Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಟಿಕೆಟ್​ನಲ್ಲೂ ಸಿಎಂ ಕೈಕಮಾಂಡ್​

Monday, 16.04.2018, 3:08 AM       No Comments

ಮೂಲ, ವಲಸಿಗರ ಪ್ರತಿಷ್ಠೆ ಸಮರದಲ್ಲಿ ಸಿದ್ದರಾಮಯ್ಯ ಮೇಲುಗೈ | ಕಳಂಕಿತರೂ ಸೇರಿ 14 ಹಾಲಿ ಶಾಸಕರಿಗಿಲ್ಲ ಟಿಕೆಟ್ | ಒಂದೇ ಬಾರಿಗೆ ಇಷ್ಟು ಅಭ್ಯರ್ಥಿಗಳ ಘೋಷಣೆ ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು |ಅಪ್ಪಂದಿರ ಜತೆಗೆ ಏಳು ಮಕ್ಕಳಿಗೂ ಅದೃಷ್ಟ | 218 ಕ್ಷೇತ್ರಗಳ ಕಾಂಗ್ರೆಸ್ ಹುರಿಯಾಳುಗಳ ಪಟ್ಟಿ ಪ್ರಕಟ, ಭುಗಿಲೆದ್ದ ಟಿಕೆಟ್ ವಂಚಿತರ ಭಿನ್ನಮತ | ಸಿಎಂಗೆ ಸಿಗದ ಬಾದಾಮಿ

ಬೆಂಗಳೂರು: ಗಜಪ್ರಸವದಂತಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆ ಆಗಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಕೇಂದ್ರ ಚುನಾವಣಾ ಸಮಿತಿ ಸಭೆ ಅಳೆದೂ ತೂಗಿ ಒಮ್ಮತಕ್ಕೆ ಬರುವಲ್ಲಿ ಯಶಸ್ವಿಯಾದ ಬಳಿಕ 218 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಹಿರಿಯ ನಾಯಕರ ಆಕ್ಷೇಪ, ಆರೋಪಗಳನ್ನು ಬದಿಗೊತ್ತಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಪ್ರಸ್ತಾಪಿಸಿದ್ದ ಪಟ್ಟಿಗೆ ಹೈಕಮಾಂಡ್ ಓಕೆ ಎಂದಿರುವುದ ರಿಂದ ಸಿಎಂ ಮೇಲುಗೈ ಸಾಧಿಸಿದಂತಾಗಿದೆ. ಶಾಂತಿನಗರ, ರಾಯಚೂರು, ನಾಗಠಾಣ, ಸಿಂಧಗಿ, ಕಿತ್ತೂರಿಗೆ ಇನ್ನಷ್ಟೇ ಅಭ್ಯರ್ಥಿ ಅಂತಿಮವಾಗಬೇಕಿದೆ. ಮೇಲುಕೋಟೆ ಯಲ್ಲಿ ರಾಜ್ಯ ರೈತಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಸಲು ಹೈಕಮಾಂಡ್ ತೀರ್ವನಿಸಿದೆ.

ಮೂಡದ ಒಮ್ಮತ: ಪಕ್ಷದ ಮುಖಂಡರ ಪ್ರಕಾರ ಶುಕ್ರವಾರ ರಾತ್ರಿಯೇ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಯಾಗಬೇಕಾಗಿತ್ತು. ಆದರೆ 20ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ

ಗೊಳಿಸುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರ ನಡುವೆ ಒಮ್ಮತ ಮೂಡದ ಕಾರಣ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮೂರು ದಿನಕ್ಕೆ ವಿಸ್ತರಣೆಗೊಂಡಿತು. ಅಂತಿಮವಾಗಿ ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತಿ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಒಂದೇ ಬಾರಿಗೆ ಅಂತಿಮಗೊಳಿಸಲಾಗಿದೆ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಸ್ತಾಪಿಸಿದ್ದ ಪಟ್ಟಿಗೆ ಮಾನ್ಯತೆ ಸಿಕ್ಕಿದೆ. ಹಾಗೆಯೇ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪ್ರಸ್ತಾಪವನ್ನೂ ಹೈಕಮಾಂಡ್ ಒಪ್ಪದೇ ಇರುವುದು ಸ್ಪಷ್ಟವಾಗಿದೆ. ಅಶೋಕ್ ಖೇಣಿ ಸೇರಿ ಜೆಡಿಎಸ್​ನಿಂದ ವಲಸೆ ಬಂದವರಿಗೆ ಟಿಕೆಟ್ ಕೊಡಬಾರದೆಂಬ ಅವರ ಪ್ರತಿಪಾದನೆಗೆ ಮನ್ನಣೆ ಸಿಕ್ಕಿಲ್ಲ.

ದೂರ ಉಳಿದ ಖರ್ಗೆ: ಮಲ್ಲಿಕಾರ್ಜುನ ಖರ್ಗೆಯವರು ಆಂತರಿಕ ಬೆಳವಣಿಗೆ ಬಗ್ಗೆ ಸಿಟ್ಟು ಹೊರಹಾಕಿದ್ದು, ಕೊನೆ ಹಂತದ ಚರ್ಚೆಯಿಂದ ದೂರ ಉಳಿದು ಅಸಮಾಧಾನ ತೋರ್ಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುವ ಆಶಯದಿಂದ ಹಿಂದೆ ಸರಿದಿದ್ದು, ಚಾಮುಂಡೇಶ್ವರಿಯಿಂದ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಜತೆಗೆ 150 ಕ್ಷೇತ್ರಗಳಲ್ಲಿ ತಾವು ಪ್ರಸ್ತಾಪಿಸಿದವರಿಗೆ ಟಿಕೆಟ್ ನೀಡಬೇಕೆಂಬ ಹಠದಲ್ಲಿ ಗೆಲುವು ಸಾಧಿಸಿದ್ದಾರೆ.

ಮೂರು ಅನುಕಂಪ ಟಿಕೆಟ್

ಶಾಸಕರಾಗಿದ್ದಾಗಲೇ ನಿಧನರಾದ ಮೂವರ ಕುಟುಂಬಕ್ಕೆ ಟಿಕೆಟ್ ನೀಡುವ ಮೂಲಕ ಅನುಕಂಪದ ಅಲೆಯಲ್ಲಿ ಕ್ಷೇತ್ರ ಗೆಲ್ಲಲು ಪಕ್ಷ ತಂತ್ರ ರೂಪಿಸಿದೆ. ಬೇಲೂರು ಶಾಸಕರಾಗಿದ್ದ ರುದ್ರೇಶ್ ಗೌಡರ ಪತ್ನಿ ಕೀರ್ತನಾ ರುದ್ರಗೌಡ, ಖಮರುಲ್ ಇಸ್ಲಾಂ ಪತ್ನಿ ಫಾತಿಮಾ ಹಾಗೂ ಎಚ್.ಡಿ.ಕೋಟೆಯ ಚಿಕ್ಕಮಾದು ಅವರ ಮಗ ಅನಿಲ್ ಅವರಿಗೆ ಟಿಕೆಟ್ ನೀಡಲಾಗಿದೆ.

ಅರ್ಜಿ ಹಾಕದಿದ್ದರೂ ಅಂಬರೀಷ್​ಗೆ ಟಿಕೆಟ್

ಟಿಕೆಟ್ ಬೇಕೆಂದು ಅರ್ಜಿ ಹಾಕದೇ ಇದ್ದರೂ ನಟ ಅಂಬರೀಷ್​ಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಈ ಬಾರಿ ಕಣಕ್ಕಿಳಿಯುವ ಬಗ್ಗೆ ಸ್ಪಷ್ಟಪಡಿಸಿ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ, ಸಿಎಂ, ಕೆಪಿಸಿಸಿ ಅಧ್ಯಕ್ಷರು ದೂರವಾಣಿ ಕರೆ ಮಾಡಿ ವಿಚಾರಿಸಿದ್ದರೂ ಅಂಬರೀಷ್ ಸ್ಪಷ್ಟ ನಿಲುವು ವ್ಯಕ್ತಪಡಿಸಿರಲಿಲ್ಲ.

ಬಂಡಾಯ ಜೋರು; ಜೆಡಿಎಸ್​ನಲ್ಲಿ ಚುರುಕಾದ ಚಟುವಟಿಕೆ

ಬೆಂಗಳೂರು: ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿರುವಂತೆ ಕಾಂಗ್ರೆಸ್​ನಲ್ಲಿ ಬಂಡಾಯ ಕಹಳೆ ಮೊಳಗಿದೆ.

ಹಾನಗಲ್, ತರೀಕೆರೆ, ಕುಣಿಗಲ್, ಕೋಲಾರ, ಮಾಯಕೊಂಡ, ಚಿಕ್ಕಮಗಳೂರು, ಬಾದಾಮಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಾತನ್ನಾಡಿದ್ದಾರೆ.

ಕೆಲವು ಟಿಕೆಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಕೊನೆ ಹಂತದ ಬದಲಾವಣೆಗೆ ಪ್ರಯತ್ನ ನಡೆಸಲಿದ್ದಾರೆ.

ಇನ್ನೊಂದೆಡೆ ಜೆಡಿಎಸ್​ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹತ್ತಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರನ್ನು ಸೆಳೆದುಕೊಳ್ಳುವ ಪ್ರಯತ್ನ ನಡೆದಿದೆ.

ಏಳು ಮಕ್ಕಳಿಗೆ ಅವಕಾಶ

ಈ ಬಾರಿ 20ಕ್ಕೂ ಹೆಚ್ಚು ಶಾಸಕರು-ಮಂತ್ರಿಗಳು ತಮ್ಮ ಮಕ್ಕಳಿಗೆ ರಾಜಕೀಯ ನೆಲೆ ಕಲ್ಪಿಸಲು ಮುಂದಾಗಿದ್ದರು. ಆದರೆ, ನಾಲ್ವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​ಗೆ ಅವಕಾಶ ನೀಡಿಲ್ಲ.

ಸಂತೋಷ್ ಜಯಚಂದ್ರ, ಯತೀಂದ್ರ ಸಿದ್ದರಾಮಯ್ಯ, ಸೌಮ್ಯಾ ರೆಡ್ಡಿ, ರೂಪಾ ಶಶಿಧರ್ ಟಿಕೆಟ್ ಪಡೆದವರು. ಪ್ರಿಯಾಂಕ್ ಖರ್ಗೆ, ಪ್ರಿಯಕೃಷ್ಣ, ಎಸ್.ಎಸ್.ಮಲ್ಲಿಕಾರ್ಜುನ್ ಈಗಾಗಲೇ ಶಾಸಕರಾಗಿದ್ದು, ಮರು ಆಯ್ಕೆಗೆ ಟಿಕೆಟ್ ಗಿಟ್ಟಿಸಿದ್ದಾರೆ.

15 ಮುಸ್ಲಿಮರಿಗೆ ಆದ್ಯತೆ

ಒಟ್ಟಾರೆ 19 ಅಲ್ಪಸಂಖ್ಯಾತರಿಗೆ ಟಿಕೆಟ್ ಹಂಚಲಾಗಿದ್ದು, ಈ ಪೈಕಿ 15 ಮಂದಿ ಮುಸ್ಲಿಮರು. ರಹೀಂ ಖಾನ್, ಇಕ್ಬಾಲ್ ಅನ್ಸಾರಿ, ರಫೀಕ್ ಅಹ್ಮದ್, ರೋಷನ್ ಬೇಗ್, ಜಮೀರ್ ಅಹ್ಮದ್, ಯು.ಟಿ.ಖಾದರ್, ತನ್ವೀರ್ ಸೇಠ್ ಪ್ರಮುಖರು.

ಕಮರಿತು ಸಿಎಂ ಎರಡು ಕನಸು

ನವದೆಹಲಿ: ಚಾಮುಂಡೇಶ್ವರಿ ಜತೆಗೆ ಬಾದಾಮಿ ಬರ್ಫಿ ತಿನ್ನುವ ಸಿಎಂ ‘ಎರಡು ಕನಸಿಗೆ’ ಹೈಕಮಾಂಡ್ ತಣ್ಣೀರೆರಚಿದೆ. ಟಿಕೆಟ್ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ಸಿಎಂ ಎರಡನೇ ಕ್ಷೇತ್ರದಲ್ಲಿ ಮಾತ್ರ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಎದುರು ಸೋಲೊಪ್ಪಿದ್ದಾರೆಂಬುದು ರಾಜಕೀಯ ತಜ್ಞರ ವಾದ. ಬಾದಾಮಿಗೆ ತೆರಳಿದರೆ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಸ್ಥಿತಿ ಮತ್ತಷ್ಟು ಹದಗೆಡಲಿರುವುದರಿಂದ ಗಮನವನ್ನು ಚಾಮುಂಡೇಶ್ವರಿಯಲ್ಲೇ ಕೇಂದ್ರೀಕರಿಸಿ ಎಂದು ಹೈಕಮಾಂಡ್ ಸಿಎಂಗೆ ಸ್ಪಷ್ಟ ಸೂಚನೆ ನೀಡಿದೆ.

ಜೆಡಿಎಸ್​ನಿಂದ ಬಂದವರಿಗೆ ಟಿಕೆಟ್

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅಡ್ಡಮತದಾನ ಮಾಡಿದ ಜೆಡಿಎಸ್​ನ ಏಳು ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿ್ರಡಿಸಿದೆ. ಜಮೀರ್ ಅಹ್ಮದ್ ಹೊರತಾಗಿ ಉಳಿದ ಆರು ಮಂದಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಅವರಿಗೇ ಏಕೆ ಟಿಕೆಟ್ ಕೊಡಬೇಕೆಂದು ಪಕ್ಷದ ಹಿರಿಯ ನಾಯಕರು ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಆಕ್ಷೇಪ ಎತ್ತಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಬಲವಾಗಿ ವಾದ ಮಂಡಿಸಿ ಹೈಕಮಾಂಡ್ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

14 ಮಹಿಳೆಯರಿಗೆ ಒಲಿದ ಅದೃಷ್ಟ

ಈ ಬಾರಿ 14 ಮಹಿಳೆಯರು ಟಿಕೆಟ್ ಗಿಟ್ಟಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಫಾತಿಮಾ, ಶಾರದಾ ಮೋಹನ್ ಶೆಟ್ಟಿ, ಎ.ಎಲ್.ಪುಷ್ಪಾ, ಮೋಟಮ್ಮ, ವಾಣಿ ಕೃಷ್ಣಾ ರೆಡ್ಡಿ, ರೂಪಾ ಶಶಿಧರ್, ಉಮಾಶ್ರೀ, ಜಿ.ಪದ್ಮಾವತಿ, ಸೌಮ್ಯಾ ರೆಡ್ಡಿ, ಕೀರ್ತನಾ ರುದ್ರಗೌಡ, ಶಕುಂತಲಾ ಶೆಟ್ಟಿ, ಡಾ. ಗೀತಾಮಹದೇವ್ ಪ್ರಸಾದ್ ಟಿಕೆಟ್ ಪಡೆದವರು.

14 ವಲಸಿಗರಿಗೆ ಮಣೆ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್​ನಿಂದ ಬಂದ ಏಳು ಶಾಸಕರೂ ಸೇರಿ ಒಟ್ಟು 14 ವಲಸಿಗರಿಗೆ ಟಿಕೆಟ್ ನೀಡಲಾಗಿದೆ.

ಟಿಕೆಟ್ ತಪ್ಪಿಸಿಕೊಂಡವರು

ತರೀಕೆರೆ ಶ್ರೀನಿವಾಸ್, ಮಾಯಕೊಂಡ ಶಿವಮೂರ್ತಿ ನಾಯ್್ಕ ಸಿರಗುಪ್ಪ ಬಿ.ಎಂ.ನಾಗರಾಜ್, ನಾಗಠಾಣದ ರಾಜು ಅಲಗೋಡು, ಜಗಳೂರು ಎಚ್.ಪಿ.ರಾಜೇಶ್, ಬಳ್ಳಾರಿ ಗ್ರಾಮಾಂತರ ಎನ್.ವೈ ಗೋಪಾಲಕೃಷ್ಣ, ತಿಪಟೂರು ಷಡಾಕ್ಷರಿ, ಬಾದಾಮಿ ಚಿಮ್ಮನಕಟ್ಟಿ, ವಿಜಯಪುರ ನಗರದ ಮಕ್ಬುಲ್ ಬಗವಾನ್, ಹಾನಗಲ್ ಮನೋಹರ ತಹಸೀಲ್ದಾರ್, ಬ್ಯಾಡಗಿಯ ಬಸವರಾಜ ಶಿವಣ್ಣವರ, ಕೊಳ್ಳೆಗಾಲದ ಜಯಣ್ಣ, ಕಿತ್ತೂರು ಡಿ.ಬಿ.ಇನಾಂದಾರ್, ಶಾಂತಿನಗರ ಹ್ಯಾರಿಸ್

 

 

Leave a Reply

Your email address will not be published. Required fields are marked *

Back To Top