ಕೈಪಡೆ ಬಿಕ್ಕಟ್ಟಿಗೆ ಮಹಾ ತಿರುವು!

|ಕೆ. ರಾಘವ ಶರ್ಮ

ನವದೆಹಲಿ: ಕರ್ನಾಟಕ ಕಾಂಗ್ರೆಸ್​ನಲ್ಲಿ ಎದ್ದಿರುವ ಭಿನ್ನಮತೀಯ ಬಿರುಗಾಳಿ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದ ಕ್ಲೈಮ್ಯಾಕ್ಸ್ ಫೈಟ್ ದಿಢೀರ್ ಮಹಾರಾಷ್ಟ್ರಕ್ಕೆ ಶಿಫ್ಟ್ ಆಗುವ ಲಕ್ಷಣ ಗೋಚರಿಸಿದೆ.

ಕಾಂಗ್ರೆಸ್ ಮುಖಂಡರ ನಿರ್ಲಕ್ಷ್ಯ ಧೋರಣೆಯಿಂದ ಆಕ್ರೋಶಗೊಂಡಿರುವ ಸತೀಶ್ ಜಾರಕಿಹೊಳಿ ಮತ್ತು ಸಚಿವ ರಮೇಶ್ ಜಾರಕಿಹೊಳಿ ಕೆಲ ದಿನಗಳ ಬಳಿಕ ತಮ್ಮ ಆಪ್ತ ಶಾಸಕರೊಂದಿಗೆ ಮುಂಬೈಗೆ ತೆರಳಿ, ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಫಡ್ನವಿಸ್ ಮಾತುಕತೆ: ರಾಜ್ಯದ ಏರುಪೇರಿನ ರಾಜಕಾರಣದ ಮಧ್ಯೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ಮಧ್ಯೆ ಮುಖಾಮುಖಿ ಮಾತುಕತೆ ನಡೆದಿರುವುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆ ದಿನದ ಸಂಜೆಯ ವೇಳೆ ಮಹಾರಾಷ್ಟ್ರದ ಪುಣೆಯಲ್ಲಿ ಜಾರಕಿಹೊಳಿ-ಫಡ್ನವಿಸ್ ಭೇಟಿ ನಡೆದಿದ್ದು, ಬಿಜೆಪಿ ಬೆಂಬಲಿಸಿ ಸರ್ಕಾರ ರಚಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಚಾರ-ವಿನಿಮಯ ನಡೆಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಬಳಿಕವೇ ಜಾರಕಿಹೊಳಿ ಸಹೋದರರು ಮುಂಬೈನಲ್ಲಿ ಆಪ್ತ ಶಾಸಕರೊಂದಿಗೆ ಕೆಲ ದಿನ ವಾಸ್ತವ್ಯ ಹೂಡಿದರೆ ಹೇಗೆ ಎಂಬ ಚಿಂತನೆ ನಡೆಸಿದ್ದಾರೆಂದು ಹೇಳಲಾಗಿದೆ.

ಕಾಂಗ್ರೆಸ್ ಶಾಸಕರನ್ನು ಸೆಳೆದು ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬಿಜೆಪಿ ಹೈಕಮಾಂಡ್​ನಲ್ಲೇನೋ ಉತ್ಸಾಹವಿದೆ. ಆದರೆ, ಶಾಸಕರ ಬೆಂಬಲದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೀಗಾಗಿ, ಫಡ್ನವಿಸ್ ಮೂಲಕ ರಾಜ್ಯದ ವಸ್ತುಸ್ಥಿತಿ ತಿಳಿದುಕೊಳ್ಳುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಕೈ ಹಾಕಿದೆ ಎನ್ನಲಾಗಿದೆ. 2019ರ ಲೋಕಸಭೆ ಚುನಾವಣೆ ವೇಳೆ ಮೈತ್ರಿ ಸರ್ಕಾರವಿದ್ದರೆ, ಬಿಜೆಪಿ ಕೆಲ ಸೀಟುಗಳನ್ನು ಕಳೆದುಕೊಳ್ಳಬಹುದು ಎಂಬ ಆತಂಕ ರಾಜ್ಯ ನಾಯಕರಲ್ಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ವಿಷಯವನ್ನು ಅಧ್ಯಕ್ಷ ಅಮಿತ್ ಷಾಗೂ ವಿವರಿಸಿದ್ದಾರೆ.

ಸಂಧಾನ ಯತ್ನ

ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಜತೆ ಮೇಲಿಂದ ಮೇಲೆ ಸಂಪರ್ಕ ಸಾಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಂಗಳವಾರ ಬೆಳಗ್ಗೆ ಕೂಡ ಕರೆ ಮಾಡಿದ್ದಾರೆ. ‘ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯಬೇಡಿ. ಬೆಳಗಾವಿಯಲ್ಲಿ ನಿಮಗೆ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲಾಗುವುದು ಮತ್ತು ಸೂಕ್ತ ಸ್ಥಾನಮಾನಗಳನ್ನೂ ಕಲ್ಪಿಸಲಾಗುವುದು. ಕೆಲ ದಿನಗಳ ಕಾಲ ತಾಳ್ಮೆಯಿಂದಿರಿ. ಬಿಜೆಪಿ ನಾಯಕರ ಮಾತಿಗೆ ಕಿವಿಗೊಡಬೇಡಿ’ ಎಂದು ಸಮಾಧಾನಿಸುವ ಯತ್ನ ಮಾಡಿದ್ದಾರೆ. ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡದ ಜಾರಕಿಹೊಳಿ, ನೋಡೋಣ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.

ಸಂಪರ್ಕದಲ್ಲಿ ಸಿಎಂ

ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿಯ ತೆರೆಮರೆ ಯತ್ನ ಸಿಎಂ ಕುಮಾರಸ್ವಾಮಿ ಗಮನಕ್ಕೆ ಮೊದಲೇ ಬಂದಿದ್ದು, ‘ನೀವು ತಾಳ್ಮೆ ಕಳೆದುಕೊಳ್ಳಬೇಡಿ’ ಎಂದು ರಮೇಶ್ ಮತ್ತು ಸತೀಶ್ ಜಾರಕಿಹೊಳಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಸಿಎಂ ಕಡೆಯಿಂದಲೂ ನಡೆದಿದೆ. ‘ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಅಧ್ಯಕ್ಷ ರಾಹುಲ್ ಗಾಂಧಿ ಜತೆ ನಾನೇ ಖುದ್ದಾಗಿ ಮಾತನಾಡಿ, ಬಗೆಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಸಿಎಂ ಭರವಸೆ ನೀಡಿದ್ದಾರೆಂದು ಮೂಲಗಳಿಂದ ಗೊತ್ತಾಗಿದೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ನಮ್ಮ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತಿದ್ದಾರೆ. ಹೊರರಾಜ್ಯದ ನಾಯಕರನ್ನು ಬಳಸಿ ಸರ್ಕಾರ ಪತನದ ಪ್ರಯತ್ನ ನಡೆಸಿದ್ದಾರೆ. ಯಾರೇ ಬರಲಿ, ನಾವು ಅಂಜುವುದಿಲ್ಲ. ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.

| ಪ್ರಿಯಾಂಕ್ ಖರ್ಗೆ, ಸಚಿವ

ಡಿಕೆಶಿಗೆ ಕಡಿವಾಣ

‘ರೆಸಾರ್ಟ್ ರಾಜಕಾರಣದ ಮೂಲಕ ಕಾಂಗ್ರೆಸ್ ಹೈಕಮಾಂಡ್ ಬೆದರಿಸಿ, ಆಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವ ಯತ್ನವೋ ಅಥವಾ ಬಿಜೆಪಿ ಬೆಂಬಲಿಸಿ ಹೊಸ ಸರ್ಕಾರ ರಚಿಸುವ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ಡಿ.ಕೆ. ಶಿವಕುಮಾರ್​ಗೆ ಕಡಿವಾಣ ಹಾಕಲು ಜಾರಕಿಹೊಳಿ ಸಹೋದರರು ಸಿದ್ಧರಾಗಿರುವುದಂತೂ ಹೌದು’ ಎಂದು ಕಾಂಗ್ರೆಸ್​ನ ಪ್ರಮುಖ ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

 

ಬೆಳಗಾವಿ ನೆಪ

ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಕ್ಕಿದ್ದರೂ, ಆಪ್ತರನ್ನು ಕಡೆಗಣಿಸಿರುವ ಬಗ್ಗೆ ಆರಂಭದಿಂದಲೂ ರಮೇಶ್ ಜಾರಕಿಹೊಳಿಗೆ ಅಸಮಾಧಾನ ಇತ್ತು. ಆದರೆ ಬಿಜೆಪಿಗೆ ಬೆಂಬಲ ನೀಡಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿಸಲೇಬೇಕೆಂಬ ಲೆಕ್ಕಾಚಾರಗಳ ಬಗ್ಗೆ ಅನೇಕರಿಗೆ ಸ್ಪಷ್ಟತೆ ಇಲ್ಲ. ರಾಜ್ಯ ಕಾಂಗ್ರೆಸ್​ನ ಕೆಲ ನಾಯಕರು ಮತ್ತು ಹೈಕಮಾಂಡ್​ಗೆ ಬಿಸಿ ಮುಟ್ಟಿಸುವ ಉದ್ದೇಶದಿಂದಲೇ ಈ ‘ಬೆದರಿಕೆ ತಂತ್ರ’ ಅನುಸರಿಸುತ್ತಿದ್ದಾರೆ ಎಂದೂ ಸಂಶಯಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಬೆಳಗಾವಿ ರಾಜಕಾರಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪ್ರಭಾವಲಯ ಹೆಚ್ಚಿಸಿಕೊಳ್ಳುತ್ತಿರುವುದು ಜಾರಕಿಹೊಳಿ ಸಹೋದರರ ಅಸಮಾಧಾನದ ಕಟ್ಟೆ ಒಡೆಯುವಂತೆ ಮಾಡಿದೆ. ಇದನ್ನೇ ನೆಪವಾಗಿಟ್ಟು, 10-15 ಆಪ್ತ ಶಾಸಕರನ್ನು ಕಟ್ಟಿಕೊಂಡು ಮಹಾರಾಷ್ಟ್ರಕ್ಕೆ ತೆರಳುವ ಯೋಚನೆ ಮಾಡುತ್ತಿದ್ದಾರೆನ್ನಲಾಗಿದೆ.