ಕರೇಗುಡ್ಡದಲ್ಲಿ ಸಿಎಂಗೆ ಅಹವಾಲು ಸಲ್ಲಿಸಲು 14 ಕೌಂಟರ್ ವ್ಯವಸ್ಥೆ – ರಾಯಚೂರು ಜಿಲ್ಲಾಧಿಕಾರಿ ಬಿ.ಶರತ್ ಹೇಳಿಕೆ

ರಾಯಚೂರು: ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಲಿರುವ ಗ್ರಾಮ ವಾಸ್ತವ್ಯ ಸಂದರ್ಭ ಸಾರ್ವಜನಿಕರು ಅಹವಾಲು ಸಲ್ಲಿಸಲು 14 ಕೌಂಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಮಹಿಳೆಯರು, ಅಂಗವಿಕಲರಿಗೆ ಪ್ರತ್ಯೇಕ ಅವಕಾಶ ಇರಲಿದೆ ಎಂದು ಡಿಸಿ ಬಿ.ಶರತ್ ತಿಳಿಸಿದರು.

15 ಸಾವಿರ ಜನ ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಊಟ, ಕುಡಿವ ನೀರು, ಮಕ್ಕಳಿಗೆ ಬಿಸ್ಕತ್, ಹಾಲಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮದ ಹೊರವಲಯದ ಮುಖ್ಯರಸ್ತೆಯ ಹತ್ತಿರ ಭಾರಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ನೂಕು ನುಗ್ಗಲು ಆಗದಂತೆ ನೋಡಿಕೊಳ್ಳಲಾಗುವುದು. ಕೌಂಟರ್‌ನಲ್ಲಿ ನಿಗದಿತ ನಮೂನೆ ಪಡೆದು ಭರ್ತಿ ಮಾಡಿ ಸಲ್ಲಿಸಿದವರಿಗೆ ಸಂಖ್ಯೆ ನೀಡಿ ಅದರಂತೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಮೊದಲು ಅಂಗವಿಕಲರು, ಮಹಿಳೆಯರಿಗೆ ಅವಕಾಶ ನೀಡಲಾಗುವುದು. 10 ಕೌಂಟರ್‌ಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು, ಇದೇ ವೇಳೆ ಸಿಎಂ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವರು ಎಂದರು.

ಲೋಕೋಪಯೋಗಿ ಇಲಾಖೆಗೆ ವೇದಿಕೆ ನಿರ್ಮಾಣ, ಸಿಎಂ ವಾಸ್ತವ್ಯ ಮಾಡಲಿರುವ ಶಾಲೆ ವ್ಯವಸ್ಥೆಗೊಳಿಸುವ ಕೆಲಸ ಪಿಆರ್‌ಇಡಿಗೆ ವಹಿಸಲಾಗಿದೆ. ಜತೆಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 1.50 ಕೋಟಿ ರೂ. ಬಳಸಿಕೊಂಡು ವಿವಿಧ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.

ಜೂ.25ರಂದು ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಬರುವ ಸಿಎಂ 26ರ ಬೆಳಗ್ಗೆ ರಾಯಚೂರಿಗೆ ಆಗಮಿಸುವರು. ನಂತರ ಪ್ರವಾಸಿ ಮಂದಿರಕ್ಕೆ ತೆರಳಿ, ಅಲ್ಲಿಂದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕರೇಗುಡ್ಡ ಗ್ರಾಮಕ್ಕೆ ತೆರಳುವರು. ವಾಸ್ತವ್ಯ ಮುಗಿಸಿಕೊಂಡು 27ರಂದು ಹೆಲಿಕ್ಟಾರ್ ಮೂಲಕ ಹೊರಡುವರು.
| ಬಿ.ಶರತ್ ರಾಯಚೂರು ಡಿಸಿ

Leave a Reply

Your email address will not be published. Required fields are marked *