ಆಪರೇಷನ್​ ಕಮಲದ ಬಗ್ಗೆ ನಮಗೆ ಏನೂ ಆತಂಕವಿಲ್ಲ: ಪರಮೇಶ್ವರ್​

ಬೆಂಗಳೂರು: ಬಿಜೆಪಿಯ ಆಪರೇಷನ್​ ಕಮಲದ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ನಮ್ಮ ಸರ್ಕಾರ ಸ್ಥಿರವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಭರವಸೆ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್​ ಸಚಿವರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್​ ನಮ್ಮ ಕೆಲವು ಶಾಸಕರು ಮುಂಬೈ, ದೆಹಲಿಗೆ ಹೋಗಿದ್ದಾರೆ. ಅವರು ಕುಟುಂಬದ ಜತೆ ದೇವಸ್ಥಾನ, ಪ್ರವಾಸಕ್ಕೆ ಹೋಗಿರಬಹುದು. ನಮಗೆ ಹೇಳಿ ಯಾವ ಶಾಸಕರೂ ಹೋಗಿಲ್ಲ. ಅವರನ್ನು ವಾಪಸ್​ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಉಮೇಶ್​ ಜಾಧವ್​ ಪಕ್ಷದಲ್ಲೇ ಇರುತ್ತಾರೆ. ಅವರ ಸಹೋದರರ ಹೇಳಿಕೆಗಳಿಗೆ ನಾವು ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಪರಮೇಶ್ವರ್​ ತಿಳಿಸಿದರು.

ಸಭೆಯಲ್ಲಿ ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್​ ಕುರಿತು ಚರ್ಚೆ ನಡೆಸಿದ್ದೇವೆ. ಬಜೆಟ್​ನಲ್ಲಿ ಯಾವೆಲ್ಲಾ ಅಂಶಗಳನ್ನು ಸೇರಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ. ಸಂಬಂಧ ಪಟ್ಟ ಸಚಿವರು ಅವರ ಇಲಾಖೆಗೆ ಬೇಕಾದ ಅನುದಾನ, ಕಾರ್ಯಕ್ರಮಗಳ ಬಗ್ಗೆ ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್​ ತಿಳಿಸಿದರು.

ಬಜೆಟ್​ ಬಗ್ಗೆ ಚರ್ಚೆ ಮಾಡಿದ್ದೇವೆ

ಸಭೆಯ ಬಳಿಕ ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು ಸಭೆಯಲ್ಲಿ ಅತೃಪ್ತ ಶಾಸಕರ ಕುರಿತು ಯಾವುದೇ ಚರ್ಚೆಯಾಗಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ವಿಚಾರಗಳನ್ನು ಪರಮೇಶ್ವರ್​ ಅವರು ಹೇಳುತ್ತಾರೆ ಎಂದು ತಿಳಿಸಿದರು.

ನೋಟಿಸ್​ ಬಂದಿಲ್ಲ

ವಿಧಾನಸೌಧದ ಬಳಿ ಲಕ್ಷಾಂತರ ರೂ. ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ನನಗೆ ಯಾವುದೇ ನೋಟಿಸ್​ ಬಂದಿಲ್ಲ. ನಿಮಗೆ ಬಂದಿದೆಯಾ ಎಂದು ಶಾಸಕ ಪುಟ್ಟರಂಗ ಶೆಟ್ಟಿ ಸಿಟ್ಟಿನಿಂದ ಕೇಳಿ ಸ್ಥಳದಿಂದ ತೆರಳಿದ್ದಾರೆ.