More

    ಜಿಪಂ ಅಧ್ಯಕ್ಷ ಸ್ಥಾನಕ್ಕೆ ಕರಿಯಣ್ಣನವರ ರಾಜೀನಾಮೆ

    ಹಾವೇರಿ: ಪಕ್ಷದ ಆಂತರಿಕ ಒಪ್ಪಂದದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಕೆ. ಕರಿಯಣ್ಣನವರ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸದಸ್ಯರಲ್ಲಿ ಚಟುವಟಿಕೆಗಳು ಗರಿಗೆದರಿವೆ.

    2018 ಸೆಪ್ಟೆಂಬರ್ 20ರಂದು ಎಸ್.ಕೆ. ಕರಿಯಣ್ಣನವರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಒಂದು ವರ್ಷದ ಅವಧಿಗೆ ಅಧ್ಯಕ್ಷರಾಗುವಂತೆ ಪಕ್ಷದ ವರಿಷ್ಠರು ಆಂತರಿಕ ಒಪ್ಪಂದ ಮಾಡಿದ್ದರು. 2019ರಲ್ಲಿ ಲೋಕಸಭೆ ಚುನಾವಣೆ ನಂತರ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಉಪಚುನಾವಣೆಯವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ಕರಿಯಣ್ಣನವರ ಮುಂದುವರಿದಿದ್ದರು. ಅಲ್ಲದೆ, ಹಿರೇಕೆರೂರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದು ಟಿಕೆಟ್​ನ್ನು ಬಿ.ಎಚ್. ಬನ್ನಿಕೋಡರಿಗೆ ಬಿಟ್ಟುಕೊಡುವಂತೆ ಮನವೊಲಿಸಲಾಗಿತ್ತು. ಆದರೆ, ಇನ್ನುಳಿದ ಆಕಾಂಕ್ಷಿ ಸದಸ್ಯರು ಒಂದು ವರ್ಷದ ನಂತರ ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದರು.

    ಮಾಜಿ ಸಿಎಂ ಸಿದ್ದರಾಮಯ್ಯ ರಾಜಿ: ಜಿಪಂನ ಕಾಂಗ್ರೆಸ್ ಸದಸ್ಯರು ಕರಿಯಣ್ಣನವರರಿಂದ ಸೆಪ್ಟೆಂಬರ್​ನಲ್ಲಿಯೇ ರಾಜೀನಾಮೆ ಕೊಡಿಸಲು ಪಟ್ಟು ಹಿಡಿದಿದ್ದರು. ಆ ಸಮಯದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಸಿದ್ದರಾಮಯ್ಯ ಬಳಿಗೆ ಕೊಂಡ್ಯೊಯ್ದಿದ್ದರು. ಸಿದ್ದರಾಮಯ್ಯ ಅವರು ಹಿರೇಕೆರೂರ ಉಪಚುನಾವಣೆಯ ನಂತರ ರಾಜೀನಾಮೆ ನೀಡುವಂತೆ ಕರಿಯಣ್ಣನವರಿಗೆ ಸೂಚಿಸಿ, ಇನ್ನುಳಿದ ಸದಸ್ಯರನ್ನು ಸಮಾಧಾನಿಸಿ ಕಳಿಸಿದ್ದರು. ಈಗ ಕರಿಯಣ್ಣನವರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅದು ಸ್ವೀಕೃತಿಯಾದ ನಂತರ ನೂತನ ಅಧ್ಯಕ್ಷರಾಯ್ಕೆಗೆ ಚುನಾವಣೆ ಘೊಷಣೆಯಾಗಲಿದೆ.

    ಆಕಾಂಕ್ಷಿಗಳಲ್ಲಿ ಗರಿಗೆದರಿದ ಚಟುವಟಿಕೆ: ಜಿಪಂ ಅಧ್ಯಕ್ಷ ಸ್ಥಾನದ ಮೇಲೆ ಸದಸ್ಯರಾದ ಶಿಗ್ಗಾಂವಿ ತಾಲೂಕಿನ ಬಸವರಾಜ ದೇಸಾಯಿ, ರಾಣೆಬೆನ್ನೂರ ತಾಲೂಕಿನ ಏಕನಾಥ ಭಾನುವಳ್ಳಿ, ಹಾನಗಲ್ಲ ತಾಲೂಕಿನ ಟಾಕನಗೌಡ ಪಾಟೀಲ, ರಾಘವೇಂದ್ರ ತಹಸೀಲ್ದಾರ್ ಕಣ್ಣಿಟ್ಟಿದ್ದಾರೆ. ಇವರೆಲ್ಲರೂ ಈಗಲೇ ಪಕ್ಷದ ವರಿಷ್ಠರ ಮೂಲಕ ಇನ್ನುಳಿದ ಅವಧಿಗೆ ತಮ್ಮನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಒತ್ತಡ ಆರಂಭಿಸಿದ್ದಾರೆ. ಹೈಕಮಾಂಡ್ ಮಾತ್ರ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.

    ಪಕ್ಷದ ಆಂತರಿಕ ಒಪ್ಪಂದ ಹಾಗೂ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಟ್ಟ ಮಾತಿನಂತೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗಳಿಗೆ ರಾಜೀನಾಮೆ ಸಲ್ಲಿಸಲು ಹೋಗಿದ್ದೆ. ಆದರೆ, ಅವರು ದೆಹಲಿ ಪ್ರವಾಸದಲ್ಲಿದ್ದರಿಂದ ರಾಜೀನಾಮೆ ಪತ್ರವನ್ನು ಇಲಾಖೆಯಲ್ಲಿನ ಅಧಿಕಾರಿಗಳಿಗೆ ಕೊಟ್ಟು ಬಂದಿದ್ದೇನೆ. ನನ್ನ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ ತೃಪ್ತಿ ಇದೆ. ಇನ್ನೂ ಕೆಲವೊಂದು ಕೆಲಸಗಳನ್ನು ಮಾಡುವ ಆಸಕ್ತಿಯಿತ್ತು. ಮುಂದೆ ಬರುವವರು ಅದನ್ನು ಮಾಡುವ ನಿರೀಕ್ಷೆಯಿದೆ.

    | ಎಸ್.ಕೆ. ಕರಿಯಣ್ಣನವರ, ಜಿಪಂ ಅಧ್ಯಕ್ಷ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts