ಲೋಕಸಭೆ ಕ್ಷೇತ್ರಗಳಿಗೆ ಬಿಜೆಪಿಯ ಪ್ರಭಾರಿ, ಸಂಚಾಲಕರ ನೇಮಕ: ಶ್ರೀರಾಮುಲುಗೆ ಕೈತಪ್ಪಿದ ಬಳ್ಳಾರಿ, ಈಶ್ವರಪ್ಪಗೆ ಮೈಸೂರು

ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನು ಆರು ತಿಂಗಳಿದೆ ಎನ್ನುವಾಗಲೇ ಬಿಜೆಪಿ ಭರ್ಜರಿ ಸಿದ್ಧತೆ ಆರಂಭಿಸಿದೆ. ರಾಜ್ಯದ ಪ್ರತಿ ಲೋಕಸಭೆ ಕ್ಷೇತ್ರಗಳಿಗೆ ಪ್ರಭಾರಿಗಳನ್ನು ಮತ್ತು ಸಂಚಾಲಕರನ್ನು ನೇಮಿಸಿದೆ.

ಶ್ರೀರಾಮುಲು ಅವರಿಗೆ ಬಳ್ಳಾರಿ ಉಸ್ತುವಾರಿ ಕೈತಪ್ಪಿರುವುದು, ಈಶ್ವರಪ್ಪ ಅವರಿಗೆ ಶಿವಮೊಗ್ಗ ಬದಲಿಗೆ ಮೈಸೂರು ಉಸ್ತುವಾರಿ ನೀಡಿರುವುದು, ಜಗದೀಶ್​ ಶೆಟ್ಟರ್​ ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಿರುವುದು ಈ ಪಟ್ಟಿಯಲ್ಲಿನ ವಿಶೇಷತೆ. ಅಲ್ಲದೆ, ಸಿ.ಟಿ ರವಿ ಅವರಿಗೆ ಚಿಕ್ಕಮಗಳೂರು ಉಸ್ತುವಾರಿ ಬದಲಿಗೆ ಹಾಸನದ ಉಸ್ತುವಾರಿ ನೀಡಿರುವುದೂ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಕಳೆದ ಎರಡು ಚುನಾವಣೆಯಿಂದಲೂ ಬಳ್ಳಾರಿಯ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀರಾಮುಲು ಅವರಿಗೆ ಈ ಬಾರಿ ಕೊಪ್ಪಳದ ಪ್ರಭಾರಿ ನೀಡಲಾಗಿದೆ. ಈ ಮೂಲಕ ಬಳ್ಳಾರಿಯಲ್ಲಿ ಶ್ರೀರಾಮುಲು ಅವರ ವರ್ಚಸ್ಸು ಕಡಿಮೆಯಾಯಿತೇ ಎಂಬ ಪ್ರಶ್ನೆ ಉದ್ಭವವಾಗಲು ಈ ಪಟ್ಟಿ ಕಾರಣವಾಗಿದೆ. ಆದರೆ, ಅವರ ಜಾಗಕ್ಕೆ ಜಗದೀಶ್​ ಶೆಟ್ಟರ್​ ಅವರನ್ನು ನಿಯೋಜಿಸಲಾಗಿದ್ದು, ಉಪ ಚುನಾವಣೆಯಲ್ಲಿ ಕೈ ಕೊಟ್ಟಿದ್ದ ಲಿಂಗಾಯತ ಮತಗಳನ್ನು ಸೆಳೆಯುವುದು ಈ ತಂತ್ರದ ಉದ್ದೇಶ ಎಂದೂ ಹೇಳಲಾಗುತ್ತಿದೆ.

ಇನ್ನೊಂದೆಡೆ, ಈಶ್ವರಪ್ಪ ಅವರಿಗೆ ಶಿವಮೊಗ್ಗ ಬದಲಿಗೆ ಮೈಸೂರು ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಕಳೆದ ಉಪ ಚುನಾವಣೆಯಲ್ಲಿ ಕ್ಷೇತ್ರದ ಉಸ್ತುವಾರಿ ವಹಿಸಿದ್ದಿದ್ದು ಈಶ್ವರಪ್ಪ. ಆದರೂ, ಈಶ್ವರಪ್ಪ ಅವರ ವಿರುದ್ಧ ಜಿಲ್ಲೆಯಲ್ಲಿ ಕೇಳಿ ಬರಬಹುದಾದ ಸಂಭಾವ್ಯ ವಿರೋಧಗಳನ್ನು ತಡೆಯುವ ಸಲುವಾಗಿ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಪ್ರಭಾರಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ನೇಮಕವಾಗಿದ್ದಾರೆ.

ಇನ್ನು ಚಿಕ್ಕಮಗಳೂರಿನ ಪ್ರಮುಖ ಬಿಜೆಪಿ ನಾಯಕ ಎನಿಸಿಕೊಂಡಿರುವ ಸಿ.ಟಿ ರವಿ ಅವರಿಗೆ ಚಿಕ್ಕಮಗಳೂರು ಬದಲಿಗೆ ಹಾಸನದ ಪ್ರಭಾರಿ ನೀಡಿರುವುದೂ ಅಚ್ಚರಿಗೆ ಕಾರಣವಾಗಿದೆ.

ಪೂರ್ಣ ಪಟ್ಟಿ ಇಲ್ಲಿದೆ ನೋಡಿ

Leave a Reply

Your email address will not be published. Required fields are marked *