ನರಗುಂದ: ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಈ ಎರಡನ್ನು ಎದೆಯಲ್ಲಿಟ್ಟುಕೊಂಡು ಕಾಪಾಡಬೇಕು. ಪರಕೀಯರಿಂದ ಕಾರ್ಗಿಲ್ ಪ್ರದೇಶ ಕಾಪಾಡಿಕೊಂಡು ವಿಜಯ ಸಾಧಿಸಿ 25 ವರ್ಷಗಳು ಪೂರ್ಣಗೊಂಡಿವೆ. ಕಾರ್ಗಿಲ್ ವಿಜಯ ನಮ್ಮ ದೇಶದ ಹೆಮ್ಮೆ. ಆ ಹಿನ್ನೆಲೆಯಲ್ಲಿ ಭೈರನಹಟ್ಟಿ ಶ್ರೀ ದೊರೆಸ್ವಾಮಿಮಠ ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ವಿಶಿಷ್ಠ ಮತ್ತು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜನಜಾಗೃತಿ ಮೂಡಿಸಿರುವುದು ಇತಿಹಾಸದ ಪುಟಗಳಲ್ಲಿ ಅಜರಾಮರ ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಸ್ವಾತಂತ್ರ್ಯೕರ ಬಾಬಾಸಾಹೇಬರ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವದ (ನಮ್ಮೂರ ಜಾತ್ರೆ ) ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಅಂಗವಾಗಿ ಚೊಳಚಗುಡ್ಡದಿಂದ ಸಾಗಿಬಂದ ಕಾರ್ಗಿಲ್ ಜ್ಯೋತಿ ರಥಯಾತ್ರೆ ಸ್ವಾಗತ, 25 ಕಾರ್ಗಿಲ್ ಕಲಿಗಳಿಗೆ ಸನ್ಮಾನ ಹಾಗೂ ಕಾರ್ಗಿಲ್ ಯೋಧರ ಯಶೋಗಾಥೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ನನಗೇನು ಕೊಟ್ಟಿದೆ ಎನ್ನುವ ಬದಲಾಗಿ ದೇಶಕ್ಕಾಗಿ ನಾನೇನು ಮಾಡಿದ್ದೇವೆ ಎಂಬುವುದರ ಬಗ್ಗೆ ಅರಿತುಕೊಳ್ಳಬೇಕಾಗಿದೆ. ಪ್ರತಿಯೊಬ್ಬ ಯುವಕರಲ್ಲಿ ದೇಶಾಭಿಮಾನ ಬೆಳೆಸಬೇಕಾಗಿದೆ ಅಂತಹ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಅಭಿನಂದನೀಯ. ನಾವೆಲ್ಲರೂ ದೇಶದಲ್ಲಿ ಇಷ್ಟೊಂದು ಸುಭದ್ರವಾಗಿರುವುದಕ್ಕೆ ಮುಖ್ಯ ಕಾರಣ ನಮ್ಮ ಹೆಮ್ಮೆಯ ಸೈನಿಕರು. ಅವರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಯುವಕರು ಸ್ವಯಂಪ್ರೇರಿತರಾಗಿ ದೇಶ ಸೇವೆಗೆ ಅಣಿಯಾಗಬೇಕು. ನಮ್ಮ ದೇಶದ ಇತಿಹಾಸವನ್ನರಿತು ಇಲ್ಲಿನ ಸಂಸ್ಕೃತಿ, ಪರಂಪರೆ ವಿಶ್ವದ ಭೂಪಟದಲ್ಲಿ ಎತ್ತಿ ಹಿಡಿಯಬೇಕು ಎಂದರು.
ವಿವೇಕ ಯಾವಗಲ್, ಧಾರವಾಡ ಕಾರ್ಗಿಲ್ ಸ್ತೂಪದ ಅಧ್ಯಕ್ಷ ಚಂದ್ರಶೇಖರ ಅಮೀನಗಡ, ಬಸವರಾಜ ಮುಕ್ಕುಪ್ಪಿ, ಸಾವಿತ್ರಿ ಕೋಲಕಾರ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ವೆಂಕಪ್ಪ ಭಾವಿ, ವೀರನಗೌಡ ಪಾಟೀಲ, ಷಣ್ಮುಖಪ್ಪ ಹಳೆಹೊಳಿ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಪತ್ರಯ್ಯ ಹಿರೇಮಠ, ಗಂಗಯ್ಯಜ್ಜ ವಸ್ತ್ರದ ಹಾಗೂ ಚೊಳಚಗುಡ್ಡ, ನರಗುಂದ ತಾಲೂಕಿನ ಮಾಜಿ ಸೈನಿಕರು ಇದ್ದರು.