-
ನಮ್ಮನ್ನು ಎಲ್ಲಿಗಾದರು ವರ್ಗಾವಣೆ ಮಾಡಿ * ಕಾರಟಗಿ ಜೆಸ್ಕಾಂ ನೌಕರರ ಮನವಿ
ಕಾರಟಗಿ: ತಾಲೂಕಿನ ಜೆಸ್ಕಾಂ ಕಚೇರಿಯಲ್ಲಿ ಜೆಇ ಆಗಿ ಕಾರ್ಯ ನಿರ್ವಹಿಸುತ್ತಿರುವ ನೂರ್ ಫಾತೀಮಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ಜೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನೂರ್ ಫಾತೀಮಾ ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ. ವಿನಾಕಾರಣ ಕಿರಿಕಿರಿ ಮಾಡುತ್ತಿದ್ದಾರೆ. ಕೆಳ ಹಂತದ ಜೆಸ್ಕಾಂ ನೌಕರರಾದ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಾವುಗಳು ನಮ್ಮ ಕರ್ತವ್ಯ ಮಾಡಲು ಹೆದರುವ ಪರಿಸ್ಥಿತಿಯಿದೆ. ನಿತ್ಯ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸಣ್ಣ ಪುಟ್ಟ ತಪ್ಪುಗಳನ್ನು ಒಟ್ಟುಮಾಡಿ ನೋಟಿಸ್ ನೀಡುವ ಮೂಲಕ ನಮ್ಮ ಆತ್ಮಸ್ಥೈರ್ಯ ಕುಂದಿಸುವ ಕೆಸಲ ಮಾಡುತ್ತಿದ್ದಾರೆ. ತಪ್ಪುಗಳ ಬಗ್ಗೆ ತಿಳಿ ಹೇಳುವ ಬದಲು ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ…: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಾಧನೆ
ಇತರ ಶಾಖಾ ಅಧಿಕಾರಿಗಳು ಈವರೆಗೆ ನಮಗೆ ನೋಟಿಸ್ ನೀಡಿಲ್ಲ. ಇವರೊಬ್ಬರೇ ಅನೇಕ ಬಾರಿ ಎಚ್ಚರಿಕೆ ನೋಟಿಸ್ ನೀಡಿದ್ದಾರೆ. ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ನಮ್ಮನ್ನು ರಾಜ್ಯದ ಯಾವ ಭಾಗಕ್ಕಾದರೂ ವರ್ಗಾವಣೆ ಮಾಡಿ, ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ನೂರ್ ಫಾತೀಮಾ ವಿರುದ್ಧ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರು ಸಮಾಧಾನ ಪಡಿಸಿ ಹೊಂದಾಣಿಕೆ ಮಾಡಿಕೊಂಡು ಹೋಗಲು ಹೇಳಿದ್ದರು. ಕಿರುಕುಳ ಮೀತಿ ಮೀರಿದ ಕಾರಣ ಪ್ರತಿಭಟನೆ ಹಾದಿ ಹಿಡಿಯಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಅಧ್ಯಕ್ಷ ವೈ. ದುರುಗಯ್ಯ, ಕಾರ್ಯದರ್ಶಿ ಬಾಲಚಂದ್ರ, ಸದಸ್ಯರಾದ ಖಾದರ್ ಬಾಷಾ, ನರಸಿಂಹ, ಕನಕಪ್ಪ, ಚನ್ನಬಸವರಾಜ, ಪ್ರವೀಣ, ಜೆಸ್ಕಾಂ ಕಂದಾಯ ವಿಭಾಗದ ಪ್ರಭಾರ ಹಿರಿಯ ಸಹಾಯಕಿ ಪ್ರಭಾವತಿ, ಕಿರಿಯ ಸಹಾಯಕರಾದ ಶಂಕ್ರಮ್ಮ, ನಂದಿನಿ ಹಿರೇಮಠ ಇತರರಿದ್ದರು.
ಕಣ್ಣೀರಾದ ಮಹಿಳೆಯರು

ಪ್ರತಿಭಟನೆ ವೇಳೆ ಕಾರಟಗಿ ತಾಲೂಕು ಜೆಸ್ಕಾಂ ಮಹಿಳಾ ನೌಕರರು ಜೆ.ಇ. ಕಾಟ ನೆನೆದು ಕಣ್ಣೀರು ಹಾಕಿದರು. ಫಾತೀಮಾ ನಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ. ಟಾರ್ಗೆಟ್ ಮಾಡುತ್ತಾರೆ. ಸಣ್ಣ ಪುಟ್ಟ ತಪ್ಪುಗಳಿಗೂ ನಮ್ಮನ್ನೇ ಹೊಣೆ ಮಾಡುತ್ತಾರೆ. ಹೀಗಾದರೆ ಹೇಗೆ ಎಂದು ಕಣ್ಣೀರಾದರು. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಂಧಾನ ಏರ್ಪಾಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.