Friday, 16th November 2018  

Vijayavani

Breaking News

ಪ್ರಾಮಾಣಿಕತೆ, ಪ್ರತಿಷ್ಠೆಯಲ್ಲಿ ಗೆಲುವಿನ ಗೂಡು ಕಟ್ಟೋರ್ಯಾರು?

Friday, 27.04.2018, 3:04 AM       No Comments

| ಮಂಜು ಬನವಾಸೆ ಹಾಸನ

ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೊಂದಿಗಿನ ಜಟಾಪಟಿಯಿಂದಾಗಿ ಗಮನ ಸೆಳೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತವರು, ಅರಕಲಗೂಡು ವಿಧಾನಸಭಾ ಕ್ಷೇತ್ರದ ಚುನಾವಣೆ ಈ ಬಾರಿ ತ್ರಿಕೋನ ಹಣಾಹಣಿಗೆ ಸಾಕ್ಷಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಒಕ್ಕಲಿಗ ಹಾಗೂ ಕುರುಬ ಸಮುದಾಯ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ದಲಿತರು ಹಾಗೂ ಲಿಂಗಾಯತರ ಮತಗಳ ವಿಭಜನೆ ಫಲಿತಾಂಶ ತಲೆಕೆಳಗು ಮಾಡಬಲ್ಲದು.

 

ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಮಂಜು: ಸತತ 2 ಸಲ ಗೆದ್ದಿರುವ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದಾರೆ. ಆಡಳಿತ ವಿರೋಧಿ ಅಲೆ ಎದುರಿಸಲು ಅವರು ಈಗಾಗಲೇ ಕಾಂಗ್ರೆಸ್ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಕಾರ್ಯತಂತ್ರದ ಮೊರೆ ಹೋಗಿ ಹಳ್ಳಿಗಳಲ್ಲಿ ಸುತ್ತುತ್ತಿದ್ದಾರೆ.

ಹೋರಾಟದ ಫಲ ಪಡೆವ ಪ್ರಯತ್ನ: ಬೆಂಗಳೂರು ಸುತ್ತಮುತ್ತ ಭೂ ಒತ್ತುವರಿ ತನಿಖಾ ಸಮಿತಿ ಅಧ್ಯಕ್ಷರಾಗಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ, ಪ್ರಾಮಾಣಿಕ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಎ.ಟಿ.ರಾಮಸ್ವಾಮಿ ಅವರು ಎ.ಮಂಜು ವಿರುದ್ಧ ಎರಡು ಸಲ ಸೋತಿದ್ದು, ಇದೀಗ ಸಚಿವರ ಹ್ಯಾಟ್ರಿಕ್ ಕನಸು ನನಸಾಗದಂತೆ ತಡೆಯುವ ಯತ್ನದಲ್ಲಿದ್ದಾರೆ. ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಲು ಹೋರಾಟ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ, ವಾಗ್ದಾಳಿಗಳಲ್ಲಿ ತೊಡಗಿರುವ ಅವರು, ‘ಪ್ರಾಮಾಣಿಕ ಚುನಾವಣೆ’ ನೀತಿ ಬದಲಿಸಿಕೊಳ್ಳುವಂತೆ ಬೆಂಬಲಿಗರ ಒತ್ತಡ ಅನುಭವಿಸುತ್ತಿದ್ದಾರೆ.

ಕಮಲದ ಬಲದಲ್ಲಿ ಯೋಗಾ ರಮೇಶ್

ಸಾಕಷ್ಟು ಸ್ಪರ್ಧೆಯ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಯೋಗಾ ರಮೇಶ್ ಟಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 32,477 ಮತಗಳನ್ನು ಪಡೆದಿದ್ದ ಯೋಗಾ, ಬಿಜೆಪಿ ಅಭ್ಯರ್ಥಿಯಾಗಿ ಸಾಧನೆ ಉತ್ತಮಗೊಳಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.

ತ್ರಿಕೋನ ಸ್ಪರ್ಧೆ

ಎ.ಮಂಜು ಹಾಗೂ ಎ.ಟಿ.ರಾಮ ಸ್ವಾಮಿ ಅವರಿಗೆ ಬಿಜೆಪಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇರುವು ದರಿಂದ ತ್ರಿಕೋನ ಸ್ಪರ್ಧೆಯಿಂದಾಗಿ ಗೆಲುವಿನ ಅಂತರ ಕಡಿಮೆಯಾದರೆ ಅಚ್ಚರಿಪಡಬೇಕಿಲ್ಲ.

ಎ.ಮಂಜು ಸಚಿವರಾದ ಆರಂಭದಲ್ಲಿ ಕೆಲಸಗಳು ಆಗಿರಲಿಲ್ಲ. ಆದರೆ ಈ ವರ್ಷ ರಸ್ತೆಗಳು ಡಾಂಬರು ಕಂಡಿವೆ, ಪಿರಿಯಾ ಪಟ್ಟಣ- ಹಾಸನ ರಾಜ್ಯ ಹೆದ್ದಾರಿ ನಿರ್ವಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಮಾತ್ರ ನೀಗಿಲ್ಲ.

| ಮಲ್ಲೇಶ್ ಅರಕಲಗೂಡು

ಹಳ್ಳಿ ಮೈಸೂರು ಹೋಬಳಿ ಕಡೆಗಣಿಸಲಾಗಿದೆ. ಈಚೆಗೆ ರಸ್ತೆಗುಂಡಿ ಮುಚ್ಚುವ ಕೆಲಸ ನಡೆದಿದೆ. 3 ವರ್ಷಗಳಿಂದ ಬೆಳೆಗೆ ಬೇಕಾದ ನೀರು ಹರಿಸುವಲ್ಲಿ ವಿಫಲವಾಗಿದ್ದಾರೆ.

| ಸೋಮಶೇಖರ್ ಆನೆಕನ್ನಂಬಾಡಿ

Leave a Reply

Your email address will not be published. Required fields are marked *

Back To Top