ಬಿಇಡಿ ಪದವೀಧರರ ಕಡೆಗಣಿಸಿ ನೇಮಕಾತಿ ಪರೀಕ್ಷೆ

|ಇಮಾಮಹುಸೇನ್ ಗೂಡುನವರ

ಬೆಳಗಾವಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸರ್ಕಾರಿ ಪಿಯು ಕಾಲೇಜುಗಳ ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದೆ. ಅ.11ರಿಂದ 23ರವರೆಗೆ ಪರೀಕ್ಷೆ ನಡೆಯಲಿದೆ. ಆದರೆ ಬಿಇಡಿ 2 ವರ್ಷ ಅವಧಿಯ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಪರೀಕ್ಷೆ ದಿನ ನಿಗದಿಪಡಿಸಿದ ಕೆಇಎ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. 2 ವರ್ಷದ ಬಿಇಡಿ ಮುಗಿಸಿದವರಲ್ಲಿ ಉತ್ತರ ಕರ್ನಾಟಕದ ಅಭ್ಯರ್ಥಿಗಳೇ ಹೆಚ್ಚಿದ್ದು, ಇಲ್ಲಿಯೂ ಪ್ರಾದೇಶಿಕ ತಾರತಮ್ಯ ಎಸಗಲಾಗಿದೆ ಎಂಬ ಆರೋಪಗಳು ಭುಗಿಲೆದ್ದಿವೆ.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಹೆಚ್ಚುತ್ತಿರುವ ನಡುವೆಯೇ ಉದ್ಯೋಗ ಅವಕಾಶ ನೀಡುವಲ್ಲೂ ಅನ್ಯಾಯ ನಡೆದಿದೆ ಎಂಬ ಅಭಿಪ್ರಾಯಗಳಿಗೂ ಈಗ ಎಡೆ ಮಾಡಿಕೊಟ್ಟಂತಾಗಿದೆ. ಬಿಇಡಿ ಪೂರೈಸಿದವರ ಪೈಕಿ ಶೇ. 80 ಅಭ್ಯರ್ಥಿಗಳು ಉತ್ತರ ಕರ್ನಾಟಕ ಭಾಗದಲ್ಲೇ ಇರುವುದರಿಂದ ಸರ್ಕಾರ ನಮಗೆ ಅವಕಾಶ ನೀಡದೆ, ಏಕಾಏಕಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿ ನಮ್ಮ ಕನಸಿಗೆ ತಣ್ಣೀರೆರಚಿದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಏನಿದು ಪರೀಕ್ಷೆ?: ರಾಜ್ಯ ಸರ್ಕಾರ ಕೆಇಎ ಮುಖಾಂತರ 1,130 ಪಿಯು ಉಪನ್ಯಾಸಕರ ನೇಮಕಾತಿಗೆ 2015ರಲ್ಲಿ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು 2015ರ ಜೂ.16 ಕೊನೇ ದಿನವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ತಲೆದೋರಿದ್ದರಿಂದ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮತ್ತೆ 2017ರಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಮಾಡಿ 2017ರ ಮಾರ್ಚ್ 7ರಂದು ಮತ್ತೊಮ್ಮೆ ಅವಕಾಶ ನೀಡಲಾಗಿತ್ತು. ಆಗ 74 ಹೆಚ್ಚುವರಿ ಹುದ್ದೆ ಸೇರಿಸಿ 1,204 ಹುದ್ದೆಗಳ ನೇಮಕಾತಿಗೆ ಆದೇಶಿಸಲಾಗಿತ್ತು. ಈ ಹುದ್ದೆ ಗಳಿಗೆ 47,228 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಆದರೆ, 2 ವರ್ಷ ಅವಧಿಯ ಬಿಇಡಿ ಕೋರ್ಸ್​ನ ಮೊದಲ ಬ್ಯಾಚ್​ನ ಪರೀಕ್ಷೆ ಫಲಿತಾಂಶ 2018ರ ಜನವರಿಯಲ್ಲಿ ಪ್ರಕಟವಾಗಿದೆ. ಈ ಕೋರ್ಸ್ ನಲ್ಲಿ ಉತ್ತೀರ್ಣರಾಗಿರುವ 10 ಸಾವಿರ ಅಭ್ಯರ್ಥಿಗಳಿದ್ದಾರೆ. ಈ ಪೈಕಿ 8 ಸಾವಿರ ಜನ ಉತ್ತರ ಕರ್ನಾಟಕದ ವಿವಿಗಳಲ್ಲೇ ಕಲಿತವರಿದ್ದಾರೆ. ಈಗ ನಮಗೆ ಅವಕಾಶ ನೀಡದ್ದರಿಂದ ಅನ್ಯಾಯವಾಗಿದೆ ಎಂಬುದು ಅವರ ಅಳಲು.

ಒಮ್ಮೆ ನೇಮಕಾತಿ ಪ್ರಕ್ರಿಯೆಯ ಅರ್ಜಿ ಸಲ್ಲಿಕೆ ಮುಂದೆ ಹೋಗಿತ್ತು. ಹೀಗಿರುವಾಗ ಮತ್ತೊಮ್ಮೆ ಅರ್ಜಿ ಸ್ವೀಕರಿಸಿ, ಹುದ್ದೆಗಳ ಸಂಖ್ಯೆ ಹೆಚ್ಚಿಸಲಾಗಿತ್ತು. ಈಗ ಮತ್ತೆ ಅರ್ಜಿ ಸ್ವೀಕಾರದ ಲಿಂಕ್ ಓಪನ್ ಮಾಡಲು ಅವಕಾಶವಿದೆ. ಸರ್ಕಾರ ಅದನ್ನು ಪರಿಗಣಿಸದೆ ಪರೀಕ್ಷೆ ದಿನಾಂಕ ಪ್ರಕಟಿಸಿದ್ದರಿಂದ ನಾವು ಆತಂಕದಲ್ಲಿದ್ದೇವೆ. ಆತ್ಮಹತ್ಯೆ ಹಾದಿ ಹಿಡಿಯಲು ತೀರ್ವನಿಸಿದ್ದೇವೆ ಎಂದು ಕರ್ನಾಟಕ ವಾಣಿಜ್ಯ ವಿದ್ಯಾರ್ಥಿಗಳ ಸಂಘದ ಹಿರಿಯ ಮುಖಂಡರಾದ ಸಂಜೀವ ಕುಮಾರಮಠ, ಮಹಾದೇವ ಧರಿಗೌಡರ, ರಾಹುಲ್ ಕಲ್ಲನ್ನವರ ಹೇಳಿಕೊಂಡಿದ್ದಾರೆ. ಈ ಕುರಿತು ಸಹಾಯವಾಣಿ ಕರೆ ಆಧರಿಸಿ ಜೂ. 24ರಂದು ‘ವಿಜಯವಾಣಿ’ ಮುಖಪುಟದಲ್ಲಿ ಬಿಇಡಿ ಪದವೀಧರರ ಅಳಲು ಪ್ರಕಟಗೊಂಡಿತ್ತು.