ಬಳ್ಳಾರಿ: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಜಿಲ್ಲೆಯಲ್ಲಿ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲ ಸಂಘಟನೆಗಳು ಸಾಂಕೇತಿಕವಾಗಿ ನಗರದ ನಗರೂರ ನಾರಾಯಣರಾವ್ ಪಾರ್ಕ್ ನಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದ್ದು ಬಿಟ್ಟರೇ ಬಂದ್ ಜನ ಜೀವನದ ಮೇಲೆ ಪರಿಣಾಮ ಬಿರಲಿಲ್ಲ.
ಬಳ್ಳಾರಿ ನಗರ, ಹೊಸಪೇಟೆ, ಹಡಗಲಿ, ಕೂಡ್ಲಿಗಿ, ಸಂಡೂರು, ಕಂಪ್ಲಿ, ಹಗರಿಬೊಮ್ಮನಹಳ್ಳಿ ಸೇರಿ ವಿವಿಧೆಡೆ ಬೆಳಗ್ಗೆಯಿಂದಲೇ ಬಸ್ ಗಳು ಎಂದಿನಂತೆ ರಸ್ತೆಗೆ ಇಳಿದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದೆ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಿದರು.ಅಂಗಡಿ-ಮುಗ್ಗಟ್ಟುಗಳು ಮುಚ್ಚಿರಲಿಲ್ಲ.
ರಾಜ್ಯದಲ್ಲಿರುವ 7ಕೋಟಿ ಕನ್ನಡಿಗರ ಪೈಕಿ 1ಕೋಟಿಗೂ ಹೆಚ್ಚು ಕನ್ನಡಿಗರಿಗೆ ಸರಿಯಾದ ಉದ್ಯೋಗವಿಲ್ಲ.ಬೇರೆ ರಾಜ್ಯದವರಿಗೆ ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಉದ್ಯೋಗವಕಾಶ ದೊರಕಿಸಿಕೊಡಲಾಗಿದೆ. ಹೀಗಾದರೆ ಕನ್ನಡಿಗರು ನೆಲೆ ಕಟ್ಟಿಕೊಳ್ಳುವುದು ಯಾವಾಗ…? ಈ ಅಸಮಾನತೆ ನಿವಾರಿಸಲು ತಯಾರಿಸಿರುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಸರ್ಕಾರ ಜಾರಿಗೊಳಿಸಬೇಕೆಂದು ಪ್ರತಿಭಟನಾ ನಿರತ ಮುಖಂಡರು ಒತ್ತಾಯಿಸಿದರು.
ಸಂಘಟನೆಯ ಸದಸ್ಯರಾದ ಹನುಮೇಶ, ಮೋಹನ, ಮೇಕಲ ಈಶ್ವರ ರೆಡ್ಡಿ, ವಿಜಯಕುಮಾರ ಸೇರಿ ಇನ್ನಿತರರು ಇದ್ದರು.