ಪಾಟೀಲರಿಗೆ ಲಿಂಗಾಯತ ಧರ್ಮ ರಾಜಕೀಯ ಪರೀಕ್ಷೆ

| ಪರಶುರಾಮ ಭಾಸಗಿ ವಿಜಯಪುರ

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮೂಲಕ ಮುನ್ನೆಲೆಗೆ ಬಂದಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಕ್ಷೇತ್ರ ಬಬಲೇಶ್ವರದಲ್ಲಿ ವಿಧಾನಸಭೆ ಚುನಾವಣೆ ಬಿಜೆಪಿ-ಕಾಂಗ್ರೆಸ್ ಪಾಲಿಗೆ ‘20-20 ಕ್ರಿಕೆಟ್ ಮ್ಯಾಚ್’ ರೀತಿಯಲ್ಲಿದೆ. ಅಂತಿಮ ಗಳಿಗೆಯ ಹೋರಾಟದ ಮೇಲೆ ಫಲಿತಾಂಶ ನಿರ್ಣಯವಾಗಲಿದೆ.

ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್​ಗೆ

ನೇರ ಹಣಾಹಣಿ ಏರ್ಪಡಲಿದ್ದು, ಅಭ್ಯರ್ಥಿಗಳಿಬ್ಬರೂ ಸಮ ಬಲದ ಸೆಣಸಾಟ ನಡೆ ಸುವ ಲಕ್ಷಣಗಳಿವೆ. ಸತತ 2 ಬಾರಿ ಸೋಲುಂಡಿರುವ ವಿಜುಗೌಡ ಪಾಟೀಲ ಈ ಬಾರಿ ತೆನೆಯ ಹೊರೆ ಇಳಿಸಿ ಕಮಲ ಮುಡಿದಿದ್ದಾರೆ. ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲರ ಸಹೋದರ ವಿಜುಗೌಡ ಹಾಗೂ ಸಚಿವ ಎಂ.ಬಿ. ಪಾಟೀಲರ ಮನೆತನದ ಸಾಂಪ್ರದಾಯಿಕ ಪೈಪೋಟಿಗೆ ಬಬಲೇಶ್ವರ ವೇದಿಕೆಯೊದಗಿಸಿದೆ. ಅಂದಿನ ತಿಕೋಟಾ ಇಂದಿನ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಇತಿಹಾಸದ ಅರ್ಧ ಪುಟಗಳನ್ನು ‘ಪಾಟೀಲ’ರೇ ಆಕ್ರಮಿಸಿಕೊಂಡಿದ್ದು ವಿಶೇಷ. ಒಟ್ಟು 11 ಅವಧಿಗೆ ಪಾಟೀಲರೇ ಆಯ್ಕೆಯಾಗಿದ್ದಾರೆ. ದಿ. ಬಿ.ಎಂ. ಪಾಟೀಲರು 4 ಬಾರಿ ಶಾಸಕರಾಗಿದ್ದರೆ ಅವರ ಪುತ್ರ ಹಾಲಿ ಸಚಿವ ಎಂ.ಬಿ. ಪಾಟೀಲರು ತಿಕೋಟಾ ಮತ್ತು ಬಬಲೇಶ್ವರ ಕ್ಷೇತ್ರ ಸೇರಿ ಒಟ್ಟು 4 ಬಾರಿ ಶಾಸಕರಾಗಿದ್ದಾರೆ. 1991ರಲ್ಲಿ ಬಿ.ಎಂ. ಪಾಟೀಲರ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಎಂ.ಬಿ. ಪಾಟೀಲರು ಆಯ್ಕೆಯಾದರು. ಪುನರ್ವಿಂಗಡಣೆಗೂ ಮುನ್ನ ಎರಡು ಬಾರಿ ತಿಕೋಟಾದಿಂದ ಆಯ್ಕೆಯಾಗಿದ್ದ ಶಾಸಕ ಶಿವಾನಂದ ಪಾಟೀಲರು ಕ್ಷೇತ್ರ ತೊರೆದ ಬಳಿಕ ಅವರ ಸಹೋದರ ವಿಜುಗೌಡ, ಎಂ.ಬಿ. ಪಾಟೀಲರ ವಿರುದ್ಧ ಸೆಣಸಾಡಿ ಕಡಿಮೆ ಮತಗಳ ಅಂತರದಲ್ಲಿ ಪರಾಜಯಗೊಂಡಿದ್ದರು. ಜೆಡಿಎಸ್​ನಿಂದಲೇ ಪ್ರಬಲ ಪೈಪೋಟಿ ನೀಡಿದ್ದ ವಿಜುಗೌಡರಿಗೆ ಈ ಬಾರಿ ಬಿಜೆಪಿ ಬಲ ಹೆಚ್ಚಿಸಿದ್ದು ನೇರ ಹಣಾಹಣಿಗೆ ಅಖಾಡ ಸಿದ್ಧಗೊಳ್ಳುತ್ತಿದೆ.

ಲಿಂಗಾಯತವೇ ಮೈನಸ್!

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕ್ಷೇತ್ರದ ಜನರಲ್ಲಿ ಪರ-ವಿರೋಧ ಅಲೆ ಸೃಷ್ಟಿಸಿದೆ. ವೀರಶೈವ-ಲಿಂಗಾಯತ ಪ್ರತ್ಯೇಕತೆ ವಿರೋಧಿಸಿ ರಾಜ್ಯದ ಅನೇಕ ಘಟಾನುಘಟಿಗಳು ಸಚಿವರನ್ನು ಹಣಿಯಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಿದ್ದು, ಇದು ಸಚಿವರಿಗೆ ಮೈನಸ್ ಪಾಯಿಂಟ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಇನ್ನು ಕಾಂಗ್ರೆಸ್​ನ ಆಂತರಿಕ ಭಿನ್ನಮತ, ಬಣ ರಾಜಕೀಯ ಸಚಿವರನ್ನು ಹೈರಾಣಾಗಿಸುವುದು ಸುಳ್ಳಲ್ಲ.

ಕಾಂಗ್ರೆಸ್ ಅಭಿವೃದ್ಧಿ ಮಂತ್ರ

# ನೀರಾವರಿ ಯೋಜನೆಗಳ ಮೂಲಕ ಅಭಿವೃದ್ಧಿ ಕೆಲಸ

# ಬಬಲೇಶ್ವರ-ತಿಕೋಟಾ ತಾಲೂಕು ಘೊಷಣೆ, ವಿವಿಧೆಡೆ ಸಿಸಿ ರಸ್ತೆ, ಸಮುದಾಯ ಭವನ ನಿರ್ಮಾಣ

# ಸಚಿವ ಎಂ.ಬಿ. ಪಾಟೀಲ ತಮ್ಮದೇ ಫೌಂಡೇಶನ್ ಮೂಲಕ ಶಾಲಾ ಬ್ಯಾಗ್, ಹೆಲ್ಮೆಟ್ ಹಂಚಿಕೆ, ಚಾಲನಾ ಪರವಾನಗಿ ಪತ್ರ ಸೇರಿ ಇತರ ಸಾಮಾಜಿಕ ಚಟುವಟಿಕೆ

ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕೆರೆಗೆ ನೀರು ತುಂಬಲಾಗಿದೆ. ಕೆಲವೊಂದು ಸಣ್ಣ ಪುಟ್ಟ ಬೇಡಿಕೆಗಳಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದ್ದು, ಅವುಗಳ ಸುಧಾರಣೆ ಆಗಬೇಕಿದೆ. ಉಳಿದಂತೆ ಸಮುದಾಯ ಭವನ, ಗ್ರಾಮೀಣ ರಸ್ತೆಗಳು ಸುಸಜ್ಜಿತವಾಗಿದ್ದು, ಗ್ರಾಮೀಣ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ವ್ಯಕ್ತಿಗೆ ನಮ್ಮ ಬೆಂಬಲವಿದೆ.

| ರಸೂಲ್ ಪಟೇದ ಸಾರವಾಡ ಮತದಾರ

ವಿಜುಗೌಡರ ಅನುಕಂಪ ತಂತ್ರ?

ಸತತ ಎರಡು ಬಾರಿ ಪ್ರಬಲ ಪೈಪೋಟಿ ನಡೆಸಿ ಪರಾಜಯಗೊಂಡಿರುವ ವಿಜುಗೌಡ ಪಾಟೀಲರ ಪರ ಈ ಬಾರಿ ಅನುಕಂಪದ ಅಲೆಯಿದೆ. ಈಗಾಗಲೇ ಪರಿವರ್ತನೆ ಯಾತ್ರೆ, ಕಮಲ ಜಾತ್ರೆ, ಬಹಿರಂಗ ಸಮಾವೇಶಗಳ ಮೂಲಕ ಮತದಾರರ ಮನಗೆದ್ದಿರುವುದು ವಿಜುಗೌಡರ ಆತ್ಮ ವಿಶ್ವಾಸ ಹೆಚ್ಚಿಸಿದೆ. ಕಳೆದ ಬಾರಿ ಬಿಜೆಪಿ ಹಾಗೂ ಕೆಜೆಪಿ ಅಭ್ಯರ್ಥಿಗಳು ಸೇರಿ 6709 ಮತಗಳನ್ನು ಪಡೆದಿದ್ದರು. ವಿವಿಧ ಮಠಾಧೀಶರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿರುವುದು ಗಮನಾರ್ಹ. ಕಾರಣ ಲಿಂಗಾಯತ-ವೀರಶೈವ ಧರ್ಮ ವಿಚಾರ ಮಠಾಧೀಶರನ್ನು ಒಂದು ಮಾಡಿಸಿದೆ. ಪಂಚಪೀಠಾಧೀಶರು, ವೀರಶೈವ ಮಹಾಸಭಾ ಮುಖಂಡರು ಒಂದಾಗಿ ಕ್ಷೇತ್ರದತ್ತ ಮುಖ ಮಾಡಿದ್ದು ಬಿಜೆಪಿಗೆ ಬಯಸದೆ ಬಂದ ಭಾಗ್ಯ. ಖುದ್ದು ಬಿಜೆಪಿ ಅಭ್ಯರ್ಥಿಯೇ ಹಿಂಜರಿದರೂ ಅವರ ಪರ ಪರೋಕ್ಷವಾಗಿ ಪ್ರಚಾರ ನಡೆಯುತ್ತಿದೆ. ಇದು ವಿಜುಗೌಡರ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನೊಂದೆಡೆ ಜೆಡಿಎಸ್ ಈ ಕ್ಷೇತ್ರವನ್ನು ಬಿಎಸ್​ಪಿಗೆ ಬಿಟ್ಟುಕೊಟ್ಟಿದೆ.

Leave a Reply

Your email address will not be published. Required fields are marked *