ಚೊಚ್ಚಲ ಟಿ20 ಪ್ರಶಸ್ತಿ ಕನಸಿನಲ್ಲಿ ಕರ್ನಾಟಕ

ಇಂದೋರ್: ದೇಶೀಯ ಚುಟುಕು ಕ್ರಿಕೆಟ್ ಟೂರ್ನಿಯುದ್ದಕ್ಕೂ ಅಜೇಯ ಸಾಧನೆಯೊಂದಿಗೆ ಪ್ರಶಸ್ತಿ ಸುತ್ತಿಗೇರಿರುವ ಕರ್ನಾಟಕ ತಂಡ ಚೊಚ್ಚಲ ಟಿ20 ಪ್ರಶಸ್ತಿ ಕನಸಿನೊಂದಿಗೆ ಮಹಾ ಹೋರಾಟಕ್ಕೆ ಸಜ್ಜಾಗಿದೆ.

ಹೋಳ್ಕರ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ತಂಡದ ಸವಾಲು ಎದುರಿಸಲಿದೆ. ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಉಭಯ ತಂಡಗಳು ಅಜೇಯ ಸಾಧನೆಯೊಂದಿಗೆ ಫೈನಲ್​ಗೇರಿದ್ದು, ಕದನ ಕುತೂಹಲ ಕೆರಳಿಸಿದೆ.

ಆತ್ಮವಿಶ್ವಾಸದಲ್ಲಿ ಕರ್ನಾಟಕ: ಪ್ರಸಕ್ತ ವರ್ಷದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಪ್ರಶಸ್ತಿ ಬರ ಎದುರಿಸುತ್ತಿರುವ ಕರ್ನಾಟಕ ಮೊದಲ ಬಾರಿಗೆ ಪ್ರತಿಷ್ಠಿತ ಟಿ20 ಟೂರ್ನಿ ಪ್ರಶಸ್ತಿ ಸುತ್ತಿಗೇರಿದೆ. ದೇಶೀಯ ಕ್ರಿಕೆಟ್​ನ ಎಲ್ಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೂ ಕಳೆದ 13 ವರ್ಷಗಳಿಂದಲೂ ಈ ಟ್ರೋಫಿ ರಾಜ್ಯದ ಪಾಲಿಗೆ ಗಗನಕುಸುಮವಾಗಿದೆ. ಆದರೆ ಈ ಬಾರಿ, ಕೆಪಿಎಲ್​ನಲ್ಲಿ ಮಿಂಚಿರುವ ಯುವ ಆಟಗಾರರು ಮತ್ತು ಐಪಿಎಲ್​ಗೆ ಸಜ್ಜಾಗುತ್ತಿರುವ ಅನುಭವಿ ಆಟಗಾರರ ಸ್ಥಿರ ನಿರ್ವಹಣೆಯಿಂದ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆ ರಾಜ್ಯ ತಂಡದಲ್ಲಿದೆ. ಇದರೊಂದಿಗೆ ದೇಶೀಯ ಕ್ರಿಕೆಟ್​ನ ಎಲ್ಲ ಮಾದರಿಯ ಪ್ರಮುಖ ಟ್ರೋಫಿ ಗೆದ್ದ ಹಿರಿಮೆಗೆ ಮನೀಷ್ ಬಳಗ ಪಾತ್ರವಾಗಲಿದೆ. ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನೀಷ್ ಪಾಂಡೆ ಒಳಗೊಂಡ ಅನುಭವಿ ಬ್ಯಾಟಿಂಗ್ ಪಡೆಗೆ ಯುವ ಆಟಗಾರರಾದ ಬಿಆರ್ ಶರತ್ ಹಾಗೂ ರೋಹನ್ ಕದಂ ಭರ್ಜರಿ ಆರಂಭದ ಬುನಾದಿ ಒದಗಿಸುತ್ತಿರುವುದೇ ತಂಡದ ಪ್ಲಸ್ ಪಾಯಿಂಟ್. ಅನುಭವಿ ವೇಗಿಗಳಾದ ವಿನಯ್ ಕುಮಾರ್ ಹಾಗೂ ಮಿಥುನ್ ಜತೆಗೆ ವಿ.ಕೌಶಿಕ್ ಗಮನಸೆಳೆಯುತ್ತಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್ ಹಾಗೂ ಜೆ.ಸುಚಿತ್ ಜೋಡಿ ತಂಡದ ಪ್ರಮುಖ ಅಸ್ತ್ರವಾಗಿದೆ.

ಮಹಾ ತಂಡದ ಸಂಘಟಿತ ಹೋರಾಟ

ಮಹಾರಾಷ್ಟ್ರ ತಂಡ ವೈಯಕ್ತಿಕ ಪ್ರದರ್ಶನಕ್ಕಿಂತ ಸಂಘಟಿತ ನಿರ್ವಹಣೆ ಬಲ ನೆಚ್ಚಿಕೊಂಡಿದೆ. ಅನುಭವಿ ಅಂಕಿತ್ ಭಾವ್ನೆ, ವಿಕೆಟ್ ಕೀಪರ್ ನಿಖಿಲ್ ನಾಯ್್ಕ ಆಲ್ರೌಂಡರ್ ನೌಶದ್ ಶೇಖ್ ಕರ್ನಾಟಕದ ಬೌಲರ್​ಗಳಿಗೆ ಸವಾಲಾಗಬಲ್ಲರು. ಅಂತಿಮ ಲೀಗ್ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ನಿಖಿಲ್ ನಾಯ್್ಕ ಅಜೇಯ 95 ಸಿಡಿಸುವ ಮೂಲಕ ತಂಡ ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಹಾರಾಷ್ಟ್ರ ಬ್ಯಾಟ್ಸ್​ಮನ್​ಗಳು ಸಂಘಟಿತ ನಿರ್ವಹಣೆ ತೋರುತ್ತಿದ್ದರೂ ಬೌಲರ್​ಗಳು ಅಗತ್ಯ ಸಾಥ್ ನೀಡಬೇಕಿದೆ.

ಟಿ20 ರನ್ನರ್​ಅಪ್​ಗೆ ಮಹಿಳೆಯರು ತೃಪ್ತಿ

ಮುಂಬೈ: ಅಂತಿಮ ಓವರ್​ನಲ್ಲಿ ಅಗತ್ಯವಿದ್ದ 6 ರನ್ ಪೇರಿಸಲು ವಿಫಲವಾದ ಕರ್ನಾಟಕ ಮಹಿಳಾ ತಂಡ ಸೀನಿಯರ್ ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 4 ರನ್​ನಿಂದ ಪಂಜಾಬ್ ತಂಡಕ್ಕೆ ಶರಣಾಯಿತು. ಬಿರುಸಿನ ಬ್ಯಾಟುಗಾರ್ತಿ ಸಿ. ಪ್ರತ್ಯುಷಾ (35ರನ್, 31 ಎಸೆತ, 4 ಬೌಂಡರಿ) ಅಂತಿಮ ಕ್ಷಣದವರೆಗೆ ಕಣದಲ್ಲಿದ್ದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಇದರೊಂದಿಗೆ ಚೊಚ್ಚಲ ಬಾರಿಗೆ ದೇಶೀಯ ಟಿ20 ಪ್ರಶಸ್ತಿ ಜಯಿಸಲು ಕರ್ನಾಟಕ ಮಹಿಳಾ ತಂಡ ವಿಫಲವಾಯಿತು. ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡದ ನಾಯಕಿ ರಕ್ಷಿತಾ ಕೆ, ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಜಸಿಯಾ ಅಖ್ತರ್ (56 ರನ್, 54 ಎಸೆತ, 6 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಪಂಜಾಬ್ ತಂಡ 7 ವಿಕೆಟ್​ಗೆ 131 ರನ್ ಪೇರಿಸಿತು. ಬಳಿಕ ಕರ್ನಾಟಕ ತಂಡ 7 ವಿಕೆಟ್​ಗೆ 127 ರನ್​ಗಳಿಸಲಷ್ಟೇ ಶಕ್ತವಾ ಯಿತು. ಪಂಜಾಬ್: 20 ಓವರ್​ಗಳಲ್ಲಿ 7 ವಿಕೆಟ್​ಗೆ 131 (ಜಸಿಯಾ ಅಖ್ತರ್ 56, ತಾನಿಯಾ ಭಾಟಿಯಾ 12, ನೀಲಮ್ ಬಿಷ್ಟ್ 27, ಸಿಮ್ರೆನ್ ಹೆನ್ರಿ 26ಕ್ಕೆ 2, ಜಿ.ದಿವ್ಯಾ 24ಕ್ಕೆ 2), ಕರ್ನಾಟಕ: 20 ಓವರ್​ಗಳಲ್ಲಿ 7 ವಿಕೆಟ್​ಗೆ 127 (ಜಿ.ದಿವ್ಯಾ 41, ಪಿ.ಪ್ರತ್ಯುಷಾ 35, ಎಸ್.ಶುಭಾ 14, ಕೊಮಲ್​ಪ್ರೀತ್ ಕೌರ್ 22ಕ್ಕೆ 2, ಸುನೀತಾ ರಾಣಿ 19ಕ್ಕೆ 3, ನೀಲಮ್ ಬಿಷ್ಟ್ 24ಕ್ಕೆ 2).