15 ಲಕ್ಷ ಹಳೆಯ ಕಡತಗಳಿಗೆ ಡಿಜಿಟಲ್ ಸ್ಪರ್ಶ | ಕಾರಟಗಿಯಲ್ಲೇ ಮೊದಲ ಪ್ರಯತ್ನ
ಶರಣಪ್ಪ ಕೃಷ್ಣಾಪುರ
ಕಾರಟಗಿ: ಕೈ ಬರಹದ ಭೂ ದಾಖಲೆಗಳ ಸಂರಕ್ಷಣೆಗೆ ಮುಂದಾಗಿರುವ ಕಂದಾಯ ಇಲಾಖೆ, ತಾಲೂಕಿನಲ್ಲಿ ಬರೋಬ್ಬರಿ 15 ಲಕ್ಷ ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ.
ಕೈ ಬರಹ ದಾಖಲೆಗಳನ್ನು ಶಾಶ್ವತವಾಗಿ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕಂದಾಯ ಇಲಾಖೆ ರಾಜ್ಯದ 31 ತಾಲೂಕುಗಳನ್ನು ಆಯ್ಕೆಮಾಡಿದೆ. ಕೊಪ್ಪಳ ಜಿಲ್ಲೆ ಪೈಕಿ ಕಾರಟಗಿ ನೂತನ ತಾಲೂಕು ಆಯ್ಕೆಯಾಗಿದ್ದು, ಪ್ರಾಯೋಗಿಕವಾಗಿ ಗಣಕೀಕರಣ ಯೋಜನೆ ಅನುಷ್ಠಾನ ಯಶಸ್ವಿಯಾಗಿದೆ.
ಆಸ್ತಿಗೆ ಸಂಬಂಧಪಟ್ಟಂತೆ ಹಳೆಯ ಭೂ ದಾಖಲೆಗಳನ್ನು ಸಾರ್ವಜನಿಕರು ಕೇಳಿದರೆ ಅವುಗಳ ಹುಡುಕಾಟಕ್ಕೆ ಬಹಳಷ್ಟು ಸಮಯ ವ್ಯಯವಾಗುತ್ತಿತ್ತು. ಜತೆಗೆ ಪದೇ ಪದೆ ಕೈ ಬರಹ ಕಡತಗಳನ್ನು ತೆಗೆದು ಮುಚ್ಚುವುದರಿಂದ ಕಾಲ ಕಳೆದಂತೆ ದಾಖಲೆ ಪತ್ರಿಕೆಗಳು ಹರಿಯುವ ಸಾಧ್ಯತೆಗಳು ಹೆಚ್ಚಿದ್ದವು. ಇಟ್ಟಲ್ಲೇ ಇಡುವುದರಿಂದ ಕಡತಗಳ ಆಯಸ್ಸು ಸಹ ಕಡಿಮೆಯಾಗುವ ಜತೆಗೆ ಧೂಳು ಹಿಡಿಯುತ್ತಿದ್ದವು. ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಇಲಾಖೆ ಗಣಕೀಕರಣಕ್ಕೆ ಮುಂದಡಿ ಇಟ್ಟಿತ್ತು. ಡಿಜಿಟಲೀಕರಣಕ್ಕೆ ಅವಶ್ಯವಾದ ಕಂಪ್ಯೂಟರ್, ಸ್ಕ್ಯಾನರ್, ಕಾರ್ಯ ನಿರ್ವಹಿಸಲು ಸಿಬ್ಬಂದಿ ಸೇರಿ ಅಗತ್ಯ ಸೌಲಭ್ಯಗಳನ್ನು ಇಲಾಖೆ ಒದಗಿಸಿತ್ತು. ಇಲಾಖೆ ಇಚ್ಛಾಶಕ್ತಿಯಂತೆಯೇ ತಾಲೂಕಿನ ಅಧಿಕಾರಿಗಳು ಮುತುವರ್ಜಿವಹಿಸಿದ್ದು, ಕೆಲವೇ ತಿಂಗಳುಗಳಲ್ಲಿ ಡಿಜಿಟಲೀಕರಣ ಕಾರ್ಯ ಪೂರ್ಣಗೊಳಿಸಿದ್ದಾರೆ. ಕೈ ಬರಹ ದಾಖಲೆಗಳ ಗಣಕೀಕರಣದಿಂದ ಖೊಟ್ಟಿ ದಾಖಲೆಗಳ ಸೃಜನೆಗೆ ಬ್ರೇಕ್ ಬೀಳುವ ಜತೆಗೆ ಜನರಿಗೆ ತುರ್ತಾಗಿ ದಾಖಲೆ ಒದಗಿಸಲು ಸಹಾಯವಾಗುತ್ತದೆ. ದಾಖಲೆಗಳು ಸುಟ್ಟುಹೋಗಲು ಹಾಗೂ ಕಳೆದು ಹೋಗಲು ಸಾಧ್ಯವಾಗುವುದಿಲ್ಲ.
ಕಂದಾಯ ಇಲಾಖೆ ಹಾಗೂ ಇಲಾಖೆ ಸಚಿವರ ಮಹತ್ವಾಕಾಂಕ್ಷಿ ದಾಖಲೆಗಳ ಗಣಕೀಕರಣ ಯೋಜನೆ ಕಾರಟಗಿ ತಾಲೂಕಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 15 ಲಕ್ಷಕ್ಕೂ ಅಧಿಕ ಪುಟಗಳ ಹಳೆಯ ದಾಖಲೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಡಿಜಿಟಲೀಕರಣ ಮಾಡಲಾಗಿದೆ. ಜನರಿಗೆ ಇನ್ಮುಂದೆ ದಾಖಲೆಗಳು ಕಳೆದವು ಮತ್ತು ಸುಟ್ಟು ಹೋದವು ಎನ್ನುವ ಭಯವಿರುವುದಿಲ್ಲ. ಇದಲ್ಲದೇ, ಮುಂದಿನ ದಿನಗಳಲ್ಲಿ ಜನರಿಗೆ ದಾಖಲೆಗಳು ಬಹಳ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ದೊರೆಯಲಿವೆ.
| ನಲಿನ್ ಅತುಲ್ ಜಿಲ್ಲಾಧಿಕಾರಿ, ಕೊಪ್ಪಳ
ಖೊಟ್ಟಿ ದಾಖಲೆಗಳ ಸೃಜನೆಗೆ ಬ್ರೇಕ್ ಹಾಕಲು ಕಂದಾಯ ಇಲಾಖೆ ಹಳೆಯ ದಾಖಲೆಗಳ ಗಣಕೀಕರಣ ಮಾಡಲು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅತೀ ವೇಗವಾಗಿ ತಾಲೂಕಿನಲ್ಲಿರುವ 15 ಲಕ್ಷ ಪುಟಗಳ ಹಳೆಯ ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹಳೆಯ ದಾಖಲೆಗಳು ಸಾರ್ವಜನಿಕರಿಗೆ ತಕ್ಷಣಕ್ಕೆ ದೊರೆಯಲಿವೆ.
| ಎಂ. ಕುಮಾರಸ್ವಾಮಿ ತಹಸೀಲ್ದಾರ್, ಕಾರಟಗಿ