More

  ಉನಾದ್ಕತ್ ದಾಳಿಗೆ ಉರುಳಿದ ಕರ್ನಾಟಕ

  ರಾಜ್​ಕೋಟ್: ನಾಯಕ ಜೈದೇವ್ ಉನಾದ್ಕತ್​ರ ಅದ್ಭುತ ವೇಗದ ಬೌಲಿಂಗ್ ನಿರ್ವಹಣೆ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರವಾಸಿ ಕರ್ನಾಟಕ ತಂಡದ ದೊಡ್ಡ ಮಟ್ಟದ ಹಿನ್ನಡೆಗೆ ಕಾರಣವಾಗಿದೆ. ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಉನಾದ್ಕತ್ ದಾಳಿಗೆ ಕುಸಿದು ಮೊದಲ ಇನಿಂಗ್ಸ್​ನಲ್ಲಿ ಕೇವಲ 171 ರನ್​ಗೆ ಆಲೌಟ್ ಆದ ಕರ್ನಾಟಕ ಫಾಲೋಆನ್ ಸಂಕಷ್ಟಕ್ಕೆ ಸಿಲುಕಿದೆ.

  ಮಾಧವ್​ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಸೋಮವಾರ 1 ವಿಕೆಟ್​ಗೆ 13 ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ 79 ಓವರ್​ಗಳಲ್ಲಿ ತನ್ನ ಮೊದಲ ಇನಿಂಗ್ಸ್ ಹೋರಾಟವನ್ನು ಸಮಾಪ್ತಿ ಮಾಡಿತು. ಇದರಿಂದಾಗಿ 410 ರನ್​ಗಳ ಬೃಹತ್ ಮುನ್ನಡೆ ಪಡೆದುಕೊಂಡಿರುವ ಸೌರಾಷ್ಟ್ರ, ರಾಜ್ಯ ತಂಡಕ್ಕೆ ಫಾಲೋಆನ್ ಹೇರಿತು. ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಕನಿಷ್ಠ 1 ಅಂಕವನ್ನಾದರೂ ಸಂಪಾದನೆ ಮಾಡುವ ಗುರಿಯಲ್ಲಿರುವ ಕರ್ನಾಟಕ, 2ನೇ ಸರದಿಯಲ್ಲಿ 16 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಪೇರಿಸಿದೆ. ಹೊಟ್ಟೆನೋವಿನ ಕಾರಣಕ್ಕಾಗಿ ದೇವದತ್ ಪಡಿಕಲ್ ಬದಲು 2ನೇ ಇನಿಂಗ್ಸ್​ನಲ್ಲಿ ರೋಹನ್ ಕದಂ (14) ಆರಂಭಿಕರಾಗಿ ಕಣಕ್ಕಿಳಿದಿದ್ದು, ಸಮರ್ಥ್ (16) ಜತೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಜ್ಯ ತಂಡ ಇನ್ನೂ 380 ರನ್​ಗಳ ಹಿನ್ನಡೆಯಲ್ಲಿರುವುದರಿಂದ ಡ್ರಾ ಮಾಡಿಕೊಳ್ಳಲು 4ನೇ ಹಾಗೂ ಅಂತಿಮ ದಿನ ಪೂರ್ತಿ ಬ್ಯಾಟಿಂಗ್ ಮಾಡಬೇಕಿದೆ.

  ಸ್ವಿಂಗ್ ಬೌಲಿಂಗ್ ಅಸ್ತ್ರದ ಮೂಲಕ ರಾಜ್ಯ ತಂಡವನ್ನು ಉನಾದ್ಕತ್ ಅತಿಯಾಗಿ ಕಾಡಿದರು. ಆಫ್​ಸ್ಟಂಪ್​ನ ಹೊರಗೆ ಉನಾದ್ಕತ್ ಎಸೆದ ಎಸೆತಗಳು ನಿರಾಳವಾಗಿ ಎಡ್ಜ್ ಆಗುತ್ತಿದ್ದವು. ಆ ಮೂಲಕವೇ ರೋಹನ್ ಕದಂ, ಕೆವಿ ಸಿದ್ಧಾರ್ಥ್ ಹಾಗೂ ಆರ್. ಸಮರ್ಥ್​ರ ವಿಕೆಟ್ ಉರುಳಿಸಿದರು. 7ನೇ ವಿಕೆಟ್ ರೂಪದಲ್ಲಿ ಸಮರ್ಥ್ (63 ರನ್, 174 ಎಸೆತ,8 ಬೌಂಡರಿ) ಔಟಾದ ಬಳಿಕ ಕರ್ನಾಟಕದ ಪ್ರತಿಹೋರಾಟ ಕೂಡ ಬಹುತೇಕ ಕೊನೆ ಗೊಂಡಿತು. ಉನಾದ್ಕತ್ ಟೂರ್ನಿಯಲ್ಲಿ 3ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದರು.

  ಬಿಹಾರ, ಕೇರಳಕ್ಕೆ ಗೆಲುವು

  ಬಿಹಾರ ಹಾಗೂ ಕೇರಳ ತಂಡಗಳು 3 ದಿನಗಳಲ್ಲಿಯೇ ಗೆಲುವು ಸಾಧಿಸಿದವು. ತಿರುನೆವಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೇರಳ ತಂಡ 21 ರನ್​ಗಳಿಂದ ಬಲಿಷ್ಠ ಪಂಜಾಬ್ ತಂಡವನ್ನು ಸೋಲಿಸಿತು. ಪಶ್ಚಿಮ ಬಂಗಾಳದ ಬಾಲೂರ್​ಘಾಟ್​ನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಬಿಹಾರ ತಂಡ 183 ರನ್​ಗಳಿಂದ ಮಣಿಪುರ ತಂಡವನ್ನು ಸೋಲಿಸಿತು.

  ಜೀವದಾನ ಬಳಸಿಕೊಳ್ಳದ ಶರತ್

  ಉನಾದ್ಕತ್ ಅಲ್ಲದೆ, ಆಫ್ ಸ್ಪಿನ್ನರ್ ಕಮಲೇಶ್ ಮಕ್ವಾನ ಕೂಡ ಬಿಗಿಯಾದ ದಾಳಿ ನಡೆಸಿದರು. ಪವನ್ ದೇಶಪಾಂಡೆ (8) ಪ್ರಮುಖ ವಿಕೆಟ್​ಅನ್ನು ಮಕ್ವಾನ ಉರುಳಿಸಿದರೆ, ವಿಕೆಟ್ ಕೀಪರ್ ಬಿಆರ್ ಶರತ್ (2) ಆರಂಭದಲ್ಲಿಯೇ ಸಿಕ್ಕ ಜೀವದಾನವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ನಾಯಕ ಶ್ರೇಯಸ್ ಗೋಪಾಲ್, ಎಡಗೈ ಸ್ಪಿನ್ನರ್ ಧಮೇಂದ್ರಸಿನ್ಹಾ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಪ್ರವೀಣ್ ದುಬೆ (46*ರನ್, 106 ಎಸೆತ, 5 ಬೌಂಡರಿ, 1 ಸಿಕ್ಸರ್) ಕೊನೇ ವಿಕೆಟ್​ಗೆ ಪ್ರತೀಕ್ ಜೈನ್ ಜತೆಯಾಗಿದ್ದ ಹಂತದಲ್ಲಿ ಕೆಲ ಆಕ್ರಮಣಕಾರಿ ಶಾಟ್​ಗಳನ್ನು ಬಾರಿಸಿ ಮೊತ್ತ ಹೆಚ್ಚಿಸಿದರು.

  ಸೌರಾಷ್ಟ್ರ ಪ್ರ. ಇನಿಂಗ್ಸ್: 581/7 ಡಿಕ್ಲೇರ್

  ಕರ್ನಾಟಕ ಪ್ರಥಮ ಇನಿಂಗ್ಸ್: 79 ಓವರ್​ಗಳಲ್ಲಿ 171 (ಭಾನುವಾರ 1 ವಿಕೆಟ್​ಗೆ 13)

  ಆರ್ ಸಮರ್ಥ್ ಸಿ ಸ್ನೆಲ್ ಬಿ ಉನಾದ್ಕತ್ 63

  ರೋಹನ್ ಕದಂ ಸಿ ಪ್ರೇರಕ್ ಬಿ ಉನಾದ್ಕತ್ 29

  ಕೆವಿ ಸಿದ್ಧಾರ್ಥ್ ಸಿ ಸ್ನೆಲ್ ಬಿ ಉನಾದ್ಕತ್ 0

  ಪವನ್ ದೇಶಪಾಂಡೆ ಸಿ ಪ್ರೇರಕ್ ಬಿ ಮಕ್ವಾನ 8

  ಶ್ರೇಯಸ್ ಗೋಪಾಲ್ ಬಿ ಧಮೇಂದ್ರಸಿನ್ಹಾ 11

  ಬಿಆರ್ ಶರತ್ ಬಿ ಕಮಲೇಶ್ ಮಕ್ವಾನ 2

  ಪ್ರವೀಣ್ ದುಬೆ ಔಟಾಗದೆ 46

  ಜೆ. ಸುಚಿತ್ ಬಿ ಉನಾದ್ಕತ್ 2

  ರೋನಿತ್ ಮೋರೆ ಬಿ ಕಮಲೇಶ್ ಮಕ್ವಾನ 6

  ಪ್ರತೀಕ್ ಜೈನ್ ರನೌಟ್ (ಚಿರಾಗ್ ಜಾನಿ) 1

  ಇತರ: 3, ವಿಕೆಟ್ ಪತನ: 1-1, 2-42, 3-44, 4-67, 5-90, 6-93, 7-132, 8-138, 9-148. ಬೌಲಿಂಗ್: ಜೈದೇವ್ ಉನಾದ್ಕತ್ 15-0-49-5, ಚಿರಾಗ್ ಜಾನಿ 7-3-15-0, ಧಮೇಂದ್ರಸಿನ್ಹಾ ಜಡೇಜಾ 30-11-51-1, ಪ್ರೇರಕ್ ಮಂಕಡ್ 4-1-7-0, ಮಕ್ವಾನ 17-5-27-3, ಜಿವರಾಜ್​ಜಾನಿ 6-1-19-0.

  ಕರ್ನಾಟಕ ದ್ವಿತೀಯ ಇನಿಂಗ್ಸ್:

  16 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30

  ರೋಹನ್ ಕದಂ ಬ್ಯಾಟಿಂಗ್ 14

  ಆರ್. ಸಮರ್ಥ್ ಬ್ಯಾಟಿಂಗ್ 16

  ಇತರ: 0. ಬೌಲಿಂಗ್: ಜೈದೇವ್ ಉನಾದ್ಕತ್ 5-1-12-0, ಚಿರಾಗ್ ಜಾನಿ 3-3-0-0, ಧಮೇಂದ್ರಸಿನ್ಹಾ ಜಡೇಜಾ 5-1-12-0, ಮಕ್ವಾನ 3-2-6-0.

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts