ಶಿಷ್ಯವೇತನ ಶೀಘ್ರ ವಿತರಿಸುವಂತೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪಟ್ಟು

ಕಾರಟಗಿ: ಕಳೆದ ವರ್ಷ ಬಜೆಟ್‌ನಲ್ಲಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಶಿಷ್ಯವೇತನ ಶೀಘ್ರ ವಿತರಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಎಬಿವಿಪಿ ನೇತೃತ್ವದಲ್ಲಿ ನಾನಾ ಕಾಲೇಜ್ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ವರ್ಷ ಕಳೆಯುತ್ತಿದ್ದರೂ ಶಿಷ್ಯವೇತನ ವಿತರಿಸದ ಅಧಿಕಾರಿಗಳ ಧೋರಣೆ ವಿರುದ್ಧ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ಎಸ್‌ಎಫ್‌ಸಿ, ಹಣಕಾಸು ಯೋಜನೆ ಸೇರಿ ನಾನಾ ಯೋಜನೆಗಳ ಅನುದಾನದಡಿ ನಿಯಮಾವಳಿಯಂತೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ.ಶಿಷ್ಯವೇತನ ಮೀಸಲಿರಿಸಲಾಗಿದೆ. ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿ ನಿತ್ಯ ಕಚೇರಿಗೆ ಅಲೆದಾಡಬೇಕು ಎಂದು ದೂರಿದರು.

ಪುರಸಭೆ ಬಜೆಟ್‌ನಲ್ಲಿ ನಿಗದಿಪಡಿಸಿದಂತೆ ಅರ್ಹ ವಿದ್ಯಾರ್ಥಿಗಳಿಗೆ 15 ದಿನದೊಳಗೆ ಶಿಷ್ಯವೇತನ ವಿತರಿಸಬೇಕು. ಇಲ್ಲದಿದ್ದರೆ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸುವ ಜತೆಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು. ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮಾತನಾಡಿ, 15 ದಿನದೊಳಗೆ ಶಿಷ್ಯವೇತನ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಂಪನಗೌಡ ಜಂತಗಲ್, ವಿದ್ಯಾರ್ಥಿಗಳಾದ ಪರಶುರಾಮ, ಎಸ್.ನವೀನ್‌ಕುಮಾರ್, ರಾಜ, ರಾಜೇಶ, ಅಭಿಷೇಕ, ಮುತ್ತಣ್ಣ, ಮಾರುತಿ, ಮೊಹಮ್ಮದ್, ಪಂಚಾಕ್ಷರಿ, ರವಿ, ಮಂಜುನಾಥ, ಹುಲುಗೇಶ ಸೇರಿ ಇತರರಿದ್ದರು.