ಕೈ ಹೈಕಮಾಂಡ್ ಗರಂ!

<< ಲಿಂಗಾಯತ ಧರ್ಮ ರಾಜಕೀಯದಿಂದ ನಿರೀಕ್ಷಿತ ಫಲ ಅನುಮಾನ>>

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನದ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗರಿಷ್ಠ ಕ್ಷೇತ್ರಗಳಲ್ಲಿ ಜಯಗಳಿಸಲು ತಂತ್ರಗಾರಿಕೆ ರೂಪಿಸಿದ್ದ ರಾಜ್ಯ ಕಾಂಗ್ರೆಸ್ ಈಗ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.

ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಛಿದ್ರಗೊಳಿಸಿ, ಕಾಂಗ್ರೆಸ್​ಗೆ ಅತ್ಯಂತ ಮಹತ್ವದ್ದಾಗಿರುವ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಹೈಕಮಾಂಡ್ ಕೂಡ ಧರ್ಮ ರಾಜಕಾರಣಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಈ ತಂತ್ರಗಾರಿಕೆಯಿಂದ ನಿರೀಕ್ಷಿತ ಫಲ ಸಿಗುವ ಸಾಧ್ಯತೆಗಳಿಲ್ಲ ಎಂದು ರಾಜ್ಯದಿಂದ ರವಾನೆಯಾಗಿರುವ ಮಾಹಿತಿಯಿಂದ ಹೈಕಮಾಂಡ್ ವಿಚಲಿತಗೊಂಡಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆ ಯಲ್ಲಿ ತಿರುಗುಬಾಣವಾಗದಂತೆ ನೋಡಿಕೊಳ್ಳಬೇಕೆಂದು ರಾಜ್ಯ ಮುಖಂಡರಿಗೆ ದೆಹಲಿ ನಾಯಕರು ಕಟ್ಟಪ್ಪಣೆ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ವಿವಿಧ ಮಠಗಳಿಗೆ ಭೇಟಿ ನೀಡಿ, ಪಕ್ಷದ ಪರ ಮಠಾಭಿಪ್ರಾಯ ರೂಪಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಯಾವುದೇ ಪ್ರತಿತಂತ್ರ ಮಾಡುತ್ತಿಲ್ಲ ಎಂಬುದು ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ.

ಚಿಂತೆಯಲ್ಲಿ ಹೈಕಮಾಂಡ್: ವಿಧಾನಸಭಾ ಚುನಾವಣೆಯಲ್ಲಿ ವಿಜಯದ ಗುರಿಯೊಂದಿಗೆ ಬಿಜೆಪಿ ರೂಪಿಸುತ್ತಿರುವ ಕಾರ್ಯತಂತ್ರಗಳು ಕಾಂಗ್ರೆಸ್ ಹೈಕಮಾಂಡನ್ನು ಚಿಂತೆಗೀಡು ಮಾಡಿವೆೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಂತ್ರಗಾರಿಕೆಗೆ ಪ್ರತಿಯಾಗಿ ಕಾಂಗ್ರೆಸ್ ರೂಪಿಸಿರುವ ಪ್ರತಿತಂತ್ರಗಳು ಅನುಷ್ಠಾನಕ್ಕೆ ಬರದಿರುವುದು ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷ ಉಳಿಯಬೇಕು, ಜತೆಗೆ ನೀವೂ ಉಳಿಯಬೇಕೆಂದರೆ ಮೊದಲು ಅಧಿಕಾರ ಉಳಿಸಿಕೊಳ್ಳಿ ಎಂಬ ಸಂದೇಶ ರಾಜ್ಯದ ನಾಯಕರಿಗೆ ರವಾನೆಯಾಗಿದೆ.

ಸರಣಿ ಸಮೀಕ್ಷೆಗಳು: ಒಂದೆಡೆ ಹೈಕಮಾಂಡ್ ತನ್ನದೇ ತಂಡದ ಮೂಲಕ ಸಮೀಕ್ಷೆಗಳನ್ನು ನಡೆಸುತ್ತ ಮಾಹಿತಿ ಪಡೆಯುತ್ತಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರತಿ ವಾರಕ್ಕೊಂದು ಸಮೀಕ್ಷೆ ನಡೆಸುತ್ತಿದ್ದಾರೆ. ಮುಂಬೈ ಮೂಲದ ಸಂಸ್ಥೆಯೊಂದರ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ನಿವೃತ್ತ ಅಧಿಕಾರಿಯೊಬ್ಬರು ಸಮೀಕ್ಷೆಯ ಉಸ್ತುವಾರಿ ಹೊತ್ತಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ರಾಜ್ಯ ಪೊಲೀಸ್ ಗುಪ್ತದಳ ಸಹ ವರದಿಗಳನ್ನು ನೀಡುತ್ತಿದ್ದರೂ, ಅದನ್ನು ಕಾಂಗ್ರೆಸ್ ನಂಬುತ್ತಿಲ್ಲ.

ವರಿಷ್ಠರ ಸೂಚನೆಯೇನು?

 • ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯ ನಾಯಕರಿಗೆ ಸಮಸ್ಯೆಗಳು ಖಚಿತ
 • ಚುನಾವಣೆಯಲ್ಲಿ ಪಕ್ಷ ಸೋಲದಂತೆ ಎಚ್ಚರ ವಹಿಸಬೇಕು
 • ಯಾವುದೆ ಆಂತರಿಕ ಸಮಸ್ಯೆಗಳಿದ್ದರೂ ಚುನಾವಣೆಯ ನಂತರ ಬಗೆಹರಿಸಿಕೊಳ್ಳಬೇಕು
 • ಚುನಾವಣೆಯ ಕಣದಲ್ಲಿ ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದ ತನಕ ಎಲ್ಲಿಯೂ ವ್ಯತ್ಯಾಸಗಳಾಗಬಾರದು
 • ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಉಳಿದವರು ಗೆಲ್ಲಿಸಿಕೊಂಡು ಬರುವ ಪ್ರಯತ್ನ ಮಾಡಬೇಕು.

 

ಎಚ್ಚರಿಕೆ ಸಂದೇಶ

ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿಲ್ಲವೆಂಬ ಅತಿಯಾದ ಆತ್ಮವಿಶ್ವಾಸ ಎಲ್ಲಿ ಮುಳುವಾಗುವುದೋ ಎಂಬ ಆತಂಕ ದೆಹಲಿ ನಾಯಕರನ್ನು ಕಾಡುತ್ತಿದೆ. ಆದ್ದರಿಂದಲೇ ಕಾಂಗ್ರೆಸ್ ವರಿಷ್ಠರು ರಾಜ್ಯ ಮುಖಂಡರಿಗೆ ಎಚ್ಚರಿಕೆಯ ಹೆಜ್ಜೆಯನ್ನಿಡುವಂತೆ ಹಾಗೂ ಅತಿಯಾದ ಆತ್ಮವಿಶ್ವಾಸದಿಂದ ಹೊರಬರುವಂತೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

 

ಬಿಜೆಪಿ ತಂತ್ರಗಳೇನು?

 • ಗುಜರಾತ್, ತ್ರಿಪುರಾ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೆ ತಂದಿದ್ದ ವಿಸ್ತಾರಕ, ಪೇಜ್ ಪ್ರಮುಖ, ಬೂತ್ ಸಮಿತಿಗಳು ರಾಜ್ಯದಲ್ಲೂ ಯಶಸ್ವಿ.
 • ಅಮಿತ್ ಷಾ ಹಾಗೂ ನರೇಂದ್ರ ಮೋದಿ ನೇರ ಉಸ್ತುವಾರಿಯಲ್ಲಿ ಪ್ರಮುಖ ಮುಖಂಡರನ್ನು ಸೆಳೆಯುವ ಯತ್ನ.
 • ವಿವಿಧ ಮಠಾಧೀಶರ ಭೇಟಿಯ ಮೂಲಕ ಆಯಾ ವರ್ಗದ ಮತ ಸೆಳೆತ.
 • ಷಾ ಹಾಗೂ ಮೋದಿ ಜೋಡಿ ರಾಜ್ಯದಲ್ಲಿ ಇನ್ನಷ್ಟು ಪ್ರವಾಸ ಮಾಡಿದರೆ ಮತ್ತಷ್ಟು ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬುದು ಕಾಂಗ್ರೆಸ್ ಹೈಕಮಾಂಡ್ ನಡೆಸಿರುವ ಸಮೀಕ್ಷೆಯಿಂದಲೇ ತಿಳಿದುಬಂದಿದೆ.

 

ಕಾಂಗ್ರೆಸ್ ಸಮಸ್ಯೆಗಳೇನು?

 • ರಾಜ್ಯ ಮುಖಂಡರ ನಡುವೆ ವೈಮನಸ್ಸು, ಇದುವರೆಗೂ ಮೂಡದ ಒಗ್ಗಟ್ಟು
 • ಕಾಲೆಳೆಯುವ ಪ್ರವೃತ್ತಿಯಿಂದ ಆಕಾಂಕ್ಷಿಗಳ ಪಟ್ಟಿ ಉದ್ದ
 • ರಾಜ್ಯದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ವಿಶ್ವಾಸ ಮುಖಂಡರಲ್ಲೂ ಮನೆ ಮಾಡಿರುವುದು.
 • ಮೂಲ-ವಲಸಿಗ ಸಮಸ್ಯೆಗೆ ಇನ್ನೂ ಕಡಿವಾಣ ಹಾಕದಿರುವುದು

Leave a Reply

Your email address will not be published. Required fields are marked *