
ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಗುರುವಾರ ಬಂದ್ಗೆ ಕರೆ ನೀಡಿವೆ. ಅದರ ಜತೆಗೆ ಸಾರಿಗೆ, ಕಾರ್ವಿುಕ ಕ್ಷೇತ್ರದ ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದ್ದು, ರಾಜ್ಯದೆಲ್ಲೆಡೆ ಬಂದ್ ಪರಿಣಾಮ ಕಡಿಮೆ ಇರಲಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸೇರಿ ಹಲವು ಅಂಶಗಳಿರುವ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಕೆಲವು ಕನ್ನಡ ಪರ ಸಂಘಟನೆಗಳು 2019ರ ನ. 11ರಿಂದ ಪ್ರತಿಭಟನೆ ನಡೆಸುತ್ತಿವೆ. ಅದರ ಭಾಗವಾಗಿ ಗುರುವಾರ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ. ಬಂದ್ಗೆ ಆಟೋ ಸಂಘಟನೆಗಳು, ದಲಿತ ಸಂಘಟನೆಗಳು, ಹಳದಿ ವಾಹನ ಸಂಘಟನೆಗಳು, ರೈತ ಸಂಘ ನೈತಿಕ ಬೆಂಬಲ ನೀಡಿವೆ.
ಓಲಾ, ಉಬರ್ ಇರುವುದಿಲ್ಲ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು ಬಾಹ್ಯ ಬೆಂಬಲ ನೀಡಿರುವ ಕಾರಣ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇವೆಗಳು ಎಂದಿನಂತಿರಲಿದೆ. ಅದರ ಜತೆಗೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ನೀಡಲಾಗುತ್ತದೆ. ಉಳಿದಂತೆ ಒಲಾ, ಉಬರ್, ಆಟೋ ಸಂಘಟನೆಗಳು, ಬಹುತೇಕ ಪ್ರವಾಸಿ ವಾಹನ ಮಾಲೀಕರು ಬಂದ್ಗೆ ಬೆಂಬಲ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಟ್ಯಾಕ್ಸಿ, ಆಟೋ ಸಂಚಾರ ವಿರಳವಾಗಿರಲಿದೆ.
ರೈತರಿಂದ ಬೆಂಬಲ: ಬಂದ್ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ ಬೆಂಬಲ ನೀಡಿದೆ. ಅದರ ಜತೆಗೆ ಬೀದಿ ಬದಿ ವ್ಯಾಪಾರಿಗಳ ಸಂಘವೂ ಬೆಂಬಲಿಸಿದ್ದು, ತರಕಾರಿ, ಹಣ್ಣು ಸೇರಿ ಇನ್ನಿತರ ದಿನಬಳಕೆ ವಸ್ತುಗಳ ಪೂರೈಕೆ ಸಮರ್ಪಕವಾಗಿರುವುದಿಲ್ಲ.
ಶಾಲೆ, ಕಾಲೇಜಿಗೆ ರಜೆಯಿಲ್ಲ: ಕೆಲ ವಿದ್ಯಾರ್ಥಿ ಸಂಘಟನೆಗಳು ಬಾಹ್ಯ ಬೆಂಬಲವನ್ನಷ್ಟೇ ನೀಡುತ್ತಿವೆ. ಅಲ್ಲದೆ, ರಾಜ್ಯ ಸರ್ಕಾರ ಗುರುವಾರ ಶಾಲೆ, ಕಾಲೇಜುಗಳಿಗೆ ರಜೆ ನೀಡದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳು ಎಂದಿನಂತೆ ತೆರೆಯಲಿವೆ. ಜತೆಗೆ, ಹೋಟೆಲ್ ಮಾಲೀಕರು, ಮೆಡಿಕಲ್ ಶಾಪ್ ಮಾಲೀಕರು ನೈತಿಕ ಬೆಂಬಲವನ್ನಷ್ಟೇ ನೀಡಿದ್ದಾರೆ. ಹೀಗಾಗಿ ಆ ಸೇವೆಗಳಲ್ಲಿ ಯಾವುದೇ ಅಡೆತಡೆಯಿರುವುದಿಲ್ಲ.
ಕನ್ನಡ ಪರ ಸಂಘಟನೆಗಳಲ್ಲೇ ಗೊಂದಲ: ಬಂದ್ಗೆ ಕನ್ನಡ ಪರ ಸಂಘಟನೆಗಳಾದ ಜಯ ಕರ್ನಾಟಕ, ಕರ್ನಾಟಕ ಸೇನೆ ಒಕ್ಕೂಟ, ಕರವೇ ಸ್ವಾಭಿಮಾನಿ ಬಣ, ದಲಿತಪರ ಸಂಘಟನೆ, ಅಂಬೇಡ್ಕರ್ ಸೇನೆ ಸೇರಿ ಇನ್ನಿತರ ಸಂಘಟನೆಗಳು ಬೆಂಬಲ ನೀಡಿದ್ದಾರೆ. ಆದರೆ, ಕರವೇ ಪ್ರವೀಣ್ ಶೆಟ್ಟಿ ಬಣ ಬಂದ್ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದರ ಜತೆಗೆ ಇನ್ನಿತರ ಕೆಲ ಸಂಘಟನೆಗಳು ಬಂದ್ ವಿರೋಧಿಸುತ್ತಿವೆ. ಹೀಗಾಗಿ ಕನ್ನಡ ಪರ ಸಂಘಟನೆಗಳಲ್ಲೇ ಬಂದ್ ಕುರಿತು ಗೊಂದಲ ಏರ್ಪಟ್ಟಿದೆ.
ನಾಳೆ ಕರ್ನಾಟಕ ಬಂದ್: ಎಂದಿನಂತೆ ಸಾರಿಗೆ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ