ಭೂಮಿ ಮೇಲೆ ಆಣೆ ಮಾಡಿ ಹೇಳಿ…

ಬೆಂಗಳೂರು: ಇಷ್ಟು ವರ್ಷ ಸರ್ಕಾರಗಳು ಹುಸಿ ಭರವಸೆಗಳನ್ನು ನೀಡಿ ರೈತರಿಗೆ ನಂಬಿಕೆ ಹೋಗಿರಬಹುದು. ಆದರೆ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ ಮಾಡಿಯೇ ತಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ನಿಮಿತ್ತ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಜತೆ ನರೇಂದ್ರ ಮೋದಿ ಆಪ್ ಮೂಲಕ ಸಂವಾದ ನಡೆಸಿದರು.

ರೈತರ ಆದಾಯ ದ್ವಿಗುಣವಾಗುತ್ತದೆ ಎಂಬ ಕುರಿತು ಸ್ಪಷ್ಟನೆ ನೀಡಿ ಎಂಬ, ಬೀದರ್ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿಮನ್ಯು ಪ್ರಶ್ನೆಗೆ ಮೋದಿ ಉತ್ತರಿಸಿದರು.

ಅನೇಕ ವರ್ಷಗಳಿಂದ ಸರ್ಕಾರಗಳು ರೈತರ ಹಿತದ ಬಗ್ಗೆ ಭಾಷಣ ಮಾಡುತ್ತಿವೆ. ಯಾವುದೇ ಭರವಸೆ ಈಡೇರದ ಕಾರಣ ನಂಬಿಕೆ ಕಳೆದುಕೊಂಡಿದ್ದಾರೆ. ಮೊದಲು ನಮ್ಮ ರೈತ ಮೋರ್ಚಾ ಕಾರ್ಯಕರ್ತರು ಇದರ

ಬಗ್ಗೆ ಅಚಲ ವಿಶ್ವಾಸ ಹೊಂದಿ. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು ಶತಸಿದ್ಧ. ರೈತರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಹೊಲಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಕೂರಿಸಿಕೊಳ್ಳಿ. ಮಣ್ಣಿನ ಮೇಲೆ ಕೈಯಿಟ್ಟು, ಯಡಿಯೂರಪ್ಪ, ಮೋದಿ ಕೈ ಬಲಪಡಿಸಿ 2022ಕ್ಕೆ ನಿಮ್ಮ ಆದಾಯ ದ್ವಿಗುಣವಾಗುತ್ತದೆ ಎಂದು ಹೇಳಿ. ಯಾವ ರೀತಿ ಮಾರ್ಗ ಅನುಸರಿಸುತ್ತೇವೆ ಎಂದು ನಂತರ ಹೇಳಿ. ಒಟ್ಟು ನಾಲ್ಕು ಹಂತದಲ್ಲಿ ವೈಜ್ಞಾನಿಕವಾಗಿ ಈ ಯೋಜನೆ ಕೈಗೆತ್ತಿಕೊಂಡಿದ್ದೇವೆ. ನೀರು, ವಿದ್ಯುತ್, ರಸಗೊಬ್ಬರ ಸೇರಿ ಕೃಷಿ ಉತ್ಪಾದನೆಯಲ್ಲಿ ರೈತರಿಗೆ ಆಗುವ ಖರ್ಚನ್ನು ಕಡಿಮೆ ಮಾಡುವುದು. ಕನಿಷ್ಠ ಬೆಂಬಲ ಬೆಲೆ, ಮಾರುಕಟ್ಟೆ ವ್ವವಸ್ಥೆ ಮೂಲಕ ಉತ್ತಮ ಬೆಲೆ ಸಿಗುವಂತೆ ಮಾಡುವುದು. ಹೊಲದಿಂದ ಮಾರುಕಟ್ಟೆಗೆ ಸಾಗಿಸುವಾಗಿ ಇದೀಗ ಆಗುತ್ತಿರುವ ಶೇ.30 ನಷ್ಟ ತಪ್ಪಿಸುವುದು. ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಉತ್ಪನ್ನಗಳನ್ನು ಹೊದಲ್ಲೇ ಮೌಲ್ಯವರ್ಧನೆಯಂತಹ ನಾಲ್ಕು ಹಂತದಲ್ಲಿ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ವಿವರಿಸಿದರು.

ಪ್ರಾರಂಭದಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಫಸಲ್ ಬಿಮಾ ಯೋಜನೆಯಿಂದ ಸಾಕಷ್ಟು ಅನುಕೂಲ ಆಗಿದೆ. ಖರ್ಚಿನ ದೊಡ್ಡ ಬಾಬ್ತನ್ನು ಸರ್ಕಾರ ನೀಡುತ್ತದೆ. ರೈತರು ಅತ್ಯಂತ ಕಡಿಮೆ ಹಣ ನೀಡುತ್ತಾರೆ. ಆದರೆ, ಕರ್ನಾಟಕದ ಸರ್ಕಾರಕ್ಕೆ ಇದರ ಬಗ್ಗೆ ಆಸಕ್ತಿ ಇಲ್ಲ. ರೈತರ ಸಂಕಷ್ಟ ಈಡೇರಿಸುವ ಸರ್ಕಾರ ಅಧಿಕಾರಕ್ಕೆ ತರಬೇಕಿದೆ. ಎಲ್ಲ ಕೈಗೆ ಕೆಲಸ, ಎಲ್ಲ ಹೊಲಕ್ಕೆ ನೀರು ಎಂಬ ಪಂಡಿತ್ ದೀನದಯಾಳ್ ಉಪಾಧ್ಯಾಯರ ಮಾತಿನಂತೆ ನಾವು ಮುನ್ನಡೆಯುತ್ತಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಗೌರವ ತಗ್ಗಿದೆ ಎಂಬ ಮೈಸೂರು ಜಿಲ್ಲಾ ರೈತ ಮೋಚಾ ಅಧ್ಯಕ್ಷ ಪ್ರಸನ್ನ ಅವರಿಗೆ ಪ್ರತಿಕ್ರಿಯಿಸಿದ ಮೋದಿ, ಭಾಷಣ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಭೀಕರ ಬರಗಾಲದ ಅವಧಿಯಲ್ಲಿ ಜನರ ಸಹಯೋಗದಲ್ಲಿ ಕೆಲಸ ಮಾಡಬೇಕಿತ್ತು. ಕೆರೆಗಳ ಹೂಳೆತ್ತಬೇಕಿತ್ತು. ಆದರೆ ಒಣಗಿದ ಕೆರೆಗಳನ್ನು ಈ ಸರ್ಕಾರ ಬಿಲ್ಡರ್​ಗಳಿಗೆ ನೀಡಿದೆ ಎಂದು ಕೇಳಿದ್ದೇನೆ. ಅನ್ನದಾತರ ಸೇವೆ ಮಾಡುವುದು ಸೌಭಾಗ್ಯ. ಆದರೆ ಇಲ್ಲಿನ ಸರ್ಕಾರ ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಲಿದೆ ಎಂದರು.

Leave a Reply

Your email address will not be published. Required fields are marked *