ಈ ಬಾರಿಯ ಚುನಾವಣೆಯಲ್ಲಿ ವಿವಿಪ್ಯಾಟ್​ಗಳ ಬಳಕೆ: ಸಂಜೀವ್ ಕುಮಾರ್​

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ಜತೆಗೆ ವಿವಿಪ್ಯಾಟ್​ಗಳ ಬಳಕೆ ಮಾಡಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ ತಿಳಿಸಿದರು.

ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಸುದ್ದಿಗೊಷ್ಟಿ ನಡೆಸಿದ ಅವರು ಕಳೆದ ಬಾರಿ 3ಕೋಟಿ 13 ಲಕ್ಷ 81 ಸಾವಿರ ಮತದಾನ ಮಾಡಿದ್ದರು. 7 ಲಕ್ಷ 18 ಸಾವಿರ ಯುವ ಮತದಾರರಿದ್ದರು. ಈ ಬಾರಿ 17 ಲಕ್ಷ 42 ಸಾವಿರ ಯುವ ಮತದಾರರಿದ್ದಾರೆ. ಈ ಬಾರಿ 56 ಸಾವಿರ 996 ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು, ವಿಶೇಷವಾಗಿ ಈ ಬಾರಿ ಇವಿಎಂಗಳ ಜತೆಗೆ ವಿವಿಪ್ಯಾಟ್​ಗಳ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಒಟ್ಟು 46,110 ವಿವಿಪ್ಯಾಟ್​ಗಳನ್ನು ಬಳಸಲಾಗುತ್ತದೆ. ಈ ಚುನಾವಣೆಯಲ್ಲಿ 3,56,562 ಚುನಾವಣಾ ಸಿಬ್ಬಂದಿ ಇರುತ್ತಾರೆ. ಅವರುಗಳಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ನೀತಿ ಸಂಹಿತೆ ಈಗಿನಿಂದಲೇ ಜಾರಿಯಾಗುತ್ತದೆ. ಈ ಬಗ್ಗೆ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 1 ಸಾವಿರದ 96 ಚೆಕ್​ ಪೋಸ್ಟ್​ಗಳನ್ನು ಸ್ಥಾಪಿಸಲು ಪೊಲೀಸ್​ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿಸಿದರು.

ಇತ್ತ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ಅವರು ಸುದ್ದಿಗೋಷ್ಟಿ ನಡೆಸಿ ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.

ಈ ಬಾರಿ ಫೋಟೋ ವೋಟರ್​ ಸ್ಲಿಪ್ ನೀಡಿಕೆಗೆ ಚಿಂತನೆ ನಡೆಸಲಾಗಿದೆ. ಮತದಾನಕ್ಕೆ ವಾರಕ್ಕೂ ಮೊದಲು ವೋಟರ್ ಸ್ಲಿಪ್ ನೀಡಲಾಗುವುದು. ವೋಟರ್ ಸ್ಲಿಪ್​ನಲ್ಲಿ ಮತದಾನ ಹಾಗೂ ಬೂತ್ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದೆ ಎಂದರು.

ವಿಕಲಚೇತನರಿಗೆ ವಿಶೇಷ ಸೌಲಭ್ಯ ವ್ಯವಸ್ಥೆ ಮಾಡಲಾಗುವುದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಆಲ್ ವುಮೆನ್ ಪೊಲೀಂಗ್ ಸ್ಟೇಷನ್ ಮಾಡಲು ತೀರ್ಮಾನಿಸಲಾಗಿದ್ದು, ಈ ಬಾರಿ ಖಾಸಗಿ ಶಾಲೆ ಕಾಲೇಜುಗಳ ಸಿಬ್ಬಂದಿ ಬಳಕೆಗೆ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

ವಿವಿಪಾಟ್-ಇವಿಎಂ
ಇವಿಎಂನಂತೆಯೇ ವಿವಿಪಾಟ್ ಸಹ ಮತ ಸಂಗ್ರಹ ಪೆಟ್ಟಿಗೆ. ಮತದಾನ ಮಾಡಿದ ತಕ್ಷಣ ಏಳು ಸೆಕೆಂಡ್ ಮತದಾರನಿಗೆ ಕಾಣುವ ಚೀಟಿಯು ನಂತರ ವಿವಿಪಾಟ್‌ನ ಸೀಲ್ಡ್ ಮಾಡಿದ ಪೆಟ್ಟಿಗೆಯೊಳಗೆ ಕಟ್ ಆಗಿ ಬೀಳುತ್ತದೆ. ವಿವಿಪಾಟ್‌ನ ಚೀಟಿಯನ್ನು ನೋಡಬಹುದೇ ವಿನಃ ಮುಟ್ಟಲಾಗದಂತೆ ಗಾಜು ಇರುತ್ತದೆ. ಮತಗಳು ಎರಡು ಕಡೆ ಸಂಗ್ರಹವಾಗುತ್ತವೆ.

ಮತದಾರ ತಾನು ಚಲಾವಣೆ ಮಾಡಿದ ಅಭ್ಯರ್ಥಿಗೆ ಮತ ಬಿದ್ದಿದೆಯೇ? ಎಂಬುದನ್ನು ಇಲ್ಲಿ ಖಾತರಿ ಮಾಡಿಕೊಳ್ಳಬಹುದು. ಬ್ಯಾಲೆಟ್ ಯಂತ್ರದಲ್ಲಿ ಬಟನ್ ಒತ್ತಿದಾಗ ವಿವಿಪಾಟ್‌ನ ಪಾರದರ್ಶಕ ಗಾಜಿನೊಳಗೆ ಮುದ್ರಿತವಾದ ಚೀಟಿ ಏಳು ಸೆಕೆಂಡ್ ಕಾಣಲಿದೆ. ಅದರಲ್ಲಿ ಅಭ್ಯರ್ಥಿ ಹೆಸರು, ಪಕ್ಷ, ಚಿಹ್ನೆ, ಕ್ರಮಸಂಖ್ಯೆ ನೋಡಬಹುದು. ಒಂದು ವೇಳೆ ತಾನು ಹಾಕಿದ ಮತ ಬೇರೆ ಅಭ್ಯರ್ಥಿಗೆ ಬಿದ್ದಿರುವುದು ಕಂಡರೆ ತಕ್ಷಣ ಮತಗಟ್ಟೆ ಅಧಿಕಾರಿಗೆ ದೂರು ನೀಡಲು ಅವಕಾಶವಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *