ಸಂಕಲಕರಿಯ ಸೇತುವೆ ಸಂಚಕಾರ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್

ಕಾರ್ಕಳ ತಾಲೂಕು ಹಾಗೂ ಮಂಗಳೂರು ತಾಲೂಕು ಸಂಪರ್ಕಿಸುವ ಕೊಂಡಿಯಂತಿರುವ ಸಂಕಲಕರಿಯ ಸೇತುವೆ ತುಂಬ ಹಳೆಯದಾಗಿದ್ದರೂ ಎರಡೂ ಬದಿ ತಡೆಗೋಡೆ ಇಲ್ಲದೆ ಅಪಾಯಕಾರಿಯಾಗಿ ಗೋಚರಿಸಿದೆ.

ಜ.12ರಂದು ಸಂಕಲಕರಿಯ ಶಾಂಭವಿ ನದಿ ಸೇತುವೆ ಬದಿಗೆ ಡಿಕ್ಕಿ ಹೊಡೆದು ಬೊಲೆರೊ ಜೀಪು ಪಲ್ಟಿಯಾಗಿ ನದಿಗೆ ಬಿದ್ದು ಓರ್ವ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೂವರನ್ನು ಸ್ಥಳೀಯ ಯುವಕರ ತಂಡ ರಕ್ಷಿಸಿತ್ತು. ಈ ಘಟನೆ ನಡೆದು ಸುಮಾರು ಮೂರು ತಿಂಗಳಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ ಸೇತುವೆಗೆ ಕೇವಲ ಸುಣ್ಣ ಬಣ್ಣ ಬಳಿದಿದ್ದು ಬಿಟ್ಟರೆ ಇನ್ನೂ ಇಕ್ಕೆಲ ತಡೆಗೋಡೆ ನಿರ್ಮಿಸಿಲ್ಲ. ಕಿತ್ತು ಹೋದ ಸಣ್ಣ ಸಣ್ಣ ಪಿಲ್ಲರ್‌ಗಳನ್ನು ಸರಿಪಡಿಸಿಲ್ಲ.

ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಅಪಾಯಕಾರಿಯಾಗಿ ಗೋಚರಿಸಲಾರಂಭಿಸಿದೆ. ಎದುರು ಬದುರು ವಾಹನಗಳು ಒಟ್ಟಾಗಿ ಸಂಚರಿಸುವ ಸಂದರ್ಭ ಸೇತುವೆಯಲ್ಲಿ ಸರಿಯಾದ ಸ್ಥಳಾವಕಾಶವಿಲ್ಲದೆ ವಾಹನ ಸವಾರರು ಸಂಕಟ ಅನುಭವಿಸುವಂತಾಗಿದೆ. ಜನವರಿಯಲ್ಲಿ ನಡೆದ ಅಪಘಾತದಲ್ಲಿ ಸೇತುವೆ ತಡೆಬೇಲಿಗಾಗಿ ನಿರ್ಮಿಸಲಾದ 4-5 ಸಣ್ಣ ಸಣ್ಣ ಪಿಲ್ಲರ್‌ಗಳು ತುಂಡಾಗಿದ್ದರೂ ಇಲ್ಲಿವರೆಗೂ ದುರಸ್ತಿ ಕಾರ್ಯ ನಡೆದಿಲ್ಲ. ಈ ಬಗ್ಗೆ ಒಂದಿಷ್ಟೂ ಕಾಳಜಿ ತೋರದೆ ಹೋದಲ್ಲಿ ಮುಂದೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.

ಹಳೇ ಸೇತುವೆ: ಸುಮಾರು 65 ವರ್ಷಗಳ ಹಿಂದಿನ ಈ ಹಳೇ ಸೇತುವೆಗೆ ಹಿಂದೆಯೂ ತಡೆಗೋಡೆ ಇರಲಿಲ್ಲ. ಮೊದಲ ಬಾರಿ ಜೀವಕ್ಕೆ ಕುತ್ತು ತರುವ ದುರಂತ ಜನವರಿಯಲ್ಲಿ ಸಂಭವಿಸಿದ ಬಳಿಕ ಈ ಸೇತುವೆಗೆ ತಡೆಗೋಡೆ ನಿರ್ಮಾಣದ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಈಗಾಗಲೇ ಇಲಾಖೆಯವರು ಆಗಮಿಸಿ ಸರ್ವೇ ಮುಗಿಸಿ ತೆರಳಿದ್ದರು. ಮುಂದಿನ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಗಡಿ ಬಗ್ಗೆ ಗೊಂದಲ: ಈ ಸೇತುವೆ ಮಂಗಳೂರು ಮತ್ತು ಉಡುಪಿ ಬೇರ್ಪಡಿಸುವ ಗಡಿಯಾದ್ದರಿಂದ ಇಲಾಖೆಗಳ ನಡುವೆ ಒಂದಿಷ್ಟು ಗಡಿ ಬಗ್ಗೆ ಗೊಂದಲವಿದೆ. ಜನವರಿ ದುರಂತದಲ್ಲಿ ಕಂದಾಯ ಇಲಾಖೆ ಸಹಕಾರದಿಂದ ಸೇತುವೆಯನ್ನು ಅಳೆದ ಬಳಿಕ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯವರು ಕೇಸು ಸ್ವೀಕರಿಸಿದ್ದರು. ದುರಂತದಲ್ಲಿ ಮಡಿದವರಿಗೆ ವಿಮಾ ಯೋಜನೆಗೆ ತೊಂದರೆಯಾಗುವುದು ಬೇಡ ಎಂಬ ಉದ್ದೇಶ ಇದ್ದ ಕಾರಣ ಅಂದು ಈ ವಿಷಯ ತಾರ್ಕಿಕ ಅಂತ್ಯ ಕಂಡಿತ್ತು. ಆದರೆ ಸೇತುವೆಗೆ ತಡೆಗೋಡೆ ನಿರ್ಮಿಸುವಲ್ಲಿ ಮಂಗಳೂರಿನ ಲೋಕೋಪಯೋಗಿ ಇಲಾಖೆ ಸ್ಪಂದಿಸಬೇಕಿದೆ ಎಂಬುದು ಈ ಭಾಗದ ತಜ್ಞರ ವಾದ. ಯಾರೇ ಆಗಲಿ ಕೂಡಲೇ ಈ ಹಳೇ ಸೇತುವೆಗೆ ಕಾಯಕಲ್ಪ ಒದಗಿಸಿ ಹಾಗೂ ಶೀಘ್ರ ತಡೆಬೇಲಿ ನಿರ್ಮಿಸಿ ಎಂಬುದು ಜನರ ಆಗ್ರಹ. ಒಟ್ಟಿನಲ್ಲಿ ಮುಂದಿನ ಮಳೆಗಾಲಕ್ಕೂ ಮುನ್ನ ಸಂಕಲಕರಿಯ ಶಾಂಭವಿ ನದಿ ಸೇತುವೆಗೆ ತಡೆಬೇಲಿ ನಿರ್ಮಾಣವಾಗಿ ಜನರ ಆತಂಕ ದೂರವಾಗಬೇಕಾಗಿದೆ.

ಈ ಹಳೇ ಸೇತುವೆ ಬಗ್ಗೆ ಇಲಾಖೆಯ ನಿರ್ಲಕ್ಷ್ಯ ಖಂಡನೀಯ. ಇನ್ನೊಂದು ದುರಂತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು.
|ರಮೇಶ್ ಪಿ.ಉಳೆಪಾಡಿ, ಗ್ರಾಮಸ್ಥ

65 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಸೇತುವೆಯಲ್ಲಿ ಮೊದಲ ಬಾರಿ ದೊಡ್ಡ ದುರಂತ ಸಂಭವಿಸಿದ ಬಳಿಕ ಈ ಭಾಗದ ಜನರ ಬಹುದೊಡ್ಡ ಬೇಡಿಕೆ ಈ ಸೇತುವೆಗೆ ತಡೆಬೇಲಿ ನಿರ್ಮಾಣವಾಗಬೇಕು ಎಂಬುದು. ಈ ಬಗ್ಗೆ ಗಮನ ಹರಿಸಬೇಕಿದೆ.
|ಸುಧೀರ್ ಶೆಟ್ಟಿ, ಗ್ರಾಮಸ್ಥ

ಸಂಕಲಕರಿಯ ಶಾಂಭವಿ ನದಿ ಸೇತುವೆ ಮುಳುಗುವ ಸೇತುವೆ ಪಟ್ಟಿಯಲ್ಲಿದೆ. ಸೇತುವೆಗೆ ತಡೆಗೋಡೆ ನಿರ್ಮಿಸಲು ಸಾಧ್ಯವಿಲ್ಲ. ಬದಲಾಗಿ ಎಚ್ಚರಿಕೆ ಫಲಕ ಹಾಗೂ ಹಂಪ್ಸ್‌ಗಳನ್ನು ನಿರ್ಮಿಸಬಹುದು. ಇಲ್ಲಿ ನಡೆದ ದುರಂತದ ಬಳಿಕ ಕಾರ್ಕಳ ಪೊಲೀಸ್ ಇಲಾಖೆಯಿಂದ ನಮ್ಮ ಇಲಾಖೆಗೆ ಪತ್ರ ಬಂದಿದ್ದು, ಅದಕ್ಕೆ ಉತ್ತರಿಸಲಾಗಿದೆ. ಸದ್ಯಕ್ಕೆ ಮುರಿದ ಸೇತುವೆಯ ಕಂಬಗಳನ್ನು ಪುನಃ ನಿರ್ಮಿಸಲಾಗುವುದು.
|ರವಿಕುಮಾರ್, ಎಇ ಲೋಕೋಪಯೋಗಿ ಇಲಾಖೆ ದ.ಕ.