ಯಸ್ಥರು, ಕೋಸ್ಟ್‌ಗಾರ್ಡ್‌ನ ಮಂಗಳೂರು ಪ್ರಧಾನ ಕಚೇರಿ ಕಮಾಂಡರ್, ಹಣಕಾಸು ಇಲಾಖೆ ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ಸದಸ್ಯರಿರುತ್ತಾರೆ. ಪ್ರತ್ಯೇಕ ಸಲಹಾ ಮಂಡಳಿಯೂ ಇರಲಿದೆ.

ಕಾಯ್ದೆ 2015ರಲ್ಲಿ ಜಾರಿಗೆ: ರಾಜ್ಯ ಸರ್ಕಾರ 2015ರಲ್ಲಿಯೇ ಕರ್ನಾಟಕ ಮೆರಿಟೈಂ ಮಂಡಳಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ ಮಂಡಳಿ ರಚನೆ ಆಗಿರಲಿಲ್ಲ. ಕೆಲ ತಿಂಗಳ ಹಿಂದೆಯಷ್ಟೇ ಇದನ್ನು ರಚಿಸಲಾಗಿದ್ದು, ಇನ್ನೂ ಸದಸ್ಯತ್ವ ನೇಮಕ ಇತ್ಯಾದಿಗಳು ಬಾಕಿ ಉಳಿದಿವೆ.

ಏನು ಪ್ರಯೋಜನ?: 300 ಕಿ.ಮೀ ಸಮುದ್ರ ಹೊಂದಿರುವ ರಾಜ್ಯದಲ್ಲಿ ಸದ್ಯ ಕಿರು ಬಂದರುಗಳನ್ನು ಬಂದರುಗಳು ಮತ್ತು ಒಳನಾಡ ಜಲಸಾರಿಗೆ ಸಚಿವಾಲಯದಿಂದ ನಿರ್ವಹಿಸಲಾಗುತ್ತದೆ. ಈ ಬಂದರುಗಳ ಆದಾಯ ನೇರವಾಗಿ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ನಿರ್ವಹಣೆಯನ್ನು ಸರ್ಕಾರದ ಅನುದಾನದಿಂದ ಮಾಡಲಾಗುತ್ತದೆ. ಇದರಿಂದಾಗಿ ಬಂದರುಗಳ ಅಭಿವೃದ್ಧಿ ಸರಿಯಾಗಿ ಆಗುತ್ತಿಲ್ಲ. ಆದರೆ ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಮೆರಿಟೈಂ ಮಂಡಳಿಯಿಂದಾಗಿ ಅಲ್ಲಿನ ಕಿರುಬಂದರುಗಳು ಸಾಕಷ್ಟು ಕ್ಷಿಪ್ರ ಪ್ರಗತಿಯಾಗಿವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಮಂಡಳಿ ರಚನೆ ಮಾಡಬೇಕು ಎನ್ನುವ ವಾದವನ್ನು ಮುಂದಿಡಲಾಗಿತ್ತು. ಇದರ ಆಡಳಿತದ ಮೂಲಕ ಬಂದರುಗಳ ನಿರ್ವಹಣೆ, ಅಭಿವೃದ್ಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳುವುದು ಸಾಧ್ಯ. ಕರಾವಳಿಯ ಸಂರಕ್ಷಣೆ, ಅಭಿವೃದ್ಧಿಗೆ ಸೂತ್ರ ಹೆಣೆಯಬಹುದು. ಇದಕ್ಕಾಗಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಯೋಜನೆಗಳನ್ನು ಕೈಗೊಳ್ಳುವುದು, ಮೀನುಗಾರಿಕಾ ಜೆಟ್ಟಿ ನಿರ್ವಹಣೆಯನ್ನೂ ಮಾಡಬಹುದು.

ಕಾರವಾರದಲ್ಲಿ ಕಚೇರಿ?: ಮೆರಿಟೈಂ ಬೋರ್ಡ್ ಸ್ಥಾಪನೆಯಾಗಿ ಹಲವು ದಿನಗಳೇ ಕಳೆದರೂ ಈ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ. ಇದರ ಸಿಇಒ ಆಗಿ ನೇಮಕಗೊಂಡಿರುವ ಉಜ್ವಲ್ ಕುಮಾರ್ ಕಾರವಾರ ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ಪಣಂಬೂರು ಬಂದರು ಇದರ ವ್ಯಾಪ್ತಿಗೆ ಬರುವುದಿಲ್ಲ. ಉಳಿದ ಸಣ್ಣ ಬಂದರುಗಳು ಇದರ ವ್ಯಾಪ್ತಿಗಿರುತ್ತವೆ. ಉಳಿದಂತೆ ದೊಡ್ಡ ಬಂದರು ಕಾರವಾರ. ಹಾಗಾಗಿ ಮೆರಿಟೈಂ ಬೋರ್ಡು ಸ್ಥಾಪನೆಯಿಂದ ಕಾರವಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಮಾತುಗಳೂ ಇವೆ. ಈ ಹಿನ್ನೆಲೆಯಲ್ಲಿ ಕಾರವಾರದಲ್ಲೇ ಕಚೇರಿ ಆಗಬಹುದು ಎನ್ನಲಾಗುತ್ತಿದೆ.