ಕೈಸುಟ್ಟ ರೋಷಾಗ್ನಿ: ವೇಣು, ಸಿದ್ದರಾಮಯ್ಯ, ದಿನೇಶ್ ವಿರುದ್ಧ ರೋಷನ್​ಬೇಗ್ ಕಿಡಿ

ಬೆಂಗಳೂರು: ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಸವಾಲಿನ ಜತೆಯಲ್ಲೇ ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಚಿಂತೆಗೀಡಾಗಿರುವ ರಾಜ್ಯ ಕಾಂಗ್ರೆಸ್​ನಲ್ಲೀಗ ಬಂಡಾಯದ ರೋಷಾಗ್ನಿ ಸ್ಪೋಟಗೊಂಡಿದೆ. ಲೋಕಸಮರದ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವ ಸಂದರ್ಭದಲ್ಲೇ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹಾಗೂ ಮಾಜಿ ಸಚಿವ ಆರ್. ರೋಷನ್ ಬೇಗ್ ಪಕ್ಷದ ನಾಯಕರ ವಿರುದ್ಧ ಸಿಡಿದೆದ್ದು ಬಹಿರಂಗವಾಗಿ ಗುಡುಗಿರುವುದು ತೀವ್ರ ಇಕ್ಕಟ್ಟಿಗೆ ಕಾರಣವಾಗಿದೆ. ಬೇಗ್ ಹೇಳಿಕೆಗೆ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದರೂ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹಾಗೂ ಬಿಜೆಪಿ ನಾಯಕರು ಉರಿಯುವ ಕಿಡಿಗೆ ತುಪ್ಪ ಸುರಿದಿರುವುದು ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಹಿಡಿದ ಕೈಗನ್ನಡಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಲೋಕಸಭೆ ಚುನಾವಣೆಗೆ ಮೊದಲೇ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿನ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನಗೊಂಡಿದ್ದರು. ಕ್ರೖೆಸ್ತ ಹಾಗೂ ಮುಸ್ಲಿಮರನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದರು. ಬೆಂಗಳೂರು ಸೆಂಟ್ರಲ್​ನಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದ ರೋಷನ್ ಬೇಗ್ ಕೂಡ ನಾಯಕರ ನಡೆಗೆ ಮುನಿಸಿಕೊಂಡಿದ್ದರು. ಇದೀಗ ತಮ್ಮ ಆಪ್ತ ಸಿದ್ದರಾಮಯ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೇಗ್ ಆಕ್ರೋಶವೇನು?: ಮಂಗಳವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್ ಬೇಗ್, ಮತದಾನೋತ್ತರ ಸಮೀಕ್ಷೆಯಂತೆ ಫಲಿತಾಂಶ ಬಂದು ಹಿನ್ನಡೆಯಾದರೆ ಬಫೂನ್ ವೇಣುಗೋಪಾಲ್​ರ ಸೊಕ್ಕಿನ ನಡೆ, ಸಿದ್ದರಾಮಯ್ಯ ಮತ್ತು ಫ್ಲಾಪ್ ಶೋ ನಾಯಕ ದಿನೇಶ್ ಗುಂಡೂರಾವ್ ಕಾರಣ. ದಿನೇಶ್ ಮತ್ತು ಸಿದ್ದರಾಮಯ್ಯ ಪಕ್ಷ ನೀಡಿದ ಜವಾಬ್ದಾರಿಗೆ ತಕ್ಷಣ ರಾಜೀನಾಮೆ ಕೊಡಬೇಕು ಎಂದರು.

ಸಿಎಲ್​ಪಿ ನಾಯಕರು ನಡೆದುಕೊಂಡ ರೀತಿ, ದುರಹಂಕಾರ ಸರಿಯಲ್ಲ. ಕುಮಾರಸ್ವಾಮಿ, ದೇವೇಗೌಡರ ಮನೆ ಬಾಗಿಲಿಗೆ ಹೋಗಿ ನಾವು ಸರ್ಕಾರ ಮಾಡೋಣ ಎಂದು ಹೇಳಿ, ಈಗ ನಾನೇ ಸಿಎಂ ಆಗುತ್ತೇನೆ ಎಂದು ಹೇಳುತ್ತಿರುವುದು ಎಲ್ಲರಿಗೂ ಇಷ್ಟ ಆಗಿಲ್ಲ. ಅವರ ನಡತೆ ನೋಡಿ ಜನರಿಗೆ ಬೇಸರವಾಗಿದೆ ಎಂದರು. ಸರ್ಕಾರದಲ್ಲಿ ಖಾತೆಗಳು ಮಾರಾಟವಾಗಿವೆ. ಈ ವಿಚಾರದಲ್ಲಿ ನಾನು ಹೇಗೆ ಕುಮಾರಸ್ವಾಮಿಯವರನ್ನು ದೂಷಿಸಲಿ? ಈ ಸರ್ಕಾರದಲ್ಲಿ ಅವರಿಗೆ ಕಾರ್ಯ ನಿರ್ವಹಿಸಲು ಬಿಡಲಿಲ್ಲ.

ಮೊದಲ ದಿನದಿಂದಲೂ ಸಿದ್ದರಾಮಯ್ಯ ನಾನೇ ಸಿಎಂ ಆಗುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ ಎಂದು ರೋಷನ್ ಬೇಗ್ ಟೀಕಿಸಿದರು. ಮತಕ್ಕಾಗಿ ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿದೆ. ಇದು ನಮ್ಮ ಸಮುದಾಯಕ್ಕೆ ಬೇಸರ ತಂದಿದೆ. ಕ್ರಿಶ್ಚಿಯನ್ನರಿಗೆ ಒಂದು ಸೀಟನ್ನೂ ನೀಡಿಲ್ಲ. ಮುಸ್ಲಿಮರಿಗೆ ಸಿಕ್ಕಿದ್ದು ಒಂದೇ ಸೀಟು. ಈ ಮೂಲಕ ಅವರನ್ನು ಕಡೆಗಣಿಸಲಾಗಿದೆ ಎಂದು ಅಳಲು ತೋಡಿಕೊಂಡರು.

ಕಾಂಗ್ರೆಸ್ ಇಂದು ಸಿದ್ದರಾಮಯ್ಯ ಪಾರ್ಟಿ ಆಗಿದೆ. ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಬಹಳ ದೊಡ್ಡ ಸಮುದಾಯ ಒಡೆದಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್​ಗೆ ಈ ಸ್ಥಿತಿ ಬಂದಿದೆ ಎಂದು ಬೇಗ್ ಟೀಕಿಸಿದರು. ಅಲ್ಪಸಂಖ್ಯಾತರನ್ನು ಕಾಂಗ್ರೆಸ್​ನಲ್ಲಿ ತುಳಿಯಲಾಗುತ್ತಿದೆ. ಇದು ಸಿದ್ದರಾಮಯ್ಯ ಅವರ ಕುತಂತ್ರವಾಗಿದೆ. ಲೋಕಸಭಾ ಚುನಾವಣೆ ಯಲ್ಲಿ ಮುಸ್ಲಿಮರನ್ನು ಕ್ಯಾರೆ ಅನ್ನಲಿಲ್ಲ ಎಂದು ದೂರಿದರು.

ಮುಸ್ಲಿಮರಿಗೆ ಅನ್ಯಾಯ ಆಗಿದೆ ಎಂದು ರೋಷನ್ ಬೇಗ್ ಅವರಿಗೆ ಈಗ ಗೊತ್ತಾಯಿತೇ? ಇಷ್ಟು ದಿನ ಬಾಯಿಗೆ ಲಕ್ವಾ ಹೊಡೆದಿತ್ತಾ? ಯಾಕೆ ಬಾಯಿ ಬಿಚ್ಚಿರಲಿಲ್ಲ? ಮಂತ್ರಿ ಆದಾಗ ಕಾಂಗ್ರೆಸ್ ಸರಿಯಾಗಿ ಇತ್ತು, ಈಗ ಸರಿಯಿಲ್ಲ ಅಂದರೆ ಹೇಗೆ? ರೋಷನ್ ಬೇಗ್ ಎಂಪಿ ಟಿಕೆಟ್ ಕೇಳಿದ್ದರು, ಕೊಡಲಿಲ್ಲ, ಮಂತ್ರಿ ಸ್ಥಾನ ಕೇಳಿದ್ದರು, ಕೊಡಲಿಲ್ಲ, ಅಂದರೆ ಕಾಂಗ್ರೆಸ್ ಕೆಟ್ಟದ್ದೇ?

| ಜಮೀರ್ ಅಹ್ಮದ್ ಖಾನ್ ಸಚಿವ

ರೋಷನ್ ಬೇಗ್ ಕೋಳಿನೇ ಹುಟ್ಟದೆ ಕಬಾಬ್ ಮಾಡಲು ಹೊರಟಿದ್ದಾರೆ. ಸಮೀಕ್ಷೆ ಬಗ್ಗೆ ಆತುರ ಏಕೆ ಎಂದು ಅರ್ಥವಾಗುತ್ತಿಲ್ಲ. ಅಲ್ಪಸಂಖ್ಯಾತರು ಅಂದರೆ ಅವರೊಬ್ಬರೆ ಅಲ್ಲವಲ್ಲ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅದು ಅಲ್ಪಸಂಖ್ಯಾತರಿಗೆ ಮಾಡಿದ ಮೋಸವೇ? 23ರ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡುತ್ತದೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ರೋಷಾಗ್ನಿಗೆ ಕಾರಣ?

1. ಮೈತ್ರಿ ಸರ್ಕಾರದ ಸಂಪುಟದಲ್ಲಿ ಅವಕಾಶ ಕೈತಪ್ಪಿದ್ದು

2. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದು

3. ಚುನಾವಣೆಯಲ್ಲಿ, ಪಕ್ಷದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲೇ ಇಲ್ಲ್ಲ

4. ಪರ್ಯಾಯವಾಗಿ ರಿಜ್ವಾನ್ ಅರ್ಷದ್​ಗೆ ಬೆಂಗಳೂರು ಕೇಂದ್ರದ ಟಿಕೆಟ್ ನೀಡಿದ್ದು

5. ದಿನದಿನಕ್ಕೂ ಜಮೀರ್ ಅಹ್ಮದ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು.

ಮುಂದೇನು?

  • ಅಮಾನತು ಮಾಡಬಹುದು, ಪಕ್ಷದ ವಿವಿಧ ಜವಾಬ್ದಾರಿಗಳಿಂದ ಕೈಬಿಡಬಹುದು
  • ಸರ್ಕಾರಕ್ಕೆ ಪ್ರತಿ ಶಾಸಕರ ಬಲ ಅತ್ಯಗತ್ಯವಾದ್ದರಿಂದ ಕಾಂಗ್ರೆಸ್ ಧೈರ್ಯ ಮಾಡುವುದು ಅನುಮಾನ
  • ಒಂದೊಮ್ಮೆ ಉಚ್ಚಾಟನೆಯಂತಹ ಗಂಭೀರ ಕ್ರಮಕ್ಕೆ ಮುಂದಾದಲ್ಲಿ ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಬಹುದು
  • ಪಕ್ಷಾಂತರ ಮಾಡಿ ಬೇರೆ ಪಕ್ಷಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು
  • ರೋಷನ್ ನಡೆ ಕಾಂಗ್ರೆಸ್​ನ ಮತ್ತಷ್ಟು ಅತೃಪ್ತ ಶಾಸಕರಿಗೆ ದಾರಿಯಾಗಬಹುದು

ವಾರದಲ್ಲಿ ಉತ್ತರಿಸಲು ತಾಕೀತು

ಪ್ರಕರಣ ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ, ರೋಷನ್ ಬೇಗ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ‘ನಿಮ್ಮ ಹೇಳಿಕೆಯಿಂದ ಪಕ್ಷದ ಗೌರವ, ಘನತೆಗೆ ಕುಂದುಂಟಾಗಿದೆ. ನಿಮ್ಮ ವಿರುದ್ಧ ಪಕ್ಷವಿರೋಧಿ ಚಟುವಟಿಕೆ ಎಂದು ಕ್ರಮಕೈಗೊಳ್ಳಬಾರದೇಕೆ? ಒಂದು ವಾರದೊಳಗೆ ಸಮಜಾಯಿಷಿ ನೀಡಿ’ ಎಂದು ತಾಕೀತು ಮಾಡಲಾಗಿದೆ. ಉತ್ತರಿಸದಿದ್ದಲ್ಲಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಲಾಗಿದೆ. ಆದರೆ, ಈ ನೋಟಿಸ್​ಗೆ ಟ್ವೀಟರ್ ಮೂಲಕವೇ ಪ್ರತಿಕ್ರಿಯಿಸಿರುವ ರೋಷನ್ ಬೇಗ್ ಮತ್ತೆ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

Leave a Reply

Your email address will not be published. Required fields are marked *