More

    ಕರಾವಳಿ ಉತ್ಸವಕ್ಕೆ 16 ಲಕ್ಷ ರೂ. ವಂಚನೆ

    ಮಂಗಳೂರು: ದ.ಕ. ಜಿಲ್ಲಾಡಳಿತ ನಡೆಸುವ ಕರಾವಳಿ ಉತ್ಸವಕ್ಕೆ 16 ಲಕ್ಷ ರೂ. ವಂಚಿಸಲಾಗಿದೆ. ಕಳೆದ ಬಾರಿ ವಸ್ತುಪ್ರದರ್ಶನ ನಡೆಸುವ ಬಗ್ಗೆ ಏಲಂ ವಹಿಸಿದ ಗುತ್ತಿಗೆದಾರ ಇದುವರೆಗೆ ಪೂರ್ತಿ ಹಣ ಪಾವತಿಸಿಲ್ಲ ಎಂಬ ಮಾಹಿತಿ ದಾಖಲೆ ಸಹಿತ ‘ವಿಜಯವಾಣಿ’ಗೆ ಲಭ್ಯವಾಗಿದೆ.
    ವರ್ಷ ಕಳೆದರೂ ವಸೂಲಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಇದರಿಂದ ವಂಚನೆ ಪ್ರಕರಣದಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಬಾಕಿ ಇರಿಸಿದ ಗುತ್ತಿಗೆದಾರನ ಹೆಸರಿನಲ್ಲಿ ಸ್ಥಿರಾಸ್ತಿ ಹೊಂದಿರುವ ಬಗ್ಗೆ ಪರಿಶೀಲಿಸಿ ವಿವರ ನೀಡುವಂತೆ ಕರಾವಳಿ ಉತ್ಸವ ಆರ್ಥಿಕ ಸಮಿತಿ ಕಾರ್ಯಾಧ್ಯಕ್ಷರಾಗಿರುವ ಮಹಾನಗರ ಪಾಲಿಕೆ ಆಯುಕ್ತರು ಮಂಗಳೂರು ತಹಸೀಲ್ದಾರ್‌ಗೆ 2019ರ ಮಾ.23ರಂದು ಪತ್ರ ಬರೆದಿದ್ದಾರೆ. ಸೆ.19ರಂದು ಇನ್ನೊಂದು ಪತ್ರ ಬರೆದು ಜ್ಞಾಪಿಸಿದರೂ ತಹಸೀಲ್ದಾರ್ ಇದುವರೆಗೂ ವರದಿ ನೀಡಿಲ್ಲ. ಗುತ್ತಿಗೆದಾರ ವಾಹನ ಹೊಂದಿರುವ ಬಗ್ಗೆ ವಿವರ ನೀಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಲಾಗಿತ್ತು. ಗುತ್ತಿಗೆದಾರನ ಹೆಸರಿನಲ್ಲಿದ್ದ ವಾಹನ 2015ರಲ್ಲೇ ಬೇರೆಯವರ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಸಾರಿಗೆ ಅಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.

    30 ಲಕ್ಷ ರೂ. ಗೆ ಟೆಂಡರ್
    2018-19ನೇ ಸಾಲಿನ ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ಕೆ.ಮುಷ್ತಾಕ್ ಅಹಮದ್ ಎಂಬುವರು 30 ಲಕ್ಷ ರೂ. ಗೆ ವಹಿಸಿದ್ದರು. ಬಿಡ್ ಮೊತ್ತದ ಶೇ.50ರಷ್ಟು ತಕ್ಷಣ ಪಾವತಿ ಹಾಗೂ ಉಳಿಕೆ ಮೊತ್ತ 15 ದಿನದಲ್ಲಿ ಪಾವತಿಸುವುದು. 45 ದಿನ ವಸ್ತುಪ್ರದರ್ಶನದ ಅವಧಿ ಎಂದು ಏಲಂ ಷರತ್ತುಗಳಲ್ಲಿ ತಿಳಿಸಲಾಗಿತ್ತು. ಆದರೆ ಯಾವುದೇ ಷರತ್ತು ಪಾಲನೆಯಾಗಿರಲಿಲ್ಲ. ಏಲಂ ವಹಿಸಿದ ಗುತ್ತಿಗೆದಾರರು 5 ಲಕ್ಷ ರೂ. ಮುಂಗಡ ಠೇವಣಿ ಮಾತ್ರ ಪಾವತಿಸಿದ್ದರು. ಉಳಿದ ಮೊತ್ತಕ್ಕೆ ಅವರು ಚೆಕ್ ನೀಡಿದ್ದರು. ಈ ಚೆಕ್ ಸಂಗ್ರಹಕ್ಕೆ ಹಾಕಿದಾಗ ಅದು ಬೌನ್ಸ್ ಆಗಿತ್ತು.

    20 ದಿನ ಮುಂದುವರಿಕೆ
    ಗುತ್ತಿಗೆದಾರ ಹಣ ಪಾವತಿಸದಿದ್ದರೂ ಮತ್ತೆ 20 ದಿನ ವಸ್ತುಪ್ರದರ್ಶನ ಮುಂದುವರಿಸಲು ಅವಕಾಶ ಕಲ್ಪಿಸಿದ್ದು ಈ ಪ್ರಕರಣದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಒಟ್ಟು 65 ದಿನ ವಸ್ತುಪ್ರದರ್ಶನ ನಡೆದಿತ್ತು. ಪ್ರತಿದಿನ ಸಂಗ್ರಹವಾದ ಮೊತ್ತದಲ್ಲಿ ಗುತ್ತಿಗೆದಾರರು ಸುಮಾರು 21 ಲಕ್ಷ ರೂ. ಪಾವತಿಸಿದ್ದರು. ಜಿಎಸ್‌ಟಿ 5.50 ಲಕ್ಷ ರೂ. ಸಹಿತ ಒಟ್ಟು 16 ಲಕ್ಷ ರೂ. ಬಾಕಿ ಇರಿಸಿದ್ದರು. ಇದನ್ನು ವಸೂಲಿ ಮಾಡಲು ಆಗಿನ ಜಿಲ್ಲಾಧಿಕಾರಿ ಕೂಡ ಕ್ರಮ ತೆಗೆದುಕೊಂಡಿರಲಿಲ್ಲ.

    ಜಿಲ್ಲಾಡಳಿತದಿಂದಲೇ ವಸ್ತುಪ್ರದರ್ಶನ
    ಈ ಬಾರಿಯ ವಸ್ತುಪ್ರದರ್ಶನ ವಹಿಸಲು 30 ಲಕ್ಷ ರೂ. ನಿಗದಿ ಪಡಿಸಿ ಟೆಂಡರ್ ಕರೆಯಲಾಗಿತ್ತು. ಮೂರು ಬಾರಿ ಪ್ರಕಟಣೆ ನೀಡಿದರೂ ಟೆಂಡರ್ ಸಲ್ಲಿಸಿಲ್ಲ. ಹಾಗಾಗಿ ಪ್ರಥಮ ಬಾರಿಗೆ ಜಿಲ್ಲಾಡಳಿತ ವತಿಯಿಂದಲೇ ವಸ್ತುಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಟಿಕೆಟ್ ಮಾರಾಟದ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಲಿದೆ. ಮನಪಾ ಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ ನೇತೃತ್ವದ 13 ಮಂದಿಯ ಸಮಿತಿಗೆ ಇದರ ನಿರ್ವಹಣೆ ವಹಿಸಲಾಗಿದೆ.

    ಕಳೆದ ವರ್ಷ ಕರಾವಳಿ ಉತ್ಸವದ ವಸ್ತು ಪ್ರದರ್ಶನ ಏಲಂ ಪಡೆದ ಗುತ್ತಿಗೆದಾರ ಪೂರ್ತಿ ಹಣ ಪಾವತಿಸದ ಬಗ್ಗೆ ಮಾಹಿತಿ ದೊರೆತಿದೆ. ಬಿಡ್ ಮೊತ್ತ ಪಡೆದ ಬಳಿಕ ಗುತ್ತಿಗೆ ನೀಡಬೇಕಿತ್ತು. ಆದರೆ ಲೋಪವಾಗಿದೆ. ಯಾವ ಅಧಿಕಾರಿಗಳಿಂದ ಲೋಪವಾಗಿದೆ ಎನ್ನುವುದನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ನೀಡಲು ತಿಳಿಸಲಾಗುವುದು. ಈ ಬಾರಿ ವಸ್ತು ಪ್ರದರ್ಶನಕ್ಕೆ ಟೆಂಡರ್ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ನಿರ್ವಹಿಸಲಿದೆ.
    ಸಿಂಧೂ.ಬಿ.ರೂಪೇಶ್, ದ.ಕ.ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts