ಆಪರೇಷನ್ ಗುಟ್ಟು ರಟ್ಟು ಕೈಗೆ ಬಿತ್ತು ಪೆಟ್ಟು

ಬೆಂಗಳೂರು: ಮೈತ್ರಿ ಸರ್ಕಾರ ಅಸ್ಥಿರಗೊಳ್ಳಲು ತಯಾರಾಗಿದ್ದ ಯೋಜನೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ತುತ್ತೂರಿ ಊದಿದ್ದೇ ಶಾಸಕರ ನಡುವಿನ ಕೈ-ಕೈ ಮಿಲಾವಣೆಗೆ ಪ್ರಮುಖ ಕಾರಣವಾಗಿದೆ. ಇಡೀ ಘಟನೆಯಿಂದ ಪಕ್ಷದ ಇಮೇಜ್​ಗೆ ರಾಷ್ಟ್ರಮಟ್ಟದಲ್ಲಿ ಧಕ್ಕೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.

ಪಕ್ಷ ತೊರೆದು ಬಿಜೆಪಿ ಸೇರುವ ಆಲೋಚನೆಯಲ್ಲಿದ್ದ ಕಾಂಗ್ರೆಸ್​ನ ಅತೃಪ್ತ ಶಾಸಕರ ಪಟ್ಟಿಯಲ್ಲಿ ಕಂಪ್ಲಿ ಶಾಸಕ ಗಣೇಶ್ ಹೆಸರೂ ಇತ್ತೆನ್ನಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರೊಂದಿಗೆ ಮಾತುಕತೆ ಸಹ ನಡೆಸಿದ್ದರ ಬಗ್ಗೆ ಆನಂದ್ ಸಿಂಗ್​ಗೆ ಸ್ಪಷ್ಟ ಮಾಹಿತಿ ಇತ್ತು. ಅವರೇ ತನ್ನ ಯೋಜನೆಯನ್ನು ತಲೆಕೆಳಗೆ ಮಾಡಿದರು ಎಂಬ ಸಿಟ್ಟಿನಲ್ಲಿ ಗಣೇಶ್ ಥಳಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.

‘ನಾನು ಬಿಜೆಪಿಗೆ ಹೋಗಿದ್ದರೆ ಸಚಿವನಾಗಿರುತ್ತಿದ್ದೆ. ನಿನ್ನಿಂದ ಹಾಳಾಗಿ ಹೋದೆ. ಎಲ್ಲದಕ್ಕೂ ನೀನೇ ಕಾರಣ’ ಎಂದು ಗಣೇಶ್ ರೆಸಾರ್ಟ್​ನಲ್ಲಿ ಆನಂದ್ ಸಿಂಗ್ ಜತೆ ತಗಾದೆ ತೆಗೆದಿದ್ದಾರೆ. ನಾನು ಬಿಜೆಪಿ ಜತೆ ಸಂಪರ್ಕದಲ್ಲಿ ಇರೋದು, ಯಾರ ಜತೆ ಮಾತನಾಡುತ್ತಾ ಇದ್ದೇನೆ ಎಂಬ ಮಾಹಿತಿ ಪ್ರತಿ ಹಂತದಲ್ಲೂ ಕೈ ನಾಯಕರಿಗೆ ತಲುಪಿಸಿದ್ದು ನೀನೇ. ಇಲ್ಲಿದ್ದು ಸಚಿವನೂ ಆಗಿಲ್ಲ, ಏನೂ ಪ್ರಯೋಜನ ಆಗಿಲ್ಲ ಎಂದು ಗಣೇಶ್ ರೇಗಿದ್ದಾರೆ. ‘ನಾನೇನು ನಿನ್ನನ್ನು ಎಳೆದುಕೊಂಡು ಬಂದಿಲ್ಲ. ಸುಮ್ಮನೆ ನನ್ನ ಮೇಲೆ ಆರೋಪ ಮಾಡಬೇಡ’ ಎಂದು ಆನಂದ್ ಸಿಂಗ್ ದಬಾಯಿಸಿದ್ದಾರೆ. ವಾಗ್ವಾದ ಅತಿರೇಕಕ್ಕೆ ಹೋಗಿ ಕೈಕೈ ಮಿಲಾಯಿಸಿಕೊಂಡಿದ್ದಾರೆ. ನಂತರ ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಗಣೇಶ್ ಕೈಯಲ್ಲಿ ಬಾಟಲಿ ಕೂಡ ಇತ್ತೆಂದು ಹೇಳಲಾಗುತ್ತಿದೆ. ಆದರೆ ಯಾರೂ ಈ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.

ಹಲ್ಲೆಗೆ 2 ಕಾರಣಗಳು?: ಹಗರಿಬೊಮ್ಮನಹಳ್ಳಿಯಲ್ಲಿ ಆನಂದ್ ಅಭಿಮಾನಿ ಬಳಗದ ಕಚೇರಿ ತೆರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲು ಭೀಮಾನಾಯ್್ಕ ಮತ್ತು ಆನಂದ್ ಸಿಂಗ್ ನಡುವೆ ಜಗಳ ಆರಂಭಗೊಂಡಿದೆ. ಆಗ ಜತೆಯಲ್ಲಿಯೇ ಇದ್ದ ಗಣೇಶ್, ನಾವು ಬಿಜೆಪಿ ಸಂಪರ್ಕದಲ್ಲಿರುವ ವಿಚಾರವನ್ನು ಡಿ.ಕೆ.ಶಿವಕುಮಾರ್​ಗೆ ಆನಂದ್ ಸಿಂಗ್ ಹೇಳಿದ್ದಾರೆ ಎಂದು ಆಕ್ರೋಶಗೊಂಡು ಇಬ್ಬರ ನಡುವಿನ ಗಲಾಟೆಯಲ್ಲಿ ಮಧ್ಯ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಡೀ ಬೆಳವಣಿಗೆಯಿಂದ ಕಾಂಗ್ರೆಸ್​ಗೆ ಮುಜುಗರವಾಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಕೈ ನಾಯಕರು ಹಿಂದೇಟು ಹಾಕಿದ್ದಾರೆ. ಘಟನೆಯಿಂದ ಪಕ್ಷದ ಇಮೇಜ್​ಗೆ ಧಕ್ಕೆಯಾಗಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೆಸಾರ್ಟ್​ಗೆ ಆಗಮಿಸಿ ಶಾಸಕರಿಂದ ಮಾಹಿತಿ ಪಡೆದುಕೊಂಡು ದೆಹಲಿ ನಾಯಕರಿಗೆ ಮಾಹಿತಿ ರವಾನಿಸಿದರು. ದಿನದಲ್ಲಿ 2 ಬಾರಿ ದೆಹಲಿ ನಾಯಕರು ಘಟನೆ ಬಗ್ಗೆ ವಿವರಣೆ ಕೇಳಿದ್ದರು ಎನ್ನಲಾಗಿದೆ.

ರಂಪಾಟದ ಬಗ್ಗೆ ನಾಯಕರ ಸಭೆ

ಸರ್ಕಾರ ಉಳಿಸಿಕೊಳ್ಳಲು ಶಾಸಕರನ್ನು ಕೂಡಿಟ್ಟುಕೊಂಡ ರೆಸಾರ್ಟ್ ನಲ್ಲಿ ನಡೆದ ರಂಪಾಟದಿಂದ ಕೈಗೆ ಮಸಿ ಮೆತ್ತಿಕೊಂಡಂತಾಗಿದೆ. ಈ ಘಟನೆಗೆ ಕೊನೆ ಹಾಡುವ ಉದ್ದೇಶದಿಂದ ಪಕ್ಷದ ನಾಯಕರಾದ ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್, ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಭಾನುವಾರ ಸಂಜೆ ರೆಸಾರ್ಟ್ ನಲ್ಲಿ ಸಭೆ ನಡೆಸಿದರು. ಸಿದ್ದರಾಮಯ್ಯ ಪ್ರವಾಸ ಮೊಟಕುಗೊಳಿಸಿ ಹೆಲಿಕ್ಯಾಪ್ಟರ್​ನಲ್ಲೇ ರೆಸಾರ್ಟ್​ಗೆ ಬಂದಿಳಿದರು. ಶಾಸಕ ಗಣೇಶ್ ಕರೆದು ಮಾತನಾಡಿದ ನಾಯಕರು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಇಂಥ ಬೆಳವಣಿಗೆ ಸಹಿಸಲ್ಲ ಎಂದರು ಎಚ್ಚರಿಕೆ ನೀಡಿದರು.

ಇಟ್ಕೊಂಡ್ರೆ ಕಷ್ಟ, ಬಿಟ್ರೆ ಸಂಕಷ್ಟ

ಬೆಂಗಳೂರು: ಪಕ್ಷದ ಹಲವು ಶಾಸಕರ ಮೇಲೆ ಭರವಸೆ ಕಳೆದುಕೊಂಡಿರುವ ಕಾಂಗ್ರೆಸ್ ಈಗ ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿದೆ. ಸರ್ಕಾರದ ಮೇಲೆ ಮುನಿಸಿ ಕೊಂಡು ಬಿಜೆಪಿಯತ್ತ ಹೊರಟ ಶಾಸಕರನ್ನು

ರೆಸಾರ್ಟ್​ನಲ್ಲಿ ಇನ್ನಷ್ಟು ದಿನ ಇಟ್ಟುಕೊಳ್ಳಲೂ ಆಗದ, ಬಿಟ್ಟು ಬಿಡಲೂ ಆಗದ ವಿಚಿತ್ರ ಸಂದರ್ಭ ಎದುರಾಗಿದೆ.

ಶಾಸಕರನ್ನು ರೆಸಾರ್ಟ್​ನಲ್ಲಿ ಮುಂದುವರಿಸಬೇಕೆ? ಬೇಡವೇ? ಹೊರಗೆ ಬಿಟ್ಟರೆ ಅವರನ್ನು ಕಾಯುವ ಜವಾಬ್ದಾರಿ ಯಾರದ್ದು? ಎಂಬ ಬಗ್ಗೆಯೇ ಭಾನವಾರ ರಾತ್ರಿ ಪಕ್ಷದ ನಾಯಕರ ಮಹತ್ವದ ಸಭೆ ನಡೆಯಿತು. ನಾಲ್ವರು ಶಾಸಕರು ಸಂಪರ್ಕಕ್ಕೆ ಬಾರದೆ ಅಂತರ ಕಾಯ್ದುಕೊಂಡಿರುವ ಕಾರಣ ಯಾವುದೇ ಸಂದರ್ಭದಲ್ಲಿ ಈ ಸಂಖ್ಯೆ ಹೆಚ್ಚಾಗಬಹುದೆಂಬ ಅಳುಕು ಕೈ ನಾಯಕರಿಗಿದೆ. ಒಂದು ವೇಳೆ ಇನ್ನೂ ಇಬ್ಬರು ಶಾಸಕರು ಅತೃಪ್ತರ ಸಂಗ ಮಾಡಿದರೆ ಸರ್ಕಾರಕ್ಕೆ ಭಂಗವಾಗಬಹುದೆಂಬ ಸ್ಪಷ್ಟ ಅರಿವು ಇರುವುದರಿಂದಲೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ನಾಯಕರು ಪರದಾಡಿದರು.

ಸಂಜೆ 7 ಗಂಟೆಗೆ ರೆಸಾರ್ಟ್​ಗೆ ಆಗಮಿಸಿದ ಪಕ್ಷದ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಎರಡು ಸುತ್ತಿನಲ್ಲಿ ಸಭೆ ನಡೆಸಿದರು. ಅಷ್ಟರಲ್ಲಾಗಲೇ ರೆಸಾರ್ಟ್​ನಲ್ಲಿದ್ದ 35 ಶಾಸಕರು ಅವರ ಕ್ಷೇತ್ರಗಳಿಗೆ ತೆರಳಲು ಸಜ್ಜಾಗಿದ್ದರು.

ಗುರುಗ್ರಾಮ ರೆಸಾರ್ಟ್​ನಿಂದ ಬಿಜೆಪಿ ಶಾಸಕರು ವಾಪಸಾಗಿದ್ದಾರೆ. ಸೋಮವಾರದಿಂದ ಬಿಜೆಪಿ ಬರಪರಿಸ್ಥಿತಿ ಕುರಿತು ಪ್ರವಾಸ ನಡೆಸಲಿದೆ. ಕಾಂಗ್ರೆಸ್ ಶಾಸಕರು ರೆಸಾರ್ಟ್​ನಲ್ಲಿದ್ದಾರೆ ಎಂಬುದೇ ಜನರಲ್ಲಿ ಚರ್ಚೆಗೆ ಕಾರಣವಾಗಿದೆ. ಈಗಂತೂ ಶಾಸಕರೇ ಹೊಡೆದಾಡಿಕೊಂಡಿರುವುದರಿಂದ ಜನರಲ್ಲಿ ನಮ್ಮ ಮೇಲೆ ಆಕ್ರೋಶ ಹೆಚ್ಚಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಇನ್ನು ರೆಸಾರ್ಟ್​ನಲ್ಲಿ ಉಳಿಯಬಾರದೆಂದು ಬಹುತೇಕ ಶಾಸಕರು ನಿರ್ಧರಿಸಿದ್ದಾರೆ. ಈ ಕುರಿತು ಸೋಮವಾರ ಬೆಳಗ್ಗೆ 11ರ ವೇಳೆಗೆ ಕಾಂಗ್ರೆಸ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ವಾಲಾ ಅಂಗಳಕ್ಕೆ ಚೆಂಡು?

ಬೆಂಗಳೂರು: ರೆಸಾರ್ಟ್​ನಲ್ಲಿ ಕಾಂಗ್ರೆಸ್ ಶಾಸಕರ ಬಡಿದಾಟ ವಿಚಾರದಲ್ಲಿ ಸರ್ಕಾರ, ಪೊಲೀಸರ ವರ್ತನೆ ಹಾಗೂ ಆಡಳಿತ ಕುಸಿದಿರುವ ಕುರಿತು ರಾಜ್ಯಪಾಲರಿಗೆ ದೂರು ನೀಡಲು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ. ಜನಸಾಮಾನ್ಯರು ಹೊಡೆದಾಡಿಕೊಂಡ ವಿಚಾರ ತಿಳಿದುಬಂದರೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸುತ್ತಾರೆ. ಸಂವಿಧಾನಾತ್ಮಕವಾಗಿ ರಕ್ಷಣೆ ಹೊಂದಿರುವ ಜನಪ್ರತಿನಿಧಿಯೊಬ್ಬರ ಮೇಲೆಯೇ ಹಲ್ಲೆ ನಡೆದರೂ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಬೆಳಗ್ಗಿನಿಂದ ಸುದ್ದಿಗಳು ಬಿತ್ತರವಾಗುತ್ತಿರುವ ಕಾರಣ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ವಿಚಾರಣೆ ನಡೆಸುವುದು ಪೊಲೀಸರ ಕರ್ತವ್ಯವಾದರೂ ಸರ್ಕಾರದ ಒತ್ತಡಕ್ಕೆ ಮಣಿದು ಹಿಂಜರಿದಿದ್ದಾರೆ ಎಂದು ರಾಜ್ಯ ಬಿಜೆಪಿ ವಲಯದಲ್ಲಿ ಭಾನುವಾರ ಚರ್ಚೆ ನಡೆದಿದೆ.

ಈ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರೇ ಹೊಡೆದಾಡಿಕೊಂಡರೂ ಪೊಲೀಸರು ನಿರಾಸಕ್ತಿ ವಹಿಸಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿರುವುದು ನಮಗೆ ಒಪ್ಪಿತವಲ್ಲ ಎಂದು ಸುಮಾರು 20 ಕಾಂಗ್ರೆಸ್ ಶಾಸಕರು ಹೇಳಿರುವ ಸುದ್ದಿಗಳಿವೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಮಧ್ಯಪ್ರವೇಶಿಸಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸುವ ಚರ್ಚೆ ನಡೆಯುತ್ತಿದೆ. ಸೋಮವಾರ ಸರ್ಕಾರ ಹಾಗೂ ಪೊಲೀಸರ ನಡೆ ಅವಲೋಕಿಸಿ, ರಾಜ್ಯ ಬಿಜೆಪಿ ಅಧ್ಯಕ್ಷರ ಸೂಚನೆ ಮೇರೆಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯಪಾಲರು ಏನು ಮಾಡಬಹುದು?

  • ಸುದ್ದಿವಾಹಿನಿ, ಪತ್ರಿಕೆಗಳ ವರದಿಯನ್ನಾಧರಿಸಿ ಘಟನೆ ಬಗ್ಗೆ ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ
  • ಬಿಜೆಪಿ ದೂರು ನೀಡಿದ ನಂತರ ವಿವರಣೆ ಬಯಸಿ ಪತ್ರ
  • ಖುದ್ದಾಗಿ ಆಗಮಿಸಿ ಪರಿಸ್ಥಿತಿ ವಿವರಿಸುವಂತೆ ಸಿಎಂಗೆ ಸೂಚನೆ
  • ಪ್ರಕರಣ ಕುರಿತು ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ಪೊಲೀಸರಿಗೆ ಸೂಚನೆ
  • ಕಾಲಕಾಲಕ್ಕೆ ಕೇಂದ್ರ ಗೃಹ ಇಲಾಖೆಗೆ ನೀಡುವ ವರದಿಯಲ್ಲಿ ರೆಸಾರ್ಟ್ ಪ್ರಕರಣದ ಉಲ್ಲೇಖ
  • ಕೈ ರೆಸಾರ್ಟ್ ವಾಸ, ಹೊಡೆದಾಟ ಪ್ರಕರಣದ ಕುರಿತೇ ಕೇಂದ್ರಕ್ಕೆ ವಿಶೇಷ ವರದಿ

ಜಂಪಿಂಗ್ ಸ್ಟಾರ್​ಗಳ ಮೇಲೆ ವಿಶೇಷ ಕಣ್ಗಾವಲು

ಎಲ್ಲಿ ಮೈತ್ರಿ ಸರ್ಕಾರ ಬೀಳಿಸಿಬಿಡುತ್ತಾರೋ ಎಂದು ಕಾಂಗ್ರೆಸ್​ಗೆ ತನ್ನದೇ 10 ಶಾಸಕರ ಮೇಲೆ ಅನುಮಾನವಿದೆ, ಅದರಲ್ಲೂ ಏಳು ಮಂದಿ ಮೇಲೆ ಹೆಚ್ಚಿನ ಗುಮಾನಿ. ಇವರಿಗಾಗಿ ಬರೋಬ್ಬರಿ 40 ಶಾಸಕರು ರೆಸಾರ್ಟ್ ಬಂಧನದಲ್ಲಿ ಕಳೆಯಬೇಕಾಗಿರುವ ಬಗ್ಗೆ ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ. ಪಕ್ಷ ನಿಷ್ಠರಾದ ಅನೇಕ ಶಾಸಕರೂ ರೆಸಾರ್ಟ್ ವಾಸ ಅನುಭವಿಸುತ್ತಿರುವುದು ಪ್ರಮುಖ ನಾಯಕರಿಗೆ ಇರಿಸುಮುರಿಸು ತಂದಿದೆ.

ಎಲ್ಲ 80 ಶಾಸಕರೂ ರೆಸಾರ್ಟ್​ನಲ್ಲಿಲ್ಲ. ಅಲ್ಲಿ ವಾಸ್ತವ್ಯ ಇರುವುದು 35-38 ಮಂದಿ ಮಾತ್ರ. ಪಕ್ಷ ಯಾರು ವಾಸ್ತವ್ಯ ಇರಬೇಕೆಂದು ಬಯಸಿದೆಯೋ ಅವರನ್ನು ಕಡ್ಡಾಯವಾಗಿ ಗಮನಿಸುತ್ತಿದೆ. ಉಳಿದವರು ರೆಸಾರ್ಟ್​ಗೆ ಬಂದು ಹೋಗುತ್ತಿದ್ದಾರೆ. ಒಟ್ಟಾರೆ 50ಕ್ಕಿಂತ ಹೆಚ್ಚು ಶಾಸಕರು ಒಟ್ಟಾಗಿ ಸೇರಿದ್ದಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಪೂರ್ಣ ಕೋರಂ ಇರಲಿಲ್ಲ. ಬಿಜೆಪಿ ಸಂಪರ್ಕ ಮಾಡಿರುವ ಶಾಸಕರಾದ ಶಿವರಾಮ ಹೆಬ್ಬಾರ್, ಆನಂದ್ ಸಿಂಗ್, ಭೀಮಾ ನಾಯ್್ಕ ಕೆ.ಸುಧಾಕರ್, ಶ್ರೀಮಂತ ಪಾಟೀಲ್, ಪ್ರತಾಪ್​ಗೌಡ, ಕಂಪ್ಲಿ ಗಣೇಶ್, ಬಿ.ಸಿ.ಪಾಟೀಲ್, ಬಸನಗೌಡ ಗದ್ದಲ್, ಬಿ.ನಾರಾಯಣ ರಾವ್ ಪೈಕಿ ಹೆಚ್ಚಿನ ಅನುಮಾನ ಇರುವ ಐವರನ್ನು ಮಾತ್ರ ಗೌಪ್ಯ ಸ್ಥಳದಲ್ಲಿ ಉಳಿಸುವ ಬಗ್ಗೆ ಪಕ್ಷದ ನಾಯಕರು ರ್ಚಚಿಸಿದ್ದಾರೆ. ಶಾಸಕರನ್ನು ರೆಸಾರ್ಟ್

ನಲ್ಲೇ ಉಳಿಸಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಒಂದು ತಾಸು ಸಭೆ ನಡೆಸಿದ ಕೈ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.

ರಮೇಶ್ ಜಾರಕಿಹೊಳಿ ಈವರೆಗೂ ಬಂಡಾಯ ಬಾವುಟ ಕೆಳಗಿಳಿಸದ ಕಾರಣ ಯಾವುದೇ ಸಂದರ್ಭದಲ್ಲಿ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡುವ ಶಕ್ತಿ ಅತೃಪ್ತ ಶಾಸಕರು ಮತ್ತು ಬಿಜೆಪಿಗಿದೆ. ಈ ಹಿನ್ನೆಲೆಯಲ್ಲಿ ಅತೃಪ್ತ 7 ಶಾಸಕರನ್ನು ಮಾತ್ರ ಹಿಡಿದಿಟ್ಟುಕೊಳ್ಳುವ ಬಗ್ಗೆ ಸೋಮವಾರ ನಾಯಕರು ತೀರ್ಮಾನ ಮಾಡಲಿದ್ದಾರೆ.