Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಬೆಳಗಾವಿಯಲ್ಲಿ ಬೆವರಿಳಿಸೋ ಭಿನ್ನಮತ!

Saturday, 13.01.2018, 3:05 AM       No Comments

| ರಾಜೇಶ ವೈದ್ಯ ಬೆಳಗಾವಿ

ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್ ತಲಾ ಇಬ್ಬರು ಶಾಸಕರೊಂದಿಗೆ ಸಮಬಲ ಹೊಂದಿವೆ. ಆದರೆ ಇದೇ ಚಿತ್ರಣ ಈ ಬಾರಿಯ ಚುನಾವಣೆಯಲ್ಲೂ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ, ಗೆಲುವಿನ ನಿರೀಕ್ಷೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ಭೂತ ಕಾಡುತ್ತಿದೆ. ಕೆಲ ಹಾಲಿಗಳು ಟಿಕೆಟ್ ವಂಚಿತರಾಗುವ ಸಾಧ್ಯತೆಗಳೂ ಇದೆ. ಬೈಲಹೊಂಗಲ ಶಾಸಕ ಡಾ.ವಿಶ್ವನಾಥ ಪಾಟೀಲರಿಗೆ ಸ್ವಪಕ್ಷದವರೇ ಆದ ಜಗದೀಶ ಮೆಟಗುಡ್ಡ ತಲೆನೋವಾಗಿ ಕಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಎಂಇಎಸ್​ನಿಂದ ಗೆದ್ದ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ ಆಂತರಿಕ ಭಿನ್ನಮತದಿಂದ ಟಿಕೆಟ್ ತಪ್ಪಿಸಿಕೊಂಡರೂ ಅಚ್ಚರಿ ಇಲ್ಲ. ಫಿರೋಜ್ ಸೇಠ್​ರಿಗೆ ಲಖನ್ ಜಾರಕಿಹೊಳಿ ಜ್ವರ ಕಾಡುತ್ತಿದೆ. ಸಿ.ಎಂ. ಇಬ್ರಾಹಿಂ ಗುಪ್ತ ಭೇಟಿ ಬೆಳಗಾವಿ ಉತ್ತರದಲ್ಲಿ ಬಿರುಗಾಳಿ ಎಬ್ಬಿಸಿದೆ.

ಮಾವನಿಗೆ ಅಳಿಯ ಕಂಟಕ

ಹಾಲಿ ಶಾಸಕ ಡಿ.ಬಿ.ಇನಾಂದಾರ ಈ ಬಾರಿ ಗೆದ್ದರೆ 6 ಸಲ ಶಾಸಕರಾದ ದಾಖಲೆ ಅವರದು. ಆದರೆ ಕಾಂಗ್ರೆಸ್ ಪಾಲಿಗೆ ಕಿತ್ತೂರಿನಲ್ಲಿ ಅಳಿಯ-ಮಾವನ ಸಂಬಂಧ ನಿರ್ಣಾಯಕವಾಗುವ ಪರಿಸ್ಥಿತಿ ನಿರ್ವಣವಾಗಿದೆ. ಇನಾಂದಾರ ಗೆಲುವಿಗೆ ಶ್ರಮಿಸಿದ್ದ ಅವರ ಅಳಿಯ ಬಾಬಾಸಾಹೇಬ ಪಾಟೀಲ ಸಚಿವ ವಿನಯ ಕುಲಕರ್ಣಿ ಗೆಳೆತನದಿಂದ ಟಿಕೆಟ್​ಗೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಸುರೇಶ ಮಾರಿಹಾಳ, ಮಹಾಂತೇಶ ದೊಡಗೌಡರ, ಡಾ. ಜಗದೀಶ ಹಾರೂಗೊಪ್ಪ, ಸಿ.ಆರ್. ಪಾಟೀಲ, ಬಸನಗೌಡ ಸಿದ್ರಾಮಣಿ ಇತರರು ರೇಸ್​ನಲ್ಲಿದ್ದಾರೆ.


ಉತ್ತರದ ‘ಸ್ಮಾರ್ಟ್’ ಶಾಸಕ

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್, ಸ್ಮಾರ್ಟ್​ಸಿಟಿ ಯೋಜನೆ ಲಾಭ ಪಡೆದು ಅಭಿವೃದ್ಧಿ ಭರಾಟೆ ನಡೆಸಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಇಲ್ಲಿ ಯಡಿಯೂರಪ್ಪ ಬಣದವರು ಅಥವಾ ಅನಂತಕುಮಾರ ಸೂಚಿಸಿದವರು ಟಿಕೆಟ್ ಪಡೆಯುತ್ತಾರೋ ಎಂಬ ಕುತೂಹಲವಿದೆ. ಡಾ. ರವಿ ಪಾಟೀಲ, ಕಿರಣ ಜಾಧವ, ಅನಿಲ ಬೆನಕೆ, ರಾಜು ಟೋಪಣ್ಣವರ್, ರಾಜೇಂದ್ರ ಹರಕುಣಿ, ಎ.ಜಿ. ಮುಳವಾಡಮಠ, ವೀರೇಶ ಕಿವುಡಸಣ್ಣವರ, ದೀಪಾ ಕುಡಚಿ, ಎಂ.ಬಿ. ಜಿರಲೆ ಮುಂತಾದವರು ಬಿಜೆಪಿ ಆಕಾಂಕ್ಷಿತರ ಪಟ್ಟಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಸದ್ದು ಮಾಡಿದ್ದ ಲಖನ್ ಜಾರಕಿಹೊಳಿ ಸದ್ಯಕ್ಕೆ ಮಗುಮ್ಮಾಗಿದ್ದಾರೆ. ಜೆಡಿಎಸ್​ನಿಂದ ಫೈಜುಲ್ಲಾ ಮಾಡಿವಾಲೆ, ಎಂಇಎಸ್​ನಿಂದ ರೇಣು ಕಿಲ್ಲೇಕರ್ ರೇಸ್​ನಲ್ಲಿದ್ದಾರೆ. ಸಿ.ಎಂ. ಇಬ್ರಾಹಿಂ ಕ್ಷೇತ್ರಕ್ಕೆ ನಿಗೂಢವಾಗಿ ಬಂದು ಹೋಗುತ್ತಿದ್ದು, ತೆರೆಮರೆ ಕಸರತ್ತು ನಡೆಸುತ್ತಿರುವುದು ಕೌತುಕ ಮೂಡಿಸಿದೆ.


ಸಂಜಯ-ಲಕ್ಷ್ಮೀ ಜುಗಲಬಂದಿ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕೂಡ ಬಿಜೆಪಿ ಶಾಸಕ ಸಂಜಯ ಪಾಟೀಲ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ತುರುಸಿನ ಸ್ಪರ್ಧೆ ನಡೆಯುವುದು ಖಚಿತ. ಶಿವಾಜಿ ಸುಂಟಕರರನ್ನು ಬಿಜೆಪಿಗೆ ಸೆಳೆದ ಸಂಜಯ ಪಾಟೀಲ ಎಂಇಎಸ್ ವಿರುದ್ಧ ಒಂದು ಸುತ್ತಿನ ಮೇಲುಗೈ ಸಾಧಿಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಜತೆಗಿನ ಗೆಳೆತನ ಸಂಜಯ ಪಾಲಿಗೆ ವರದಾನವಾದರೆ ಅಚ್ಚರಿಯಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಕ್ಕೆ ಸಚಿವ ರಮೇಶ ಜಾರಕಿಹೊಳಿ ನಿಂತಿದ್ದಾರೆ. ಕೂದಲೆಳೆ ಅಂತರದಿಂದ ಸೋತಿದ್ದ ಎಂಇಎಸ್​ನ ಮಾಜಿ ಶಾಸಕ ಮನೋಹರ ಕಿಣೇಕರ್ ಕೂಡ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ.


ದಕ್ಷಿಣ ಟಿಕೆಟ್ ಯಾರಿಗೆ?

ಬೆಳಗಾವಿ ದಕ್ಷಿಣ ಕ್ಷೇತ್ರ ಚುನಾವಣೆ ಹೊಸ್ತಿಲಲ್ಲಿ ವಿಚಿತ್ರ ಸುಳಿಯಲ್ಲಿದೆ. ಹಾಲಿ ಶಾಸಕ ಸಂಭಾಜಿ ಪಾಟೀಲರಿಗೆ ಎಂಇಎಸ್ ಟಿಕೆಟ್ ಕೈ ತಪ್ಪಿದರೂ ಅಚ್ಚರಿಯಿಲ್ಲ. ಮಾಜಿ ಮೇಯರ್​ಗಳಾದ ಸರಿತಾ ಪಾಟೀಲ ಮತ್ತು ಕಿರಣ ಸಾಯನಾಕ್ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೆದಿದೆ. ಈ ಕಾರಣಕ್ಕೆ ಸಂಭಾಜಿ ಪಾಟೀಲ ನಡೆ ಕುತೂಹಲ ಮೂಡಿಸಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕಳೆದ ಬಾರಿ ಸೋಲು ಕಂಡಿದ್ದ ಮಾಜಿ ಶಾಸಕ ಅಭಯ ಪಾಟೀಲ ಬಿಜೆಪಿಯಿಂದ ಟಿಕೆಟ್ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಸ್ವಪಕ್ಷದಲ್ಲಿಯೇ ಒಂದು ಬಣದಿಂದ ವಿರೋಧ ವ್ಯಕ್ತವಾಗುತ್ತಿದೆ. ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ವಿಧಾನಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಕೂಡ ರೇಸ್​ನಲ್ಲಿದ್ದಾರೆ.


ಬಿಜೆಪಿ ಹೊಸ್ತಿಲಲ್ಲಿ ಅರವಿಂದ?

ಖಾನಾಪುರ ಶಾಸಕ ಅರವಿಂದ ಪಾಟೀಲ ವಿರುದ್ಧ ಎಂಇಎಸ್​ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಇದು ವಿಕೋಪಕ್ಕೆ ಹೋದರೆ ಪಾಟೀಲರಿಗೆ ಟಿಕೆಟ್ ಕೈತಪ್ಪಲಿದೆ. ಎಂಇಎಸ್ ಬ್ಲಾಕ್ ಅಧ್ಯಕ್ಷ ದಿಗಂಬರ ಪಾಟೀಲ ಜತೆ ಸಂಬಂಧ ಹಳಸಿರುವುದು ಶಾಸಕರಿಗೆ ಬಿಸಿತುಪ್ಪವಾಗಿದ್ದು, ತಮ್ಮದೇ ಆದ ಬಣ ಗಟ್ಟಿಗೊಳಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಜತೆಗೆ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್​ಗಾಗಿ ಸತೀಶ ಜಾರಕಿಹೊಳಿ ಬೆಂಬಲಿತ ಅಂಜಲಿ ನಿಂಬಾಳ್ಕರ್, ರಮೇಶ ಜಾರಕಿಹೊಳಿ ಬೆಂಬಲಿತ ನಾಸೀರ್ ಭಾಗವಾನ್ ಕಸರತ್ತು ನಡೆಸಿದ್ದಾರೆ. ಬಿಜೆಪಿಯಿಂದ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದ್ದು, ಮಾಜಿ ಶಾಸಕ ಪ್ರಲ್ಹಾದ ರೇಮಾನಿ, ವಿಠಲ ಹಲಗೇಕರ, ವಿಠಲ ಪಾಟೀಲ, ಪ್ರಮೋದ ಕೊಚೇರಿ, ಬಾಬುರಾವ್ ದೇಸಾಯಿ, ಮಂಜುಳಾ ಕಾಪಸೆ ರೇಸ್​ನಲ್ಲಿದ್ದಾರೆ. ಎಂಇಎಸ್​ನಿಂದ ಮುರಳೀಧರ ಪಾಟೀಲ, ವಿಲಾಸ ಬೆಳಗಾಂವಕರ ಪೈಪೋಟಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಗೌಣ.


ಟಿಕೆಟ್​ಗಾಗಿ ಹಾಲಿ-ಮಾಜಿ ಕದನ

ಬೈಲಹೊಂಗಲ ಚುನಾವಣೆ ಫಲಿತಾಂಶ ಮಾಜಿ ಶಾಸಕ ಜಗದೀಶ ಮೆಟಗುಡ್ಡ ನಡೆ ಮೇಲೆ ಅವಲಂಬಿಸಿದೆ. ಬಿಜೆಪಿ ಶಾಸಕ ಡಾ.ವಿಶ್ವನಾಥ ಪಾಟೀಲ ಜತೆ ಟಿಕೆಟ್ ಕದನಕ್ಕೆ ಇಳಿದಿದ್ದು, ಸಿಗದಿದ್ದರೆ ಮೆಟಗುಡ್ಡ ಬಂಡಾಯ ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಮೆಟಗುಡ್ಡ ಕಾಂಗ್ರೆಸ್ ಅಥವಾ ಜೆಡಿಎಸ್ ಕದ ತಟ್ಟಬಹುದು ಎಂಬ ಮಾತು ಕೇಳಿಬಂದಿದೆ. ಕಾಂಗ್ರೆಸ್​ನಿಂದ ಮಹಾಂತೇಶ ಕೌಜಲಗಿ ಅವರಿಗೇ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆಯಾದರೂ, ಕಿರಣ ಸಾಧುನವರ, ಬಸವರಾಜ ಬಾಳೇಕುಂದ್ರಗಿ ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್​ನಿಂದ ಶಂಕರ ಮಾಡಲಗಿ ಕಣಕ್ಕಿಳಿಯುವುದು ಖಚಿತ.?

 

Leave a Reply

Your email address will not be published. Required fields are marked *

Back To Top