ಎನ್‌ಐಎ ಶಾಖೆ ರಾಜ್ಯ ನಿರಾಸಕ್ತಿ

ವೇಣುವಿನೋದ್ ಕೆ.ಎಸ್. ಮಂಗಳೂರು

ಉಗ್ರರ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಭಾರತದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಶಾಖೆ ತೆರೆಯುವ ಪ್ರಯತ್ನ ಗಂಭೀರವಾಗಿ ನಡೆದಿಲ್ಲ.

ಮಂಗಳೂರಿನಲ್ಲಿ ಎನ್‌ಐಎ ಶಾಖೆ ಆರಂಭವಾಗುತ್ತಿದ್ದರೆ ಕೇರಳದ ಉತ್ತರ ಭಾಗವೂ ಸೇರಿದಂತೆ ಮಂಗಳೂರು ಪ್ರದೇಶದ ಆಗುಹೋಗುಗಳ ಮೇಲೆ ಸತತ ನಿಗಾ ಇರಿಸುವುದು ಸಾಧ್ಯವಿತ್ತು. ಪ್ರಸಕ್ತ ಕೊಚ್ಚಿನ್ ಶಾಖೆಯನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕಳೆದೊಂದು ದಶಕದಲ್ಲಿ ಉಗ್ರ ಚಟುವಟಿಕೆಯ ಕೊಂಡಿಯಲ್ಲಿ ಮಂಗಳೂರು ಸೇರಿಕೊಂಡಿದೆ. ಪುಣೆ, ಅಹ್ಮದಾಬಾದ್ ಮುಂತಾದೆಡೆ ನಡೆದ ಬಾಂಬ್ ಸ್ಫೋಟಕ್ಕೆ ಇಲ್ಲಿಂದಲೇ ಸ್ಫೋಟಕಗಳು ಸರಬರಾಜಾಗಿದ್ದವು ಎನ್ನುವುದನ್ನು ಹಿಂದೆಯೇ ಎಟಿಎಸ್ ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದರು. ಮಂಗಳೂರಿನಲ್ಲಿ 2008ರಲ್ಲಿ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಐವರನ್ನು ಬಂಧಿಸಲಾಗಿತ್ತು. ಅವರಲ್ಲಿ ಮೂವರಿಗೆ ಈಗಾಗಲೇ ಕೋರ್ಟ್ ಶಿಕ್ಷೆಯನ್ನೂ ವಿಧಿಸಿದೆ.

ಇದಾದ ಬಳಿಕವೂ ಇಂಡಿಯನ್ ಮುಜಾಹಿದ್ದೀನ್‌ಗಳು ನಗರದ ಅತ್ತಾವರದ ಫ್ಲಾೃಟ್‌ವೊಂದರಲ್ಲಿ ಅಡಗಿದ್ದು, ಕೊನೇ ಕ್ಷಣದಲ್ಲಿ ಎನ್‌ಐಎ ಅಧಿಕಾರಿಗಳ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದರು. ಆ ಬಳಿಕ ಬಜ್ಪೆ ಬಳಿಯೂ ವಿದ್ಯಾರ್ಥಿಯೊಬ್ಬನನ್ನು ಉಗ್ರರೊಂದಿಗೆ ಸಂಪರ್ಕದ ಆರೋಪದ ಮೇಲೆ ಬಂಧಿಸಲಾಗಿತ್ತು.
ಆಗಲೇ ಮಂಗಳೂರು ಉಗ್ರರ ಸ್ಲೀಪರ್ ಸೆಲ್ ಆಗಿ ಪರಿವರ್ತನೆಯಾಗುತ್ತಿದೆ. ಇಲ್ಲಿ ಸಾಕಷ್ಟು ಅಡಗುತಾಣಗಳು ಇರುವ ಸಾಧ್ಯತೆ ಇದೆ. ಹಾಗಾಗಿ ಎನ್‌ಐಎ ಶಾಖೆ ಪ್ರಾರಂಭಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು.
ಬಳಿಕ ಕೆಲ ವರ್ಷಗಳಲ್ಲಿ ಹಿಂದು ಸಂಘಟನೆಗಳಲ್ಲಿ ತೊಡಗಿಸಿಕೊಂಡವರನ್ನು ಮತೀಯ ಗುಂಪುಗಳ ಕಾರ್ಯಕರ್ತರು ಐಸಿಸ್ ಶೈಲಿಯಲ್ಲಿ ಹತ್ಯೆ ಮಾಡುವುದು, ದಾಳಿ ನಡೆಸುವುದು ನಡೆಯುತ್ತಾ ಬಂದಾಗ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮುಂತಾದವರು ಮಂಗಳೂರಿಗೆ ಎನ್‌ಐಎ ಶಾಖೆ ಅತೀ ಅಗತ್ಯ ಎಂದು ಒತ್ತಾಯಿಸಿ, ಈ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಆದರೆ ಈವರೆಗೆ ಯಾವುದೇ ಬೆಳವಣಿಗೆ ನಡೆದಿಲ್ಲ.

ರಾಜ್ಯ ಸರ್ಕಾರ ಕ್ರಮವಿಲ್ಲ: ಯಾವುದೇ ರಾಜ್ಯದಲ್ಲಿ ಎನ್‌ಐಎ ಶಾಖೆ ಪ್ರಾರಂಭಿಸಬೇಕಾದರೆ ಅಲ್ಲಿನ ಸರ್ಕಾರ ಕೂಡ ಪ್ರಯತ್ನಿಸಬೇಕು. ಸಂಸದರು ಮನವಿ ನೀಡಿದ್ದರೂ ರಾಜ್ಯ ಸರ್ಕಾರ ಮಾತ್ರ ಇದನ್ನು ಅನುಸರಣೆ ಮಾಡುವ ಗೋಜಿಗೆ ಹೋಗಿಲ್ಲ. ಹಾಗಾಗಿ ಈ ವಿಚಾರದಲ್ಲಿ ಯಾವುದೇ ಬೆಳವಣಿಗೆಯೂ ಆಗಿಲ್ಲ.

ಕರ್ನಾಟಕದಲ್ಲಿ ಶಾಖೆಯಿಲ್ಲ: ದೇಶದೆಲ್ಲೆಡೆ ಒಟ್ಟು 8 ಶಾಖೆಗಳನ್ನು ಹೊಂದಿರುವ ಎನ್‌ಐಎಗೆ ಕರ್ನಾಟಕದಲ್ಲಿ ಒಂದೂ ಶಾಖೆ ಇಲ್ಲ. ಸದ್ಯ ಕೊಚ್ಚಿನ್, ಮುಂಬೈ, ಹೈದರಾಬಾದ್, ಲಕ್ನೊ, ಜಮ್ಮು, ಗುವಾಹಟಿ, ರಾಯ್‌ಪುರ ಮತ್ತು ಕೊಲ್ಕತ್ತಾಗಳಲ್ಲಿ ಶಾಖೆ ಇದೆ.

ಎನ್‌ಐಎ ಶಾಖೆ ಮಂಗಳೂರಿನಲ್ಲಿ ತೆರೆಯುವ ಅವಶ್ಯಕತೆ ಬಹಳವಿದೆ. ಈ ಬಗ್ಗೆ ನಾವು ಕೇಂದ್ರ ಗೃಹಸಚಿವರಿಗೆ ಮನವಿಯನ್ನೂ ನೀಡಿರುವುದು ಹೌದು. ಆದರೆ ಈ ಶಾಖೆ ತೆರೆಯುವುದಕ್ಕೆ ಬೇಕಾದ ಜಾಗ, ಕಚೇರಿಗಳನ್ನು ಒದಗಿಸಿಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ, ರಾಜ್ಯದಿಂದ ಯಾವುದೇ ಪ್ರಸ್ತಾವನೆ ಹೋಗಿಲ್ಲ, ಮತ್ತೆ ಈ ಬಗ್ಗೆ ಒತ್ತಾಯಿಸುತ್ತೇವೆ.
|ನಳಿನ್ ಕುಮಾರ್ ಕಟೀಲ್, ದ.ಕ. ಸಂಸದ