ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಗಣನೀಯವಾಗಿ ಕಡಿಮೆಯಾಗಿದ್ದರೂ, ಸತತ ಎರಡನೇ ಬಾರಿ ಕರಾವಳಿ ಉತ್ಸವ ರದ್ದಾಗುವ ಭೀತಿ ಎದುರಾಗಿದೆ.
ಕೋವಿಡ್ ಸಂಖ್ಯೆ ನಿರಂತರ ಕುಸಿಯುತ್ತಿರುವುದರಿಂದ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯೇನೋ ಕರಾವಳಿ ಉತ್ಸವ ನಡೆಸಲು ಉತ್ಸುಕವಾಗಿದ್ದರೂ, ಸರ್ಕಾರ ಆದಾಯ ಕೊರತೆ ಹಿನ್ನೆಲೆಯಲ್ಲಿ ಇದಕ್ಕೆ ಸಮ್ಮತಿ ಸೂಚಿಸುವ ಸಾಧ್ಯತೆ ಕಡಿಮೆ ಎಂಬ ಸೂಚನೆ ಅಧಿಕಾರಿಗಳಿಗೆ ಸಿಕ್ಕಿದೆ. ಈ ಬಾರಿ ಹಂಪಿ ಉತ್ಸವ ನಡೆಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಅದೇ ರೀತಿ ಇತರ ಪ್ರಾದೇಶಿಕ ಉತ್ಸವಗಳೂ ನಡೆಯುವ ಸಾಧ್ಯತೆ ಕಡಿಮೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಿಂದ ಈಗಾಗಲೇ ಎರಡೆರಡು ಲಾಕ್‌ಡೌನ್‌ಗಳಿಂದ ಆದಾಯವಿಲ್ಲದೆ ಸೊರಗಿರುವ ಕಲಾವಿದರ ವೃಂದಕ್ಕೆ ನಿರಾಶೆ ಒಂದೆಡೆಯಾದರೆ ಇನ್ನೊಂದೆಡೆ ಪ್ರವಾಸೋದ್ಯಮ, ಆ ಮೂಲಕ ಪರೋಕ್ಷವಾಗಿ ವ್ಯಾಪಾರಾಭಿವೃದ್ಧಿಗೆ ಸಿಗುವ ಅವಕಾಶವೂ ಇಲ್ಲವಾದಂತಿದೆ. ಹಿಂದೆ 2019-20ರ ಸಾಲಿನ ಕರಾವಳಿ ಉತ್ಸವವು 2020ರ ಜನವರಿಯಲ್ಲಿ ನಡೆದಿತ್ತು. ಇದಕ್ಕೆ ಸರ್ಕಾರ ಎರಡು ಕಂತುಗಳಲ್ಲಿ ತಲಾ 20 ಲಕ್ಷ ರೂ. ಅನುದಾನ ಒದಗಿಸಿತ್ತು.
ಇನ್ನೂ ನಡೆಯದ ಸಿದ್ಧತೆ: ಕರಾವಳಿ ಉತ್ಸವ ನಡೆಯಬೇಕಾದರೆ ಈಗಾಗಲೇ ಪೂರ್ವ ಸಿದ್ಧತಾ ಸಭೆ ನಡೆಸಿ, ಯಾವ್ಯಾವ ಕಲಾವಿದರನ್ನು ಆಹ್ವಾನಿಸಬೇಕು, ಯಾವುದೆಲ್ಲ ಕಾರ್ಯಕ್ರಮ ಏರ್ಪಡಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಕರಾವಳಿ ಉತ್ಸವ ನಡೆಸಲು ಇ-ಟೆಂಡರ್ ಕೂಡ ಸಿದ್ಧಪಡಿಸಬೇಕಾಗುತ್ತದೆ.
ಕೋವಿಡ್ ಪಾಸಿಟಿವ್ ಸಂಖ್ಯೆ ಇಳಿಕೆಯಾಗುತ್ತ ಸಾಗಿದರೆ ಕರಾವಳಿ ಉತ್ಸವ ನಡೆಸುವುದಕ್ಕೆ ಸಾಧ್ಯವಿದೆ. ಆದರೆ ಇದುವರೆಗೆ ನಾವು ಅದರ ಬಗ್ಗೆ ಸಭೆ ನಡೆಸಿಲ್ಲ. ನ.8ರಂದು ನಡೆಯುವ ಪ್ರವಾಸೋದ್ಯಮ ಕುರಿತ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತೇವೆ. ಕರಾವಳಿ ಉತ್ಸವ ನಡೆದರೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಅಲ್ಲದೆ ಅನೇಕ ಕಲಾವಿದರಿಗೂ ನೆರವು ನೀಡಿದಂತೆ ಆಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ತಿಳಿಸುತ್ತಾರೆ.
ಕರಾವಳಿ ಉತ್ಸವ ಹಮ್ಮಿಕೊಳ್ಳಬೇಕು ಎಂಬ ಇಚ್ಛೆ ಇದೆ. ಇದರಿಂದ ಸಾಕಷ್ಟು ಕಲಾವಿದರಿಗೆ ಸಹಾಯವಾಗುತ್ತದೆ. ಪ್ರವಾಸೋದ್ಯಮಕ್ಕೆ ನೆರವು ಸಿಗುತ್ತದೆ. ಸರ್ಕಾರದಿಂದ ಅನುದಾನ ಪಡೆಯುವ ಬಗ್ಗೆ ಮಾತನಾಡುತ್ತೇವೆ.
ಡಾ.ಭರತ್ ಶೆಟ್ಟಿ ಮಂಗಳೂರು ಉತ್ತರ ಶಾಸಕ
ಕರಾವಳಿ ಉತ್ಸವ ಒಂದು ವರ್ಷ ನಡೆದಿಲ್ಲ, ಕರೊನಾ ಕಡಿಮೆಯಾಗಿರುವುದರಿಂದ ಈ ವರ್ಷವಾದರೂ ನಡೆಸುವುದು ಸೂಕ್ತ. ಇದರಿಂದ ಸಾಕಷ್ಟು ಪ್ರತಿಭೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ಸಿಗಲಿದೆ, ಶಾಸಕರಿಗೆ, ಜಿಲ್ಲಾಧಿಕಾರಿಯವರಿಗೆ ಈ ಬಾರಿ ಕರಾವಳಿ ಉತ್ಸವ ನಡೆಸುವಂತೆ ವಿನಂತಿ ಮಾಡಿದ್ದೇನೆ. ಈಗಲೇ ಸಿದ್ಧತೆ ಮಾಡಿದರೆ ಕರಾವಳಿ ಉತ್ಸವ ಇನ್ನೂ ನಡೆಸಲು ಸಾಧ್ಯವಿದೆ.
ಪ್ರೊ.ಎಲ್.ನರೇಂದ್ರ ನಾಯಕ್ ಮಾಜಿ ಸದಸ್ಯ, ಕರಾವಳಿ ಉತ್ಸವ ಸಮಿತಿ