ಸೊಬಗಿನ ಕರ್ನಾಟಕ ದರ್ಶನ

ಕರಾವಳಿ ಉತ್ಸವ ಉದ್ಘಾಟಿಸಿ ಗುರುಕಿರಣ್ ಬಣ್ಣನೆ ವಿಜಯವಾಣಿ ಸುದ್ದಿಜಾಲ ಮಂಗಳೂರು
ರಾಜ್ಯದ ಹಾಗೂ ವಿಶೇಷವಾಗಿ ಕರಾವಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜನಪದ, ಮಣ್ಣಿನ ಸಂಸ್ಕೃತಿ ಬಿಂಬಿಸುವ ಕಲಾಪ್ರದರ್ಶನಗಳ ಮೂಲಕ ಇಲ್ಲಿ ಸೊಬಗಿನ ಕರ್ನಾಟಕದ ದರ್ಶನವಾಗಿದೆ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಬಣ್ಣಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಡಿ.30 ತನಕ ಮಂಗಳೂರು ನಗರ ಹಾಗೂ ಪಣಂಬೂರು ಕಡಲ ತೀರದಲ್ಲಿ ಆಯೋಜಿಸಿರುವ ಕರಾವಳಿ ಉತ್ಸವವನ್ನು ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕರಾವಳಿಯ ಸಂಸ್ಕೃತಿ, ಆಚಾರ ವಿಚಾರಗಳು ಜಗತ್ತಿಗೆ ದಿಕ್ಸೂಚಿ. ಇಲ್ಲಿನ ಸಾಂಸ್ಕೃತಿಕ ನೆಲೆಯನ್ನು ಕರಾವಳಿ ಉತ್ಸವದ ಮೂಲಕ ಕಟ್ಟಿಕೊಡುವ ವಿನೂತನ ಪ್ರಯತ್ನ ನಡೆಯುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಸಭಾ ಕಾರ‌್ಯಕ್ರಮಕ್ಕೂ ಮೊದಲು ಸಚಿವ ಯು.ಟಿ.ಖಾದರ್ ಆಕಾಶದಲ್ಲಿ ಬಲೂನ್ ಹಾರಿ ಬಿಡುವ ಮೂಲಕ ವಸ್ತುಪ್ರದರ್ಶನ ಉದ್ಘಾಟಿಸಿದರು.
ಮೇಯರ್ ಭಾಸ್ಕರ ಕೆ., ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ, ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಲ್.ನರೇಂದ್ರ ನಾಯಕ್, ಸಹಾಯಕ ಆಯುಕ್ತ ರವಿಚಂದ್ರ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾಮಯ್ಯ, ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ ಡಿ, ಶಾಹುಲ್ ಹಮೀದ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ್‌ಕುಮಾರ್ ಕಲ್ಕೂರ, ಕಾರ‌್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮುಖ್ಯ ಅತಿಥಿಗಳಾಗಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ‌್ಯಕ್ರಮ ನಿರ್ವಹಿಸಿದರು.

40ಕ್ಕೂ ಅಧಿಕ ಸಾಂಸ್ಕೃತಿಕ ತಂಡ: ಕರಾವಳಿ ಉತ್ಸವ ಉದ್ಘಾಟನೆಗೂ ಮೊದಲು ನೆಹರು ಮೈದಾನದಿಂದ ಕರಾವಳಿ ಉತ್ಸವ ಮೈದಾನವರೆಗೆ ಸಾಂಸ್ಕೃತಿಕ ಮೆರವಣಿಗೆ ಸಾಗಿಬಂತು. ರಾಜ್ಯದ 40ಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪಣಂಬೂರು ಬೀಚ್‌ನಲ್ಲಿ ಬೀಚ್ ವಾಲಿಬಾಲ್, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಾಕೃತಿ ರಚನೆ, ಆಹಾರೋತ್ಸವ, ಡ್ರಮ್ ಜಾಮ್, ಸಂಜೆ ಸಂಗೀತ ವೈವಿಧ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಉತ್ಸವಕ್ಕೆ ತಟ್ಟಿದ ಪ್ರತಿಭಟನೆ ಬಿಸಿ!: ಕರಾವಳಿ ಉತ್ಸವ ಉದ್ಘಾಟನೆ ಸಭಾ ಕಾರ‌್ಯಕ್ರಮ ಸಂದರ್ಭ ದಿಢೀರ್ ಪ್ರತ್ಯಕ್ಷರಾದ ಎಂಆರ್‌ಪಿಎಲ್ ವಿಸ್ತರಣೆ ವಿರೋಧಿ ಹೋರಾಟಗಾರರು ಕೆಲಕಾಲ ಪೊಲೀಸರಿಗೆ ತಲೆನೋವಾದರು. ವೇದಿಕೆ ಏರಿ ಪ್ರೇಕ್ಷಕರಿಗೆ ಮುಖ ಮಾಡಿ ನಿಂತ ಹೋರಾಟಗಾರರು, ‘ಕರಾವಳಿ ಉಳಿಸಿ ಎಂಆರ್‌ಪಿಎಲ್ ವಿಸ್ತರಣೆ ನಿಲ್ಲಿಸಿ’ ಎನ್ನುವ ಬ್ಯಾನರ್ ಪ್ರದರ್ಶಿಸಿದರು. ಬಳಿಕ ಸಚಿವ ಖಾದರ್ ಹೋರಾಟಗಾರರನ್ನು ಸಮಾಧಾನಪಡಿಸಿ ವೇದಿಕೆ ಬದಿಗೆ ಕಳುಹಿಸಿದರು. ಸಚಿವರು ಭಾಷಣ ನಡೆಸಿ ಮುಗಿಸಿದಾಗ ನಮಗೆ ಉತ್ತರಿಸುವಂತೆ ಹೋರಾಟಗಾರರ ನೇತೃತ್ವ ವಹಿಸಿದ್ದ ವಿದ್ಯಾ ದಿನಕರ್ ಕೂಗಿದರು. ಬಳಿಕ ಈ ಬಗ್ಗೆ ಮಾತನಾಡುವೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಸಮಾಧಾನಪಡದೆ ಮತ್ತೆ ಹೋರಾಟದ ಕೂಗು ಹಾಕಿದ ಪ್ರತಿಭಟನಕಾರರರನ್ನು ಪೊಲೀಸರು ಹೊರಗೆ ಕರೆದೊಯ್ದರು.