ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದೆ ಜಾಲತಾಣದಲ್ಲಿ ‘ಉಪೇಂದ್ರ’ ಸಿನಿಮಾದ ‘ಕರಿಮಣಿ ಮಾಲೀಕ ನೀನಲ್ಲ’ ಎಂಬ ಸಾಂಗ್ ಟ್ರೆಂಡ್ ಸೃಷ್ಟಿಸಿತ್ತು. ಜಾಲತಾಣದಲ್ಲಿ ಹೆಚ್ಚು ರೀಲ್ಸ್ ಕಾಣುವ ಜತೆಗೆ ಎಲ್ಲರ ಬಾಯಲ್ಲಿ ಆ ಸಾಂಗ್ ಗುನುಗುವಂತೆ ಮಾಡಿತ್ತು. ಕೆಲ ತಿಂಗಳ ಹಿಂದಷ್ಟೆ ‘ಯೂ ಟರ್ನ್ 2’ ಖ್ಯಾತಿಯ ನಟ, ನಿರ್ದೇಶಕ ಚಂದ್ರು ಓಬಯ್ಯ ಆ ಹಾಡಿನ ಶೀರ್ಷಿಕೆಯ ಸಿನಿಮಾ ಘೋಷಿಸಿದ್ದರು. ಇತ್ತೀಚೆಗಷ್ಟೆ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಬಿಎಂಟಿಸಿ ನೌಕರ ಮಾರುತಿ ಈ ಚಿತ್ರದ ನಾಯಕನಾಗಿದ್ದು, ಅವರಿಗೆ ಕಲಬುರಗಿ ಮೂಲದ ರಮಿಕಾ ಸುತಾರಾ ಜೋಡಿಯಾಗಿದ್ದಾರೆ. ಪಲ್ಲಕ್ಕಿ ರಾಧಾಕೃಷ್ಣ, ಅಂಜಿನಪ್ಪ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಂದ್ರು ಓಬಯ್ಯ. ‘ಇದು ನನ್ನ ನಿರ್ದೇಶನದ 9ನೇ ಸಿನಿಮಾ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರವಿದು. ಎಳನೀರು ಮಾರುವ ಹುಡುಗ ಹಾಗೂ ಹೂ ಮಾರುವ ಹುಡುಗಿ ನಡುವಿನ ವಿಭಿನ್ನ ಪ್ರೇಮಕಥೆ. ಈ ಪ್ರೇಮಿಗಳ ನಡುವೆ ಮತ್ತೊಬ್ಬನ ಎಂಟ್ರಿ ಆಗುತ್ತದೆ. ಆಗ ಆ ಹುಡುಗಿಯ ಕೊರಳಿಗೆ ಕರಿಮಣಿ ಯಾರು ಕಟ್ಟುತ್ತಾರೆ ಎಂಬುದೇ ಮುಂದಿನ ಕಥೆ. ಬೆಂಗಳೂರು ಸುತ್ತಮುತ್ತ 35 ದಿನಗಳ ಕಾಲ ಶೂಟಿಂಗ್ ನಡೆಸಿದ್ದು, ಟೈಟಲ್ ಸಾಂಗ್‌ಅನ್ನು ಪಾವಗಡದ ಬಳಿಯ ನಿಡಗಲ್ ಬೆಟ್ಟದಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ನಾಯಕನಟ ಮಾರುತಿ ಬಿಎಂಟಿಸಿ, “ಸದ್ಯ ನಾನೀಗ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ವಿದ್ಯಾಭ್ಯಾಸದ ದಿನಗಳಲ್ಲಿ ಅನೇಕ ನಾಟಕಗಳನ್ನು ಮಾಡುತ್ತಿದ್ದೆ, ಚಲನಚಿತ್ರ ಕಲಾವಿದನಾಗಬೇಕೆನ್ನುವುದು ನನ್ನ ಬಹುದಿನಗಳ ಕನಸು. ಈ ಚಿತ್ರದಲ್ಲಿ ಎಳನೀರು ಮಾರುವ ಹುಡುಗನಾಗಿ ನಟಿಸಿದ್ದೇನೆ ಎಂದು ಹೇಳಿದರು.
ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮಿಕಾ ಸುತಾರ, ನಾನು ಮೂಲತ: ಗುಲ್ಬರ್ಗದವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಆಕ್ಟಿಂಗ್ ಕ್ಲಾಸ್ ಹೋಗಿದ್ದೇನೆ. ಈ ಚಿತ್ರದಲ್ಲಿ ಒಬ್ಬ ಹೂಮಾರುವ ಹುಡುಗಿಯಾಗಿ ನಟಿಸಿದ್ದೇನೆ. ಸ್ವಲ್ಪ ಬಜಾರಿ ಥರದ ಪಾತ್ರ, ಆಡಿಷನ್‌ನಲ್ಲಿ ಸೆಲೆಕ್ಟ್ ಆಗಿ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು. ಕಾಕ್ರೋಚ್ ಸುಧಿ, ಹಿರಿಯ ನಟಿಯರಾದ ಮೀನಾ ಕುಮಾರಿ, ರೇಖಾ ದಾಸ್, ಹಿರಿಯ ಕಲಾವಿದ ಮೂಗು ಸುರೇಶ್ ಕಲಾ ಬಳಗದಲ್ಲಿದ್ದಾರೆ.