ಐಎಂಎ ಅಕ್ರಮ ಬಗೆದಷ್ಟೂ ಆಳ: ವಂಚಿಸಿದ ಮೊತ್ತ ಐನೂರಲ್ಲ 10000 ಕೋಟಿ ರೂ.!

ಬೆಂಗಳೂರು: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಧೋಖಾ ಪ್ರಕರಣ ಬಗೆದಷ್ಟೂ ಆಳಕ್ಕೆ ಹೋಗುತ್ತಿದ್ದು, ವಿದೇಶಿ ಹೂಡಿಕೆದಾರರು ಸೇರಿ 50 ಸಾವಿರಕ್ಕೂ ಅಧಿಕ ಜನರಿಗೆ 10 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಂಚನೆ ಎಸಗಿರುವ ಅನುಮಾನ ವ್ಯಕ್ತವಾಗಿದೆ. ಮಂಗಳವಾರ ರಾತ್ರಿಯ ವೇಳೆಗೆ 6 ಸಾವಿರಕ್ಕೂ ಅಧಿಕ ಸಂತ್ರಸ್ತರು ದೂರು ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸಿದೆ.

ಸಿಎಂ ಕುಮಾರಸ್ವಾಮಿ ಪ್ರಕರಣದ ತನಿಖೆಯನ್ನು ಮೊದಲು ಸಿಸಿಬಿಗೆ ವಹಿಸಿದರಾದರೂ ಸಚಿವ ಜಮೀರ್ ಅಹಮದ್ ಸೇರಿ ಕೆಲ ಶಾಸಕರು ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಎಸ್​ಐಟಿಗೆ ವಹಿಸಿದರು.

ದೇಶ, ವಿದೇಶ ನಂಟು: ಹೂಡಿಕೆ ಮಾಡಿ ವಂಚನೆಗೊಳಗಾದ 6 ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ದೂರು ದಾಖಲಿಸಿದ್ದಾರೆ. ಕರ್ನಾಟಕದ ಜತೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲೂ 50 ಸಾವಿರಕ್ಕೂ ಅಧಿಕ ಜನ ಹಣ ಕಳೆದುಕೊಂಡಿದ್ದಾರೆನ್ನಲಾಗಿದೆ.

ಅನಿವಾಸಿ ಭಾರತೀಯರೊಂದಿಗೂ ವ್ಯವಹಾರ ಇರಿಸಿಕೊಂಡಿದ್ದ ಐಎಂಎ ಸಂಸ್ಥೆ ಮಾಲೀಕ ಮಹಮದ್ ಮನ್ಸೂರ್ ಖಾನ್ ತನ್ನ ಕಂಪನಿಯಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿಸಿದ್ದ. ಈ ಪೈಕಿ ಹಲವರಿಗೆ ವಂಚನೆ ನಡೆದಿರುವುದು ಗಮನಕ್ಕೆ ಬಂದಿಲ್ಲ. ದೂರುದಾರರು ನೀಡಿದ ಮಾಹಿತಿ ಆಧರಿಸಿ ಪ್ರಾಥಮಿಕ ತನಿಖೆ ನಡೆಸಿದಾಗ ಅಂದಾಜು ಸಾವಿರಾರು ಕೋಟಿ ರೂ. ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮನ್ಸೂರ್​ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆತ ಮೊದಲೇ ಸಂಚು ರೂಪಿಸಿ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ.ಗಳನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡು ಪತ್ನಿಯರು, ಮಕ್ಕಳು ಸೇರಿ ಕುಟುಂಬದ 10 ಮಂದಿ ಜತೆ ಎಸ್ಕೇಪ್ ಆಗಿದ್ದಾನೆನ್ನಲಾಗಿದೆ.

ಆಸ್ತಿ ವಶಕ್ಕೆ ಯತ್ನ: ಮನ್ಸೂರ್​ನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಬಗ್ಗೆ ಪೊಲೀಸರು ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದಿದ್ದು, ಸದ್ಯದಲ್ಲೇ ಪ್ರಕ್ರಿಯೆ ಆರಂಭವಾಗಲಿದೆ. ಮನ್ಸೂರ್ ಮೌಲ್ವಿಗಳ ಜತೆ ತೆಗೆಸಿಕೊಂಡಿದ್ದ ಫೋಟೊಗಳನ್ನು ಗ್ರಾಹಕರಿಗೆ ತೋರಿಸಿ ನಂಬಿಕೆ ಗಳಿಸುತ್ತಿದ್ದ ಎಂಬ ಅಂಶವೂ ಬೆಳಕಿಗೆ ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹೊರ ರಾಜ್ಯದಿಂದ ಬಂದರು: ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಮೈಸೂರು, ಮಡಿಕೇರಿ, ಹಾಸನ, ಮಂಗಳೂರು, ಕಲಬುರಗಿ , ಬೀದರ್, ರಾಯಚೂರು, ವಿಜಯಪುರ ಸೇರಿ ಹೊರ ರಾಜ್ಯಗಳ ಸಾವಿರಾರು ಜನರು ಮಂಗಳವಾರ ಬೆಂಗಳೂರಿನ ಐಎಂಎ ಜುವೆಲರಿ ಮುಂದೆ ಜಮಾಯಿಸಿದ್ದರು. ಇವರನ್ನು ಪೊಲೀಸರು ಶಿವಾಜಿನಗರದ ಶಿವಾಜಿ ಸರ್ಕಲ್​ನ ಎ.ಎಸ್.ಸಿ ಕನ್ವೆನ್ಷನ್ ಹಾಲ್​ಗೆ ಕಳಿಸಿ ದೂರು ಸ್ವೀಕರಿಸಿದರು. ಸೋಮವಾರ ರಾತ್ರಿ ಮುಚ್ಚಲಾಗಿದ್ದ ಕಂಪ್ಲೇಂಟ್ ಕೌಂಟರನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮತ್ತೆ ತೆರೆಯಲಾಗಿತ್ತು. ಈವರೆಗೆ ವಂಚನೆಗೊಳಗಾದ 6 ಸಾವಿರಕ್ಕೂ ಅಧಿಕ ಮಂದಿ ದೂರು ನೀಡಿದ್ದಾರೆ. 30 ಸಾವಿರದಿಂದ 15 ಲಕ್ಷ ರೂ. ವರೆಗೆ ಹೂಡಿಕೆ ಮಾಡಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, 1 ಕೋಟಿ ರೂ.ಗಿಂತ ಅಧಿಕ ಹೂಡಿಕೆ ಮಾಡಿದ ಹೆಚ್ಚಿನವರು ಇನ್ನೂ ದೂರು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

17 ಕೋಟಿ ರೂ. ವರ್ಗಾವಣೆ: ಮನ್ಸೂರ್ ನಿಗೂಢವಾಗಿ ನಾಪತ್ತೆಯಾಗಿದ್ದರೂ ಆತನ ಬ್ಯಾಂಕ್ ಖಾತೆ ವ್ಯವಹಾರ ಇನ್ನೂ ನಿಂತಿಲ್ಲ. ಸೋಮವಾರ ಒಂದೇ ದಿನದಲ್ಲಿ ಮನ್ಸೂರ್ ಅಕೌಂಟ್​ನಿಂದ 17 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆಯಾಗಿದೆ. ಈ ಹಣ ಯಾವ ಖಾತೆಗೆ ವರ್ಗಾವಣೆಯಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೂರ್ವಯೋಜನೆಯಂತೆ ಐಎಂಎ ಜುವೆಲರಿ ಶಾಪ್​ನಲ್ಲಿದ್ದ ಎಲ್ಲ ಆಭರಣಗಳನ್ನೂ ಮನ್ಸೂರ್ ಬೇರೆಡೆ ಸಾಗಿಸಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಐಎಂಎಗೆ ಉಗ್ರ ನಂಟು?

ಐಎಂಎ ಜುವೆಲ್ಸ್ ಮಾಲೀಕ ಮನ್ಸೂರ್ ಖಾನ್​ಗೆ ಉಗ್ರ ಸಂಘಟನೆ ಜತೆ ನಂಟಿರುವ ಬಗ್ಗೆ ಮಾಹಿತಿ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಕೇರಳ ಮೂಲದ ವ್ಯಕ್ತಿಯೊಬ್ಬರ ಮೂಲಕ ಈ ಮಾಹಿತಿ ಸಿಕ್ಕಿದ್ದರಿಂದ, ಈ ಸಂಸ್ಥೆಯಲ್ಲಿ ಬಂಡವಾಳ ಹೂಡದಂತೆ ಜಾಗೃತಿ ಮೂಡಿಸಿದ್ದೆ. ಮನ್ಸೂರ್ ಜತೆಗೆ ಭಯೋತ್ಪಾದಕರಿಗೂ ನಂಟಿರುವ ಸಂಶಯವಿದ್ದು, ಈ ಬಗ್ಗೆ ಸಿಬಿಐ ಹಾಗೂ ಇ.ಡಿ. ಮೂಲಕ ಸಮಗ್ರ ತನಿಖೆ ನಡೆದರಷ್ಟೇ ಹೆಚ್ಚಿನ ಮಾಹಿತಿಗಳು ಹೊರಬರುತ್ತವೆ ಎಂದು ಶೋಭಾ ಹೇಳಿದ್ದಾರೆ.

ಕೈ ಹಿಂಡುತ್ತಿವೆ ವಿವಾದಗಳು

ಬೆಂಗಳೂರು: ವಕ್ಪ್ ಆಸ್ತಿ, ಅಮಾನತ್ ಬ್ಯಾಂಕ್, ಆಂಬಿಡೆಂಟ್ ಅವ್ಯವಹಾರ ಪ್ರಕರಣಗಳ ನಂತರ ಐಎಂಎ ವಂಚನೆ ಪ್ರಕರಣದ ಹಿಂದೆಯೂ ಕಾಂಗ್ರೆಸ್ ನಾಯಕರು ಹೆಸರು ಕೇಳಿಬಂದಿರುವುದು ಕೈಪಡೆಯ ನಿದ್ದೆಗೆಡಿಸಿದೆ. ಅಚ್ಚರಿ ಎಂದರೆ ಈ ಎಲ್ಲ ಹಗರಣಗಳಲ್ಲೂ ಹಣ ಕಳೆದುಕೊಂಡವರ ಪೈಕಿ ಶೇ.99.9 ಮಂದಿ ಬಡ ಹಾಗೂ ಸಾಮಾನ್ಯ ಮುಸ್ಲಿಮರು. ಈ ಪ್ರಕರಣಗಳ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದು ಮುಂದಿನ ವಿಚಾರವಾದರೂ ಇದರಲ್ಲಿ ಪಕ್ಷದ ನಾಯಕರ ವಿರುದ್ಧ ಕೇಳಿಬರುತ್ತಿರುವ ಆರೋಪದ ಬಗ್ಗೆ ಮಾತನಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದೆ ಕಾಂಗ್ರೆಸ್ ಹೈಕಮಾಂಡ್. ಪಕ್ಷದ ನಾಯಕರೇ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಬೆನ್ನಿಗೆ ನಿಂತರೂ ವರಿಷ್ಠರು ಗಮನ ಹರಿಸುತ್ತಿಲ್ಲ. ನಾಯಕತ್ವದ ಮೌನ ನಮಗೆ ಇಕ್ಕಟ್ಟು ಸೃಷ್ಟಿಸಿದೆ ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳೇ ಆತಂಕ ಹೊರಹಾಕುತ್ತಿದ್ದಾರೆ.

ಸಿಬಿಐಗೆ ಒಪ್ಪಿಸಿ

ಬೆಂಗಳೂರು: ಐಎಂಎ ಹಗರಣದ ಮೊತ್ತ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿರುವ ಅನುಮಾನ ಇರುವುದರಿಂದ ಪ್ರಕರಣವನ್ನು ಸಿಬಿಐಗೆ ಕೊಡಲೇಬೇಕೆಂದು ಕಾಂಗ್ರೆಸ್​ನ ಮುಸ್ಲಿಂ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಸಚಿವ ಜಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ನೇತೃತ್ವದ ಹತ್ತಾರು ನಾಯಕರು ಮಂಗಳವಾರ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬರೋಬ್ಬರಿ 50 ಸಾವಿರ ಹೂಡಿಕೆದಾರರಿಗೆ ಹಗರಣದಲ್ಲಿ ನಷ್ಟವಾಗಿರ ಬಹುದು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿದರು.

ಮಾಧ್ಯಮಗಳ ಜತೆ ಅನೌಪಚಾರಿಕವಾಗಿ ಮಾತನಾಡಿದ ನಿಯೋಗದ ಸದಸ್ಯರು, ಇದು 1-2 ಸಾವಿರ ಕೋಟಿ ಹಗರಣವಲ್ಲ. ಮುಂದಿನ ದಿನಗಳಲ್ಲಿ ವಂಚನೆಗೊಳಗಾದ ಇನ್ನಷ್ಟು ಜನ ದೂರು ಕೊಡಬಹುದು. ಸರಿ ಸುಮಾರು 10-12 ಸಾವಿರ ಕೋಟಿ ರೂ. ವಂಚನೆ ಆಗಿರುವ ಅಂದಾಜಿದೆ ಎಂದು ಜನ ಪ್ರತಿನಿಧಿಯೊಬ್ಬರು ತಿಳಿಸಿದರು.

ವಂಚನೆ ಆರೋಪ ಹೊತ್ತ ವ್ಯಕ್ತಿ ನಮ್ಮ ಪಕ್ಷದ ಹಿರಿಯ ಮುಖಂಡರೊಬ್ಬರ ಸ್ನೇಹಿತ. ಇವರಿಬ್ಬರು ಸಮಾಜದ ಹತ್ತಾರು ಕಾರ್ಯಕ್ರಮ ನಡೆಸಿದ್ದಾರೆ, ಈ ಕಾರ್ಯಕ್ರಮಗಳಲ್ಲಿ ಧರ್ಮಗುರುಗಳನ್ನು ಕರೆಸಿದ್ದಾರೆ. ಜನತೆ ಸಹಜವಾಗಿ ರಾಜಕೀಯ ನಾಯಕರು ಮತ್ತು ಧರ್ಮಗುರುಗಳ ಜತೆಗಿರುವ ಉದ್ಯಮಿಯನ್ನು ನಂಬಿಕೆ ಹೂಡಿಕೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಪ್ರಸ್ತುತ ಆರೋಪಿಯ ಆಸ್ತಿ ಅಂದಾಜು 300-400 ಕೋಟಿಗೆ ಬಾಳಬಹುದು, ಬಹುತೇಕ ಹಣ ವಿದೇಶದಲ್ಲಿ ಹೂಡಿಕೆಯಾಗಿರುವ ಸಾಧ್ಯತೆ ಇದೆ. ಇವರ ವಂಚನೆ ಗೊತ್ತಿದ್ದರೂ ನಾವು ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ಕೊಟ್ಟಿದೆ. ಈ ತನಿಖೆಯೂ ಸರಿಯಾಗದಿದ್ದರೆ ಸಿಬಿಐ ತನಿಖೆ ಆಗಬೇಕು. ಸುಮಾರು 500 ಕೋಟಿ ಆಸ್ತಿಯಲ್ಲಿ ಎಷ್ಟೆಷ್ಟು ಎಲ್ಲೆಲ್ಲಿ ಇದೆ ಎಂಬ ಲೆಕ್ಕ ತೆಗೆದಿದ್ದೇವೆ. ಸರ್ಕಾರ ಆಸ್ತಿಯನ್ನು ವಶಕ್ಕೆ ಪಡೆದು ಸಂತ್ರಸ್ತರಿಗೆ ಪರಿಹಾರ ಕೊಡಬೇಕು.

| ಜಮೀರ್ ಅಹಮದ್, ಸಚಿವ

Leave a Reply

Your email address will not be published. Required fields are marked *