ಸಮಾನತೆ ಕಲ್ಪಿಸಿದ್ದೇ ಡಾ. ಅಂಬೇಡ್ಕರ್

ಬೀದರ್: ದೇಶದ ಸರ್ವರಿಗೂ ಸಮಾನತೆ, ಹಕ್ಕುಗಳು ಕಲ್ಪಿಸಿಕೊಟ್ಟಿದ್ದವರೇ ಡಾ.ಬಿ.ಆರ್. ಅಂಬೇಡ್ಕರ್. ಅವರ ಹಾದಿಯಲ್ಲಿ ನಡೆಯಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹಿರಿಯ ಚಿಂತಕ ತಾತ್ಯಾರಾವ ಕಾಂಬ್ಳೆ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಸಂಜೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಡೆದ 70ನೇ ಸಂವಿಧಾನ ಅಂಗೀಕಾರ ದಿನಾಚರಣೆ ಉದ್ಘಾಟಿಸಿ, ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಅವರು ಜಗತ್ತಿನಲ್ಲಿ ಅತ್ಯುತ್ತಮ ಹಾಗೂ ಶ್ರೇಷ್ಠ ಸಂವಿಧಾನ ಭಾರತಕ್ಕೆ ನೀಡಿದ್ದಾರೆ. ಸರ್ವ ಸಮಾಜಗಳ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಬಾಬಾಸಾಹೇಬರು ಸಂವಿಧಾನ ರಚಿಸಿದ್ದಾರೆ ಎಂದರು.

ವೇದಿಕೆ ರಾಜ್ಯಾಧ್ಯಕ್ಷ ಎನ್.ವೆಂಕಟೇಶ ಮಾತನಾಡಿ, ಪ್ರತಿ ಭಾರತೀಯರಿಗೂ ಮತ ಒಂದೇ ಹಾಗೂ ಒಂದೇ ರೀತಿಯ ಮತದಾನದ ಹಕ್ಕನ್ನು ಅಂಬೇಡ್ಕರರು ನೀಡಿದರು. ಇದು ದೇಶದಲ್ಲಿ ಸಮಾನತೆಗೆ ನಾಂದಿ ಹಾಡಿತು. ಬಾಬಾಸಾಹೇಬರು ಕೊಟ್ಟಂಥ ಈ ಹಕ್ಕು ಯಾರೂ ಮಾರಿಕೊಳ್ಳಬೇಡಿ ಎಂದು ಕೋರಿದರು.

ಹಿರಿಯ ಮುಖಂಡ ವೈಜಿನಾಥ ಸೂರ್ಯವಂಶಿ ಮಾತನಾಡಿ, ಮಹಿಳಾ ಸಮುದಾಯದ ಸ್ವಾತಂತ್ರ್ಯ, ಸಮಾನತೆ ಬದುಕಿಗಾಗಿ ಹಿಂದು ಕೋಡ್ ಬಿಲ್ ಮಂಡಿಸಿ ಮಹಿಳೆಯರ ಜೀವನವನ್ನು ಅಂಬೇಡ್ಕರ್ ಸುಧಾರಿಸಿದ್ದಾರೆ. ಸಮಾಜದಲ್ಲಿ ಎಲ್ಲ ಜನರು ಒಗ್ಗಟಿನಿಂದ ಹೋದಾಗ ಅಂಬೇಡ್ಕರ್ ಅವರು ಆರಂಭಿಸಿದ ರಥವನ್ನು ಮುನ್ನಡೆಸಲು ಸಾಧ್ಯ ಎಂದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಜಯಾನಂದರಾವ ಎಕಂಬೇಕರ್, ವೈಜಿನಾಥ ಸೂರ್ಯವಂಶಿ, ಅಮೃತರಾವ ಚಿಮಕೋಡೆ ಅವರಿಗೆ ಬಾಬಸಾಹೇಬ ಅಂಬೇಡ್ಕರ್ ಸಮಾಜ ಜಾಗೃತ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು. ದೇವೇಂದ್ರ ಸೋನಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅನೀಲಕುಮಾರ ಬೆಲ್ದಾರ್, ಪಂಡಿತ ಚಿದ್ರಿ, ಬಸವರಾಜ ಮಾಳಗೆ, ಬಾಬು ಪಾಸ್ವಾನ್, ಸುಬ್ಬಣ್ಣ ಕರಕನಳ್ಳಿ, ಎಂ.ಡಿ. ಸಲೀಮ್, ಅಂಬೇಡ್ಕರ್ ಬೌದ್ಧೆ, ತುಕಾರಾಮ ಅಮಲಾಪುರ ಇತರರಿದ್ದರು. ವೇದಿಕೆ ಜಿಲ್ಲಾಧ್ಯಕ್ಷ ಅಂಬಾದಾಸ ಗಾಯಕವಾಡ ಪ್ರಾಸ್ತಾವಿಕ ಮಾತನಾಡಿ, ನಿರೂಪಣೆ ಮಾಡಿದರು. ಮಹೀಂದ್ರಕುಮಾರ ಪ್ಯಾಗೆ ಸ್ವಾಗತಿಸಿದರು. ವಿಕಾಸರಾಜ ನಾಗಪುರ ಭೀಮ ಗೀತೆ ಹಾಡಿದರು.