ಮುಖ್ಯಮಂತ್ರಿಗೆ ಅಹಿಂದ ಆತಂಕ!

<< ಮತದಾರರು ಎಲ್ಲಿ ಕೈ ಬಿಡುತ್ತಾರೋ ಎನ್ನುವ ಭಯ >>

ಬಾಗಲಕೋಟೆ: ನನಗೆ ಭಯ ಶುರುವಾಗಿದೆ. ಅಹಿಂದ ಮತದಾರರು ಎಲ್ಲಿ ಕೈ ಬಿಡುತ್ತಾರೋ ಎನ್ನುವ ಆತಂಕ ಕಾಡುತ್ತಿದೆ..! ಹೀಗೆ ಮನದಾಳದ ಭಯವನ್ನು ಬಹಿರಂಗವಾಗಿಯೇ ಹೊರಹಾಕಿದ್ದು, ಅಹಿಂದ ನಾಯಕ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

ಇಲ್ಲಿನ ನವನಗರದಲ್ಲಿ ಸೋಮವಾರ ನಡೆದ ವೃತ್ತಿ ನೇಕಾರರ ಸಮಾವೇಶ ಉದ್ಘಾಟಿಸಿ, ನೇಕಾರರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯಗೆ ನಿಜವಾಗಿಯೂ ಅಹಿಂದ ಮತದಾರರು ಕೈ ಬಿಡುತ್ತಾರೆ ಎನ್ನುವ ಆತಂಕವೋ ಅಥವಾ ಸಮಾವೇಶದಲ್ಲಿ ಹಿಂದುಳಿದ ವರ್ಗದ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ತಂತ್ರವಾಗಿಯೋ ಸಿಎಂ ವೇದಿಕೆಯಲ್ಲಿ ಆತಂಕದ ಮಾತುಗಳನ್ನಾಡಿದರು.

ಅಹಿಂದ ವಿಚಾರ ನನ್ನ ಹೋರಾಟ ಮತ್ತು ಬದ್ಧತೆ. ಇದು ಹಿಂದು ವಿರೋಧಿ ಅಲ್ಲ. ನಾನು ಹಿಂದು ವಿರೋಧಿ ಆಗಿದ್ದರೆ, ಕಿತ್ತೂರ ರಾಣಿ ಚನ್ನಮ್ಮ, ಹೇಮರಡ್ಡಿ ಮಲ್ಲಮ್ಮ, ಶ್ರೀಕೃಷ್ಣ, ಸಂತ ಸೇವಾಲಾಲ ಜಯಂತಿ ಸೇರಿ ನಾನಾ ಜಯಂತಿಗಳನ್ನು ಮಾಡುತ್ತಿರಲಿಲ್ಲ. ಸುಖಾಸುಮ್ಮನೆ ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ನನಗೆ ಈಚೆಗಿನ ದಿನಗಳಲ್ಲಿ ಭಯ ಶುರುವಾಗಿದೆ. ಅಹಿಂದ ವರ್ಗ ಮತ್ತು ಇತರರು ಎಲ್ಲಿ ನನ್ನ ದೂರ ಮಾಡುತ್ತಾರೋ ಎಂದು ಸಿಎಂ ಆತಂಕ ಹೊರಹಾಕಿದರು.

ಈ ವೇಳೆ ಸಚಿವ ಉಮಾಶ್ರೀ ಎದ್ದು ನಿಂತು, ನಾವೆಲ್ಲ ನಿಮ್ಮ ಪರವಾಗಿದ್ದೇವೆ. ಜನ ನಿಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಜೋರು ಧ್ವನಿಯಲ್ಲಿ ಹೇಳಿದರು. ಇದಕ್ಕೆ ಜನರು ಧ್ವನಿಗೂಡಿಸಿದರು.

ಶೂನ್ಯ ಬಡ್ಡಿ ಸಾಲ: ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಹಿಂದಿನ ಯಾವ ಸರ್ಕಾರಗಳು ಬರಲಿಲ್ಲ. ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನೇಕಾರರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಬರುವ ದಿನಗಳಲ್ಲಿ ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಮತ್ತು ನೇಕಾರಿಕೆ ಉದ್ಯಮದಲ್ಲಿರುವ ಕೂಲಿ ಕಾರ್ವಿುಕರ ಸಾಲ ಮನ್ನಾ ಮಾಡಲಾಗುವುದು ಎಂದು ಸಿಎಂ ಘೊಷಣೆ ಮಾಡಿದರು.

ಸಚಿವರಾದ ಉಮಾಶ್ರೀ, ಆರ್.ಬಿ. ತಿಮ್ಮಾಪುರ, ರುದ್ರಪ್ಪ ಲಮಾಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕರಾದ ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಶಾಸಕ ಪಿ.ಎಚ್.ಪೂಜಾರ, ಎಸ್.ಸಿ.ನಂಜಯ್ಯನಮಠ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಇತರರಿದ್ದರು.

 ಶರಣರ ಕನಸಿನ ಸಮಾಜ ನಿರ್ಮಾಣ ಗುರಿ

ಕೂಡಲಸಂಗಮ: ಬಸವಾದಿ ಶರಣರ ಕನಸಿನ ಸಮಾಜ ನಿರ್ಮಾಣ ಮಾಡುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ಕಾಕತಾಳೀಯ ಎನ್ನುವಂತೆ ಬಸವಣ್ಣನವರ ಜಯಂತಿಯಂದೇ ನಾನು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೂಡಲಸಂಗಮದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ 139 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ ಬಸವೇಶ್ವರ ಅಂತಾ ರಾಷ್ಟ್ರೀಯ ಮ್ಯೂಸಿಯಂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶರಣ ಜೀವನ, ವಿಚಾರಧಾರೆಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಉದ್ದೇಶದಿಂದ ದೆಹಲಿ ಅಕ್ಷರಧಾಮ ಮಾದರಿ ಬಸವೇಶ್ವರರ ಮ್ಯೂಸಿಯಂ ನಿರ್ವಿುಸಲಾಗುತ್ತಿದೆ ಎಂದರು.

ಕಾಯಕದ ಆಧಾರದ ಮೇಲೆ ಜಾತಿ ವ್ಯವಸ್ಥೆ ನಿರ್ಮಾಣ ವಾಯಿತು. ಕಾಯಕ ಮಾಡುವವರು ಕೆಳ ಜಾತಿಯವರು, ಕುಳಿತು ತಿನ್ನುವರು ಮೇಲ್ಜಾತಿಯವರು ಎಂಬ ಕಂದಕ ಸೃಷ್ಟಿಸ ಲಾಯಿತು. ಈ ವ್ಯವಸ್ಥೆಯನ್ನು ಬದಲಾಯಿಸುವುದು ಬಸವಾದಿ ಶರಣರ ಆಶಯವಾಗಿತ್ತು. ವೈದಿಕ ಧರ್ಮದಿಂದಾದ ಅಸಮಾನತೆ ಹೋಗಲಾಡಿಸಲು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ನಡೆಸಿ, ಕಾಯಕ ಮತ್ತು ದಾಸೋಹದ ಸಂದೇಶ ನೀಡಿದರು ಎಂದು ತಿಳಿಸಿದರು.

ಮುಖ್ಯಮಂತ್ರಿಗೆ ಮನವಿ

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ನೀಡಿ, ಲಿಂಗಾಯತರಿಗೆ ಧಾರ್ವಿುಕ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸುವ ಶಿಫಾರಸನ್ನು ಕೇಂದ್ರಕ್ಕೆ ಸಲ್ಲಿಸುವಂತೆ ಕೂಡಲ ಸಂಗಮದ ಜಗದ್ಗುರು ಮಾತೆ ಮಹಾದೇವಿ, ಬೆಳಗಾವಿಯ ಡಾ. ಸಿದ್ಧರಾಮ ಸ್ವಾಮೀಜಿ, ಬಾಲ್ಕಿಯ ಡಾ.ಬಸವಲಿಂಗ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಗಳ ಸಹಿ ಒಳಗೊಂಡ ಮನವಿಪತ್ರವನ್ನು ಗದಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

Leave a Reply

Your email address will not be published. Required fields are marked *