ಮನೆ ಕಟ್ಟೋ ಸವಾಲು: ಏಕಕಾಲಕ್ಕೆ 50 ಸಾವಿರ ಸೂರು ನಿರ್ಮಾಣ, ಹಣ ಹೊಂದಿಕೆ ಕಷ್ಟ

ಬೆಂಗಳೂರು: ಪ್ರವಾಹದಿಂದ ಸೂರು ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿರುವ ಸರ್ಕಾರಕ್ಕೆ ಈಗ ದೊಡ್ಡದೊಂದು ಸವಾಲು ಎದುರಾಗಿದೆ. ಪ್ರಸ್ತುತ ಹಣಕಾಸು ಪರಿಮಿತಿ ಹಾಗೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ 50 ಸಾವಿರ ಮನೆ ನಿರ್ವಣಕ್ಕೆ ಹೊಸದಾಗಿ ಹಣ ಹೊಂದಾಣಿಕೆ ಮಾಡುವುದು ಕಷ್ಟಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಮೂರು ಮಾದರಿಯಲ್ಲಿ ಈ ಸವಾಲು ಎದುರಿಸಲು ಮುಂದಾಗಿದೆ. ಮೊದಲಿಗೆ ಕಾರ್ಪೆರೇಟ್ ಕಂಪನಿಗಳು, ಉದ್ಯಮಿಗಳನ್ನು ಕೋರಿ ಅವರಿಗೆ ಮನೆ ಕಟ್ಟಿಕೊಡುವ ಜವಾಬ್ದಾರಿ ನೀಡುವುದು, ಸಾಧ್ಯವಾದರೆ ಗ್ರಾಮವಾರು ಹಂಚಿಕೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಲಾಗಿದೆ. ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಳಸಿಕೊಂಡು ಅನುದಾನ ಒದಗಿಸುವುದು, ಫಲಾನುಭವಿಗೆ ಕನಿಷ್ಟ 5 ಲಕ್ಷ ರೂ. ನೀಡಲು ಲಭ್ಯವಾಗದೆ ಇದ್ದಲ್ಲಿ, ರಾಜ್ಯ ಸರ್ಕಾರದ ಅನುದಾನ ಹೊಂದಾಣಿಕೆಗೆ ಉದ್ದೇಶಿಸಲಾಗಿದೆ. ಇದಲ್ಲದೆ ಕೇಂದ್ರದಿಂದ ಮನೆ ನಿರ್ವಿುಸುವುದಕ್ಕಾಗಿಯೇ ವಿಶೇಷ ಪ್ಯಾಕೇಜ್ ತರುವ ಪ್ರಯತ್ನ ಸಹ ನಡೆದಿದೆ.

ಈ ಅವಕಾಶಗಳ ಹೊರತಾಗಿ ವಸತಿ ರಹಿತರಿಗೆ ಮನೆಗಳನ್ನು ರೂಪಿಸಿ ಕೊಂಡಿದ್ದ ತಯಾರಿಯನ್ನು ತಕ್ಷಣಕ್ಕೆ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಮೊದಲ ಆದ್ಯತೆ ನೀಡಲು ಸಹ ಚಿಂತನೆ ನಡೆದಿದೆ. ಪ್ರತಿ ಜಿಲ್ಲೆಯಲ್ಲಿ ನೂರು ಎಕರೆ ಜಮೀನನ್ನು (ವಿವಿಧ ಕಡೆ) ಆಶ್ರಯ ವಸತಿ ಯೋಜನೆಗೆ ಗುರುತಿಸುವುದು ಮತ್ತು ನಗರ ಪ್ರದೇಶಗಳಲ್ಲಿ ತಕ್ಷಣಕ್ಕೆ 50 ಎಕರೆ ಜಾಗ ಗುರುತಿಸಿ ಕಾಯ್ದಿರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಈಚಿನ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟಾರೆ 18,77,997 ವಸತಿ ರಹಿತ ಕುಟುಂಬಗಳನ್ನು ಗುರುತಿಸಲಾಗಿದೆ. ಇವರಿಗೆ ಮನೆ ನೀಡುವ ಸಂಬಂಧ ಪ್ರಕ್ರಿಯೆಗಳು ನಡೆದಿತ್ತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪ್ರಕ್ರಿಯೆಗೆ ವೇಗ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದರು.

ಮತ್ತಷ್ಟು ನಿರೀಕ್ಷೆ

ಸದ್ಯ 50 ಸಾವಿರ ಮನೆಗಳಿಗೆ ಪ್ರವಾಹದಿಂದ ಹಾನಿಯಾಗಿದೆ. ಇದೀಗ ಸಂತ್ರಸ್ತರು ಮನೆಗಳತ್ತ ತೆರಳುತ್ತಿದ್ದು, ತಮ್ಮ ಮನೆಯ ಸ್ಥಿತಿಗತಿ ಬಗ್ಗೆ ಆತಂಕಿತರಾಗಿದ್ದಾರೆ. ವಾರಗಟ್ಟಲೆ ಮಳೆ ನೀರಲ್ಲಿ ತೋಯ್ದ ಮನೆ ಸಾಮರ್ಥ್ಯ ಎಷ್ಟು ಎಂಬುದು ಇನ್ನಷ್ಟೇ ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮನೆ ನಿರ್ವಣದ ಗುರಿ ಇನ್ನಷ್ಟು ವಿಸ್ತಾರವಾಗಬಹುದೆಂಬ ಅಂದಾಜಿದೆ.

ಪರಿಹಾರ ಸೂತ್ರವೇನು?

  • ಮನೆಗಳಿಗೆ ನೀರು ನುಗ್ಗಿದ್ದರೆ 3,800 ರೂ. (1,800 ಬಟ್ಟೆಗಾಗಿ, 2,000 ರೂ. ಪಾತ್ರೆಗಾಗಿ)
  • ಶೇ.15 ಮನೆ ಹಾಳಾಗಿದ್ದರೆ ತಹಶೀಲ್ದಾರರ ಹಂತದಲ್ಲಿ ನಿರ್ಧಾರ
  • ಶೇ.15ರಿಂದ 75 ಹಾನಿಯಾಗಿದ್ದರೆ ಉಪ ವಿಭಾಗಾಧಿಗಳ ಹಂತದಲ್ಲಿ ತೀರ್ಮಾನ
  • ಪ್ರತಿಶತ 75ಕ್ಕೆ ಮೇಲ್ಪಟ್ಟು ಹಾನಿಯಾಗಿದ್ದರೆ ಜಿಲ್ಲಾಧಿಕಾರಿ ವಿವೇಚನೆ

ತಯಾರಿ ಏನು?

  • ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದ ವಿವಿಧ ಯೋಜನೆಯಲ್ಲಿ ಮೊದಲ ಆದ್ಯತೆಯಾಗಿ ಮನೆ ಮಂಜೂರು.
  • ಮನೆ ಸರ್ವೆಗಾಗಿ ನಗರ ಪ್ರದೇಶಗಳಲ್ಲಿ ನಗರಸಭೆ ಹಾಗೂ ತಹಶೀಲ್ದಾರ್​ರಿಂದ ಜಂಟಿ ಸರ್ವೆ.
  • ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಯಿಂದಲೇ ಸರ್ವೆ.

ಇತರ ಪರಿಹಾರವೇನು?

ಪ್ರವಾಹದಲ್ಲಿ ಒಂದು ಕಾಲು ಹೋಗಿದ್ದರೆ 59,100 ರೂ. (ಶೇ.40-60) ನೀಡಲಾಗುತ್ತದೆ. ಪ್ರತಿಶತ 60 ಮೇಲ್ಪಟ್ಟು ಅಂಗವಿಕಲತೆಯಾದಲ್ಲಿ 2 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಆಸ್ಪತ್ರೆಗೆ ದಾಖಲಾಗಿ 1 ವಾರದೊಳಗೆ ಬಿಡುಗಡೆೆಯಾದಲ್ಲಿ 4,300 ರೂ., ಒಂದು ವಾರ ಮೇಲ್ಪಟ್ಟು ದಾಖಲಾದಲ್ಲಿ 12,700 ರೂ. ನೀಡಲಾಗುತ್ತದೆ.

ಎಮ್ಮೆಗೆ -ಠಿ;30, ಹಸುಗೆ -ಠಿ;25 ಸಾವಿರ

ಒಂದು ಎಮ್ಮೆ ಮೃತಪಟ್ಟಲ್ಲಿ 30 ಸಾವಿರ ರೂ., ಹಸು ಮೃತಪಟ್ಟಿದ್ದರೆ 25 ಸಾವಿರ ರೂ. ಉಳಿದ ಜಾನುವಾರುಗಳಿಗೆ 15 ಸಾವಿರ, ಕೋಳಿಯೊಂದಕ್ಕೆ 50 ರೂ. (ಗರಿಷ್ಠ 500 ರೂ.) ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ.

ಆಪ್ ಸರ್ವೆ

ಜಮೀನು ಹಾನಿಯಾಗಿರುವ ಬಗ್ಗೆ ಮೊಬೈಲ್ ಆಪ್ ಆಧಾರಿತ ಸರ್ವೆ ಮಾಡಲಾಗುತ್ತದೆ. ಅಲ್ಲಿಯೇ ಫೋಟೊ ತೆಗೆದು ಫಲಾನುಭವಿಗಳ ಖಾತೆಗೆ ಪರಿಹಾರ ಮಂಜೂರಿಗೆ ಶಿಫಾರಸು ಮಾಡಲಾಗುತ್ತದೆ. ಇದನ್ನು ಗ್ರಾಮ ಲೆಕ್ಕಾಧಿಕಾರಿ, ಕೃಷಿ, ತೋಟಗಾರಿಕೆ ಇಲಾಖೆ, ತಹಶೀಲ್ದಾರರು ಜಂಟಿಯಾಗಿ ಮಾಡುತ್ತಾರೆ.

ಪರಿಹಾರಕ್ಕೆ ಕಟ್ಟುಪಾಡು ಅಡ್ಡಿ

ಪ್ರವಾಹಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯವನ್ನು ಬಿರುಸಿನಿಂದ ನಡೆಸಲು ಸರ್ಕಾರ ಕ್ರಮ ಕೈಗೊಂಡಿದೆ. ಅಧಿಕಾರಿಗಳೂ ಮುತುವರ್ಜಿಯಿಂದ ಕೆಲಸ ಆರಂಭಿಸಿದ್ದಾರೆ. ಆದರೆ, ಸಂತ್ರಸ್ತರಿಗೆ ಮತ್ತು ಕೆಳ ಹಂತದ ಸರ್ಕಾರಿ ಅಧಿಕಾರಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ.

ದಾಖಲೆ ತರೋದು ಎಲ್ಲಿಂದ?: ಮನೆ ಹಾಳಾದ ಬಗ್ಗೆ ಫಲಾನುಭವಿ ನಾಲ್ಕು ದಾಖಲೆ ಸಲ್ಲಿಸಬೇಕೆಂದು ನಿಯಮ ಹೇಳುತ್ತಿದೆ. ಇದನ್ನು ತೊಡೆದು ಫಲಾನುಭವಿ ನಿಗದಿ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ. ಅರ್ಜಿ ಜತೆ ಮನೆಯ ಫೋಟೊ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ಉತಾರ ಪತ್ರ ನೀಡಬೇಕಾಗುತ್ತದೆ. ಪ್ರವಾಹದಲ್ಲಿ ದಾಖಲೆಗಳೆಲ್ಲ ಕೊಚ್ಚಿ ಹೋಗಿರುವಾಗ ಎಲ್ಲಿಂದ ತರುವುದು ಎಂಬುದು ಫಲಾನುಭವಿಗಳ ಪ್ರಶ್ನೆಯಾಗಿದೆ ಎಂದು ಅಧಿಕಾರಿಯೊಬ್ಬರೇ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಬೆಳೆ ಹಾಳಾದ ಬಗ್ಗೆಯೂ ಫಲಾನುಭವಿ ಎನಿಸಬೇಕಿದ್ದರೆ ಉತಾರ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ನೀಡಬೇಕೆಂಬ ಆದೇಶ ಸರ್ಕಾರದ್ದು. 1 ಹೆಕ್ಟೇರ್ ಖುಷ್ಕಿ ಜಮೀನಿಗೆ 6,800 ರೂ. ಅನ್ನು ಗರಿಷ್ಟ 2.5 ಹೆಕ್ಟೇರ್​ವರೆಗೆ ನೀಡಲಾಗುತ್ತದೆ. ನೀರಾವರಿ ಜಮೀನಾಗಿದ್ದರೆ ಎರಡು ಪಟ್ಟು ಹೆಚ್ಚಿನ ಪರಿಹಾರ ನೀಡಲಾಗುತ್ತದೆ. 2.5 ಹೆಕ್ಟೇರ್​ಗಿಂತ ಹೆಚ್ಚು ನಷ್ಟವಾಗಿದ್ದರೆ ಪರಿಹಾರವೆಂತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮನೆ ಪೂರ್ಣ ಹಾನಿಯಾದ ಕಡೆ, ಕೃಷಿ ಭೂಮಿ ಹಾಳಾಗಿರುವ ಕಡೆ ತಹಶೀಲ್ದಾರ್ ಭೇಟಿ ಕೊಡಬೇಕೆಂದಿದೆ. ಆದರೆ, ಒಬ್ಬ ತಹಶೀಲ್ದಾರ್ ಈ ಸಂದರ್ಭದಲ್ಲಿ ಎಲ್ಲ ಕಡೆ ಹೋಗಲು ಅಸಾಧ್ಯ. ಇದರ ಪರಿಣಾಮ ಸಂತ್ರಸ್ತರ ಮೇಲಾಗಲಿದೆ ಎಂಬ ಅಭಿಪ್ರಾಯವೂ ಇದೆ.

ಸೂರು ಒದಗಿಸಲು ಆದ್ಯತೆ

ಹಾನಗಲ್ಲ: ನಿರಾಶ್ರಿತರ ಪಟ್ಟಿ ತಯಾರಿಸಲು ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ಬೇರೆ ಎಲ್ಲ ಯೋಜನೆಗಳನ್ನು ಬದಿಗಿಟ್ಟು ಮನೆ ಕಟ್ಟುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅತಿವೃಷ್ಟಿಗೆ 30 ಸಾವಿರಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ಆದರೂ ಅಧೈರ್ಯಗೊಳ್ಳಬೇಕಾಗಿಲ್ಲ ಎಂದರು.

ಕನ್ನಂಬಾಡಿ ಕಟ್ಟೆ ಭರ್ತಿ

ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಇಳಿಕೆಯಾಗಿದ್ದು, ನೀರಿನ ಮಟ್ಟ 124.30 ಅಡಿ ದಾಟಿದ ಹಿನ್ನೆಲೆಯಲ್ಲಿ ಮತ್ತೆ ನದಿಗೆ ನೀರು ಬಿಡಲಾಗುತ್ತಿದೆ. ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಕಟ್ಟೆಗೆ 54,496 ಕ್ಯೂಸೆಕ್ ನೀರು ಬರುತ್ತಿದ್ದು, ಕಟ್ಟೆಯಿಂದ 43,093 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಟ್ಟೆಯಲ್ಲಿ ಸಂಜೆ 6 ಗಂಟೆ ವೇಳೆಗೆ 48.754 ಟಿಎಂಸಿ ನೀರು ಸಂಗ್ರಹವಾಗಿದೆ. ಬೆಳಗ್ಗೆ ಕಟ್ಟೆಗೆ 83,958 ಕ್ಯೂಸೆಕ್ ನೀರು ಬರುತ್ತಿದ್ದ ಪರಿಣಾಮ ಮಧ್ಯಾಹ್ನ 12 ಗಂಟೆಗೆ 22,710 ಕ್ಯೂಸೆಕ್ ನೀರನ್ನು ಬಿಡಲಾಯಿತು. ಆಗ ಕಟ್ಟೆಯ ನೀರಿನ ಮಟ್ಟ 124.10 ಅಡಿಯಿತ್ತು. ಸಂಜೆ ವೇಳೆಗೆ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣವನ್ನು ದ್ವಿಗುಣಗೊಳಿಸಲಾಯಿತು.

ಪರಿಹಾರ ಕೇಂದ್ರದಲ್ಲೂ ಅಸ್ಪೃಶ್ಯತೆ!

ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಕಪಿಲಾ ನದಿ ಪ್ರವಾಹಕ್ಕೆ ಗ್ರಾಮಕ್ಕೆ ಸಿಲುಕಿ 80ಕ್ಕೂ ಹೆಚ್ಚು ಮನೆಗಳು ಮುಳುಗಡೆಗೊಂಡು ಪರಿಶಿಷ್ಟ ಜಾತಿಯ ಆದಿಕರ್ನಾಟಕ ಹಾಗೂ ಪರಿಶಿಷ್ಟ ಪಂಗಡದ ನಾಯಕ ಜನಾಂಗದ ಕುಟುಂಬಗಳ 370ಕ್ಕೂ ಹೆಚ್ಚು ನಿರಾಶ್ರಿತರಿಗಾಗಿ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ಆದರೆ, ಆದಿಕರ್ನಾಟಕ ಜನಾಂಗಕ್ಕೆ ಸೇರಿದ ನಿರಾಶ್ರಿತರೊಂದಿಗೆ ಬೆರೆಯಲು ಒಪ್ಪದ ನಾಯಕ ಜನಾಂಗದವರು ಪ್ರತ್ಯೇಕವಾಗಿ ಪರಿಹಾರ ಕೇಂದ್ರ ತೆರೆದು ಆಹಾರ ಪೂರೈಸುವಂತೆ ಪಟ್ಟುಹಿಡಿದಿದ್ದರಿಂದ ಅವರಿಗೆ ಪ್ರತ್ಯೇಕವಾಗಿ ಪೂರೈಸಲಾಗುತ್ತಿದೆ. ಕಳೆದ ಆರು ದಿನಗಳಿಂದ ಈ ರೀತಿ ನಡೆದುಕೊಂಡು ಬರಲಾಗುತ್ತಿದೆ.

ಮಳೆ ತಗ್ಗಿದರೂ ನಿಲ್ಲದ ಮಹಾ ಹರಿವು

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ತಗ್ಗಿದರೂ, ಬೆಳಗಾವಿ ಜಿಲ್ಲೆಯ ವೇದಗಂಗಾ, ದೂಧಗಂಗಾ, ಕೃಷ್ಣಾದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. 140ಕ್ಕೂ ಅಧಿಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಮಹಾರಾಷ್ಟ್ರದಿಂದ ಸುಮಾರು 5 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ 5.50 ಲಕ್ಷ ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ನದಿಗಳ ಪ್ರವಾಹದ ತೀವ್ರತೆ, ನೀರಿನ ಮಟ್ಟ ಮತ್ತು ಭಾರಿ ಮಳೆ ಇಳಿಮುಖವಾಗಿದ್ದರೂ ಇನ್ನೆರಡು ದಿನ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಘಟಪ್ರಭಾ, ಮಲಪ್ರಭಾ,ಮಾರ್ಕಂಡೇಯ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಮಂಗಳವಾರ ಸಂಜೆ ವೇಳೆಗೆ ಗೋಕಾಕ, ಮೂಡಲಗಿ, ಸವದತ್ತಿ, ರಾಮದುರ್ಗ ತಾಲೂಕಿನಲ್ಲಿ ಜಲಾವೃತಗೊಂಡಿದ್ದ ಸೇತುವೆ- ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಬುಧವಾರದ ವೇಳೆಗೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಕೂಡ ಸಂಚಾರಕ್ಕೆ ತೆರೆದುಕೊಳ್ಳಲಿದೆ.

ಬೆಳಗಾವಿಯಲ್ಲಿ ಬ್ಯಾಂಕ್​ಗಳಿಗೆ ನುಗ್ಗಿದ ನೀರು

ಬೆಳಗಾವಿ: ಗೋಕಾಕ ತಾಲೂಕಿನ ಕೊಣ್ಣೂರು, ಅರಳಿಮಟ್ಟಿಯ ಕೆನರಾ ಬ್ಯಾಂಕ್ ಶಾಖೆ ಹಾಗೂ ನಲ್ಲಾನಟ್ಟಿಯ ಮತ್ತು ಸವದತ್ತಿ ತಾಲೂಕಿನ ಮುನವಳ್ಳಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಿಗೆ ಪ್ರವಾಹದ ನೀರು ನುಗ್ಗಿ ಹಾನಿ ಆಗಿದೆ. ಬ್ಯಾಂಕ್​ನಲ್ಲಿರುವ ಕಂಪ್ಯೂಟರ್​ಗಳು ಕೆಟ್ಟಿವೆ. ಜಿಲ್ಲೆಯ ನಾಲ್ಕು ಬ್ಯಾಂಕ್​ಗಳ ದಾಖಲೆ ಪತ್ರಗಳು ಹಾಗೂ ತಿಜೋರಿಯಲ್ಲಿಟ್ಟ ನೋಟಿನ ಕಟ್ಟುಗಳು ನೀರಿಗೆ ಒದ್ದೆಯಾಗಿದೆ. ಒದ್ದೆಯಾಗಿರುವ ನೋಟುಗಳನ್ನು ಒಣಗಿಸಿ ಬಳಸಲಾಗುವುದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಹುಲ್ ವಂಜನೂರಿ ಮಾಹಿತಿ ನೀಡಿದ್ದಾರೆ. ಒದ್ದೆ ನೋಟುಗಳು ಹಾಳಾದ ಬಗ್ಗೆ ಜಾಲತಾಣದಲ್ಲಿ ಚಿತ್ರಗಳು ಹರಿದಾಡುತ್ತಿವೆ. ಆದರೆ, ಬ್ಯಾಂಕ್ ಅಧಿಕಾರಿಗಳು ನೋಟುಗಳು ಒದ್ದೆಯಾಗಿವೆ ಎಂದು ಒಪ್ಪಿಕೊಳ್ಳುತ್ತಿಲ್ಲ.

ಬೆಟ್ಟ ಬಿರುಕು

ಮಡಿಕೇರಿಯ ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿರುವ ಅಯ್ಯಪ್ಪ ಬೆಟ್ಟ 15 ಅಡಿಗಳಷ್ಟು ಬಿರುಕು ಬಿಟ್ಟಿದ್ದು, ಆತಂಕ ಸೃಷ್ಟಿಯಾಗಿದೆ. 9 ಮನೆಗಳಲ್ಲಿ ನೆಲೆಸಿದ್ದವರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಅಜ್ಜನ ಅಂತ್ಯ ಕ್ರಿಯೆಗೂ ತೆರಳದ ಡಿಸಿ

ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರ ಅಜ್ಜ ನಿಧನರಾಗಿದ್ದು ಅವರ ಅಂತಿಮ ಸಂಸ್ಕಾರಕ್ಕೂ ತೆರಳದೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿಯ ತಂದೆಯವರಾದ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದ ನಿವಾಸಿ ಎಂ.ಎಚ್.ನಾಯ್ಕರ್ (91) ಕಳೆದ ಶುಕ್ರವಾರ ನಿಧನರಾಗಿದ್ದಾರೆ.

ಮಳೆಗಾಗಿ ಮೊರೆ

ಚಿತ್ರದುರ್ಗ: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರೆ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಜನ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ದೇವಾಲಯಗಳಲ್ಲಿ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಹೊಳಲ್ಕೆರೆ ತಾಲೂಕಿನ ಮುತ್ತುಗದೂರಿನಲ್ಲಿ ಮಂಗಳವಾರ ಮಳೆಗಾಗಿ ಪ್ರಾರ್ಥಿಸಿ ಮಾರಮ್ಮ ದೇವಿ ದೇವಾಲಯದಲ್ಲಿ ಮಹಾ ಚಂಡಿಕಾ ಹೋಮ ನಡೆಸಲಾಗಿದೆ.

ಕಾರ್ಯಾಚರಣೆಗೆ ವಿರಾಮ

ಬೆಳಗಾವಿ ಜಿಲ್ಲೆಯಲ್ಲಿ 4.14 ಲಕ್ಷ ಸಂತ್ರಸ್ತರಿಗೆ ರಕ್ಷಣೆ ನೀಡಲಾಗಿದೆ. ಪ್ರವಾಹ ತಗ್ಗಿರುವ ಹಿನ್ನೆಲೆ ಸೋಮವಾರ ರಾತ್ರಿಯಿಂದಲೇ ಜನರ ಸ್ಥಳಾಂತರಿಸುವ ಕಾರ್ಯಾಚರಣೆ ಮುಕ್ತಾಯವಾಗಿದೆ.

ಉರುಳಿದ ವೆಲ್ಲೆಸ್ಲಿ ತಡೆಗೋಡೆ

ಮೈಸೂರು: ಮಹಾಮಳೆಯಿಂದ ನದಿಗಳಲ್ಲಿ ಉಂಟಾಗಿದ್ದ ಪ್ರವಾಹದಿಂದ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ರೈತರು ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. ಇನ್ನು ನೀರಿನ ಹರಿವು ತಗ್ಗಿರುವುದರಿಂದ ಪರಿಹಾರ ಕೇಂದ್ರಗಳಲ್ಲಿ ತಂಗಿದ್ದ ಗ್ರಾಮಸ್ಥರು ತಮ್ಮ ಊರುಗಳತ್ತ ಹೊರಟಿದ್ದಾರೆ. ಹಲವು ತಾಲೂಕುಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆಯ ತಡೆಗೋಡೆಗಳು ಕುಸಿದಿದ್ದು, ಶತಮಾನದ ಸೇತುವೆಗೆ ಕಂಟಕ ಎದುರಾಗಿದೆ. ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನದಿಪಾತ್ರದಲ್ಲಿ ಮೋಟರ್ ಮನೆಗಳು ಹಾಳಾಗಿವೆ. ಕೆಆರ್​ಎಸ್ ಹಾಗೂ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬಂದಿದ್ದರಿಂದ ಜಲಾವೃತಗೊಂಡು ದ್ವೀಪವಾಗಿದ್ದ ತಿ.ನರಸೀಪುರ, ನಂಜನಗೂಡು ಹಾಗೂ ಎಚ್.ಡಿ.ಕೋಟೆ ತಾಲೂಕುಗಳು ಸಹಜ ಸ್ಥಿತಿಗೆ ಮರಳಿವೆ. ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 2069 ಮನೆಗಳಿಗೆ ಹಾನಿಯಾಗಿದ್ದು, 4,786.28 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಬಾಯಿತಪ್ಪಿನ ಸ್ಪಷ್ಟೀಕರಣ!

ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರ ಕೆಡವಿ ಬಿಡುತ್ತೇನೆ ಎಂದು ನಾನು ಬಾಯಿ ತಪ್ಪಿನಿಂದ ಹೇಳಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಅರಬಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅವರು ಸ್ಪಷ್ಟನೆ ನೀಡಿದ್ದಾರೆ.

ಎಂಟಿಬಿ ಟ್ರಸ್ಟ್​ನಿಂದ -ಠಿ;1 ಕೋಟಿ ನೆರವು

ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಸ್ಪಂದಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಂಗಳವಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಚೆಕ್ ನೀಡಿದರು. ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು ಹಾಗೂ ಜನತೆ ಸಂತ್ರಸ್ತರ ನೆರವಿಗೆ ಆರ್ಥಿಕ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ವತಿಯಿಂದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಎಂಟಿಬಿ ಟ್ರಸ್ಟ್ ವತಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದೇನೆ ಎಂದರು.

ಪರಿಹಾರ ನಿಧಿಗೆ ಬಿಎಸ್​ವೈ -ಠಿ;1 ಲಕ್ಷ

ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ಥರ ನೆರವಿಗೆ ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. ನೀಡಿದ್ದಾರೆ. ಯಡಿಯೂರಪ್ಪ ಮಗಳು ಹಾಗೂ ಅಳಿಯ ತಲಾ 25 ಸಾವಿರ ರೂ. ನೀಡಿದ್ದಾರೆ. ಸುರಪುರ ಶಾಸಕ ರಾಜೂಗೌಡ 1 ಲಕ್ಷ ರೂ. ನೆರವು ನೀಡಿದ್ದಾರೆ.

ಸಿಎಂ ಪರಿಹಾರ ನಿಧಿಗೆ -ಠಿ;2.69 ಕೋಟಿ

ರಾಜ್ಯದ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಆ.9ರಿಂದ ಈವರೆಗೆ 2,69,59,825 ರೂ. ದೇಣಿಗೆ ಸಂಗ್ರಹವಾಗಿದೆ. ಇದರೊಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯಲ್ಲಿ 101.7 ಕೋಟಿ ರೂಪಾಯಿ ಲಭ್ಯವಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದ

ನೌಕರರ 1 ದಿನದ ಸಂಬಳ ಘೋಷಣೆ

ಪ್ರವಾಹ ಪ್ರದೇಶದ ಸಂತ್ರಸ್ಥರ ನೆರವಿಗೆ ಮುಂದಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ನೌಕರರ ಒಂದು ದಿನದ ಸಂಬಳ ಸುಮಾರು 138 ಕೋಟಿ ರೂ. ನೀಡುವುದಾಗಿ ಘೋಷಿಸಿದೆ. ಈ ಪೈಕಿ ಎಷ್ಟು ಹಣ ಸಿಎಂ ಪರಿಹಾರ ನಿಧಿ ಸೇರುತ್ತದೆ ಎಂಬುದು ಯಕ್ಷಪ್ರಶ್ನೆ. ಯಾಕೆಂದರೆ, ಕಳೆದ ವರ್ಷ ಕೊಡಗಿನಲ್ಲಾದ ಭೂ ಕುಸಿತ ಸಂದರ್ಭ 1 ದಿನದ ನೌಕರರ ಸಂಬಳ ನೀಡುವುದಾಗಿ ಸಂಘ ಹೇಳಿತ್ತು. ಆದರೆ, ಶೇ.40 ನೌಕರರು 1 ದಿನದ ಸಂಬಳ ನೀಡಲು ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಸಂಘ ಘೋಷಿಸಿದಷ್ಟು ಹಣ ಸಂದಾಯವಾಗುವುದಿಲ್ಲ ಎನ್ನಲಾಗುತ್ತದೆ.

ಬೆಂಬಲ: ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವುದಕ್ಕೆ ರಾಜ್ಯ ಸಚಿವಾಲಯ ನೌಕರರ ಸಂಘ ಹಾಗೂ ಎನ್​ಪಿಎಸ್ ನೌಕರರ ಸಂಘ ಒಪ್ಪಿಗೆ ನೀಡಿವೆ.

ಮಳೆಗೆ ಮೂರು ಜನರ ಸಾವು

ಜೋರು ಮಳೆಯಿಂದ ಮನೆ ಕುಸಿದು ಗಾಯಗೊಂಡಿದ್ದ ವಿರಾಜಪೇಟೆ ತಾಲೂಕಿನ ಕೌಶಿಕ ಗ್ರಾಮದ ರಂಗಮ್ಮ ಎಂಬುವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದನ ಮೇಯಿಸಲು ಹೋಗಿ ನಾಪತ್ತೆಯಾಗಿದ್ದ ಸಕಲೇಶಪುರ ತಾಲೂಕು ಹಿರಿಮಂದೆ ಗ್ರಾಮದ ರಮೇಶ್ ಎಂಬುವರು ಶವವಾಗಿ ಪತ್ತೆಯಾಗಿದ್ದಾರೆ. ಗದಗ ಜಿಲ್ಲೆ ಹೊಳೆಆಲೂರಿನ ಚಂದ್ರಗೌಡ ಗೌಡಪ್ಪಗೌಡ (56) ಎಂಬ ಸಂತ್ರಸ್ತ ಹೃದಯಾಘಾತದಿಂದ ಹುಬ್ಬಳ್ಳಿ ಕಿಮ್ಸ್​ನಲ್ಲಿ ಮೃತಪಟ್ಟಿದ್ದಾರೆ.

ಏರಿಳಿತ, ನಿಲ್ಲದ ಎದೆಬಡಿತ

ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಸೃಷ್ಟಿಸಿರುವ ಪ್ರವಾಹದಲ್ಲಿ ಎರಡು ದಿನಗಳಿಂದ ಏರಿಳಿತ ಕಾಣುತ್ತಿದೆ. ನಾಲ್ಕು ದಿನದಿಂದ ಭೀಮೆ ಕೊಂಚ ಶಾಂತವಾಗಿದ್ದರೂ ಕೃಷ್ಣೆಯ ರುದ್ರನರ್ತನ ಮುಂದುವರಿದಿದೆ. ನೆರೆ ಸಂತ್ರಸ್ತರು ತಮ್ಮೂರಿಗೆ ಹೊರಡುವ ಸಿದ್ಧತೆಯಲ್ಲಿದ್ದರೂ ಜಿಲ್ಲಾಡಳಿತ ಮಾತ್ರ ನದಿಯಲ್ಲಿ ಸಂಪೂರ್ಣ ನೀರು ತಗ್ಗಿದ ನಂತರ ಪರಿಹಾರ ಕೇಂದ್ರಗಳಿಂದ ಕಳಿಸಿಕೊಡುವುದಾಗಿ ಹೇಳಿದೆ. ಬಸವಸಾಗರ ಜಲಾಶಯದಿಂದ ಗಂಟೆಗೊಮ್ಮೆ ಒಳಹರಿವು ಹೆಚ್ಚು- ಕಡಿಮೆ ಆಗುತ್ತಿರುವುದರಿಂದ ಸಂತ್ರಸ್ತರು ತಮ್ಮೂರಿನತ್ತ ಹೊರಡಲೂ ಆಗದೆ, ಪರಿಹಾರ ಕೇಂದ್ರಗಳಲ್ಲಿ ಇರಲೂ ಆಗದಂಥ ಸ್ಥಿತಿ ಸೃಷ್ಟಿಯಾಗಿದೆ. ನೀಲಕಂಠರಾಯನ ಗಡ್ಡಿಯಲ್ಲಿ ತುಂಬು ಗರ್ಭಿಣಿಯೊಬ್ಬಳು ಆಸ್ಪತ್ರೆಗೆ ತೆರಳಲು ಪರದಾಡುತ್ತಿದ್ದಾಳೆ. ಗಡ್ಡಿಗೆ ನಿರ್ವಿುಸಿದ ಸೇತುವೆ ಜಲಾವೃತಗೊಂಡಿದ್ದರಿಂದ ನಡುಗಡ್ಡೆಯಲ್ಲಿ ಗರ್ಭಿಣಿ ಸೇರಿ 138 ಜನ ಸಿಲುಕಿಕೊಂಡಿದ್ದಾರೆ. ಈ ಪೈಕಿ 4 ಜನ ಜ್ವರದಿಂದ ಬಳಲುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ತೆಪ್ಪದ ಮೂಲಕ ದಡಕ್ಕೆ ಬರುವುದು ಅಪಾಯಕಾರಿ ಎನಿಸಿದೆ.

  • ಗಂಗಾವತಿ ತಾಲೂಕು ವಿರುಪಾಪುರಗಡ್ಡಿಯಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಕಾರ್ಯ ಮಂಗಳವಾರ ಪೂರ್ಣಗೊಂಡಿದ್ದು, 190 ಪ್ರವಾಸಿಗರನ್ನು ರಕ್ಷಿಸಲಾಯಿತು.
  • ಮಾನ್ವಿ ತಾಲೂಕಿನ ರಾಜಲಬಂಡಾ ಅಣೆಕಟ್ಟಿನಿಂದ ಮುಖ್ಯ ಕಾಲುವೆಗೆ ನೀರು ಹರಿಬಿಡುವ ಮೇನ್ ಸೆಟರ್ ಗೇಟನ್ನು ಕಿಡಿಗೇಡಿಗಳು ಭಾನುವಾರ ರಾತ್ರಿ ಜಖಂಗೊಳಿಸಿ ದ್ದಾರೆ. ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಬಿಡಲಾಗಿದ್ದು, ರೈತರು ಹೊಲಗಳಿಗೆ ನೀರು ಕಟ್ಟಿಕೊಳ್ಳಲು ತಡವಾಗುತ್ತದೆ ಎಂದು ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ವದಂತಿಗೆ ಬೆದರಿದ ಜನ

ತುಂಗಭದ್ರಾ ಜಲಾಶಯ ಒಡೆದಿದೆ ಎಂಬ ಗಾಳಿ ಸುದ್ದಿಯಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಗ್ರಾಮಸ್ಥರು ಬೆಚ್ಚಿಬಿದ್ದು, ಭಯಭೀತರಾಗಿದ್ದ ಪ್ರಸಂಗ ಮಂಗಳವಾರ ನಡೆಯಿತು. ಮುನಿರಾಬಾದ್​ನ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ನೀರು ವಿತರಣಾ ಗೇಟ್ ಕಳಚಿಕೊಂಡಿದ್ದರಿಂದ ಅಪಾಯಮಟ್ಟದಲ್ಲಿ ನೀರು ಹರಿಯಿತು. ಬೆಳಂಬೆಳಗ್ಗೆಯೇ ಜಲಾಶಯ ಕಡೆಯಿಂದ ನೀರು ಬಂದಿದ್ದರಿಂದ ಡ್ಯಾಂ ಒಡೆದಿದೆಯೆಂದು ಗಾಬರಿಗೊಂಡು ಜೀವಭಯಕ್ಕೆ ಹೆದರಿ ಗಂಟುಮೂಟೆ, ಹಸುಗೂಸುಗಳನ್ನು ಕಟ್ಟಿಕೊಂಡು ಕೆಲವರು ಗುಡ್ಡ ಏರಿದರು. ಅಧಿಕಾರಿಗಳು ಡಂಗುರ ಸಾರಿ ವಾಸ್ತವ ಮಾಹಿತಿ ಮುಟ್ಟಿಸಿದರು.

ಎರಡು ದಿನ ಭಾರಿ ಮಳೆ

ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಈಗಾಗಲೇ ಭಾರಿ ನಷ್ಟ ಉಂಟುಮಾಡಿದ ವರುಣ ಗುರುವಾರದ (ಆ.15)ವರೆಗೆ ಮತ್ತೆ ಅಬ್ಬರಿಸಲಿದ್ದಾನೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ಸಾಧಾರಣ ಮಳೆ ಬೀಳಲಿದೆ. ಬೀದರ್ ಮತ್ತು ಕಲಬುರಗಿ ಚದುರಿದ ಮಳೆ ಬೀಳಲಿದೆ.

ಬೆಂಗಳೂರಿಗಿಲ್ಲ ಶರಾವತಿ

ಶಿವಮೊಗ್ಗ: ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯಾವುದೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿ ದರು. ಶೀಘ್ರ ಕಳಸವಳ್ಳಿ- ಅಂಬಾರಗೋಡ್ಲು ಸೇತುವೆ ನಿರ್ಮಾಣ ಕಾರ್ಯ ಆರಂಭಗೊಳ್ಳ ಲಿದೆ. ನೆರೆ ಸಂತ್ರಸ್ತರ ಜತೆಯಲ್ಲಿ ಸರ್ಕಾರವಿದೆ ಎಂದು ಸಾಗರದಲ್ಲಿ ಅಭಯ ನೀಡಿದರು.

************************************************************

ರಾಷ್ಟ್ರೀಯ ವಿಪತ್ತಿಗೆ ನಿಯಮವೆಲ್ಲಿದೆ?: ರಾಜ್ಯ ಸರ್ಕಾರವನ್ನು ಕಾಡುತ್ತಿರುವ ಪ್ರಶ್ನೆ

ಬೆಂಗಳೂರು: ರಾಜ್ಯಕ್ಕೆ ಬಂದೆರಗಿದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಯಾವ ನಿಯಮದಡಿ ಪ್ರಸ್ತಾವನೆ ಸಲ್ಲಿಸುವುದು..?

ರಾಜ್ಯ ಸರ್ಕಾರವನ್ನು ಕಾಡುತ್ತಿರುವ ಪ್ರಶ್ನೆ ಇದು. ಶತಮಾನದಲ್ಲಿಯೇ ಕಾಣದಂತಹ ಪ್ರವಾಹವನ್ನು ರಾಜ್ಯ ಈ ವರ್ಷ ಕಂಡಿದೆ. ಸಾವಿರಾರು ಕೋಟಿ ರೂ. ಹಾನಿಯಾಗಿದ್ದು, ಪ್ರತಿಪಕ್ಷಗಳೆಲ್ಲ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ನೆರವು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತಿವೆ. ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರವನ್ನು ಸಂರ್ಪಸಿ, ಯಾವ ನಿಯಮದಲ್ಲಿ ಪ್ರಸ್ತಾವನೆ ಸಲ್ಲಿಸಬೇಕೆಂದು ಕೇಳಿದ್ದಾರೆ. ಬೇರೆ ಯಾವುದಾದರೂ ರಾಜ್ಯದಲ್ಲಿ ಘೋಷಣೆ ಮಾಡಿರುವ ಬಗ್ಗೆಯೂ ಮಾಹಿತಿ ಕೋರಿದ್ದಾರೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಇದುವರೆಗೂ ಅಂತಹ ಯಾವುದೇ ಘೋಷಣೆಯಾಗಿಲ್ಲವೆಂಬ ತಿಳಿಸಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಇದು ರಾಜ್ಯದ ವಿಷಯ: ಪ್ರಾಕೃತಿಕ ವಿಪತ್ತು ರಾಜ್ಯದ ವಿಷಯವಾಗಿದೆ, ಯಾವುದೇ ವಿಕೋಪ ಸಂಭವಿಸಿದಾಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪರಿಹಾರಕ್ಕೆ ಬೇಕಾದ ತಕ್ಷಣದ ನೆರವು ನೀಡಲಾಗುತ್ತದೆ. ರಾಜ್ಯಗಳು ನೀಡುವ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಎನ್​ಡಿಆರ್​ಎಫ್​ನಡಿ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ರಾಜ್ಯ ಸರ್ಕಾರ ಕೇಳಿದಷ್ಟು ನೀಡದೆ, ನಿಯಮಾನುಸಾರ ನೀಡುತ್ತದೆ ಹೊರತು ಹೆಚ್ಚಿನ ಅನುದಾನವನ್ನೂ ನೀಡುವುದಿಲ್ಲ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಹೆಚ್ಚಿನ ನೆರವು ನೀಡಲು ಅವಕಾಶವಿದೆ. ಕೇಂದ್ರ ಸರ್ಕಾರವನ್ನು ರಾಜ್ಯ ಯಾವ ರೀತಿ ಮನವೊಲಿಸಲಿದೆ ಎಂಬುದರ ಮೇಲೆ ಅವಲಂಬಿಸಿದೆ.

ವಿರೋಧಪಕ್ಷಗಳು ರಾಜ್ಯವನ್ನು ರಾಷ್ಟ್ರೀಯ ವಿಪತ್ತೆಂದು ಘೊಷಣೆ ಮಾಡಬೇಕು ಎನ್ನುತ್ತಿದ್ದಾರೆ. ಆದರೆ ಅಂತಹ ಸಂದರ್ಭವೇನೂ ಎದುರಾಗಿಲ್ಲ. ಕೇಂದ್ರದಿಂದ ಹೆಚ್ಚಿನ ನೆರವು ಪಡೆದು ಪರಿಸ್ಥಿತಿ ನಿಭಾಯಿಸಲಾಗುವುದು.

| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

ರಾಯರ ಆರಾಧನೆಗೆ ತುಂಗಾ ಕಳೆ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.14ರಿಂದ ಗುರುರಾಯರ 348ನೇ ಆರಾಧನಾ ಮಹೋತ್ಸವ ಆರಂಭವಾಗಲಿದ್ದು, ಶ್ರೀಮಠದ ಪಕ್ಕದಲ್ಲಿರುವ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದು ಆರಾಧನಾ ಮಹೋತ್ಸವ ಕಳೆತಂದಿದೆ. ಕಳೆದ ವರ್ಷದ ಆರಾಧನಾ ಮಹೋತ್ಸವದಲ್ಲಿ ನದಿಯಲ್ಲಿ ನೀರಿಲ್ಲದ್ದರಿಂದ ಭಕ್ತರಿಗೆ ಪುಣ್ಯಸ್ನಾನ ಮಾಡಲು ಅವಕಾಶ ದೊರೆತಿರಲಿಲ್ಲ. ತುಂಬಿ ಹರಿಯುತ್ತಿರುವ ನದಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಂಗಳವಾರ ದಂಡೋದಕ ಸ್ನಾನ ನೆರವೇರಿಸಿದರು. ತುಂಗಭದ್ರಾ ನದಿ ಸಹಜವಾಗಿದ್ದು, ಭಕ್ತರು ಭೀತಿಯಿಲ್ಲದೆ ಆರಾಧನೆ ಮಹೋತ್ಸವದಲ್ಲಿ ಭಾಗಿಯಾಗಬಹುದು ಎನ್ನುವ ಸಂದೇಶವನ್ನು ಭಕ್ತರಿಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *