ತಗ್ಗಿದೆ ನೆರೆ ಬದುಕಿಗೆ ಬರೆ: ಸಿಗದ ನಷ್ಟದ ಅಂದಾಜು, ಛಿದ್ರಗೊಂಡ ಗ್ರಾಮೀಣರ ಬದುಕು, ಕೃಷ್ಣೆ ಬಳಿಕ ತುಂಗಭದ್ರಾ ಆರ್ಭಟ

ಬೆಂಗಳೂರು: ಒಂದೇ ವಾರದಲ್ಲಿ ಇಡೀ ರಾಜ್ಯವನ್ನು ಅಲ್ಲೋಲ ಕಲ್ಲೋಲವಾಗಿಸಿರುವ ರಣರಕ್ಕಸ ಪ್ರವಾಹ ಇದೀಗ ತನ್ನ ಪಥವನ್ನು ಬದಲಿಸಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಆವರಿಸಿದ್ದು, ಕಾವೇರಿ ನದಿ ಪಾತ್ರದಲ್ಲೂ ಆತಂಕದ ಸ್ಥಿತಿ ಮುಂದುವರಿದಿದೆ. ಕೃಷ್ಣಾ ನದಿ ಪಾತ್ರದಲ್ಲಿ ನೆರೆ ಸೋಮವಾರ ಕೊಂಚ ಕಡಿಮೆಯಾಗಿದೆಯಾದರೂ, ಛೀದ್ರಗೊಂಡಿರುವ ಬದುಕನ್ನು ಕಟ್ಟಿಕೊಳ್ಳುವ ಸವಾಲು ಲಕ್ಷಾಂತರ ಜನರ ಮುಂದಿದೆ. ಹುಟ್ಟಿದ ಊರು-ಕೇರಿ, ಬೆವರು ಸುರಿಸಿ ಮಾಡಿಟ್ಟ ತೋಟ-ಗದ್ದೆ, ಕೂಡಿಟ್ಟ ಧವಸ-ಧಾನ್ಯ, ಇದ್ದ ಚೂರುಪಾರು ನಗ-ನಾಣ್ಯ ಎಲ್ಲವೂ ಕೊಚ್ಚಿಹೋಗಿದ್ದು, ಬದುಕು ಮೂರಾಬಟ್ಟೆಯಾಗಿದೆ. ಈವರೆಗೆ ನಷ್ಟದ ಅಂದಾಜು ಸಿಕ್ಕಿಲ್ಲ. ಜತೆಗೆ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿರುವ ಸಾವಿರಾರು ಜನರ ಬದುಕು ಹಸನಾಗಲು ವರ್ಷಗಳೇ ಬೇಕಿದೆ.

ಕೃಷ್ಣೆ ಬಳಿಕ ತಂಗಭದ್ರಾ ಆರ್ಭಟ: ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಮಂತ್ರಾಲಯದ ಕೆಲ ಭಾಗಗಳಲ್ಲಿ ಪ್ರವಾಹದ ಆತಂಕ ನಿರ್ವಣವಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಕಾತರಕಿ, ದದ್ದಲ, ಹರನಹಳ್ಳಿ ಗ್ರಾಮಗಳಿಗೆ ನೀರು ನುಗ್ಗಿದೆ. ಚೀಕಲಪರ್ವಿಯ ಜಗನ್ನಾಥ ದಾಸರ ಕಟ್ಟೆ ಜಲಾವೃತ್ತಗೊಂಡಿದೆ. ರಾಯಚೂರು ತಾಲೂಕಿನ ಎಲೆ ಬಿಚ್ಚಾಲಿಯಲ್ಲಿನ ಶ್ರೀ ರಾಘವೇಂದ್ರಸ್ವಾಮಿಗಳು 12 ವರ್ಷ ತಪಸ್ಸು ಮಾಡಿದ್ದ ಜಪದ ಕಟ್ಟೆ ಮುಳುಗಡೆಯಾಗಿದ್ದು, ಪೂಜಾ ಕಾರ್ಯ ನಿಲ್ಲಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಹಂಪಿಯ ಶ್ರೀ ಕೋದಂಡರಾಮ ದೇವಸ್ಥಾನದ ಅರ್ಧ ಭಾಗಕ್ಕೆ ನೀರು ತುಂಬಿದ್ದು, ಪುರಂದರ ಮಂಟಪ ಸಂಪೂರ್ಣ ಮುಳುಗಿದೆ. ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಬದಿಯ ಕೆಲ ಸ್ಮಾರಕಗಳಿಗೆ ಜಲ ದಿಗ್ಬಂಧನವಾಗಿದೆ. ಬಾಳೆ ತೋಟಗಳು ಜಲಾವೃತವಾಗಿವೆ.

ಹೂವಿನ ಹಡಗಲಿ ತಾಲೂಕಿನಲ್ಲಿ ತುಂಗಭದ್ರಾ ಪ್ರವಾಹ ಯಥಾಸ್ಥಿತಿ ಮುಂದುವರಿದಿದ್ದು ಹರವಿ, ಬ್ಯಾಲಹುಣ್ಸಿ, ಅಂಗೂರ, ಕುರುವತ್ತಿ, ಮದಲಘಟ್ಟ, ನಂದಿಗಾವಿ, ಹಿರೆಬನ್ನಿಮಟ್ಟಿ ಗ್ರಾಮಗಳ 137 ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಕಂಪ್ಲಿ ಕೋಟೆ ಪ್ರದೇಶದ 52 ಮನೆಗಳು ಜಲಾವೃತವಾಗಿದ್ದು, ಒಂದು ಮನೆ ಕುಸಿದಿದೆ. 227 ಜನ ಪರಿಹಾರ ಕೇಂದ್ರದಲ್ಲಿದ್ದಾರೆ. ನೀರಿನ ನಡುವೆಯೇ ವಾಸ ಮಾಡುತ್ತಿರುವ ಜನರು ದೈನಂದಿನ ಚಟುವಟಿಕೆಗಳಿಗೆ ತೆಪ್ಪಗಳನ್ನು ಅವಲಂಬಿಸಿದ್ದಾರೆ. ಕಂಪ್ಲಿ ಹಾಗೂ ಸಿರಗುಪ್ಪ ತಾಲೂಕುಗಳ ನದಿಪಾತ್ರ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಹಾಗೂ ಮರಿಯಮ್ಮನಹಳ್ಳಿ ಹೋಬಳಿಯ ಹಿನ್ನೀರು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ರಕ್ಷಣೆಗೆ ಹೋದವರೇ ಅಪಾಯಕ್ಕೆ

ಕೊಪ್ಪಳ ಜಿಲ್ಲೆಯ ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲು ಬಂದ ರಕ್ಷಣಾ ತಂಡದ ರಬ್ಬರ್ ಬೋಟ್ ಮುಗುಚಿದ ಪರಿಣಾಮ ಐವರು ನೀರು ಪಾಲಾಗಿದ್ದು, ಲೈಫ್ ಜಾಕೆಟ್ ಧರಿಸಿದ್ದರಿಂದ ಎಲ್ಲರೂ ಸೋಮವಾರ ಪಾರಾಗಿದ್ದಾರೆ. ಘಟನೆ ನಂತರ ಬೋಟ್ ಬದಲಿಗೆ ಹೆಲಿಕಾಪ್ಟರ್​ಗಳನ್ನು ರಕ್ಷಣೆ ಕಾರ್ಯಕ್ಕೆ ಬಳಸಲಾಯಿತು. ಈ ಸಂದರ್ಭ ಹೆಲಿಕಾಪ್ಟರ್ ಹತ್ತಲು ನೂಕುನುಗ್ಗಲು ಉಂಟಾಯಿತು. ರಕ್ಷಿಸಿದ ಪ್ರವಾಸಿಗರನ್ನು ಜಿಂದಾಲ್​ಗೆ ಕರೆದೊಯ್ದು, ಅಲ್ಲಿಂದ ಹೊಸಪೇಟೆವರೆಗೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿತ್ತು.

ವಿಜ್ಞಾನಿ, ಮಾಜಿ ಶಾಸಕರ ಪುತ್ರರಿದ್ದರೇ?

ವಿರುಪಾಪುರ ಗಡ್ಡಿಯಲ್ಲಿ ಡಿಆರ್​ಡಿಯು ಘಟಕದ ವಿಜ್ಞಾನಿ ಅಗರವಾಲ್ ಮತ್ತು ಮಾಜಿ ಶಾಸಕರೊಬ್ಬರ ಪುತ್ರ ಇದ್ದರೆಂಬ ಮಾಹಿತಿಯಿದ್ದು, ಇದೇ ಕಾರಣಕ್ಕೆ ರಕ್ಷಣೆಗೆ ಜಿಲ್ಲಾಡಳಿತದ ಮೇಲೆ ಒತ್ತಡ ಹೆಚ್ಚಿತ್ತು. ಜತೆಗೆ ಜರ್ಮನಿಯ 11, ಫ್ರಾನ್ಸ್​ನ ಐವರು, ಯುಎಸ್​ಎ, ಲುಥಾನಿಯಾ ಮತ್ತು ಸ್ವಿಟ್ಜರ್​ಲ್ಯಾಂಡ್ ದೇಶದ ತಲಾ ಒಬ್ಬರು ಸೇರಿ 19 ವಿದೇಶಿ ಪ್ರವಾಸಿಗರಿದ್ದರು.

ಗಡ್ಡಿಯಲ್ಲಿ ಇನ್ನೂ 80ಕ್ಕೂ ಹೆಚ್ಚು ಪ್ರವಾಸಿಗರಿದ್ದಾರೆ. ರೆಸಾರ್ಟ್ ಮಾಲೀಕರಿಗೆ ಖುದ್ದು ಜಿಲ್ಲಾಧಿಕಾರಿಯೇ ಎಚ್ಚರಿಕೆ ನೀಡಿದ್ದರು. ಆದರೆ, ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಪ್ರವಾಹದಲ್ಲಿ ಸಿಲುಕುವಂತಾಯಿತು.

ಕಪಿಲೆ ಶಾಂತ, ಕಾವೇರಿ ರುದ್ರನರ್ತನ

ಮೈಸೂರು ಜಿಲ್ಲೆಯಲ್ಲಿ ಕಪಿಲಾ ನದಿ ಪ್ರವಾಹ ಇಳಿಮುಖವಾಗಿದ್ದು, ಕಾವೇರಿ ನದಿ ನೀರಿನ ರುದ್ರನರ್ತನದಿಂದ ತಿ.ನರಸೀಪುರ ತಾಲೂಕಿನಲ್ಲಿ ನೆರೆ ಉಂಟಾಗಿದೆ. ಕೇರಳದ ವಯನಾಡು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಕಬಿನಿ ಜಲಾಶಯದ ಒಳ ಹರಿವು ಕಡಿಮೆಯಾಗಿದ್ದು, ಇದರಿಂದ ಹೊರಹರಿವು 1.20 ಲಕ್ಷ ಕ್ಯೂಸೆಕ್​ನಿಂದ 20 ಸಾವಿರ ಕ್ಯೂ.ಗೆ ಇಳಿಸಲಾಗಿದೆ. ಎಚ್.ಡಿ.ಕೋಟೆ ಮತ್ತು ನಂಜನಗೂಡು ತಾಲೂಕಿನಲ್ಲಿ ಪ್ರವಾಹ ತಗ್ಗಿದೆ. ಲಕ್ಷ್ಮಣತೀರ್ಥ ನದಿಯ ಪ್ರವಾಹ ಕೊಂಚ ಮಾತ್ರ ಇಳಿಕೆಯಾಗಿದೆ. ಆದರೆ, ಕೆಆರ್​ಎಸ್ ಜಲಾಶಯದಿಂದ 1.63 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ತಿ.ನರಸೀಪುರ ತಾಲೂಕಿನಲ್ಲಿ ಪ್ರವಾಹ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಾವೇರಿ ನದಿ ಪ್ರವಾಹದಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನದಿ ದಂಡೆಯಲ್ಲಿರುವ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಿಕುರಿಯಾ ಗ್ರಾಮಗಳು ದ್ವೀಪದಂತಾಗಿವೆ. ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ, ಶನಿಮಹಾತ್ಮ ದೇವಾಲಯ, ಬಿದ್ದಕೋಟೆ ಗಣಪತಿ ದೇವಾಲಯಸೇರಿ ಕೆಲ ದೇವಾಲಯಗಳು ಸಂಪೂರ್ಣ ಮುಳುಗಡೆ ಆಗಿದ್ದವು. ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲಿನ 50 ಮನೆಗಳು ಮುಳುಗುವ ಭೀತಿ ಎದುರಾಗಿತ್ತು. ಸೋಮವಾರ ಬೆಳಗ್ಗೆ ಹೊರಹರಿವು ಮತ್ತಷ್ಟು ಹೆಚ್ಚಿದ್ದರಿಂದ ನಿಮಿಷಾಂಭ ದೇವಾಲಯ ಕೂಡ ಮುಳುಗುತ್ತಿತ್ತು. ಮಧ್ಯಾಹ್ನ 3 ಗಂಟೆಯಿಂದ 4 ಗಂಟೆ ವೇಳೆಗೆ ಹೊರಹರಿವನ್ನು ನಿಲ್ಲಿಸಿದ್ದರಿಂದ ಕೆಲವೇ ಕ್ಷಣಗಳಲ್ಲಿ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಯಥಾಸ್ಥಿತಿ ಕಂಡಿತು. ಇದನ್ನು ಜನತೆ ನಿಟ್ಟುಸಿರು ಬಿಟ್ಟರು. ಪಶ್ಚಿಮವಾಹಿನಿ ಬಳಿ ಜಲಾವೃತವಾಗಿದ್ದ ರೈಲ್ವೆ ಕೆಳ ಸೇತುವೆ, ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ, ಗೊಂದಿಹಳ್ಳಿ ಸೇತುವೆಗಳ ಬಳಿ ನಿಷೇಧವಾಗಿದ್ದ ಸಂಚಾರ ಮುಕ್ತವಾಯಿತು. ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ನಿಷೇಧವಿದೆ.

ತ.ನಾಡಿಗೆ ಆಗಸ್ಟ್ ಪಾಲಿನ ನೀರು?

ಕಾವೇರಿ ಪಾತ್ರದಲ್ಲಿ ಭಾರೀ ಮಳೆಯಿಂದಾಗಿ ತಮಿಳುನಾಡಿಗೆ ಆಗಸ್ಟ್ ತಿಂಗಳಿನಲ್ಲಿ ಹರಿಸಬೇಕಿದ್ದ 45.95 ಟಿಎಂಸಿ ನೀರಿನ ಪಾಲು ಬಹುತೇಕ ಭರ್ತಿಯಾಗುವ ಹಂತದಲ್ಲಿದೆ. ಈಗಾಗಲೇ ಈ ತಿಂಗಳಲ್ಲಿ ಬಿಳಿಗುಂಡ್ಲುವಿನಲ್ಲಿ 35 ಟಿಎಂಸಿ ನೀರು ಹರಿದುಹೋಗಿರುವುದು ದಾಖಲಾಗಿದ್ದು, ಕಬಿನಿ ಹಾಗೂ ಕೆಆರ್​ಎಸ್​ಗಳಿಂದ ಕಳೆದೆರಡು ದಿನಗಳಿಂದ ಬಿಡುಗಡೆ ಮಾಡಿರುವ ಅಪಾರ ಪ್ರಮಾಣದ ನೀರು ಇನ್ನೂ ತಲುಪಬೇಕಿದೆ. ಕಬಿನಿಯಿಂದ ಈ ತಿಂಗಳಲ್ಲಿ 32 ಟಿಎಂಸಿ ನೀರನ್ನು ನದಿಗೆ ಬಿಡಲಾಗಿದೆ . ಜತೆಗೆ ಕನ್ನಂಬಾಡಿ ಕಟ್ಟೆ ಕೂಡ ಕೇವಲ 6 ದಿನಗಳ ಅಂತರದಲ್ಲಿ 38 ಅಡಿ ಭರ್ತಿಯಾಗಿದೆ. ಆ.6ರಂದು 84 ಅಡಿ ಇದ್ದ ನೀರಿನ ಮಟ್ಟ ಸೋಮವಾರ ಬೆಳಗ್ಗೆ ವೇಳೆಗೆ 122 ಅಡಿಗೇರಿತ್ತು. ಹೊರಹರಿವು ಅಧಿಕವಾಗಿದ್ದರಿಂದ ಅಣೆಕಟ್ಟೆ ಸುರಕ್ಷತೆ ಕಾಪಾಡಿಕೊಳ್ಳಲು ಹೆಚ್ಚು ನೀರು ಬಿಟ್ಟಿದ್ದರಿಂದ 2.80 ಅಡಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಭಾನುವಾರ ಒಂದೇ ದಿನ ಕನ್ನಂಬಾಡಿ ಕಟ್ಟೆ 3 ಟಿಎಂಸಿ ಭರ್ತಿಯಾಗಿರುವುದು ಕೂಡ ದಾಖಲೆಯಾಗಿದೆ.

ಅಂಧರಿಗೆ ನಿಖಿಲ್ ನೆರವು

ಧಾರವಾಡ: ಕೆಲಗೇರಿ ರಸ್ತೆಯ ಚೈತನ್ಯ ಕಲ್ಯಾಣ ಮಂಟಪದಲ್ಲಿ ಆಶ್ರಯ ಪಡೆದಿರುವ ಗದಗ ಜಿಲ್ಲೆಯ ಅಂಧ ಮಕ್ಕಳನ್ನು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಅಗತ್ಯ ವಸ್ತುಗಳನ್ನು ನೀಡಿದರು.

ರೈಲು ಸಂಚಾರ ರದ್ದು

ಹಾಸನ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಮತ್ತೆ ಮಳೆ ಚುರುಕುಗೊಂಡಿರುವ ಪರಿಣಾಮ ಸಕಲೇಶಪುರ-ಸುಬ್ರಮಣ್ಯ ನಡುವಿನ ರೈಲ್ವೆ ರಸ್ತೆಯ 86,79,65ನೇ ಮೈಲಿಗಲ್ಲು ಸಮೀಪ ಭಾರಿ ಭೂಕುಸಿತ ಸಂಭವಿಸಿದ್ದು ಮತ್ತೆ ಅನಿರ್ಧಿಷ್ಟಾವಧಿವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ವಾರದ ನಂತರ ಸೂರ್ಯದರ್ಶನ

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸೋಮವಾರ ತಗ್ಗಿದ್ದು, ನದಿಗಳಿಗೆ ಒಳಹರಿವು ಇಳಿಮುಖವಾಗಿದೆ.ಒಂದು ವಾರದ ಬಳಿಕ ಜಿಲ್ಲೆಯಲ್ಲಿ ಸೂರ್ಯ ದರ್ಶನವಾಗಿದೆ. ನದಿಗಳು ಸಹಜ ಸ್ಥಿತಿಯತ್ತ ಹೊರಳಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಒಂದು ವಾರದಿಂದ ಹಿಡಕಲ್ ಜಲಾಶಯದ ಒಳಹರಿವು ಮತ್ತು ಹೊರಹರಿವು 1ಲಕ್ಷ ಕ್ಯೂಸೆಕ್ ಇತ್ತು. ಆದರೆ, ಭಾನುವಾರ ಮತ್ತು ಸೋಮವಾರದ ವೇಳೆಗೆ ಜಲಾಶಯದ ಒಳಹರಿವು 47,823 ಮತ್ತು ಹೊರಹರಿವು 38,464 ಕ್ಯೂಸೆಕ್​ಗೆ ಇಳಿಕೆಯಾಗಿದೆ.ಮಲಪ್ರಭಾ ಜಲಾಶಯದಲ್ಲಿ ಒಳಹರಿವು 15,000 ಕ್ಯೂಸೆಕ್ ಮತ್ತು ಹೊರಹರಿವು 11,164 ಕ್ಯೂಸೆಕ್​ಗೆ ತಲುಪಿದೆ. ಘಟಪ್ರಭಾ, ಮಲಪ್ರಭಾ ನದಿ ಪ್ರವಾಹದ ಮಟ್ಟದಲ್ಲಿ ಸೋಮವಾರದ ಮಧ್ಯಾಹ್ನದ ವೇಳೆ 12 ಮೀಟರ್ ಇಳಿಕೆಯಾಗಿದೆ.

ಬಟ್ಟೆ, ಪಾತ್ರೆ ಖರೀದಿಗೆ -ಠಿ;3,800

ಬೆಳಗಾವಿ ಜಿಲ್ಲೆಯ ಪ್ರವಾಹ ಸಂತ್ರಸ್ತ ಪ್ರತಿ ಕುಟುಂಬಕ್ಕೂ ಬಟ್ಟೆ ಹಾಗೂ ಪಾತ್ರೆ ಖರೀದಿಸಲು 3,800 ರೂ. ಪರಿಹಾರ ನೀಡಲಾಗುವುದು, ಪರಿಹಾರ ಕೇಂದ್ರದಲ್ಲಿರುವ ಪ್ರತಿ ಕುಟುಂಬಕ್ಕೂ ಪರಿಹಾರ ಚೆಕ್ ವಿತರಿಸಿ ವರದಿ ಸಲ್ಲಿಸಬೇಕು. ನಿಯಮಾವಳಿಗಿಂತ ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದರು. ಪ್ರವಾಹ ಪರಿಸ್ಥಿತಿ ನಿರ್ವಹಣೆ, ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿದರು.

ಬೆಳಗಾವಿಗೆ ನಾಯಕರ ಭೇಟಿ

ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಬಳ್ಳಾರಿ ನಾಲಾ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ನಂತರ ಪರಿಹಾರ ಕೇಂದ್ರಗಳಿಗೆ ಧಾವಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

ಬಾಗಲಕೋಟೆ-ವಿಜಯಪುರ ಜಿಲ್ಲೆಯಲ್ಲಿ ತೀರದ ಬವಣೆ

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೃಷ್ಣೆ ಪ್ರವಾಹ ಮುಂದುವರಿದಿದ್ದು, ಘಟಪ್ರಭೆ, ಮಲಪ್ರಭೆ ಪ್ರವಾಹ ತಗ್ಗಿದರೂ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ವಾಪಸಾಗುವಂತಹ ವಾತಾವರಣ ಇನ್ನೂ ನಿರ್ವಣಗೊಂಡಿಲ್ಲ. ಜಲಾವೃತಗೊಂಡಿದ್ದ ಜಿಲ್ಲೆಯ ಪ್ರಮುಖ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಜಲ ಪ್ರವಾಹಕ್ಕೆ ತುತ್ತಾದ ಮನೆಗಳು ಬೀಳುತ್ತಿದ್ದು, ನಿರಾಶ್ರಿತರಲ್ಲಿ ಆತಂಕ ಮನೆ ಮಾಡಿದೆ. ಮಲಪ್ರಭೆ ಹಾಗೂ ಘಟಪ್ರಭೆ ಪ್ರವಾಹ ತಗ್ಗಿ ಜಮೀನುಗಳಲ್ಲಿ ಬೆಳೆಗಳು ಹಾಳಾಗಿದ್ದನ್ನು ನೋಡಿ ರೈತರು ನೋವು ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಆಲಮಟ್ಟಿ ಅಣೆಕಟ್ಟೆಯಿಂದ ದಾಖಲೆ ಪ್ರಮಾಣದ ನೀರನ್ನು ಕೃಷ್ಣೆಗೆ ಹರಿಸುತ್ತಿರುವುದರಿಂದ ನದಿ ತೀರದ ಜಿಲ್ಲೆಯ ಗ್ರಾಮಗಳು ಜಲದಿಂದ ಮುಕ್ತಗೊಂಡಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಎರಡು ವಾರಗಳಿಂದ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿದಿದ್ದರಿಂದ ಜನಜೀವನ ದುಸ್ತರಗೊಳಿಸಿದ್ದು, ಸೋಮವಾರ ನೀರಿನ ಹರಿವಿನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

ಶ್ರಾವಣ ಪೂರ್ತಿ ಜಲಾಘಾತ

ಗದಗ: ಜಲ, ಭೂಮಿ, ವಾಯು ಆಘಾತವಿದ್ದು, ಸದ್ಯ ಜಲಾಘಾತವಾಗುತ್ತಿದೆ. ಶ್ರಾವಣ ಮುಗಿಯುವವರೆಗೂ ಇದು ಮುಂದುವರಿಯುವ ಲಕ್ಷಣವಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ಕಾರ್ತಿಕ ಮಾಸದಲ್ಲೂ ಆಗಾಗ ಜಲಾಘಾತವಾಗಲಿದೆ. ಮುಂಬರುವ ದಿನಗಳಲ್ಲಿ ಭೂಮಿ ಆಘಾತ ಸಂಭವವಿದ್ದು, ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಅಪಾಯಕ್ಕೆ ಸಿಲುಕಲಿವೆ. ವಾಯು ಆಘಾತ ಸಂಭವವಿದೆ ಎಂದು ಸುದ್ದಿಗಾರರಿಗೆ ಹೇಳಿದರು. ಶಿವಯೋಗ ಮಂದಿರಕ್ಕೆ ಜಲಾಘಾತದಿಂದ 100 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಸರ್ಕಾರ ನೆರವು ನೀಡಬೇಕಿದೆ ಎಂದು ಸ್ವಾಮೀಜಿ ಒತ್ತಾಯಿಸಿದರು.

ಮಲೆನಾಡಿನಲ್ಲಿ ತಗ್ಗಿದ ಮಳೆ

ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ಆರ್ಭಟಿಸಿದ್ದ ವರುಣನ ಅಬ್ಬರ ಬಹುತೇಕ ತಗ್ಗಿದ್ದು ಸೂರ್ಯ ಕಣ್ಣುಬಿಟ್ಟಿದ್ದಾನೆ. ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ನೆರೆ ಪರಿಹಾರ ಕೇಂದ್ರಗಳಿಗೆ ಪದಾರ್ಥ, ದಿನಬಳಕೆ ವಸ್ತುಗಳ ವಿತರಣೆ ಭರದಿಂದ ಸಾಗಿದೆ. ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 35,665 ಕ್ಯೂಸೆಕ್, ಭದ್ರಾ ಡ್ಯಾಂಗೆ 34,661 ಕ್ಯೂಸೆಕ್, ತುಂಗಾ ಜಲಾಶಯಕ್ಕೆ 51,307 ಕ್ಯೂಸೆಕ್ ನೀರು ಬರುತ್ತಿದೆ.

ತೆಂಕಿಲ ಗುಡ್ಡದಲ್ಲಿ ಭೂಕಂಪನ ಸಾಧ್ಯತೆ

ದ.ಕ.ಜಿಲ್ಲೆಯ ಪುತ್ತೂರಿನ ಹೊರವಲಯದ ತೆಂಕಿಲ ದರ್ಖಾಸು ಎಂಬಲ್ಲಿ ಗೇರು ಅಭಿವೃದ್ಧಿ ನಿಗಮದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಲ್ಲಿ ಭೂ ಕಂಪನ ಸಂಭವಿಸುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಮಧ್ಯಾಹ್ನ ಗುಡ್ಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗುಡ್ಡದ ತಪ್ಪಲಿನಲ್ಲಿ ನಿರ್ಮಾಣ ಹಂತದ 2 ಮನೆಗಳ ಮೇಲೆ ಗುಡ್ಡ ಜರಿದು ಬಿದ್ದು ಹಾನಿಗೊಂಡಿವೆ. ಕೆಳಭಾಗದಲ್ಲಿ 25ಕ್ಕೂ ಅಧಿಕ ಮನೆಗಳಿವೆ. ಅಪಾಯದ ಸೂಚನೆಯಿಂದ ಮನೆಮಂದಿ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ವಣವಾಗಿದೆ.

ಲಕ್ಷ ಕೋಟಿ ರೂ. ಲುಕ್ಸಾನು?

ಬೆಂಗಳೂರು: ಹಿಂದೆಂದೂ ಕಾಣದ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗುತ್ತಿದ್ದು, ನಷ್ಟದ ಅಂದಾಜು ಅಂಕೆಗೆ ನಿಲುಕದಂತಾಗಿದೆ.

17 ಜಿಲ್ಲೆಯ 86 ತಾಲೂಕುಗಳಲ್ಲಿ ಕೃಷಿ, ಪಶುಸಂಗೋಪನೆ, ವಸತಿ-ಕಟ್ಟಡಗಳು, ರಸ್ತೆ ಜಾಲ, ವಿದ್ಯುತ್ ಜಾಲ, ಸಂಪರ್ಕ ಸೇತುವೆಗಳು ಹಾನಿಯಾಗಿದ್ದು, ಬಹುತೇಕ ಕಡೆ ಪುನರ್ ನಿರ್ಮಾಣ ಅನಿವಾರ್ಯ ಎಂಬ ವಾತಾವರಣ ಕಂಡುಬರುತ್ತಿದೆ.

ನಷ್ಟದ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರವೇ ಬೇರೆ. ಕೃಷಿ ಬೆಳೆಗಳ ನಷ್ಟದ ಅಂದಾಜನ್ನು ಸರ್ಕಾರ ತಕ್ಕಮಟ್ಟಿಗೆ ಮಾಡಬಹುದು, ಆದರೆ 10-20 ವರ್ಷದ ಅಡಕೆ ಮರಗಳ ತೋಟ ನಾಶವಾಗಿದ್ದರೆ ಅದನ್ನು ಲೆಕ್ಕ ಹಾಕುವ ಪದ್ಧತಿ ಸರ್ಕಾರದಲ್ಲಿಲ್ಲ. ಅಂಗಡಿಗಳಿಗೆ ನೀರು ನುಗ್ಗಿ ನಾಶವಾಗಿದ್ದರೆ ನಷ್ಟದ ಅಂದಾಜನ್ನು ತೋರಿಸಲು ಅಂಗಡಿ ಮಾಲೀಕರಿಗೂ ಸಾಧ್ಯವಿಲ್ಲ, ಸರ್ಕಾರಕ್ಕೂ ಅಸಾಧ್ಯ.

ನಷ್ಟದ ಬಾಬತ್ತು: 2,738 ಗ್ರಾಮಗಳಿಗೆ ನೆರೆ ಹಾನಿಯಾಗಿದೆ. ಇಲ್ಲಿ ಏನು ಹಾನಿಯಾಗಿದೆ ಎಂಬುದು ಮುಂದೆ ನಡೆಯುವ ಸರ್ವೆಯಿಂದಷ್ಟೆ ಗೊತ್ತಾಗಬೇಕಿದೆ. ಜತೆಗೆ ಈ ಸಂಖ್ಯೆ ಕೂಡ ಹೆಚ್ಚಾಗಬಹುದು. ಬರೋಬ್ಬರಿ 6.73 ಲಕ್ಷ ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಇವರಲ್ಲಿ ಶೇ.99.9 ಮಂದಿ ವಸತಿ ಸ್ಥಳದಿಂದ ರಕ್ಷಿಸಲ್ಪಟ್ಟವರು. ಪ್ರಾಥಮಿಕ ಮಾಹಿತಿ ಪ್ರಕಾರವೇ 4.30ಲಕ್ಷ ಹೆಕ್ಟೇರ್​ನಲ್ಲಿ ಬೆಳೆದು ನಿಂತ ಫಸಲು ನಷ್ಟವಾಗಿದೆ. ಇನ್ನು ಗ್ರಾಮ ಮಟ್ಟದಲ್ಲಿ ಸರ್ವೆ ನಡೆದಾಗ ಇನ್ನೆಷ್ಟು ಹಾನಿ ಎಂಬುದು ಗೊತ್ತಾಗಲಿದೆ. ಈ ಪ್ರಮಾಣ 5 ಲಕ್ಷ ಹೆಕ್ಟೇರ್ ದಾಟುವ ಎಲ್ಲ ಸಾಧ್ಯತೆ ಇದೆ. ಇಲ್ಲಿ ರೈತರು ಹೂಡಿದ್ದ ಬಂಡವಾಳಕ್ಕೆ ಬೆಲೆಯೇ ಇಲ್ಲ, ಸರ್ಕಾರ ಸಾಮಾನ್ಯ ಲೆಕ್ಕ ಹಾಕಿ ಒಂದು ಅಂದಾಜು ಮಾಡಿಬಿಡುತ್ತದೆ. ಈ ವರೆಗೆ 40,523 ಮನೆಗಳಿಗೆ ಹಾನಿಯಾಗಿವೆ ಎಂಬ ಲೆಕ್ಕ ಸರ್ಕಾರದ ಬಳಿ ಇದೆ. ಆದರೆ, ಮಳೆಯಲ್ಲಿ ನೆನೆದು ಬೀಳುವ ಹಂತದಲ್ಲಿರುವ ಮನೆಗಳ ಸಂಖ್ಯೆ ದೊಡ್ಡದಿದೆ.

150 ಪ್ರಮುಖ ರಸ್ತೆಗಳಿಗೆ ಗಂಭೀರ ಹೆಚ್ಚಿನ ಹಾನಿಯಾಗಿವೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲೆ ಮುಖ್ಯ ರಸ್ತೆ ಸೇರಿದೆ. ಇದನ್ನು ಹೊರತು ತಾಲೂಕು, ಗ್ರಾಮಾಂತರ ರಸ್ತೆಗಳನ್ನು ಪರಿಗಣಿಸಿಲ್ಲ.

ನಾಲ್ವರು ಸಾವು

ಮಳೆ ಅವಘಡಗಳಿಗೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮನೆ ಕುಸಿದು ಹುಬ್ಬಳ್ಳಿ ಬೆಂಗೇರಿ ನಿವಾಸಿ ತಿಪ್ಪಣ್ಣ ಉಮ್ಮಣ್ಣವರ (50) ಮೃತಪಟ್ಟಿದ್ದಾರೆ. ಕಾವೇರಿ ಪ್ರವಾಹಕ್ಕೆ ಸಿಲುಕಿ ಮೈಸೂರು ಜಿಲ್ಲೆಯಲ್ಲಿ ಹುಣಸೂರು ತಾಲೂಕಿನ ಹರವೆ ಗ್ರಾಮದ ಅಂಗವಿಕಲೆ ರತ್ನಮ್ಮ ಮೃತಪಟ್ಟಿದ್ದಾರೆ. ಮುಧೋಳ ತಾಲೂಕಿನ ಗುಲಗಾಲ ಜಂಬಗಿ ಗ್ರಾಮದ ನೆರೆ ಸಂತ್ರಸ್ತ ಫಕೀರಪ್ಪ ಸತ್ಯಪ್ಪ ಮ್ಯಾಗೇರಿ ಪರಿಹಾರ ಕೇಂದ್ರದಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದೇಹದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾ.ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ಪ್ರವಾಹಕ್ಕೆ ಸಿಲುಕಿ ಕುಂಞಣ್ಣ (68) ಎಂಬವರು ಮೃತಪಟ್ಟಿರುವುದು ವಿಳಂಬವಾಗಿ ಬೆಳಕಿಗೆ ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಸತ್ತವರ ಸಂಖ್ಯೆ 9ಕ್ಕೇರಿದೆ.

ಇಂದು ಶಿವಮೊಗ್ಗಕ್ಕೆ ಸಿಎಂ

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತವರು ಜಿಲ್ಲೆ ಶಿವಮೊಗ್ಗಕ್ಕೆ ತೆರಳುತ್ತಿರುವ ಬಿ.ಎಸ್. ಯಡಿಯೂರಪ್ಪ, ಮಂಗಳವಾರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. 9.45ಕ್ಕೆ ಸರ್ಕ್ಯೂಟ್​ಹೌಸ್​ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಸದರು ಮತ್ತು ಶಾಸಕರೊಂದಿಗೆ ಚರ್ಚೆ ನಡೆಸುವರು. 10.15ಕ್ಕೆ ಹೆಲಿಕಾಪ್ಟರ್ ಮೂಲಕ ಸ್ವಕ್ಷೇತ್ರ ಶಿಕಾರಿಪುರಕ್ಕೆ ಹೊರಟು, ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸುವರು. 11.45ರಿಂದ ಮಧ್ಯಾಹ್ನ 1ರವರೆಗೆ ಶಿಕಾರಿಪುರ ತಾಲೂಕಿನಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. 1.30ಕ್ಕೆ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸೊರಬ ತಾಲೂಕಿನ ಆನವಟ್ಟಿ ಗ್ರಾಮಕ್ಕೆ ಆಗಮಿಸಿ, ತಾಲೂಕಿನ ವಿವಿಧೆಡೆ ಸಂಚರಿಸಲಿದ್ದಾರೆ.

Leave a Reply

Your email address will not be published. Required fields are marked *