ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್​ನಲ್ಲಿ ರಾಜ್ಯಕ್ಕೆ 3 ಬೆಳ್ಳಿ, 2 ಕಂಚು

ವಿಜಯಪುರ: ರಾಜಸ್ಥಾನದ ಜೈಪುರದಲ್ಲಿ ಬುಧವಾರದಿಂದ ಆರಂಭಗೊಂಡ ರಾಷ್ಟ್ರೀಯ ಟ್ರ್ಯಾಕ್​ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳು ಮೊದಲ ದಿನವೇ 3 ಬೆಳ್ಳಿ ಮತ್ತು 2 ಕಂಚಿನ ಪದಕ ಗಳಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

16 ವರ್ಷದೊಳಗಿನ ಬಾಲಕಿಯರ ವಿಭಾಗದ 04 ಕಿಮೀ ಸ್ಕ್ರ್ಯಾಚ್ ರೇಸ್‌ನಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾಳೆ. ಬಾಲಕರ ವಿಭಾಗದ 5 ಕಿಮೀ ಸ್ಕ್ರ್ಯಾಚ್ ರೇಸ್‌ನಲ್ಲಿ ಗದಗ ಜಿಲ್ಲೆ ಪ್ರತಿನಿಧಿಸಿದ ವಿಜಯಪುರದ ಗಣೇಶ ಕುಡಿಗನೂರ ಕಂಚಿನ ಪದಕ ಪಡೆದಿದ್ದಾರೆ.

18 ವರ್ಷದೊಳಗಿನ ಬಾಲಕಿಯರ ವಿಭಾಗದ 6 ಕಿಮೀ ಸ್ಕ್ರ್ಯಾಚ್ ರೇಸ್‌ನಲ್ಲಿ ವಿಜಯಪುರ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಸಹನಾ ಕುಡಿಗಾನೂರ ಬೆಳ್ಳಿ ಪದಕ ಜಯಿಸಿದ್ದಾರೆ.

14 ವರ್ಷದೊಳಗಿನ ಬಾಲಕರ ವಿಭಾಗದ 500 ಮೀಟರ್ ಟೈಂ ಟ್ರಯಲ್‌ನಲ್ಲಿ (39.192 ಸೆಕೆಂಡ್ಸ್) ಗುರಿ ತಲುಪಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ ಕಂಚಿನ ಪದಕ ಪಡೆದಿದ್ದಾನೆ. 14 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀ ಟೈಂ ಟ್ರಯಲ್‌ನಲ್ಲಿ (42.237 ಸೆಕೆಂಡ್ಸ್) ಗುರಿ ತಲುಪಿ ವಿಜಯಪುರದ ಅಂಕಿತಾ ರಾಠೋಡ ಬೆಳ್ಳಿಯ ಪದಕ ಜಯಿಸಿದ್ದಾಳೆಂದು ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಶೈಲ ಕುರಣಿ ತಿಳಿಸಿದ್ದಾರೆ.