ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್​: ಮೇ 12 ರಂದು ಮತದಾನ, ಮೇ 15 ಮತ ಎಣಿಕೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 12 ರಂದು ಮತದಾನ ನಡೆದು ಮೇ 15 ರಂದು ಮತಎಣಿಕೆ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್​ ರಾವತ್​ ಅವರು ಚುನಾವಣಾ ದಿನಾಂಕ ಪ್ರಟಿಸಿದರು.

ಏಪ್ರಿಲ್ 17 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ಕೊನೆಯ ದಿನ. ಏಪ್ರಿಲ್ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದೆ.

224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 4 ಕೋಟಿ 96 ಲಕ್ಷ ಮತದಾರಿದ್ದಾರೆ. ಅವರಲ್ಲಿ 2 ಕೋಟಿ 51 ಲಕ್ಷ ಪುರುಷ ಮತದಾರಿದ್ದರೆ, 2 ಕೋಟಿ 44 ಲಕ್ಷ ಮಹಿಳಾ ಮತದಾರರಿದ್ದಾರೆ. ಕನ್ನಡ, ಇಂಗ್ಲಿಷ್​ನಲ್ಲಿ ಮತದಾರರ ಚೀಟಿ ಇರುತ್ತದೆ. ಒಟ್ಟು 56,696 ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ವಿವಿ ಪ್ಯಾಟ್​ ಬಳಕೆ ಮಾಡಲಾಗುವುದು ಎಂದು ರಾವತ್​ ತಿಳಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆಯನ್ನು ಕರೆಸಿಕೊಳ್ಳಲಾಗುವುದು. ಒಬ್ಬ ಅಭ್ಯರ್ಥಿಗೆ ಚುನಾವಣೆ ವೆಚ್ಚವನ್ನು 24 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ. ಚುನಾವಣಾ ಖರ್ಚು ವೆಚ್ಚಗಳನ್ನು ಗಮನಿಸಲು ವಿಶೇಷ ತಂಡ ರಚಿಸಲಾಗಿದೆ. ಚುನಾವಣಾ ದಿನಾಂಕದಂದು ಧ್ವನಿ ವರ್ಧಕ ಬಳಕೆಗೆ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ನಿರ್ಬಂಧ ಹೇರಲಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪ್ರಗತಿಯಲ್ಲಿದ್ದು, ಯುವ ಮತದಾರರಿಗೆ ವೋಟ್​ ಹಾಕುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾವತ್​ ತಿಳಿಸಿದರು.

ಮೇ 28 ರಂದು ಸಿದ್ದರಾಮಯ್ಯ ಸರ್ಕಾರದ ಅವಧಿ ಮುಕ್ತಾಯವಾಗಲಿದೆ.

 

One Reply to “ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್​: ಮೇ 12 ರಂದು ಮತದಾನ, ಮೇ 15 ಮತ ಎಣಿಕೆ”

Leave a Reply

Your email address will not be published. Required fields are marked *