ಕಾರ್ಕಳ-ಪಡುಬಿದ್ರಿ ನಾಳೆ ಹೆದ್ದಾರಿ ಬಂದ್

ಬೆಳ್ಮಣ್: ಪ್ರತಿಭಟನೆ ಬಳಿಕ ಮತ್ತೆ ತಣ್ಣಗಾಗಿದ್ದ ಬೆಳ್ಮಣ್ ಟೋಲ್ ಗೇಟ್ ಪ್ರಕ್ರಿಯೆ ಮತ್ತೆ ಚುರುಕುಗೊಂಡಿದೆ.
ಟೋಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಡಿ.20ರಂದು ಬೃಹತ್ ಪ್ರತಿಭಟನಾ ಸಭೆ ಹಾಗೂ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ. ಪೂರ್ವ ತಯಾರಿ ಬಗ್ಗೆ ಹೋರಾಟ ಸಮಿತಿ ಮಂಗಳವಾರ ವಿಶೇಷ ಸಭೆಯಲ್ಲಿ ನಿರ್ಣೈ ಕೈಗೊಂಡಿತು.

ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯನ್ನು ಅವಲಂಬಿಸಿರುವ ಸುತ್ತಮುತ್ತಲಿನ ಸುಮಾರು 27 ಹಳ್ಳಿಗಳ ಗ್ರಾಮಸ್ಥರು, ನಾಗರಿಕರು, ಎಲ್ಲ ಸಂಘ ಸಂಸ್ಥೆಗಳು ಹಾಗೂ ವರ್ತಕರು, ಉದ್ಯಮಿಗಳು, ವಾಹನ ಚಾಲಕ ಮಾಲೀಕರು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ತಿಳಿಸಿದರು.

ಬೃಹತ್ ಪ್ರತಿಭಟನೆ ಜಾಥಾವೂ ಬೆಳ್ಮಣ್ ಪೇಟೆಯಿಂದ ಬೆಳ್ಮಣ್ ಚರ್ಚ್‌ವರೆಗೆ ಸಾಗಿ ಬಳಿಕ ನಂದಳಿಕೆ ಬೋರ್ಡು ಶಾಲೆವರೆಗೆ ಸಾಗಲಿದೆ. ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆಗಳು, ಊಟೋಪಚಾರದ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ. ಶಶಿಧರ್ ಶೆಟ್ಟಿ, ಸರ್ವಜ್ಞ ತಂತ್ರಿ ಹಾಗೂ ವಿವಿಧ ಹೋರಾಟಗಾರರು ಉಪಸ್ಥಿತರಿದ್ದರು.

ಪ್ರತಿಭಟನೆ: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಅಳವಡಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಡಿ.20ರಂದು ಬೆಳಗ್ಗೆ 9 ಗಂಟೆಗೆ ಬೆಳ್ಮಣ್ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಸುಂಕ ವಸೂಲಾತಿ ಕೇಂದ್ರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎನ್.ಸುಹಾಸ್ ಹೆಗ್ಡೆ ಉಡುಪಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಕ್ಟೋಬರ್‌ನಲ್ಲಿ ಸಾರ್ವಜನಿಕರು ಟೋಲ್ ವಿರೋಧಿಸಿ ಪ್ರತಿಭಟನೆ ಮಾಡಿದರೂ ಸರ್ಕಾರ, ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಮತ್ತೆ ಪ್ರತಿಭಟನೆ ನಡೆಸಲು ಸಮಿತಿ ಮುಂದಾಗಿದೆ. ಟೋಲ್‌ನಿಂದ 40ಕ್ಕೂ ಹೆಚ್ಚಿನ ಹಳ್ಳಿಗಳ ಜನರಿಗೆ ತೊಂದರೆಯಾಗಲಿದೆ. ಅವರು ನಿತ್ಯದ ಕೆಲಸಗಳಿಗೆ ಇದೇ ರಸ್ತೆ ಅವಲಂಬಿಸಿದ್ದಾರೆ. ಹೀಗಾಗಿ ರಾಜ್ಯ ಹೆದ್ದಾರಿಗೆ ಟೋಲ್ ಹಾಕುವುದು ಜನವಿರೋಧಿ ನಿಲುವು ಎಂದರು. ಕಾರ್ಯದರ್ಶಿ ಶಶಿಧರ ಶೆಟ್ಟಿ, ಸರ್ವಜ್ಞ ತಂತ್ರಿ, ಹರಿಪ್ರಸಾದ್ ಉಪಸ್ಥಿತರಿದ್ದರು.