ಮಂಡ್ಯ: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆ ಸಮಯ ಹತ್ತಿರವಾಗುತ್ತಿದ್ದಂತೆ ಟಾಕ್ಫೈಟ್ ಆರಂಭವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಕೇಂದ್ರ ಬಿಂದುವಾದರೂ ಅಚ್ಚರಿಯೇನಿಲ್ಲ. ಇದೀಗ ಸುಮಲತಾ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುಮಲತಾ ಬೆಂಗಳೂರಿನಲ್ಲಿ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದಾರೆ ಎಂಬ ನಿಖಿಲ್ ಹೇಳಿಕೆಗೆ ಕೌಂಟರ್ ಕೊಟ್ಟಿರುವ ಸುಮಲತಾ, ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದು, ಈಗ ರಾಮನಗರಕ್ಕೆ ಹೋಗಿರುವವರು ಯಾರು? ನಿಖಿಲ್ ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಸುಮಲತಾ ಮಾತನಾಡುತ್ತಾ, ಮತ್ತೆ ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತೇನೆ ಅಂದಿದ್ದವರು ಈಗ ರಾಮನಗರದಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ನನಗೆ ಯಾವುದೇ ಬೆಂಬಲ ಇಲ್ಲದಾಗ ಬೆಂಗಳೂರು ಬಿಟ್ಟು ಮಂಡ್ಯಕ್ಕೆ ಬಂದಿದ್ದೇನೆ. ಈಗ ಮಂಡ್ಯದಲ್ಲಿ ನನಗೆ ರಾಜಕೀಯ ಅಸ್ಥಿತ್ವ ಇದೆ. ಈಗ ಯಾಕೆ ಬೇರೆ ಕ್ಷೇತ್ರಕ್ಕೆ ಹೋಗಲಿ ಎಂದು ಪ್ರಶ್ನಿಸಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, ಸುಮಲತಾ ಬೆಂಗಳೂರಿನಲ್ಲಿ ಸ್ಪರ್ಧಿಸಿ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸುಮಲತಾ ಪ್ರತಿಕ್ರಿಯಿಸಿ ನಿಖಿಲ್ ಕೊಟ್ಟಿರುವ ಹೇಳಿಕೆ ಅಪ್ರಬುದ್ಧವಾಗಿದೆ. ನಾನು ಹೇಳಿಕೆಯನ್ನು ಅವರು ಸರಿಯಾಗಿ ಕೇಳಿಸಿಕೊಂಡಿಲ್ಲ. ಯಾರೋ ಇಂತಹ ಹೇಳಿಕೆ ಕೊಡಿ ಹೇಳಿದ್ದಾರೆ. ಅದಕ್ಕಾಗಿ ಅಪ್ರಬುದ್ಧ ಹೇಳಿಕೆಗಳು ನಿಖಿಲ್ ಬಾಯಿಂದ ಹೊರಬರುತ್ತಿದೆ ಎಂದು ಟೀಕಿಸಿದರು.
ಮಂಡ್ಯದ ಮೇಲೆ ಇಷ್ಟ ಇದ್ರೆ ನಿಖಿಲ್ ಮಂಡ್ಯಕ್ಕೆ ಬಂದು ಸ್ಪರ್ಧೆ ಮಾಡಲಿ. ಒಂದೇ ಎಲೆಕ್ಷನ್ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಅವರ ತಂದೆ, ತಾಯಿ, ಕುಟುಂಬದವರೇ ಎಷ್ಟೇಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂದು ಪಟ್ಟಿ ಮಾಡಿ ಮಾತನಾಡಲಿ. ಜೆಡಿಎಸ್ ನಾಯಕರು ಹೇಳುವುದಕ್ಕೂ, ಮಾಡುವುದಕ್ಕೂ, ಕೊನೆಗೆ ನಡೆದುಕೊಳ್ಳುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಯಾರೋ ಒಬ್ಬ ಶಾಸಕರು ನಿಖಿಲ್ 2.5 ಲಕ್ಷ ಅಂತರದಿಂದ ಗೆಲ್ಲದಿದ್ರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಅಂದಿದ್ದರು. ಕೊನೆಗೆ ಅವರು ಏನು ಮಾಡಿದರು? ಇಂತಹ ಹೇಳಿಕೆಗಳಿಂದ ಜೆಡಿಎಸ್ ನಾಯಕ ಮಾತನ್ನು ಜನರು ನಂಬುತ್ತಿಲ್ಲ ಎಂದು ಸುಮಲತಾ ಹೇಳಿದರು.