ಇಂಧನ ದುಬಾರಿ!

<< ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ >>

ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕುಸಿತದ ಪರಿಣಾಮ ಇಂಧನ ಬೆಲೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ಹಿಂದೆ ಇಳಿಸಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಪೆಟ್ರೋಲ್ ಮೂಲದರದ ಮೇಲೆ ಶೇ. 32 ಹಾಗೂ ಡೀಸೆಲ್​ನ ಮೂಲದರದ ಮೇಲೆ ಶೇ. 21 ತೆರಿಗೆ ವಿಧಿಸಲಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸುಮಾರು 2 ರೂ. ಏರಿಕೆಯಾಗಲಿದೆ. ಬಸ್ ಪ್ರಯಾಣ ದರ ಏರಿಕೆಗೂ ಚಿಂತನೆ ನಡೆದಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.

ಇಂಧನ ದರ ಸತತ ಹೆಚ್ಚಳವಾದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಹೊರೆ ಇಳಿಸುವ ಉದ್ದೇಶದಿಂದ ಸೆಪ್ಟೆಂಬರ್ 17ರಂದು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 2 ರೂ. ಕಡಿತಗೊಳಿಸಿತ್ತು. ಪೆಟ್ರೋಲ್ ಮೇಲಿನ ತೆರಿಗೆ ಶೇ. 32ರಿಂದ ಶೇ.28.75ಕ್ಕೆ ಹಾಗೂ ಡೀಸೆಲ್ ಶೇ.21ರಿಂದ ಶೇ.17.73ಕ್ಕೆ ಇಳಿಕೆ ಮಾಡಲಾಗಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಅಕ್ಟೋಬರ್ 5ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು -ಠಿ;1.50 ಕಡಿತಗೊಳಿಸಿತ್ತು. ತೈಲ ಮಾರಾಟ ಕಂಪನಿಗಳೂ ಪ್ರತಿ ಲೀಟರ್​ಗೆ -ಠಿ;1 ಕಡಿತ ಮಾಡಿದ್ದವು.

ಕಳೆದ ಎರಡೂವರೆ ತಿಂಗಳಿನಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿ ಪೆಟ್ರೋಲ್, ಡೀಸೆಲ್ ದರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ. ರಾಜಸ್ವ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆರಿಗೆ ಏರಿಸಿದೆ.

ತೆರಿಗೆ ಕಡಿತ ವಾಪಸ್ ಪಡೆದ ಬಳಿಕವೂ ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ಕಡಿಮೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಪರಿಣಾಮ ಏನು?

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದಿಂದ ಸಾಗಾಣಿಕೆ ವೆಚ್ಚ ಏರಿಕೆಯಾಗಿ ಅನೇಕ ವಸ್ತುಗಳ ಬೆಲೆಯೂ ಹೆಚ್ಚುವ ಸಾಧ್ಯತೆಯಿದೆ.

ಪ್ರಯಾಣ ದರ ಹೆಚ್ಚಳ?

ಇಂಧನ ಮೇಲಿನ ತೆರಿಗೆ ಏರಿಕೆ ಬೆನ್ನಲ್ಲೇ ಕೆಎಸ್​ಆರ್​ಟಿಸಿ ಬಸ್ ಪ್ರಯಾಣ ಶುಲ್ಕ ಹೆಚ್ಚಳವಾಗುವ ಆತಂಕ ಎದುರಾಗಿದೆ. ಈಗಾಗಲೇ ಸಾರಿಗೆ ಇಲಾಖೆ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಬಸ್​ಗಳ ಪ್ರಯಾಣ ದರವನ್ನು ಶೇ.14ರಿಂದ 18ರವರೆಗೆ ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರಯಾಣದರ ಹೆಚ್ಚಳಕ್ಕೆ ಸಮ್ಮತಿ ನೀಡುವಂತೆ ಹಣಕಾಸು ಇಲಾಖೆ ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದೆ. ಈ ಹಿಂದೆ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಎಂ ಕುಮಾರಸ್ವಾಮಿ ಕೂಡ ಸಾರಿಗೆ ಇಲಾಖೆ ಪ್ರಸ್ತಾಪ ತಿರಸ್ಕರಿಸಿದ್ದರು. ಇದೇ ವೇಳೆ ರಾಜ್ಯದ ಐದು ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ದರ ಏರಿಕೆ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತು. ಈಗ ಸರ್ಕಾರ ತೆರಿಗೆ ಕಡಿತ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಮೇಲೆ ಹೊರೆ ಬೀಳಲಿದ್ದು, ಪ್ರಯಾಣ ಶುಲ್ಕ ಹೆಚ್ಚಳ ಅನಿವಾರ್ಯ ಎನ್ನಲಾಗುತ್ತಿದೆ.

ರಾಹುಲ್ ಮೌನ

ಪೆಟ್ರೋಲ್ ಬೆಲೆ 90 ರೂ.ಗೆ ತಲುಪಿದ್ದಾಗ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರಿ ಪ್ರತಿಭಟನೆ ಮಾಡಿ, ವಾಗ್ದಾಳಿ ನಡೆಸಿದ್ದರು. ಆದರೆ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ತೈಲದ ಮೇಲಿನ ತೆರಿಗೆ ಏರಿಸಿದ್ದರೂ ಅವರು ಮೌನವಾಗಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ.