ಹೇಮಂತ್​ ಕರ್ಕರೆಗೆ ಶಾಪ ಕೊಟ್ಟಿದ್ದೆ ಎಂದಿದ್ದ ಸಾಧ್ವಿ ಪ್ರಜ್ಞಾಗೆ ಕರ್ಕರೆಯವರ ಪುತ್ರಿಯ ಪ್ರತಿಕ್ರಿಯೆ ಇದು…

ನವದೆಹಲಿ: ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಯಾಗಿದ್ದ ಹೇಮಂತ್​ ಕರ್ಕರೆ ಅವರ ಪುತ್ರಿ ಜೂಯಿ ನೇವಾರೆ 11 ವರ್ಷಗಳ ಬಳಿಕ ತಮ್ಮ ತಂದೆಯ ಬಗ್ಗೆ ಮೌನ ಮುರಿದು ಸಾರ್ವಜನಿಕವಾಗಿ ಮಾತನಾಡಿದ್ದಾರೆ.

ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರು ಹುತಾತ್ಮ ಹೇಮಂತ್​ ಕರ್ಕರೆಯವರಿಗೆ ನಾನು ಶಾಪ ಕೊಟ್ಟಿದ್ದೆ. ಹಾಗಾಗಿಯೇ ಉಗ್ರರಿಂದ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಅದಾದ ಬಳಿಕ ಕ್ಷಮೆಯನ್ನೂ ಕೇಳಿದ್ದರು.

ಪ್ರಜ್ಞಾ ಸಿಂಗ್​ ಅವರ ಈ ಹೇಳಿಕೆಗೂ ಹೇಮಂತ್​ ಮಗಳು ಜೂಯಿ ನೇವಾರೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ತಂದೆ ಸುಮ್ಮನೆ ಮೃತಪಟ್ಟಿಲ್ಲ. ಈ ನಗರ, ಈ ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ನೀಡಿದ್ದಾರೆ. ಅವರಿಗೆ ಕುಟುಂಬ, ಸ್ವಂತ ಜೀವನಕ್ಕಿಂತ ಸಮವಸ್ತ್ರ, ಕರ್ತವ್ಯವೇ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.
ಹಾಗೇ ಪ್ರಜ್ಞಾ ಸಿಂಗ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಪ್ರಜ್ಞಾ ಅವರನ್ನಾಗಲೀ, ಅವರ ಹೇಳಿಕೆಯನ್ನಾಗಲಿ ಗೌರವಿಸುವುದಿಲ್ಲ. ನಾನು ಹೇಮಂತ್​ ಕರ್ಕರೆಯವರ ಬಗ್ಗೆ ಮಾತ್ರ ಮಾತನಾಡಲು ಇಷ್ಟಪಡುತ್ತೇನೆ. ಅವರು ನಮಗೆಲ್ಲ ಮಾದರಿ. ತುಂಬ ಗೌರವದೊಂದಿಗೆ ಅವರ ಹೆಸರನ್ನು ಪ್ರಸ್ತಾಪಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕತೆಗೆ ಯಾವುದೇ ಧರ್ಮವಿಲ್ಲ. ಯಾವುದೇ ಧರ್ಮವೂ ಇನ್ನೊಬ್ಬರ ಹತ್ಯೆ ಮಾಡುವುದನ್ನು ಬೋಧಿಸುವುದಿಲ್ಲ ಎಂಬುದನ್ನು ನನ್ನ ತಂದೆ ಹೇಳುತ್ತಿದ್ದರು. ಅವರ 24 ವರ್ಷಗಳ ವೃತ್ತಿ ಜೀವನದಲ್ಲಿ ತುಂಬ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಸಾವೂ ಕೂಡ ಮತ್ತೊಬ್ಬರ ರಕ್ಷಣೆಗಾಗಿಯೇ ಆಗಿದ್ದು ಎಂದಿದ್ದಾರೆ.
ಕರ್ಕರೆ ಅವರ ಮೂವರು ಮಕ್ಕಳಲ್ಲಿ ಜೂಯಿ ಅವರೇ ದೊಡ್ಡವರು. ಸದ್ಯ ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದಾರೆ. ಹೇಮಂತ್​ ಕರ್ಕರೆ ಅವರ ಪತ್ನಿ 2014ರಲ್ಲಿ ಬ್ರೇನ್​ ಹೆಮರೇಜ್​ನಿಂದ ಮೃತಪಟ್ಟಿದ್ದಾರೆ.