More

    ಕರ್ನಾಟಕ ಸೊನ್ನಲಿಗೆ ಚಿಕ್ಕಮಗಳೂರಿನ ಶ್ರೀಕ್ಷೇತ್ರ ಸೊಲ್ಲಾಪುರ

    ಇಂದು ಗುರುಸಿದ್ಧರಾಮೇಶ್ವರ ಜಯಂತಿ

    ನಾಡಿನ ಸಾಮಾನ್ಯ ಜನರನ್ನು ಧಾರ್ವಿುಕವಾಗಿ ದ್ವಂದ್ವತೆ, ಭಯ, ವಿಹ್ವಲತೆ, ಆಯೋಮಯ ಪರಿಸ್ಥಿತಿಗೆ ದೂಡಿದ್ದ ಕಾಲದಲ್ಲಿ ಅದನ್ನು ತಹಬದಿಗೆ ಬರಲು ಕಾರ್ಗತ್ತಲಲ್ಲಿ ಮೂಡಿಬಂದ ತುಂಬು ಚಂದಿರನಂತೆ ಕಾರಣರಾದವರು ಶಿವಯೋಗಿ, ಕರ್ಮಯೋಗಿ ಗುರು ಸಿದ್ಧರಾಮರು.

    ಕರ್ನಾಟಕದ ಇತಿಹಾಸದ ಪುಟಗಳಲ್ಲಿ 12ನೇ ಶತಮಾನದ ಅಂತ್ಯದಲ್ಲಿ ನಡೆದ ಸಾಮಾಜಿಕ ಚಳವಳಿಯು ತನ್ನ ರ್ತಾಕ ರೂಪ ತಳೆದಿದ್ದು ‘ಕಲ್ಯಾಣ ಕ್ರಾಂತಿ’ ಎಂಬ ಹೆಸರಿನಲ್ಲಿ. ಅದರ ರೂವಾರಿಗಳು ಶರಣರು. ಹರಿಜನನಿಂದ ಹಾರವನವರೆಗೆ ಎಲ್ಲರೂ ಒಟ್ಟಿಗೆ ಕುಳಿತ ಜಾಗವೇ ‘ಅನುಭವ ಮಂಟಪ’. ಅನುಭಾವಿಗಳಿಗೆ ದಿಕ್ಸೂಚಿಯಾದವರೇ ಶರಣ ಅಲ್ಲಮಪ್ರಭುಗಳು. ಆಶ್ರಯದಾತರು ಕಲಚೂರ್ಯ ದೊರೆ ಬಿಜ್ಜಳನ ಪ್ರಧಾನ ಮಂತ್ರಿ ಗುರು ಬಸವಣ್ಣನವರು. ಅಂತರ್ಜಾತಿ ವಿವಾಹ, ಎಳೆಯೂಟೆ ಶಿಕ್ಷೆಗಳಂಥ ಸಂಘರ್ಷದೊಂದಿಗೆ ಅಂತ್ಯಗೊಂಡ ಶರಣ ಚಳವಳಿಯ 770 ಶರಣರು ನಾಡಿನಾದ್ಯಂತ ಚದುರಿಹೋದ ಸಂದರ್ಭವದು. ನಾಡಿನ ಸಾಮಾನ್ಯ ಜನರನ್ನು ಧಾರ್ವಿುಕವಾಗಿ ದ್ವಂದ್ವತೆ, ಭಯ, ವಿಹ್ವಲತೆ, ಆಯೋಮಯ ಪರಿಸ್ಥಿತಿಗೆ ದೂಡಿತ್ತು. ಈ ಪರಿಸ್ಥಿತಿ ತಹಬದಿಗೆ ಬರಲು ಕಾರ್ಗತ್ತಲಲ್ಲಿ ಮೂಡಿಬಂದ ತುಂಬು ಚಂದಿರನಂತೆ ಕಾರಣರಾದವರು ಶಿವಯೋಗಿ, ಕರ್ಮಯೋಗಿ ಗುರು ಸಿದ್ಧರಾಮರು.

    ಜನರ ಧಾರ್ವಿುಕ ಹಸಿವನ್ನು ತಣಿಸಲು ಉತ್ತರದ ಗುಜರಾತ್ (ದ್ವಾರಕ)ನಿಂದ ಹಿಡಿದು, ದಕ್ಷಿಣದ ತಮಿಳುನಾಡು (ವೆಲ್ಲೂರು), ಪೂರ್ವದ ಆಂಧ್ರ (ಶ್ರೀಶೈಲ)ದಿಂದ ಪಶ್ಚಿಮದ ಗೋವಾ(ಬಲ್ಲರಿ) ವರೆಗೂ ಸಂಚರಿಸಿ ಅನುಷ್ಠಾನಗೈದ ಸ್ಥಳಗಳೇ ಈಗ ಗದ್ದುಗೆಗಳೆಂದು ಪೂಜಿಸಲ್ಪಡುತ್ತಿವೆ. ಕರ್ನಾಟಕದ ಮಟ್ಟಿಗೆ ಗುರು ಸಿದ್ಧರಾಮರನ್ನು ಎಪ್ಪತ್ತೇಳೂರು ಅಯ್ಯನವರೆಂದು ಸ್ತುತಿಸಿ ಹಾಡುವುದು ಜಾನಪದ. ಬಹುಶಃ 13ನೇ ಶತಮಾನದ ಆರಂಭದಲ್ಲಿದ್ದ 77 ಗದ್ದುಗೆಗಳಲ್ಲಿ 9ನೇ ಸ್ಥಾನ ಸೊಲ್ಲಾಪುರ ಕ್ಷೇತ್ರಕ್ಕಿದೆ. ಪ್ರಸ್ತುತ ಭಾರತದಾದ್ಯಂತ 174 ಗದ್ದುಗೆ ಇರುವುದಾಗಿ ತಿಳಿದು ಬಂದಿದೆ. ಗುರು ಸಿದ್ಧರಾಮರ ಅನುಯಾಯಿಗಳು ಇರುವೆಡೆಯೆಲ್ಲ ಗದ್ದುಗೆಗಳಾಗಿ ಪೂಜೆಗೊಳ್ಳುತ್ತಿರುವುದು ಇಂದಿಗೂ ಸಿದ್ಧರಾಮರ ಪ್ರಸ್ತುತಗೆ ಸಾಕ್ಷಿ. ಸಿದ್ಧರಾಮರ ಹೆಸರಿನಲ್ಲಿ ಸುಮಾರು 30 ಶಾಸನ ದೊರಕಿವೆ. ಶರಣ ಪರಂಪರೆಯಲ್ಲಿ ಇಷ್ಟೊಂದು ಶಾಸನ ಬೇರೆ ಯಾರಿಗೂ ಇಲ್ಲದಿರುವುದು ಸಿದ್ಧರಾಮರ ಸಾಮಾಜಿಕ ಬದ್ಧತೆ ಸೂಚಿಸುತ್ತದೆ. ಪ್ರಾಚೀನ ನೊಳಂಬರು, ಶೈವ ಕ್ಷತ್ರೀಯರು, ಅವರ ಆಳ್ವಿಕೆಯ ನೊಳಂಬವಾಡಿ 32 ಸಾವಿರ ಇಂದಿನ ತುಳುನಾಡಿನ ಧರ್ಮಪುರಿ ಜಿಲ್ಲೆಯ ಕಂಚಿಯಿಂದ ಹಿಡಿದು ಕರ್ನಾಟಕದ ಬಳ್ಳಾರಿವರೆಗಿನ (ಕಾಲ 7 ಶತಮಾನದಿಂದ 11ನೇ ಶತಮಾನ) ರಾಜ್ಯದ ರಾಜಧಾನಿ ಇಂದಿನ ಆಂಧ್ರಪ್ರದೇಶದ ಮಡಕಸಿರಾ ತಾಲೂಕಿನ ಹೆಂಜೇರು (ಹೇಮಾವತಿ) ಯಲ್ಲಿ ಮತ್ತು ಬಳ್ಳಾರಿ ಜಿಲ್ಲೆ ಕಂಪ್ಲಿಯ ಬಳಿಯ ಬಾಗಳಿಯಲ್ಲಿ ನೊಳಂಬೇಶ್ವರ ಹೆಸರಿನ ಸ್ಥಾವರ ಲಿಂಗಗಳನ್ನು ಪೂಜಿಸಿ ಆರಾಧಿಸಿರುವುದು ಇಂದಿಗೂ ಕಂಡುಬರುತ್ತದೆ. 12ನೇ ಶತಮಾನದ ಅಂತ್ಯದಲ್ಲಿ ಕಲ್ಯಾಣದ ಚಾಲುಕ್ಯರೊಂದಿಗೆ ನೊಳಂಬರು ವೈವಾಹಿಕ ಸಂಬಂಧ ಹೊಂದಿದ ಪರಿಣಾಮ (ನೊಳಂಬ ಕನ್ಯೆ ಚಾಮಲಾದೇಯನ್ನು ಸೊನ್ನಲಿಗೆಯ ಅರಸ ನನ್ನಿದೇವನೊಂದಿಗೆ ವಿವಾಹವಾಗಿತ್ತು) ಗುರು ಸಿದ್ಧರಾಮರು ಶ್ರೀಶೈಲದಿಂದ ಸೊನ್ನಲಿಗೆ ಆಗಮಿಸಿದ ಸಂದರ್ಭದಲ್ಲಿ ರಾಣಿ ಚಾಮಲಾದೇವಿ ಸೊಲಾಪುರದಲ್ಲಿ ದೇವಾಲಯ ನಿರ್ವಣಕ್ಕೆ ಅಗತ್ಯ ದಾನ ನೀಡಿ ಅವರಿಂದ ಆಶೀರ್ವಾದ ಪಡೆಯುತ್ತಾರೆ. ಚಾಲಮಾದೇವಿಯು ತನ್ನ 7 ಜನ ಸೋದರರು ಗುರು ಸಿದ್ಧರಾಮರನ್ನು ಗುರುವಾಗಿ ಸ್ವೀಕರಿಸಲು ಕಾರಣವಾಗುತ್ತಾಳೆ.

    ಅರ್ವಾಚೀನ ನೊಳಂಬರಾದ ಈ 7 ಜನ ತುರುಬಿನ ಮಾರೇಗೌಡ ಹಾಗೂ 6 ಸಹೋದರರು ಸೊನ್ನಲಿಗೆ ಸಿದ್ಧರಾಮೇಶ್ವರರ ಆಶೀರ್ವಾದದಿಂದ ನಾಗಮುರಿ ಎಂಬ ಆಯುಧ ಪಡೆದು 7 ಬಂಡಿ ದ್ರವ್ಯ ಪಡೆದು ತನ್ನ ಪೂರ್ವಜರಾದ ನೊಳಂಬರು ಆಳಿದ ದಕ್ಷಿಣಭಾಗಕ್ಕೆ ಪ್ರಯಾಣಿಸುತ್ತಾರೆ. ಸಾಗಿಬಂದು ತುಂಗವಟಿ ಎಂಬ ಪಟ್ಟಣಕ್ಕೆ ಬರುತ್ತಾರೆ. ಅಲ್ಲಿ ಕೆಲ ಕಾಲ ತಂಗಿದ್ದು ಆತಿಥ್ಯ ಸ್ವೀಕರಿಸಿದ ನಂತರ ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಕ್ರಿ.ಶ.1346ರಲ್ಲಿ ಏಳೂ ಜನ ಸೇರಿ ಪ್ರಪ್ರಥಮವಾಗಿ ನಗರ ನಿರ್ಮಾಣ ಮಾಡಿ ಕೋಟೆ ಕಟ್ಟಿಸಿ ಅದಕ್ಕೆ ಕೋರಾ ಎಂಬುದಾಗಿ ಹೆಸರಿಟ್ಟರು. ಕೆಲ ಕಾಲದ ನಂತರ ಈ ಸಹೋದರರು ಸ್ವತಂತ್ರವಾಗಿ ರಾಜ್ಯ ಕಟ್ಟಿ ಆಳಬೇಕೆಂಬ ಆಕಾಂಕ್ಷೆಯಿಂದ ನಾಲ್ಕೂ ದಿಕ್ಕುಗಳಲ್ಲಿ ಮುಂದುವರಿದು ಬಿಜ್ಜಾವರ-ಮಧುಗಿರಿ ತಾಲೂಕು, ಗುಬ್ಬಿಹೊಸಳ್ಳಿ, ಚೇಳೂರು, ಬಿದರೆ -ಗುಬ್ಬಿ ತಾಲೂಕು, ತೆರೆಯೂರು -ಶಿರಾ ತಾಲೂಕು, ಎಣ್ಣೆಗೆರೆ -ಚಿಕ್ಕನಾಯಕಹಳ್ಳಿ ತಾಲೂಕುಗಳಲ್ಲಿ ಏಳು ನಾಡುಗಳನ್ನು ಕಟ್ಟಿಕೊಳ್ಳುತ್ತಾರೆ. ಏಳು ನಾಡುಗಳ ಒಕ್ಕೂಟದ ಸ್ಥಾಪನೆ ನಂತರ ಗುರು ಸಿದ್ಧರಾಮೇಶ್ವರರು ಕ್ರಿ.ಶ. 1160ರಿಂದ 1230ರ ಅವಧಿಯಲ್ಲಿ ನೊಳಂಬ ನಾಡಿನ ಸುಮಾರು 27 ಕೇಂದ್ರಗಳಲ್ಲಿ ಖುದ್ದು ಉಪಸ್ಥಿತರಿದ್ದು ಅನುಷ್ಠಾನಗೈದ ಗದ್ದುಗೆಗಳಲ್ಲಿ ಸೊಲ್ಲಾಪುರ ಸೇರಿದೆ. ಸಿದ್ಧರಾಮರು ಸೊಲ್ಲಾಪುರಕ್ಕೆ ಆಗಮಿಸಿರುವುದು ಏಳು ನಾಡು (ಇಂದಿನ ಯಳನಾಡು) ಭಾಗದಿಂದ ಮಹಾಶಿವಶರಣರಾದ ಅಕ್ಕನಾಗಮ್ಮ, ನುಲಿಯ ಚನ್ನಯ್ಯ ಮುಂತಾದವರು (ಇವರ ಗದ್ದುಗೆಗಳು ಸೊಲ್ಲಾಪುರ ಸನಿಹದ ತರೀಕೆರೆಯ ಆಸುಪಾಸಿನಲ್ಲಿವೆ) ಹಾಗೂ ಸಿದ್ಧರಾಮರ ಶಿಷ್ಯರಾದ ಕ್ರಿಯಾಮೂರ್ತಿಗಂಗಪ್ಪ ದೇವರು ಮತ್ತು ಏಳು ನಾಡಗೌಡ ಪ್ರಭುಗಳ ವಂಶದ ಶಿಷ್ಯ ಬೀಸಾಡಿಗೌಡರು ಸಹ ಬಂದಿರುವುದು ಕಂಡುಬರುತ್ತದೆ. ಸಿದ್ಧರಾಮರು ಸೊಲ್ಲಾಪುರಕ್ಕೆ ಬಂದು ಹೋದ ನಂತರ ಈ ಗುರುಶಿಷ್ಯರು ಇಲ್ಲಿ ನೆಲೆನಿಲ್ಲುತ್ತಾರೆ. ತಮ್ಮ ಪೂರ್ವಜರ ಮೂಲ, ಸಾಗಿ ಬಂದ ದಾರಿ, ಸಿದ್ಧರಾಮರ ಅನುಗ್ರಹ ಈ ಎಲ್ಲ ಅಂಶಗಳನ್ನು ಉಳಿಸಿಕೊಳ್ಳಬೇಕೆಂಬ ಕುರುಹಾಗಿ ಸೊಲ್ಲಾಪುರ ಎಂಬುದಾಗಿ ಈ ಸ್ಥಳಕ್ಕೆ ಹೆಸರಿಡುತ್ತಾರೆ. ಹಾಲು ಮತಸ್ಥರ ಸಹಕಾರದಿಂದ ಗದ್ದುಗೆ ನಿರ್ಮಾಣ ಮಾಡಿ ಗುರು ಶಿಷ್ಯರೀರ್ವರು ಒಟ್ಟಿಗೆ ನಿಜಾನಂದಗೈದಿರುವ ಗದ್ದುಗೆ ದೇವಸ್ಥಾನದ ಪ್ರಾಂಗಣದಲ್ಲಿದೆ. ಇಂದಿಗೂ ಪ್ರತಿ ಶ್ರಾವಣ ಮಾಸದ ಚೌತಿಯಂದು ವಂಶಸ್ಥರಿಂದ ಹಿರಿಯರು ಪೂಜೆಗೊಳ್ಳುತ್ತಿರುವುದು ಅನುಚಾನವಾಗಿ ನಡೆದುಬಂದಿದೆ.

    ಈ ಹಿನ್ನೆಲೆಯಲ್ಲಿ ಸೊಲ್ಲಾಪುರದ ದೇವಸ್ಥಾನ ದಕ್ಷಿಣದಲ್ಲಿರುವ ರಾಜಗೋಪುರ (ಉಪ್ಪರಿಗೆ) ಕುರಿತಂತೆ ಊರಿನ ಹಿರಿಯರ ಬಾಯಿಂದ ಬಾಯಿಗೆ ಬಂದ ಮಾಹಿತಿಯಂತೆ ಹೊಯ್ಸಳ ದೊರೆ ವೀರಬಲ್ಲಾಳನ ಅವಧಿಯ ನಿರ್ಮಾಣ ಇದಾಗಿದೆ. ಬಹುಶಃ ದೊರೆ ಬಲ್ಲಾಳನ ಮಂತ್ರಿ ಕುಮಾರ ಪದ್ಮರಸ ಹಾಗೂ ರಾಘವಾಂಕರ (ತನ್ನ ಕಾವ್ಯದ ನಾಯಕರಾದ ಗುರು ಸಿದ್ಧರಾಮರ ಗದ್ದುಗೆಯಾಗಿರುವ ಕಾರಣ) ಮಿತ್ರತ್ವದ ಫಲಶೃತಿಯಿಂದ 13ನೇ ಶತಮಾನದ ಅಂತ್ಯದಲ್ಲಿ ಆಗಿರಬಹುದಾದ ನಿರ್ವಣವು ಬಹುಪಾಲು ಹೊಯ್ಸಳ ಶೈಲಿ ಹೊಂದಿರುವುದು ಪುಷ್ಠಿನೀಡುತ್ತದೆ.

    ಸಿದ್ಧರಾಮೇಗೌಡ ಸೊಲ್ಲಾಪುರ (ಸೊ.ಗ.ಸಿ.ಗ)

    (ಲೇಖಕರು: ನಿವೃತ್ತ ಸರ್ಕಾರಿ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts