ಸಾಣೆಹಳ್ಳಿ ಶ್ರೀಗಳಿಂದ ಸಿಎಂಗೊಂದು ಪತ್ರ: ಹೇಳಿಕೆಯನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ಬೇಸರ

ಬೆಂಗಳೂರು: ‘ಎಚ್​.ಡಿ.ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿದ್ದಕ್ಕೆ ಅಭಿನಂದನೆಗಳು, ನಾವು ಗುರುಗಳ ಸ್ಥಾನದಲ್ಲಿ ನಿಂತು ಸಲಹೆ ನೀಡುತ್ತೇವೆ. ತಪ್ಪು ಕಂಡುಬಂದರೆ ತಿದ್ದಿಕೊಳ್ಳಲು ಹೇಳುತ್ತೇವೆ. ತಿದ್ದಿಕೊಳ್ಳದಿದ್ದರೆ ಖಂಡಿಸುತ್ತೇವೆ ‘ ಇದು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ಸಿಎಂಗೆ ಪತ್ರ ಪ್ರತಿಕ್ರಿಯೆ.

ಕುಮಾರಸ್ವಾಮಿ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಾಣೆಹಳ್ಳಿ ಶ್ರೀಗಳು ಹೇಳಿಕೆ ನೀಡಿದ್ದರು. ಇದಕ್ಕೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಈ ಹೇಳಿಕೆ ನೋವು ತಂದಿದೆ. ಸ್ವಾಮೀಜಿಗಳೇ ರಾಜಕೀಯಕ್ಕೆ ಬರಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆದ ಸ್ವಾಮೀಜಿ, ‘ಮಾಧ್ಯಮದವರಿಗೆ ನಾವು ಹೇಳಿದ ಹೇಳಿಕೆಯನ್ನು ಲಘುವಾಗಿ ಪರಿಗಣಿಸಿದ್ದೀರಿ. ಇದರಿಂದಾಗಿ ಸಿಎಂ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಹಲವರು ಫೋನ್​ ಮಾಡಿದ್ದರು. ನಾನು ದೃಶ್ಯ ಮಾಧ್ಯಮಗಳಲ್ಲಿ ಏನು ಪ್ರಸಾರವಾಗಿದೆ ಗಮನಿಸಿಲ್ಲ. ಆದರೆ ಇಂದಿನ ಪತ್ರಿಕೆ ಗಮನಿಸಿದ್ದೇನೆ. ನಮ್ಮ ಮಾತಿನ ವಿಡಿಯೋ, ಆಡಿಯೋ, ಬರಹವನ್ನೂ ನಿಮಗೆ ಕಳಿಸಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದಿದ್ದಾರೆ.

ನಾವು ಯಾವ ಪಕ್ಷಕ್ಕೂ ಅಂಟಿಕೊಂಡವರಲ್ಲ. ಪಕ್ಷ, ಜಾತಿ ನೋಡದೆ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಹೇಳುತ್ತ ಬಂದಿದ್ದೇವೆ. ಆದರೆ ನೀವು ಜಾತಿ ರಾಜಕೀಯ ಮಾಡುವುದಾದರೆ ರಾಜಕೀಯಕ್ಕೇ ಬಂದುಬಿಡಿ ಎಂದು ಸವಾಲು ಹಾಕಿದ್ದು ವಿಷಾದನೀಯ. ರಾಜಕೀಯ ಹೇಳಿಕೆ ಕೊಡುವುದನ್ನು ಬಿಡಿ ಎಂದು ಹೇಳಿದ್ದು ನಮಗೆ ನೋವು ತಂದಿದೆ. ನಾವೇನಿದ್ದರೂ ಸ್ಪಷ್ಟವಾಗಿ ಹೇಳುತ್ತೇವೆ ಬೇಕಿದ್ದರೆ ನಿಮ್ಮ ತಂದೆಯವರನ್ನೇ ಕೇಳಿನೋಡಿ ಎಂದು  ಹೇಳಿದ್ದಾರೆ.

ಅನವಶ್ಯಕ ವಾದ ಮಾಡುವುದು ನಮಗೆ ಇಷ್ಟವಿಲ್ಲ. ಹಾಗಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದವರಿಗೆ, ಪ್ರತಿಭಟನೆ ನಮ್ಮ ಸಂಸ್ಕೃತಿ ಅಲ್ಲ, ಸಮಯ ಬಂದಾಗ ನಾವೇ ಉತ್ತರಿಸುತ್ತೇವೆ ಎಂದು ಹೇಳಿದ್ದೇವೆ. ನಮ್ಮ ಭಾವನೆಗಳು ನಿಮಗೆ ಅರ್ಥವಾದರೆ ಸಾಕು ” ಎಂದಿದ್ದಾರೆ.

Leave a Reply

Your email address will not be published. Required fields are marked *