ಪ್ರತ್ಯೇಕ ರಾಜ್ಯದ ಕೂಗು: ನಾಳಿನ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಆರೋಪಿಸಿ ನಾಳೆ ನಡೆಸಲು ಉದ್ದೇಶಿಸಿರುವ ಉತ್ತರ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನಾ ಹೋರಾಟ ಸಮಿತಿಗಳು ಭಿನ್ನ ನಿಲುವು ತಳೆದಿವೆ.

ಸುರಪುರದಲ್ಲಿ ಹೋರಾಟ

ಉತ್ತರ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ ನಾಳೆ ಸುರಪುರದಲ್ಲಿ ಹೋರಾಟ ಮಾಡುತ್ತೇವೆ ಎಂದು ದಿಗ್ವಿಜಯ ನ್ಯೂಸ್‌ಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಯಾಧ್ಯಕ್ಷ ಸುರೇಶ ಸಜ್ಜನ ಹೇಳಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆ ನಂತರ ಹೋರಾಟ ಮಾಡಿ ಉತ್ತರ ಕರ್ನಾಟಕ ಬಂದ್ ಗೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬೀದರ್‌ನಲ್ಲಿ ರೈತ ಸಂಘದಿಂದ ಬೆಂಬಲ

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಹೈದ್ರಾಬಾದ್ ಕರ್ನಾಟಕ ಭಾಗ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಅಭಿವೃದ್ಧಿಗಾಗಿ ಬೀದರ್ ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲಿಸುತ್ತದೆ. ಪ್ರತ್ಯೇಕ ರಾಜ್ಯಕ್ಕಾಗಿ ಕರೆ ನೀಡಿರುವ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ದಿಗ್ವಿಜಯ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.

ಮಹದಾಯಿ ಹೋರಾಟಗಾರರಿಂದ ಬೆಂಬಲ ಇಲ್ಲ

ನವಲಗುಂದ ಮಹದಾಯಿ ಹೋರಾಟಗಾರರಿಂದ ನಾಳೆಯ ಬಂದ್‌ಗೆ ಬೆಂಬಲ ಇಲ್ಲ ಎಂದು ನವಲಗುಂದ ಮಹದಾಯಿ ಹೋರಾಟ ಒಕ್ಕೂಟ ಸಮಿತಿ ಕಾರ್ಯದರ್ಶಿ ಸುಭಾಸಚಂದ್ರಗೌಡ ಧಾರವಾಡದಲ್ಲಿ ಹೇಳಿದ್ದಾರೆ. ನಾವು ಈ ಹಿಂದೆಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆಗೆ ಬೆಂಬಲವಿದೆ. ಆದರೆ, ಬಂದ್‌ಗೆ ಬೆಂಬಲ ಕೊಡುವುದಿಲ್ಲ. ಉಕ ಪ್ರತ್ಯೇಕ ರಾಜ್ಯ ಬೇಡಿಕೆ ಬೆಂಬಲಿಸಿ ಸಾಂಕೇತಿಕವಾಗಿ ಮಾತ್ರ ನಾಳೆ ನವಲಗುಂದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಧಾರವಾಡದಲ್ಲಿ ಶಾಲಾ-ಕಾಲೇಜು ರಜೆ ಇಲ್ಲ

ಉತ್ತರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಆ. 2ರಂದು ಜಿಲ್ಲೆಯಲ್ಲಿ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ. ಎಲ್ಲ ಸರ್ಕಾರಿ ಕಚೇರಿಗಳು ನಾಳೆ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲು ಎಸ್ಪಿಗೆ ನಿರ್ದೇಶನ ನೀಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಹೇಳಿದ್ದಾರೆ.

ಹೈದರಾಬಾದ್‌ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕು

ಉತ್ತರ ಕರ್ನಾಟಕಕ್ಕಿಂತ ಹೈದ್ರಾಬಾದ್ – ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ದಾಳಿಂಬೆ ಬೆಳೆಗಾರರ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಕೊಪ್ಪಳದಲ್ಲಿ ತಿಳಿಸಿದ್ದಾರೆ. ಉತ್ತರ ಕರ್ನಾಟಕಕ್ಕಿಂತ ಹೈದ್ರಾಬಾದ್ ಕರ್ನಾಟಕ ಹಿಂದುಳಿದೆ. ನಾವು ಹೈದ್ರಾಬಾದ್-ಕರ್ನಾಟಕ ಪ್ರತ್ಯೇಕತೆಗೆ ಹೋರಾಟ ಆರಂಭಿಸುತ್ತೇವೆ. ಗೋವಾ ಮಾದರಿಯಲ್ಲಿ ಹೈ-ಕ ಪ್ರತ್ಯೇಕವಾಗಬೇಕಿದೆ. ನಾಳೆ ನಡೆಯುವ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದಾರೆ.

ಬಂದ್​ಗೆ ಅನುಮತಿ ನೀಡಿಲ್ಲ

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಕೆಲ ಸಂಘಟನೆಗಳಿಂದ ನೀಡಲಾಗಿರುವ ಬಂದ್‌ ನಡೆಸಲು ನಾಳೆ ಅವಕಾಶ ಕೊಟ್ಟಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಅವಳಿನಗರ ಪೊಲೀಸ್ ಆಯುಕ್ತ ಎಂ.ಎನ್‌ ನಾಗರಾಜ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಂದ್ ಮಾಡುವುದು ಅಪರಾಧ. ಹೋರಾಟಗಾರರ ಸಭೆ ನಡೆಸಿ ಮಾತನಾಡಿದ್ದೇನೆ. ಒತ್ತಾಯ ಪೂರ್ವಕ ಬಂದ್ ಮಾಡದಂತೆ ಸೂಚಿಸಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇವಲ ಚನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ನೀಡಲು ಅನುಮತಿಸಿದ್ದೇನೆ ಎಂದು ತಿಳಿಸಿದರು.

ಒತ್ತಾಯ ಪೂರ್ವಕವಾಗಿ ಬಂದ್‌ ಮಾಡಿಸುವ ಪ್ರಯತ್ನ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಹಿತಕರ ಘಟನೆ ನಡೆಯದಂತೆ ಕಾನೂನು ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತವೆ ಎಂದರು.

ಗದಗದಲ್ಲಿ ಬಂದ್‌ಗೆ ಬೆಂಬಲ ಇಲ್ಲ

ಬಂದ್ ಕರೆಗೆ ಜಿಲ್ಲೆಯಲ್ಲಿ ಬೆಂಬಲವಿಲ್ಲ. ಬಂದ್ ಹಿನ್ನೆಲೆ ಶಾಲಾ ‌ಕಾಲೇಜುಗಳಿಗೆ ರಜೆ ‌ಇಲ್ಲ ಎಂದು ಎಸ್‌ಪಿ ಸಂತೋಷ್ ಬಾಬು ಸ್ಪಷ್ಟಪಡಿಸಿದ್ದಾರೆ.