ಸಿಎಂ ಹೇಳಿಕೆಗೆ ಕರಾವಳಿಗರು ಗರಂ

ಉಡುಪಿ/ಮಂಗಳೂರು: ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದವರಿಗೆ ತಿಳಿವಳಿಕೆ ಇಲ್ಲ, ಅವರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕರಾವಳಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕರಾವಳಿ ಭಾಗದ ಜನರ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ. ನಮಗೆ ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾವೇ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದೆವು. ಹಣಕಾಸಿನ ನೆರವು ಬೇಕಾದಾಗ ಕೈಚಾಚದೆ ಬ್ಯಾಂಕಿಂಗ್ ಉದ್ಯಮವನ್ನೂ ಆರಂಭಿಸಿದೆವು, ಉದ್ಯೋಗ ನೀಡದಿದ್ದಾಗ ಉದ್ಯೋಗ ಅರಸಿ ಬೇರೆ ಕಡೆಗೆ ತೆರಳಿ ಉದ್ಯೋಗ ಮಾಡಿ ನಮ್ಮ ಕಾಲ ಮೇಲೆ ನಿಂತೆವು. ನೀವು ಕರಾವಳಿಗೆ ನೀಡಿರುವ ಅನುದಾನದ ಹಣ ನಿಮ್ಮ ಮನೆಯದ್ದಲ್ಲ, ನಾವು ಕಟ್ಟುವ ತೆರಿಗೆಯದ್ದು ಎಂಬ ಬರಹಗಳು ವೈರಲ್ ಆಗಿವೆ. ಸಿಎಂ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ವಿರುದ್ಧ ಕರಾವಳಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ನೆಟ್ಟಿಗರ ಸಾಕಷ್ಟು ಟೀಕೆ, ವ್ಯಂಗ್ಯ, ಅಪಹಾಸ್ಯ, ಆಕ್ರೋಶದ ನುಡಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿವೆ. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂಥ ಆಕ್ಷೇಪಾರ್ಹ ಹೇಳಿಕೆ ನೀಡುವುದು ಸಿಎಂಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸಿಎಂ ತಮ್ಮ ಹೇಳಿಕೆ ಮೂಲಕ ಕರಾವಳಿ ಮತದಾರರ ಅವಹೇಳನ ಮಾಡಿದ್ದಾರೆ. ಅವರ ಮಾತು ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕುದಲ್ಲ. ಅವರು ಬಜೆಟ್‌ನಲ್ಲಿ ಕರಾವಳಿಗೆ ಅನ್ಯಾಯ ಮಾಡಿದ್ದಾರೆ. ಕರಾವಳಿಗೆ ಜೆಡಿಎಸ್ ಕೊಡುಗೆ ಏನಿಲ್ಲ. ಜೆಡಿಎಸ್‌ಗೆ ವಿದ್ಯಾವಂತ ಜನರು ಮತ ಹಾಕುವುದಿಲ್ಲ. ಕೂಡಲೇ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು.
– ಕೋಟ ಶ್ರೀನಿವಾಸ ಪೂಜಾರಿ,
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ

One Reply to “ಸಿಎಂ ಹೇಳಿಕೆಗೆ ಕರಾವಳಿಗರು ಗರಂ”

  1. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ !!!
    ಅತ್ಕೊಂಡು ಪಾಸ್ ಆಗಿರ್ಬೇಕು ಅದಿಕ್ಕೆ ಉಡುಪಿ ಬುದ್ದಿವಂತಿಕೆ ಬಗ್ಗೆ ಈ ಮಾತು

Leave a Reply

Your email address will not be published. Required fields are marked *