ಖಡಕ್ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ವಿಧಿವಶ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಕಾರ್ಯನಿರ್ವಹಣೆಯಿಂದ ಹೆಸರು ಮಾಡಿದ್ದ ಕೆ. ಮಧುಕರ್ ಶೆಟ್ಟಿ (47) ಇನ್ನಿಲ್ಲ. ಎಚ್1ಎನ್1 ಕಾಯಿಲೆಯಿಂದ ಶ್ವಾಸಕೋಶಕ್ಕೆ ಸೋಂಕು ತಗುಲಿ ಹೈದರಾಬಾದ್​ನ ಕಾಂಟಿನೆಂಟಲ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದರು.

ಅವರು ಒಂದು ವಾರದಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅವರಿಗೆ ಹೃದಯ, ಶ್ವಾಸಕೋಶ ಆಪರೇಷನ್ ನಡೆಸಲಾಗಿತ್ತು. ಇದರಿಂದ ಕೆಲಹೊತ್ತು ಚೇತರಿಸಿಕೊಂಡಿದ್ದರೂ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರ ಹೃದಯ ಕವಾಟದಲ್ಲಿ ಹೆಚ್ಚು ಹಾನಿಯಾದ್ದರಿಂದ ಇತರ ಅಂಗಗಳಿಗೆ ರಕ್ತಚಲನೆ ಸರಿಯಾಗಿ ಆಗದೆ ಮೃತಪಟ್ಟಿದ್ದಾರೆ. ಕರ್ನಾಟಕ ಸರ್ಕಾರ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ಹೈದರಾಬಾದ್​ಗೆ ಕಳಿಸಿತ್ತು.

ಮಧುಕರ್ ಶೆಟ್ಟಿ ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ (ಜೆಎನ್​ಯುು) ಸಮಾಜಶಾಸ್ತ್ರದಲ್ಲಿ ಎಂಎ ಮುಗಿಸಿ 1999ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ನಕ್ಸಲ್ ನಿಗ್ರಹ ಪಡೆ ಎಸ್​ಪಿಯಾಗಿ, ಚಿಕ್ಕಮಗಳೂರು ಜಿಲ್ಲೆ ಎಸ್​ಪಿಯಾಗಿ ಕಾರ್ಯನಿರ್ವಹಿಸಿ, ನಂತರ ಲೋಕಾಯುಕ್ತ ಎಸ್​ಪಿ ಆಗಿದ್ದರು. ಲೋಕಾಯುಕ್ತದಲ್ಲಿದ್ದಾಗ ಕೋಲಾರ ಮತ್ತು ಚಾಮರಾಜನಗರ ಎಸ್​ಪಿಗಳು ಲಂಚ ಸ್ವೀಕರಿಸುವಾಗ ರೆಡ್​ಹ್ಯಾಂಡ್ ಆಗಿ ಬಂಧಿಸಿ ಜೈಲಿಗೆ ಕಳಿಸಿದ್ದರು.

ತಾರತಮ್ಯ ನೀತಿ ಅನುಸರಿಸುತ್ತಾರೆ ಎಂದು ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ ವಿರುದ್ಧ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿ 2011ರಲ್ಲಿ ಉನ್ನತ ವ್ಯಾಸಂಗದ ರಜೆ ಮೇಲೆ ತೆರಳಿದ್ದರು. 5 ವರ್ಷಗಳ ಕಾಲ ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ ರಾಜ್ಯಕ್ಕೆ ಮರಳಿ ಮೈಸೂರಿನ ರಾಜ್ಯ ಪೊಲೀಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಡಿಐಜಿಯಾಗಿ ಬಡ್ತಿ ಪಡೆದ ಅವರು ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೇಮಕಗೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಮಧುಕರ ಶೆಟ್ಟಿ ಹೈದರಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಚಿಕ್ಕಮಗಳೂರು ಎಸ್​ಪಿ ಆಗಿದ್ದಾಗ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತು, ಅನ್ಯಾಯವಾದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದರು. ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಆ ಹಳ್ಳಿಗೆ ‘ಗುಪ್ತಶೆಟ್ಟಿ’ ಹಳ್ಳಿ ಎಂದೇ ಹೆಸರಿಡಲಾಗಿತ್ತು. ಇಂದಿಗೂ ಆ ಹಳ್ಳಿಯ ನಿವಾಸಿಗಳು ಮಧುಕರ್ ಶೆಟ್ಟಿ ಮಾಡಿದ ಕೆಲಸ ನೆನೆಯುತ್ತಾರೆ.

ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಪುತ್ರ

ಖ್ಯಾತ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ 2ನೇ ಪುತ್ರ ಡಾ. ಮಧುಕರ್ ಶೆಟ್ಟಿ. ಕುಂದಾಪುರ ತಾಲೂಕಿನ ವಡ್ಡರ್ಸೆಯಲ್ಲಿ ಜನನ, ಬೆಂಗಳೂರು-ಮೈಸೂರಿನಲ್ಲಿ ವಿದ್ಯಾಭ್ಯಾಸ. ವಡ್ಡರ್ಸೆಯವರು ಕುಂದಾಪುರದ ಯಡಾಡಿ-ಮತ್ಯಾಡಿಯಲ್ಲಿ ಮನೆ ಮಾಡಿದ ಬಳಿಕ ಮಧುಕರ್ ಅಲ್ಲಿಗೆ ಬಂದು ಹೋಗುತ್ತಿದ್ದು, ವಡ್ಡರ್ಸೆ ನಿಧನರಾದ ಬಳಿಕವೂ ಊರಿನ ಜತೆ ಸಂಪರ್ಕ ಇಟ್ಟುಕೊಂಡಿದ್ದರು. ತಂದೆಯ ಹೆಸರನ್ನು ಚಿರಸ್ಥಾಯಿ ಆಗಿಸಲು ಊರಿನಲ್ಲಿ ವಡ್ಡರ್ಸೆ ಪ್ರತಿಷ್ಠಾನ ಆರಂಭಿಸಿ ಪರಿಸರ-ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಸಹೋದರರಾದ ಸುಧಾಕರ, ಮುರಳೀಧರ ಮತ್ತು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಮಧುಕರ್ ಶೆಟ್ಟಿ ಶೀಘ್ರ ಗುಣಮುಖರಾಗಲಿ ಎಂದು ವಡ್ಡರ್ಸೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಊರಿನವರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.


Leave a Reply

Your email address will not be published. Required fields are marked *